SIR ಮೇಲೆ ಸಂಶಯ ಏಕೆ?

0
747

✍️ ಏ.ಕೆ. ಕುಕ್ಕಿಲ

  1. ಸರಕಾರಿ ಉದ್ಯೋಗಿಯಾಗಿ ನಿವೃತ್ತಿಯಾಗಿದ್ದು, ನಿವೃತ್ತಿ ನಿಧಿಯನ್ನು ಪಡೆಯುವುದಕ್ಕೆ ಸಿಕ್ಕಿರುವ ಗುರುತಿನ ಕಾರ್ಡ್
  2. ಸರಕಾರ ಅಥವಾ ಸ್ಥಳೀಯ ಅಧಿಕಾರಿಗಳು ಅಥವಾ ಬ್ಯಾಂಕು-ಪೋಸ್ಟ್ ಆಫೀಸು, ಎಲ್‌ಐಸಿ ಮುಂತಾದುವುಗಳು 1987 ಜುಲೈ 1ಕ್ಕಿಂತ ಮೊದಲು ನೀಡಿರುವ ಗುರುತಿನ ಕಾರ್ಡ್.
  3. ಜನನ ಪ್ರಮಾಣ ಪತ್ರ
  4. ಎಸ್‌ಎಸ್‌ಎಲ್‌ಸಿ ಅಥವಾ ಶಾಲೆ ಕೈದು ಮಾಡಿದ ಸರ್ಟಿಫಿಕೇಟ್
  5. ಜನನ ಮತ್ತು ಹೆಸರಿಗೆ ಸಂಬಂಧಿಸಿದ ದಾಖಲೆಗಳು
  6. ರೇಶನ್ ಕಾರ್ಡ್ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಐಡಿ ಕಾರ್ಡ್
  7. ಗ್ರಾಮ ಪಂಚಾಯತ್ ಅಥವಾ ನಗರಾಡಳಿತದಿಂದ ನೀಡಿರುವ ದಾಖಲೆಗಳು
  8. ಹಳೆ ಖಾತೆಗೆ ಸಂಬಂಧಿಸಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಿಂದ ನೀಡಿರುವ ದಾಖಲೆಗಳು
  9. ಎಲ್‌ಐಸಿ ಸಂಬಂಧಿತ ದಾಖಲೆ
  10. ಕುಟುಂಬ ನೋಂದಣಿ ಪಟ್ಟಿ
  11. ಮನೆಯ ಕುರಿತಾದ ದಾಖಲೆ
  12. ಆಧಾರ್ ಕಾರ್ಡ್

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ (SIR) ನೀವು ಈ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿದರೆ ಸಾಕಾಗುತ್ತದೆ. ಇವುಗಳ ಪೈಕಿ ಆಧಾರ್ ಕಾರ್ಡ್ ಎಂಬುದು ಗುರುತನ್ನು ಸಾಬೀತುಪಡಿಸುವ ವ್ಯವಸ್ಥೆಯೇ ಹೊರತು ನಾಗರಿಕತೆಯನ್ನು ಸಾಬೀತುಪಡಿಸುವ ಸಾಕ್ಷ್ಯ ಅಲ್ಲ ಎಂದು ಅದುವೇ ಹೇಳುತ್ತದೆ. ಅಲ್ಲದೇ, ಚುನಾವಣಾ ಆಯೋಗವು ಬಿಹಾರದ SIRನ ವೇಳೆ ಈ ಆಧಾರ್ ಕಾರ್ಡನ್ನು ದಾಖಲೆಯಾಗಿ ಒಪ್ಪಿ ಕೊಂಡೇ ಇರಲಿಲ್ಲ. ಸುಪ್ರೀಮ್ ಕೋರ್ಟ್ ಮಧ್ಯ ಪ್ರವೇಶಿಸಿದ ಬಳಿಕವೇ ಅದು ತನ್ನ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಕಾರ್ಡನ್ನು ಸೇರಿಸಿತು.

ಪ್ರಶ್ನೆ ಇರೋದೂ ಇಲ್ಲೇ.

ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದೇ ಆಗಿದ್ದರೆ ಆಧಾರ್ ಅನ್ನು ದಾಖಲೆ ಪಟ್ಟಿಯಿಂದ ಹೊರಗಿಡಬೇಕಾದ ಅಗತ್ಯವೇ ಇರಲಿಲ್ಲ. ಆದರೆ ಚುನಾವಣಾ ಆಯೋಗ ಆಧಾರ್ ಕಾರ್ಡನ್ನು ತಿರಸ್ಕರಿಸಿರುವುದೇ ಅದರ ಉದ್ದೇಶ ಬೇರೇನೋ ಇದೆ ಎಂಬುದನ್ನೇ ಸೂಚಿಸುತ್ತದೆ.

ನಿಮಗೆ ನೆನಪಿರಬಹುದು-

2019ರಲ್ಲಿ ಎನ್‌ಆರ್‌ಸಿ ವಿರುದ್ಧ ದೇಶದಾದ್ಯಂತ ಹೋರಾಟ, ಪ್ರತಿಭಟನೆಗಳು ತೀವ್ರವಾಗಿದ್ದ ಸಂದರ್ಭದಲ್ಲಿ ಗೃಹಸಚಿವ ಅಮಿತ್ ಶಾ ಅವರು ಒಂದು ಹೇಳಿಕೆ ನೀಡಿದ್ದರು. 2024ರ ಒಳಗೆ ರಾಷ್ಟ್ರಮಟ್ಟದಲ್ಲಿ ಪೌರತ್ವ ಪಟ್ಟಿಯನ್ನು ತಯಾರಿಸುವುದಾಗಿ ಅವರು ಹೇಳಿದ್ದರು. ಪ್ರತಿಯೋರ್ವ ನುಸುಳುಕೋರನನ್ನೂ ಪತ್ತೆ ಹಚ್ಚಿ ಹೊರದಬ್ಬುವುದಾಗಿಯೂ ಹೇಳಿದ್ದರು. ‘ಕ್ರೊನೋಲಜಿ ಸಮ್‌ಜಿಯೇ’ ಎಂಬ ಅವರ ಹೇಳಿಕೆ ಆಗ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಆಗ ಅಸ್ಸಾಮ್‌ನಲ್ಲಿ ಕೈಗೊಂಡಿದ್ದ ಪೌರತ್ವ ಪಟ್ಟಿ ಸಾಕಷ್ಟು ವಿವಾದಕ್ಕೂ ಒಳಗಾಗಿತ್ತು. ಈಗಲೂ ಈ ವಿವಾದ ಸುಪ್ರೀಮ್ ಕೋರ್ಟ್ನಲ್ಲಿದೆ ಮತ್ತು ಕಾನೂನು ಸಮರದ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೆ. ಯಾವಾಗ ಎನ್‌ಆರ್‌ಸಿ ವಿರುದ್ಧ ರಾಷ್ಟ್ರಾದ್ಯಂತ ಪ್ರತಿಭಟನೆ ಶುರುವಾಯಿತೋ ಕೇಂದ್ರ ಸರಕಾರ ಈ ವಿವಾದವನ್ನು ಮೆತ್ತಗೆ ಬದಿಗೆ ಸರಿಸಿತು.

ಹೀಗೆ 2019ರಲ್ಲಿ ಬದಿಗೆ ಸರಿಸಿರುವ ಎನ್‌ಆರ್‌ಸಿ ಬಗ್ಗೆ ಈವರೆಗೂ ಕೇಂದ್ರ ಸರಕಾರ ಯಾವುದೇ ಸುತ್ತೋಲೆಯನ್ನು ಹೊರಡಿಸಿಲ್ಲ. ಮಾತ್ರವಲ್ಲ, 2024ರ ಚುನಾವಣಾ ಪ್ರಣಾಳಿಕೆಯಲ್ಲೂ ಎನ್‌ಆರ್‌ಸಿಯ ಬಗ್ಗೆ ಯಾವ ಉಲ್ಲೇಖವನ್ನೂ ಮಾಡಿಲ್ಲ. ಕೇವಲ ಸಿಎಎಯ ಬಗ್ಗೆ ಮಾತ್ರ ಹೇಳಿ ಪ್ರಣಾಳಿಕೆಯನ್ನು ಕೊನೆಗೊಳಿಸಿತ್ತು. ಆದರೆ,

ಇದೀಗ ಚುನಾವಣಾ ಆಯೋಗ ಪ್ರಾರಂಭಿಸಿರುವ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸ್ವರೂಪವನ್ನು ನೋಡಿದರೆ ಮತ್ತು ಅದು ಕೇಳುವ ದಾಖಲೆಗಳು ಮತ್ತು ಕಟ್ ಆಫ್ ಡೇಟ್‌ಗಳನ್ನು ಪರಿಗಣಿಸಿದರೆ, ಕೇಂದ್ರ ಸರಕಾರದ ಎನ್‌ಆರ್‌ಸಿಯ ಉದ್ದೇಶವನ್ನು ಪೂರ್ತಿ ಮಾಡುವುದೇ ಇದರ ಉದ್ದೇಶ ಎಂದೇ ಹೇಳಬೇಕಾಗುತ್ತದೆ. ಅಸ್ಸಾಮ್‌ನಲ್ಲಿ ಪೌರತ್ವವನ್ನು ಸಾಬೀತುಪಡಿಸುವುದಕ್ಕೆ 1971 ಮಾರ್ಚ್ 24ನ್ನು ಕಟ್ ಆಫ್ ಡೇಟ್ ಆಗಿ ನಿಗದಿಪಡಿಸಲಾಗಿತ್ತು. ಈ ದಿನಾಂಕದ ಒಳಗೆ ಅಸ್ಸಾಮ್ ಪ್ರವೇಶಿಸಿದವರು ಭಾರತೀಯ ನಾಗರಿಕರು ಎಂಬುದಾಗಿ ಘೋಷಿಸಲಾಗಿತ್ತು.

ಈ ಪೌರತ್ವವನ್ನು ಸಾಬೀತುಪಡಿಸುವುದಕ್ಕೆ ದಾಖಲೆಯಾಗಿ ಅಸ್ಸಾಮ್‌ನಲ್ಲಿ ಪರಿಗಣಿಸಿದ್ದು ಇದೇ ಮತದಾರರ ಪಟ್ಟಿಯನ್ನು. 1971ರ ಮತದಾರರ ಪಟ್ಟಿಯಲ್ಲಿ ಯಾರದೆಲ್ಲ ಹೆಸರು ಇದೆಯೋ ಅವರೆಲ್ಲ ಭಾರತೀಯ ನಾಗರಿಕರು ಎಂದು ಸಾರಲಾಯಿತು. ಒಂದುವೇಳೆ, ತಮ್ಮ ಅಥವಾ ತಮ್ಮ ಪೂರ್ವಜರ ಹೆಸರು 1971 ಮತದಾರರ ಪಟ್ಟಿಯಲ್ಲಿ ಇಲ್ಲವೆಂದಾದರೆ ಪೌರತ್ವವನ್ನು ಸಾಬೀತು ಪಡಿಸಲು ಕೇಂದ್ರ ಗೃಹ ಇಲಾಖೆಯು ನಿಗದಿ ಮಾಡಿರುವ ದಾಖಲೆಗಳನ್ನು ಮಂಡಿಸಬೇಕು ಎಂದು ನಿರ್ದೇಶಿಸಲಾಯಿತು.

ಇಲ್ಲೊಂದು ಸೂಕ್ಷ್ಮತೆಯಿದೆ.

1971ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಅಥವಾ ಅವರ ಪೂರ್ವಜರ ಹೆಸರು ಇಲ್ಲದವರು ಗೃಹ ಇಲಾಖೆ ನಿಗದಿಪಡಿಸಿರುವ ದಾಖಲೆಗಳನ್ನು ಮಂಡಿಸಬೇಕೆಂದು ಹೇಳಲಾಗಿ ದೆಯೇ ಹೊರತು ಚುನಾವಣಾ ಆಯೋಗ ಹೇಳಿರುವ ದಾಖಲೆಗಳನ್ನು ಮಂಡಿಸಿ ಎಂದು ಹೇಳಿಲ್ಲ. ಅಂದರೆ, ಪೌರತ್ವ ಪಟ್ಟಿಯನ್ನು ತಯಾರಿಸುವ ಹೊಣೆಗಾರಿಕೆ ಗೃಹ ಇಲಾಖೆಗೆ ಮಾತ್ರವೇ ಇದೆ ಎಂದೇ ಇದರರ್ಥ. ಇದೀಗ ಸುಪ್ರೀಮ್ ಕೋರ್ಟ್‌ಗೆ ಇದೇ ವಿಷಯಕ್ಕೆ ಸಂಬಂಧಿಸಿ ದೂರು ಸಲ್ಲಿಸಲಾಗಿದೆ. ಇದರ ನಡುವೆಯೇ ಚುನಾವಣಾ ಆಯೋಗ ತರಾತುರಿಯಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಇಳಿದಿದೆ.

ಅಸ್ಸಾಮ್‌ನಲ್ಲಿ ಪೌರತ್ವ ಪಟ್ಟಿಯನ್ನು ತಯಾರಿಸಲು ಹೊರಟು ಕೈ ಸುಟ್ಟುಕೊಂಡಿರುವ ಕೇಂದ್ರ ಸರಕಾರವು ತುಸು ನಾಜೂಕಾಗಿ ತನ್ನ ಹೊಣೆಗಾರಿಕೆಯನ್ನು ಚುನಾವಣಾ ಆಯೋಗಕ್ಕೆ ವರ್ಗಾಯಿಸಿರುವಂತೆ ಕಾಣಿಸುತ್ತಿದೆ. ಅಸ್ಸಾಮ್‌ನಲ್ಲಿ ಪೌರತ್ವ ಸಾಬೀತುಪಡಿಸಲು ಯಾವೆಲ್ಲ ದಾಖಲೆಗಳನ್ನು ಕೇಳಲಾಗಿದೆಯೋ ಆ ಎಲ್ಲವನ್ನೂ ಬಿಹಾರದಲ್ಲೂ ಮತ್ತು ಈಗ SIR ನಡೆಯುತ್ತಿರುವ ರಾಜ್ಯಗಳಲ್ಲೂ ಕೇಳಲಾಗಿದೆ ಎಂಬುದೇ ಈ ಅನುಮಾನವನ್ನು ದೃಢಪಡಿಸುತ್ತದೆ. ಅಂದಹಾಗೆ,

ಅಸ್ಸಾಮ್‌ನ ಪೌರತ್ವ ಪಟ್ಟಿ ತಯಾರಿಯ ಬಳಿಕ ‘ಅನುಮಾನಾಸ್ಪದ ಮತದಾರರು’ ಎಂಬ ಹೊಸ ವಿಭಾಗವೇ ತಯಾರಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಮತದಾನ ಮಾಡಲು ಅವಕಾಶ ಇಲ್ಲದ ಹೊಸ ವಿಭಾಗ ಇದು. ‘ಅನುಮಾನಾಸ್ಪದ ಮತದಾರ’ರೆಲ್ಲ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆಗೆ ಸಿಲುಕಿದರು. 2019 ಆಗಸ್ಟ್ 31ರಂದು ಪ್ರಕಟಿಸಲಾದ ಪಟ್ಟಿಯಲ್ಲಿ ಒಟ್ಟು 19 ಲಕ್ಷ ಮಂದಿಯನ್ನು ಪೌರತ್ವದಿಂದ ಹೊರಗಿಡಲಾಯಿತು. ಅವರು ಭಾರತದ ನಾಗರಿಕತ್ವಕ್ಕೆ ಅರ್ಹರಲ್ಲ ಎಂದು ಹೇಳಲಾಯಿತು. ಆದರೆ,

ಅಸ್ಸಾಮ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಮ್ ನುಸುಳುಕೋರರಿದ್ದಾರೆ ಎಂದು ಹೇಳಿ ಆರಂಭಿಸಲಾದ ಈ ಪೌರತ್ವ ಪಟ್ಟಿ ಪರಿಷ್ಕರಣೆಯಲ್ಲಿ ಹೊರಗುಳಿದವರ ಧರ್ಮವನ್ನು ಕೇಂದ್ರ ಸರಕಾರವೇ ಬೆಚ್ಚಿಬಿತ್ತು. ಆದ್ದರಿಂದಲೇ ಅದು ಆರಂಭದಲ್ಲಿ ಈ 19 ಲಕ್ಷದಲ್ಲಿ ಹಿಂದೂಗಳೆಷ್ಟು, ಮುಸ್ಲಿಮರೆಷ್ಟು ಎಂಬುದನ್ನು ಬಹಿರಂಗಪಡಿಸಲೇ ಇಲ್ಲ. ಎಲ್ಲರೂ ಮುಸ್ಲಿಮರು ಎಂಬ ಸುಳ್ಳನ್ನು ಆಗ ವ್ಯವಸ್ಥಿತವಾಗಿ ತೇಲಿಬಿಡಲಾಯಿತು. ಈ ಪಟ್ಟಿಯಿಂದ ಹೊರ ಬಿದ್ದವರು ಫಾರಿನರ್ಸ್ ಟ್ರಿಬ್ಯೂನಲ್‌ನಲ್ಲಿ ಅರ್ಜಿ ಸಲ್ಲಿಸಿದರು. ಅಲ್ಲೂ ನ್ಯಾಯ ಸಿಗದವರು ಸುಪ್ರೀಮ್ ಕೋರ್ಟ್‌ನ ಬಾಗಿಲು ಬಡಿದರು. ಈ ನಡುವೆ ಈ 19 ಲಕ್ಷ ಮಂದಿಯಲ್ಲಿ ಹಿಂದೂಗಳ ಸಂಖ್ಯೆಯೇ ಅಧಿಕ ಇದೆ ಎಂಬುದು ಸುದ್ದಿಯಾಗ ತೊಡಗಿತು.

2024ರಲ್ಲಿ ಅಸ್ಸಾಮ್ ಸರಕಾರ ಕೊನೆಗೂ ಧರ್ಮಾಧಾರಿತ ಪಟ್ಟಿಯ ವಿವರವನ್ನು ನೀಡಲೇಬೇಕಾದ ಒತ್ತಡಕ್ಕೆ ಒಳಗಾಯಿತು. ಆಗ ಮುಸ್ಲಿಮರ ಸುತ್ತ ರಚಿಸಲಾದ ಸುಳ್ಳಿನ ಗೋಪುರವೂ ಕುಸಿದು ಬಿತ್ತು. ಹೀಗೆ ಪೌರತ್ವದಿಂದ ಹೊರಗುಳಿದವರಲ್ಲಿ 7 ಲಕ್ಷ ಮುಸ್ಲಿಮರಿದ್ದರೆ, 12 ಲಕ್ಷ ಹಿಂದೂಗಳಿದ್ದರು. ಆದರೆ 2019ರಲ್ಲಿ ಪಟ್ಟಿ ಬಿಡುಗಡೆಗೊಂಡ ಬಳಿಕ ಸೋರಿಕೆಯಾದ ಮಾಹಿತಿಯ ಪ್ರಕಾರ ಮುಸ್ಲಿಮರು 4 ಲಕ್ಷದ 86 ಸಾವಿರವಿದ್ದರೆ ಹಿಂದೂಗಳು 7 ಲಕ್ಷದ 50 ಸಾವಿರ ಇದ್ದಾರೆ. ಹೀಗೆ ಅಸ್ಸಾಮ್ ನಲ್ಲಿ ಮುಸ್ಲಿಮ್ ನುಸುಳುಕೋರರೇ ತುಂಬಿದ್ದಾರೆ ಮತ್ತು ಅವರನ್ನು ಹೊರದಬ್ಬಿ ಅಸ್ಸಾಮನ್ನು ಶುದ್ಧಗೊಳಿಸುತ್ತೇವೆ ಎಂದು ಹೊರಟವರಿಗೆ ಮುಖಭಂಗವಾದಾಗ ಮತ್ತು ಹೀಗೆ ಹೊರಗುಳಿದವರು ಅಸ್ಸಾಮ್ ಫಾರಿನರ್ಸ್ ಟ್ರಿಬ್ಯೂನಲ್ ಮತ್ತು ಸುಪ್ರೀಮ್ ಕೋರ್ಟ್‌ನಲ್ಲಿ ದಾವೆ ಹೂಡಿ ಅಸಮರ್ಪಕ ಪಟ್ಟಿ ತಯಾರಿಕೆಯ ಬಗ್ಗೆ ಹೋರಾಟ ಪ್ರಾರಂಭಿಸಿದಾಗ, ಗೃಹಸಚಿವರು ತಣ್ಣಗೆ ಈ ಕೆಲಸವನ್ನು ಕೈಬಿಟ್ಟು ಚುನಾವಣಾ ಆಯೋಗದ ತಲೆಗೆ ಹೊರಿಸಿದಂತೆ ಕಾಣಿಸುತ್ತಿದೆ. ಅಂದಹಾಗೆ,

ಅಸ್ಸಾಮ್‌ನಲ್ಲಿ 1971 ಜುಲೈ 1ನ್ನು ಅಂತಿಮ ದಿನಾಂಕ ಎಂದು ನಿಗದಿಪಡಿಸಲಾಗಿದ್ದರೆ ಕರ್ನಾಟಕದಲ್ಲಿ 2003ರ ಮತದಾರರ ಪಟ್ಟಿಯೇ ಅಂತಿಮ ದಿನಾಂಕವಾಗಿ ಇರಲಿದೆ. ಈ ಪಟ್ಟಿಯಲ್ಲಿ ಹೆಸರಿದೆಯೋ ಇಲ್ಲವೋ ಎಂಬುದನ್ನು ಪ್ರತಿಯೊಬ್ಬರೂ ಚುನಾವಣಾ ಆಯೋಗದ ವೆಬ್‌ಸೈಟ್ ಮೂಲಕ ಅಥವಾ ಚುನಾವಣಾ ಅಧಿಕಾರಿಗಳ ಮೂಲಕ ಖಚಿತಪಡಿಸಿಕೊಳ್ಳಬೇಕಾಗಿದೆ. ಒಂದುವೇಳೆ, ಈ ಪಟ್ಟಿಯಲ್ಲಿ ಹೆಸರು ಇಲ್ಲದವರು ಸಂಶಯಾಸ್ಪದ ಮತದಾರರಾಗಿ ಮಾರ್ಪಡುತ್ತಾರೆ. ಆ ಬಳಿಕ ಚುನಾವಣಾ ಆಯೋಗವು ನಿಗದಿ ಪಡಿಸಿದ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸುವವರೆಗೆ ಇವರೆಲ್ಲ ಸಂಶಯಾಸ್ಪದ ಮತದಾರರಾಗಿರುತ್ತಾರೆ.

2003ರ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಮತ್ತು ಇರದವರೆಲ್ಲರೂ ಅದಕ್ಕೆ ಸಂಬಂಧಿಸಿದ ಬೇರೆ ಬೇರೆ ಫಾರ್ಮ್‌ಗಳನ್ನು ತುಂಬಿ ಬೂತ್ ಲೆವೆಲ್ ಆಫೀಸರ್(BLO)ಗೆ ನೀಡಬೇಕು. ಹೀಗೆ, ಓರ್ವ ವ್ಯಕ್ತಿ ಭಾರತದ ನಾಗರಿಕ ಹೌದೋ ಅಲ್ಲವೋ ಎಂಬುದನ್ನು ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ಸೇರಿಸುವ ಅಥವಾ ಸೇರಿಸದೇ ಇರುವ ಅಧಿಕಾರವು BLOಗೆ ಅಥವಾ ಅದರ ಮೇಲಿನ ಇಲೆಕ್ಟ್ರಾರಲ್‌ ರಿಜಿಸ್ಟ್ರೇಷನ್‌ ಆಫೀಸರ್ ಅಥವಾ ಅಸಿಸ್ಟೆಂಟ್ ಇಲೆಕ್ಟ್ರಾರಲ್‌ ರಿಜಿಸ್ಟ್ರೇಷನ್‌ ಆಫೀಸರ್‌ಗೆ ಸಿಗುತ್ತದೆ. ಇವರ ತೀರ್ಮಾನದ ಬಗ್ಗೆ ತಕರಾರು ಇರುವವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಬಹುದು. ಇಲ್ಲೂ ನ್ಯಾಯ ಸಿಕ್ಕಿಲ್ಲ ಎಂದಾದರೆ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಬಹುದು. ಹಾಗಂತ,

ಆನ್‌ಲೈನ್ ಮೂಲಕವೋ ಅಥವಾ ನೇರವಾಗಿ ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗುವ ಮೂಲಕವೋ ಓರ್ವರು ಅರ್ಜಿಯನ್ನು ಸಲ್ಲಿಸಿದಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ. ಹೀಗೆ ಸಲ್ಲಿಸಲಾದ ಅರ್ಜಿದಾರರ ಪೈಕಿ ಪ್ರತಿಯೊಬ್ಬರ ಮನೆಗೂ ನಿಗದಿಪಡಿಸಲಾದ ದಿನಗಳ ಒಳಗೆ 3 ಬಾರಿಯಾದರೂ BLOಗಳು ಭೇಟಿ ನೀಡಬೇಕು. ಅರ್ಜಿಯಲ್ಲಿ ನೀಡಲಾದ ದಾಖಲೆಯನ್ನು ಪರಿಶೀಲಿಸಿ ಸ್ಪಷ್ಟಪಡಿಸಿ ಕೊಳ್ಳಬೇಕು. ಓರ್ವ BLO 1200 ಮನೆಗಳಿಗೆ ಭೇಟಿ ನೀಡಬೇಕು. ಆದರೆ, ಹೀಗೆ ಪ್ರತಿ ಮನೆಗೂ ಅಧಿಕಾರಿಗಳು ಭೇಟಿ ಕೊಡದೇ ಕುಳಿತಲ್ಲೇ ತೀರ್ಮಾನ ಮಾಡಿದರೆ ಏನಾದೀತು?

ಹೀಗೆ ಮಾಡಿದುದರಿಂದಲೇ ಬಿಹಾರದಲ್ಲಿ 68 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿದರು ಎಂಬ ಆರೋಪ ಇದೆ. ಇದನ್ನು ಸುಪ್ರೀಮ್ ಕೋರ್ಟ್‌ನಲ್ಲೇ ಖ್ಯಾತ ಸಾಮಾಜಿಕ ಹೋರಾಟಗಾರ ಯೋಗೇಂದ್ರ ಯಾದವ್ ಸಾಬೀತುಪಡಿಸಿದ್ದರು. ಸತ್ತಿದ್ದಾರೆಂದು ಬಿಹಾರದ ಚುನಾವಣಾ ಆಯೋಗ ಸಾರಿದ್ದವರನ್ನು ಅವರು ಜೀವಂತವಾಗಿ ಸುಪ್ರೀಮ್ ಕೋರ್ಟ್‌ನ ಮುಂದೆ ಹಾಜರುಪಡಿಸಿ ಇಡೀ ಪ್ರಕ್ರಿಯೆಯ ಪ್ರಾಮಾಣಿಕತೆಯನ್ನೇ ಪ್ರಶ್ನೆಗೀಡು ಮಾಡಿದ್ದರು.

ಸದ್ಯ ಪಕ್ಕದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಎಸ್‌ಐಆರ್ ನಡೆಯುತ್ತಿದೆ. ಕೇರಳದಲ್ಲಿ 2002ರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿತ್ತು. ಕರ್ನಾಟಕದಲ್ಲಿ 2003ರಲ್ಲಿ ನಡೆದಿದೆ. ಹಾಗಂತ, ಅವೆಲ್ಲವೂ ಎಸ್‌ಐಆರ್ ಅಥವಾ ಮತದಾರರ ವಿಶೇಷ ಪರಿಷ್ಕರಣಾ ಪಟ್ಟಿ ಆಗಿರಲಿಲ್ಲ. ಕೇವಲ ಮತದಾರರ ಪಟ್ಟಿ ಪರಿಷ್ಕರಣೆಯಷ್ಟೇ ಆಗಿತ್ತು. ಆದರೆ ಈಗ ನಡೆಯುತ್ತಿರುವುದು ಕೇವಲ ಪರಿಷ್ಕರಣೆ ಅಲ್ಲ, ವಿಶೇಷ ಪರಿಷ್ಕರಣೆ.

ಆದ್ದರಿಂದಲೇ ಆತಂಕ.