✍️ ಶಾಝಿಲ್ ಉಸ್ಮಾನ್
ಮಾಡಿದ್ದುಣ್ಣೋ ಮಾರಾಯ ಗಾದೆ ಮಾತಿದೆ. ಕತ್ತಿ ಎತ್ತಿದರೆ ಆ ಕತ್ತಿಯೇ ಬಲಿಪಡೆಯುತ್ತದೆ- ಇದು ನಾಣ್ಣುಡಿ. ಈಗ ಬಾಂಗ್ಲಾದೇಶದ ಪದಚ್ಯುತ ಮತ್ತು ದೇಶ ಭ್ರಷ್ಟ ಪ್ರಧಾನಿ ಹಸೀನಾ ವಾಜೆದ್ ವಿಚಾರದಲ್ಲಿ ನಾಣ್ಣುಡಿಗೆ ಅನ್ವರ್ಥ ಹುಟ್ಟಿಕೊಂಡಿದೆ. ನೋಡಿ, ಕಳೆದ ವರ್ಷ ಜುಲೈಯಲ್ಲಿ ಬಾಂಗ್ಲಾದೇಶವನ್ನು ನಡುಗಿಸಿದ ವಿದ್ಯಾರ್ಥಿ ಪ್ರತಿಭಟನೆ ಅಲ್ಲಿ ತೀವ್ರ ಗೊಂಡಿತ್ತು. ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ಆಗಸ್ಟ್ ಐದಕ್ಕೆ ಬಾಂಗ್ಲಾದೇಶದಿಂದ ಭಾರತಕ್ಕೆ ಓಡಿ ಬಂದ ಶೇಕ್ ಹಸೀನಾ ಮತ್ತು ಈಗ ಭೂಗತವಾಗಿರುವ ಮಾಜಿ ಗೃಹ ಸಚಿವ ಅಸದುಝ್ಝಮಾನ್ ಕಮಾಲ್ ಖಾನ್ರಿಗೆ ಮಾನವತೆಯ ವಿರುದ್ಧ ಅಪರಾಧ ಎಸಗಿದ್ದಕ್ಕಾಗಿ ಅಲ್ಲಿನ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯ ಮಂಡಳಿ ಮರಣ ದಂಡನೆ ವಿಧಿಸಿದೆ. ನೋಡಿ ಇವರಿಬ್ಬರಿಗೂ ಸಾವು ಕದ ತಟ್ಟುತ್ತಿದೆ.
ಹಸೀನಾ ವಾಜೆದ್ ಓಡಿ ಬಂದ ಹೇಡಿಯಂತೆ ಭಾರತದಲ್ಲಿ ಬದುಕುತ್ತಿದ್ದಾರೆ ಎಂದು ಬಾಂಗ್ಲಾದೇಶದ ಅವರ ವಿರೋಧಿಗಳು ಮಾಡುತ್ತಿದ್ದಾರೆ. ಈಗ ದೇಶದ ಕಾನೂನಿಗೆ ಹೆದರುವವರು ತಮ್ಮ ಸಮಯದಲ್ಲಿ ಆ ಕಾನೂನನ್ನೇ ಮಣ್ಣುಪಾಲು ಮಾಡಿದ್ದಾರೆ. ಅನ್ಯಾಯ ಮಾಡಿದರೆ ಕೆಲವರು ಸಾಯುವ ಮೊದಲೇ ಪರಿಣಾಮ ಅನುಭವಿಸುತ್ತಾರೆ. ಈಗ ಬಾಂಗ್ಲಾದೇಶ ಹಸೀನಾರನ್ನೂ ಹಸ್ತಾಂತರಿಸಿ ಎಂದು ಭಾರತವನ್ನು ಕೇಳುತ್ತಿದೆ. ಭಾರತ ಬಿಟ್ಟುಕೊಟ್ಟರೆ ಹಸೀನಾರ ಮೇಲೆ ಪರಿಣಾಮ ಶುರುವಾಗುತ್ತದೆ.
ಹಸೀನಾ ಹಸ್ತಾಂತರದ ವಿಚಾರದಲ್ಲಿ ಭಾರತ ಬಾಂಗ್ಲಾದೇಶಗಳ ನಡುವೆ ಅಸಾಮರಸ್ಯ ಹೆಡೆಯೆತ್ತಿ ಝಳಪಿಸುವುದು ತುಂಬಾ ಸಮಯದಿಂದ ನಡೆಯುತ್ತಲೇ ಇದೆ. ಬಾಂಗ್ಲಾದೇಶದಲ್ಲಿ ಹಸೀನಾ ಅಧಿಕಾರದಲ್ಲಿದ್ದಾಗ ಅವರಿಗೆ ಈಗ ಮರಣ ದಂಡನೆ ವಿಧಿಸಿದ ಇದೇ ಅಂತಾ ರಾಷ್ಟ್ರೀಯ ಟ್ರಿಬ್ಯೂನಲ್ನಲ್ಲಿ ಕೇಸು ಹಾಕಿಸಿದ್ದಾರೆ. ಪ್ರತಿಪಕ್ಷದ ನಾಯಕರಿಗೆ ಮರಣ ದಂಡನೆ ತೀರ್ಪು ಬರುವಂತೆ ಮಾಡಿಸಿದ್ದಾರೆ ಎಂಬ ಪ್ರಬಲ ವಾದಗಳು ಕೇಳಿ ಬಂದಿದ್ದವು. ಈ ಹಸೀನಾ ವಿದ್ವಾಂಸರು, ಮಾಜಿ ಸಚಿವರ ಸಹಿತ ವಿಪಕ್ಷ ನಾಯಕರನ್ನು ಗಲ್ಲಿಗೇರಿಸಿದ್ದರು. ಈಗ ಕಾಲಬದಲಾಗಿದೆ. ಅದೀಗ ಅವರು ಅಂದು ಮಾಡಿರುವುದರ ಲೆಕ್ಕ ಪಡೆಯಲು ಹೊರಟಿದೆ ಎಂಬುದು ನಿಸ್ಸಂದೇಹವಾಗಿದೆ. ಅಂದರೆ ಅದೇ ಟ್ರಿಬ್ಯೂನಲ್ ಶೇಕ್ ಹಸೀನಾರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಅವರು ಮಾನವತೆಯ ವಿರುದ್ಧ ಅಪರಾಧವೆಸಗಿದ್ದಕ್ಕಾಗಿ ಮರಣ ದಂಡನೆ! ಆದರೂ ಅವರು ಈಗ ಬಾಂಗ್ಲಾದೇಶದಿಂದ ಭಾರತದಲ್ಲಿ ಅಡಗಿ ಕೂತು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.
ಹಸೀನಾ ಸರಕಾರ ಯಾರಿಗೆಲ್ಲ ಮರಣ ದಂಡನೆ ಜಾರಿಗೊಳಿಸಿತು?
ಜಮಾಅತೆ ಇಸ್ಲಾಮಿ ಬಾಂಗ್ಲಾ ದೇಶದ ಅಮೀರ್ ಮುತಿರ್ರಹ್ಮಾನ್ ನಿಝಾಮಿ, ಕಾರ್ಯದರ್ಶಿ ಅಲಿ ಅಹ್ಸನ್ ಮುಜಾಹಿದ್, ಉಪ ಕಾರ್ಯದರ್ಶಿ ಕಮರುಝ್ಝಮಾನ್, ಹಿರಿಯ ನಾಯಕ ಅಬ್ದುಲ್ ಕಾದಿರ್ ಮುಲ್ಲ, ಬಿಎನ್ಪಿಯ ನಾಯಕ ಮಾಜಿ ಸಚಿವ ಸಲಾಹುದ್ದೀನ್ ಚೌಧರಿ, ಮುಸ್ಲಿಂ ಲೀಗ್ ನಾಯಕ ಫುರ್ಕಾನ್ ಮಲಿಕ್ ಇವರಿಗೆಲ್ಲ ಇವರ ಆಡಳಿತದಲ್ಲಿ ಟ್ರಿಬ್ಯೂನಲ್ ಮರಣದಂಡನೆ ವಿಧಿಸಿದೆ. ಅದನ್ನು ಹಸೀನಾ ಸರಕಾರ ಜಾರಿಗೊಳಿಸಿದೆ. ಈಗ ಡಾ. ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರವಿದೆ. ಇಂಟರ್ನೇಶನ್ ಕ್ರೈಂ ಟ್ರಿಬ್ಯೂನಲ್ ಹಸೀನಾರಿಗೆ ಮರಣದ ದಂಡನೆ ವಿಧಿಸಿದೆ. ಹಸೀನಾ ಇದನ್ನು ಕಂಗಾರು ಟ್ರಿಬ್ಯೂನಲ್ ಎಂದು ಕರೆಯುತ್ತಿದ್ದಾರೆ. ಭಾರತದಲ್ಲಿದ್ದುದಕ್ಕೆ ಅವರು ಬದುಕಿದ್ದಾರೆ. ಹಸೀನಾರಂತಹ ಸರ್ವಾಧಿಕಾರಿಗಳ ದುರಂತ ಅಂತ್ಯವನ್ನು ಇತಿಹಾಸ ದಾಖಲಿಸಿದೆ. ಈಗ ಹಸೀನಾರೂ ಅದರ ಭಾಗವೇ ಆಗಿ ಹೋಗುತ್ತಾ? ಅವರ ಅವಾಮಿ ಲೀಗ್ ಅನ್ನು ಬಾಂಗ್ಲಾದೇಶ ಈಗಾಗಲೇ ನಿಷೇಧಿಸಿದೆ. ಹಸೀನಾರ ಪಾರ್ಟಿ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ. ಆದ್ದರಿಂದ ಇಳಿ ವಯಸ್ಸಿನಲ್ಲಿರುವ ಹಸೀನಾರ ರಾಜಕೀಯ ಭವಿಷ್ಯವೇ ನಿರ್ನಾಮವಾದಂತೆ.
ಹಸೀನಾ ಸರಕಾರದ ಗುಂಡಿಗೆ ಜೀವ ತೆತ್ತಿದ್ದ ಪ್ರತಿಭಟನಾಕಾರರು
ಹೌದು ಟ್ರಿಬ್ಯೂನಲ್ ಲೆಕ್ಕ ಪ್ರಕಾರ 2024ರ ಜುಲೈಯಿಂದ ಆಗಸ್ಟ್ ವರೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ 1,400 ಮಂದಿ ಪ್ರತಿಭಟನಾಕಾರರು ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ. ನವೆಂಬರ್ನಲ್ಲಿ ಹಸೀನಾರು ಭಾರತದ ಪತ್ರಿಕೆ ದ ಹಿಂದುಗೆ ನೀಡಿದ ಸಂದರ್ಶನದಲ್ಲಿ ಭದ್ರತಾ ಪಡೆಯಿಂದ ಖಂಡಿತ ಕೆಲವು ತಪ್ಪುಗಳಾಗಿವೆ ಎಂದಿದ್ದರು. ಆದರೆ ಹಿಂಸೆ ತಡೆಯಲು ಸರಕಾರಿ ಅಧಿಕಾರಿಗಳು ಹಾಗೆ ಮಾಡಬೇಕಾಯಿತು ಎಂದು ತನ್ನ ಅಧಿಕಾರಿಗಳನ್ನು ಸಮರ್ಥಿಸಿಕೊಂಡಿದ್ದರು. ಟ್ರಿಬ್ಯೂನಲ್ ಮುಂದೆ ಈ ಇಂಟರ್ವ್ಯೂ ಕೂಡ ಹಸೀನಾ ವಾಜೆದ್ಗೆ ಮಾಜಿ ಗೃಹ ಸಚಿವ ಅಸದುಝ್ಝಮಾನ್ ಖಾನ್ ಕಮಾಲ್ರಿಗೆ ಮರಣ ದಂಡನೆ ತೀರ್ಪು ನೀಡಲು ಒಂದು ಪುರಾವೆಯಾಗಿ ವರ್ತಿಸಿತ್ತು.
ಟ್ರಿಬ್ಯೂನಲ್ ತೀರ್ಪು ಪ್ರತೀಕಾರವೇ?
ಹಸೀನಾರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ತೀರ್ಪನ್ನು ಅವರ ಪುತ್ರ ಸಜೀಬ್ ವಸೀದ ಜೊಯ್ ಮಧ್ಯಂತರ ಸರಕಾರದ ಪ್ರತೀಕಾರ ಎಂದು ಹೇಳಿದ್ದಾರೆ. ಟ್ರಿಬ್ಯೂನಲ್ನ ಶಿಕ್ಷೆ ಕಾನೂನಿ ನಂತಿಲ್ಲ. ಅಂತಹ ಕಾನೂನು ಪ್ರಕ್ರಿಯೇ ಆಗಿಲ್ಲ, ಬದಲಾಗಿ ತಾಯಿಯ ವಿರುದ್ಧ ರಾಜಕೀಯ ಹಗೆಯನ್ನು ತೀರಿಸುವುದಕ್ಕಾಗಿ ಅವರನ್ನು ಮರಣ ದಂಡನೆಗೆ ಶಿಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.
ವಾಸ್ತವದಲ್ಲಿ ಹಸೀನಾರಿಗೆ ಮರಣ ದಂಡನೆ 2024ರ ಬಾಂಗ್ಲಾದೇಶ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ನಡೆದ ಸಾಮೂಹಿಕ ಹತ್ಯೆಯನ್ನು ತಡೆಯಲು ವಿಫಲರಾಗಿದ್ದಕ್ಕೆ ನೀಡಲಾಗಿದೆ. ಪ್ರತಿಭಟನಾಕಾರರ ಮೇಲೆ ಮಾರಕವಾಗಿ ಬಲ ಪ್ರಯೋಗಿಸಿದ್ದಕ್ಕಾಗಿ ಟ್ರಿಬ್ಯೂನಲ್ ಶಿಕ್ಷಿಸಿದ್ದು. ಸಜೀಬ್ ವಾಸಿದ್ ಇದನ್ನು ಮಾನವೀಯತೆಯ ವಿರುದ್ಧ ತೀರ್ಪು ಎನ್ನುತ್ತಿದ್ದಾರೆ. ಟ್ರಿಬ್ಯೂನಲ್ ತೀರ್ಪು ಪ್ರತಿಭಟನೆಯ ವೇಳೆ ಸಾಯಿಸಲ್ಪಟ್ಟ ವಿದ್ಯಾರ್ಥಿಗಳ ಮತ್ತು ಮುಂತಾದವರಿಗೆ ಒಂದಿಷ್ಟು ಸಾಂತ್ವನ ನೀಡೀತು. ಆದರೆ ಭಾರತದಲ್ಲಿ ಅಡಗಿ ಕೂತಿರುವ ಹಸೀನಾರನ್ನು ಈ ತೀರ್ಪು ಏನು ಮಾಡೀತು?
ಹಸೀನಾರ ರಾಜಕೀಯ ಶತ್ರುತ್ವ
ಬಾಂಗ್ಲಾದೇಶದ ಮುಖ್ಯ ಪ್ರತಿಪಕ್ಷ ವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ(ಬಿಎನ್ಪಿ)ಯ ಅಧ್ಯಕ್ಷೆ ಪ್ರತಿಪಕ್ಷ ನಾಯಕಿ ಹಾಗೂ ಮಾಜಿ ಪ್ರಧಾನಿ ಖಾಲಿದಾ ಝಿಯಾರನ್ನು ಜೈಲಿಗೆ ಹಾಕಿದ್ದು. ಬಾಂಗ್ಲಾದೇಶ ಪ್ರತಿಪಕ್ಷದ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಬಾಂಗ್ಲಾದೇಶ್ ಜಮಾಅತೆ ಇಸ್ಲಾಮಿ ಹಿರಿಯ ನಾಯಕರನ್ನು ಗಲ್ಲಿಗೇರಿಸಿದ್ದು. ಜಮಾಅತೆ ಇಸ್ಲಾಮ್ ಪಾರ್ಟಿಯನ್ನು ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ಅದಕ್ಕೆ ನಿಷೇಧ ಹೇರಿದ್ದು. ಪ್ರತಿಪಕ್ಷ ಬಹಿಷ್ಕರಿಸಿದ ಚುನಾವಣೆಯಲ್ಲಿ ಅಧಿಕಾರ ವಶಪಡಿಸಿಕೊಳ್ಳುವ ಕೆಲಸವನ್ನು ಮಾಡಿದ್ದರು. ತನ್ನ ಹದಿನೈದು ವರ್ಷದ ಆಳ್ವಿಕೆಯಲ್ಲಿ ಹಸೀನಾ ತೋರಿಸಿದ್ದು ಶತ್ರುತ್ವವನ್ನಾಗಿತ್ತು. ಅವಾಮೀ ಲೀಗ್ ತನ್ನ ಅಧಿಕಾರ ದಲ್ಲಾಳಿಗಳಿಗೆ ಉದ್ಯೋಗದಲ್ಲಿ ಶೇ. 30 ಮೀಸಲಾತಿ ನೀಡಿದಾಗ ವಿದ್ಯಾರ್ಥಿಗಳು ಸಿಡಿದೆದ್ದರು. ಹಸೀನಾ ಸರಕಾರ ತನ್ನವರನ್ನೇ ಆಡಳಿತ ಯಂತ್ರದಲ್ಲಿ ತುರುಕಿಸುತ್ತಿದೆ. ಮತ್ತು ಕಷ್ಟಪಟ್ಟು ಕಲಿತದ್ದು ವೇಸ್ಟ್ ಆಗುತ್ತಿದೆ ಎಂದು ಸಂಪೂರ್ಣ ಮನಗಂಡ ನಂತರ ಬಾಂಗ್ಲಾದಲ್ಲಿ ಝೆನ್ ಝೀ ಹೋರಾಟ ಎದ್ದು ನಿಂತದ್ದು. ಈ ಹೋರಾಟವನ್ನು ದಮನಿಸಲು ಹೊರಟ ಸೈನ್ಯ 1400 ಜನರನ್ನು ಕೊಂದು ಹಾಕಿದ್ದು.
ಬಾಂಗ್ಲಾಕ್ಕೆ ಭಾರತ ನೀಡಿದ ಉತ್ತರ
ಹಸೀನಾರನ್ನು ಬಿಟ್ಟು ಕೊಡಬೇಕೆಂದು ಕೇಳಿದ್ದಕ್ಕೆ ಭಾರತ ಸರಕಾರ ತಾನು ಬಾಂಗ್ಲಾದೇಶದ ಜನರ ಶಾಂತಿ, ಪ್ರಜಾಪ್ರಭುತ್ವ, ಸ್ಥಿರತೆ ಮುಂತಾದುವುಗಳನ್ನು ಕಾಪಾಡಲು ಪ್ರತಿಜ್ಞಾ ಬದ್ಧವಾಗಿದ್ದೇನೆ ಎಂದು ಉತ್ತರಿಸಿದೆ. ಬಾಂಗ್ಲಾದೇಶದಲ್ಲಿ ಇರಬೇಕೆಂಬುದು ಹಸೀನಾರಿಗೆ ಸದ್ಯಕ್ಕೆ ಯೋಚಿಸಲು ಸಾಧ್ಯವಾಗಿಲ್ಲ. ಅಲ್ಲಿಗೆ ಹೋಗುವುದು ಎಂದರೆ ಸಾಯುವುದು ಎಂದರ್ಥ. ಇದು ಮನವರಿಕೆಯಾಗಿ ಭಾರತದಲ್ಲಿ ಆಶ್ರಯ ಕೇಳಿ ಓಡಿ ಬಂದಿದ್ದಾನೆ. ಆದರೆ ಶಾಂತಿ ನೋಬೆಲ್ ಗೆದ್ದ ಡಾ. ಯೂನುಸ್ರು ಬಾಂಗ್ಲಾದೇಶದ ಮಧ್ಯಂತ ಸರಕಾರದ ನೇತೃತ್ವವನ್ನು ವಹಿಸಿಕೊಂಡ ಮೇಲೆ ಭಾರತ ತುಂಬ ಎಚ್ಚರಿಕೆಯನ್ನು ವಹಿಸುತ್ತಿದೆ ಎಂಬ ವರದಿಗಳಿವೆ. ಭಾರತದೊಂದಿಗೆ 4000 ಕಿಲೋ ಮೀಟರ್ ಗಡಿಯನ್ನು ಬಾಂಗ್ಲಾ ಹೊಂದಿದೆ.
ಚೀನ, ಪಾಕಿಸ್ತಾನ ಮತ್ತು ಅಮೆರಿಕದೊಂದಿಗೆ ಮಿತ್ರತ್ವಕ್ಕೂ ಬಾಂಗ್ಲಾ ಶ್ರಮಿಸುತ್ತಿದೆ. ಈ ಸಂದಿಗ್ಧ ಘಟ್ಟದಲ್ಲಿ ಭಾರತಕ್ಕೆ ಘರ್ಷಣೆಯ ನಿಲುವು ತೆಗೆದುಕೊಳ್ಳಲು ಯುಕ್ತವೂ ಅಲ್ಲ. ರಾಜತಾಂತ್ರಿಕವಾಗಿ ಎರಡೂ ದೇಶಗಳ ಸಂಬಂಧವನ್ನು ಸುಧಾರಿಸಲು ಶ್ರಮಿಸ ಬೇಕೆಂದು ನಮ್ಮ ದೇಶ ಮನಗಂಡಿದೆ. ಆದ್ದರಿಂದ ಬಹಳ ಎಚ್ಚರಿಕೆಯೊಂದಿಗೆ ಬಾಂಗ್ಲಾದೇಶದೊಂದಿಗೆ ಅದು ಪ್ರತಿಕ್ರಿಯಿಸಿದ್ದು ಎನ್ನಬಹುದು. ಹಾಗಿದ್ದರೆ ಭಾರತ ಹಸೀನಾರನ್ನು ಬಿಟ್ಟುಕೊಡುತ್ತದಾ?
ಹಾಗಿದ್ದರೆ ಮುಂದೇನು?
ಒಂದುವೇಳೆ ಭಾರತ ಬಿಟ್ಟುಕೊಡಲು ಹೋದರೆ ಶೇಕ್ ಹಸೀನ ಭಾರತ ಬಿಟ್ಟು ಹೋಗಬೇಕಾಗುತ್ತದೆ. ಬಹುಬೇಗನೆ ಶೇಕ್ ಹಸೀನ ಮತ್ತು ಮಾಜಿ ರಕ್ಷಣಾ ಸಚಿವ ಕಮಾಲ್ ಖಾನ್ರನ್ನು ಹಸ್ತಾಂತರಿಸಿ ಎಂದು ಹೇಳುತ್ತಲಿದೆ ಬಾಂಗ್ಲಾ. ನ್ಯಾಯದ ವಿರುದ್ಧ ಹೋಗಿ ಮಾನವತೆಯ ವಿರುದ್ಧ ಅಪರಾಧ ವೆಸಗಿದ ವ್ಯಕ್ತಿಗಳಿಗೆ ಆಶ್ರಯ ನೀಡುವುದು ಯಾವುದೇ ದೇಶಕ್ಕೂ ಅದು ಸೌಹಾರ್ದ ಪರ ವಿಚಾರವಾಗುವುದಿಲ್ಲ ಎಂದು ಬಾಂಗ್ಲಾದೇಶದ ವಿದೇಶ ಸಚಿವಾಲಯ ಹೇಳಿದೆ.
ಇನ್ನೊಂದು ಕಡೆ ಟ್ರಿಬ್ಯೂನಲ್ ಹಸೀನಾರ ಬಾಂಗ್ಲಾದೇಶದಲ್ಲಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಈ ಹಿಂದೆ ಹೇಳಿದಂತೆ ಟ್ರಿಬ್ಯೂನಲ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬಹುದು. ಆದರೆ ಅವರು ತೀರ್ಪು ಬಂದು ಮೂವತ್ತು ದಿವಸದೊಳಗೆ ಹಸೀನಾ ಬಾಂಗ್ಲಾಕ್ಕೆ ಹೋಗಬೇಕು. ಆಗ ಮಾತ್ರ ಅವರು ಮೇಲ್ಮನವಿ ಸಲ್ಲಿಸಬಹುದು. ಭಾರತದಲ್ಲಿ ಕೂತ ಅವರಿಗೆ ಮರಣ ದಂಡನೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಸರಕಾರ ತಲೆತಪ್ಪಿಸಿಕೊಂಡ ಅಪರಾಧಿ ಎಂದು ಘೋಷಿಸಿದರೆ ಹಸೀನಾರ ಆಸ್ತಿ ವಶಪಡಿಸಿಕೊಳ್ಳುವುದು ಸುಲಭವಾಗುತ್ತದೆ. ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಬಹುದು.
ಈಗಿನ ಬೆಳವಣಿಗೆಯಲ್ಲಿ ಹೀಗೆಯೇ ಆಗುವ ಸಾಧ್ಯತೆ ಹೆಚ್ಚು. ಹಸೀನಾರಿಗೆ ಊರಿಗೆ ಹೋಗಿ ಕಾನೂನು ಎದುರಿಸುವ ಧೈರ್ಯ ಇರಲಾರದು. ಅವರ ತಲೆಯ ಮೇಲೆ 1,400 ಜನರ ಹತ್ಯೆ, ಪ್ರತಿಪಕ್ಷ ನಾಯಕರಿಗೆ ಮರಣದಂಡನೆ ಶಿಕ್ಷೆ ಜಾರಿಗೆ ತಂದ ದೊಡ್ಡ ಹೊರೆ ಇದೆ. ಹಸೀನಾ ಊರಿಗೆ ಬರುವುದನ್ನೇ ಕಾಯುತ್ತಿರುವ ಬಾಂಗ್ಲಾದೇಶ ಬಂಧಿಸಿ ಜೈಲಿನಲ್ಲಿಡುತ್ತದೆ. ಸುಪ್ರೀಂಕೋರ್ಟಿನಲ್ಲಿ ಕೊಲೆ ಕೃತ್ಯ ಸಾಬೀತಾಗಲು ಸಮಯ ತಗಲುವುದಿಲ್ಲ. ಈ ರೀತಿ ಪ್ರಜೆಗಳ ವಿರುದ್ಧ ತಾನೇ ಎತ್ತಿದ ಕತ್ತಿ ಬಲಿಪಡೆಯುತ್ತಿರಲು ಸಜ್ಜಾಗಿ ನಿಂತAತೆ ನೆರೆ ದೇಶದ ಪ್ರಧಾನಿಯ ಕತೆ ಆಯಿತು ಅಷ್ಟೇ. ತಾನೇ ಎಲ್ಲ ಅಂತ ತಿಳ್ಕೊಂಡು ದುಂಡಾವರ್ತಿ ತೋರುವ ವರು ಹಸೀನಾರ ಇಂದಿನ ಸ್ಥಿತಿಯತ್ತ ಕಣ್ಣೆತ್ತಿ ನೋಡಬೇಕು. ಹೂಂಕಾರ ಅಹಂಕಾರಗಳ ಪತನದ ಸ್ಥಿತಿಯಲ್ಲಿ ಹಸೀನಾ ಹಾದು ಹೋಗುತ್ತಿದ್ದಾರೆ. ಮುಂದೇನು ಕಾದು ನೋಡಬೇಕಾಗಿದೆ.












