ಸನ್ಮಾರ್ಗ ವಾರ್ತೆ
ಗಡ್ಡಬಿಟ್ಟದ್ದನ್ನು ಕಾರಣವಾಗಿಸಿಕೊಂಡು ನರ್ಸಿಂಗ್ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ತಡೆದ ಪ್ರಕರಣ ಗುಜರಾತಿನಲ್ಲಿ ನಡೆದಿದೆ. ಈ ಬಗ್ಗೆ ಅಬೂಬಕ್ಕರ್ ಸಿದ್ದಿಕ್ ಎಂಬ ವಿದ್ಯಾರ್ಥಿ ಮಾಧ್ಯಮಗಳೊಂದಿಗೆ ದೂರಿಕೊಂಡಿದ್ದಾರೆ. ಡಿಸೆಂಬರ್ 23ರಂದು ಪರೀಕ್ಷೆ ಬರೆಯಲು ಹಾಜರಾದ ತನ್ನನ್ನು ತಡೆಯಲಾಯಿತು. ತಾನು ಯುನಿಫಾರ್ಮ್ ಧರಿಸಿದ್ದೆ ಮತ್ತು ಎಲ್ಲಾ ದಾಖಲಾತಿಗಳನ್ನು ಹೊಂದಿದ್ದೆ. ನನ್ನ ಗಡ್ಡವನ್ನು ನೋಡಿ ನೀನು ಪರೀಕ್ಷೆಗೆ ಹಾಜರಾಗಲು ಬಿಡುವುದಿಲ್ಲ ಎಂದು ಎಕ್ಸಾಮಿನರ್ ಹೇಳಿದ್ರು ಎಂದು ಅವರು ಹೇಳಿದ್ದಾರೆ. ಗಡ್ಡ ಬಿಡಬಾರದು ಎಂದು ಗುಜರಾತ್ ನರ್ಸಿಂಗ್ ಕೌನ್ಸಿಲ್ ನಲ್ಲಿ ಯಾವುದೇ ನಿಯಮ ಇಲ್ಲ ಎಂದು ಹೇಳಿದ ಅವರು ಗಡ್ಡ ಬಿಡಬಾರದೆಂಬುದಕ್ಕೆ, ಲಿಖಿತ ನಿಯಮವನ್ನು ತೋರಿಸಿ ಎಂದು ನಾನು ಎಕ್ಸಾಮಿನರ್ ನಲ್ಲಿ ಕೇಳಿದೆ. ಅವರು ತೋರಿಸಲಿಲ್ಲ ಎಂದವರು ಹೇಳಿದ್ದಾರೆ.
ಸುಮಾರು 2 ಗಂಟೆಗಳ ಕಾಲ ಸಿದ್ದೀಕ್ ಪರೀಕ್ಷಾ ಹಾಲಿನಿಂದ ಹೊರಗಿದ್ದರು. ಆ ಬಳಿಕ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರೀಕ್ಷೆ ಬರೆಯಲು ಅನುಮತಿಸಿದ್ದಾರೆ. ಆದರೆ ಪರೀಕ್ಷೆ ಬರೆಯುವ ವೇಳೆ ತನ್ನ ಪರ್ಫಾರ್ಮೆನ್ಸ್ ಮೇಲೆ ಇದು ಪ್ರಭಾವ ಬೀರಿದೆ ಎಂದವರು ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಅಡೆತಡೆ ಮುಂದುವರಿದಿದೆ ಎಂದು ಕೂಡ ಅವರು ಹೇಳಿದ್ದಾರೆ.
ಹಿಜಾಬ್ ಧರಿಸುವ ಯುವತಿಯರಿಗೂ ಇಂಥದ್ದೇ ಕಿರುಕುಳವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅನೇಕ ಯುವತಿಯರು ಒತ್ತಡ ತಾಳಲಾರದೆ ಹಿಜಾಬ್ ಕಳಚುತ್ತಾರೆ. ಕೆಲವರ ಮೇಲೆ ಒತ್ತಡ ಹಾಕಿ ಸತಾಯಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಜೇನಿಷಾ ಎಂಬವರು ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಪರೀಕ್ಷೆಯ ಸಂದರ್ಭದಲ್ಲಿ ತನ್ನ ಹಿಜಾಬ್ ಮತ್ತು ಬುರ್ಖಾವನ್ನು ಕಳಚುವಂತೆ ಅಧಿಕಾರಿಗಳು ಒತ್ತಡ ಹೇರಿದರು. ತಾನು ಲಿಖಿತ ನಿಯಮಗಳನ್ನು ತೋರಿಸುವಂತೆ ಪ್ರಶ್ನಿಸಿದೆ. ಅವರು ತೋರಿಸಲಿಲ್ಲ. ಆ ಬಳಿಕ ತಾನು ಪರೀಕ್ಷೆ ಬರೆಯದೆ ಮರಳಿದೆ ಎಂದವರು ಹೇಳಿದ್ದಾರೆ.
ಇನ್ನೋರ್ವ ವಿದ್ಯಾರ್ಥಿನಿ ನಿದಾ ಶೈಕ್ ಕೂಡ ಹಿಜಾಬ್ ನ ಹಿನ್ನೆಲೆಯಲ್ಲಿ ತನಗಾದ ದುರನುಭವವನ್ನು ಬಿಚ್ಚಿಟ್ಟಿದ್ದಾರೆ.












