ಡಿಸೆಂಬರ್ 25ರಂದು ಪ್ರಳಯವಾಗುತ್ತದೆ ಎಂದು ಘೋಷಿಸಿದ್ದ ಸ್ವ ಘೋಷಿತ ದೇವಮಾನವ ಯು ಟರ್ನ್: ಅನುಯಾಯಿಗಳಲ್ಲಿ ಆಕ್ರೋಶ

0
653

ಸನ್ಮಾರ್ಗ ವಾರ್ತೆ

ಡಿಸೆಂಬರ್ 25ರ ಕ್ರಿಸ್ಮಸ್ ದಿನದಂದು ಪ್ರಳಯವಾಗುತ್ತದೆ ಮತ್ತು ಜಗತ್ತು ನಾಶವಾಗುತ್ತದೆ ಎಂದು ಹೇಳಿದ ಸ್ವ ಘೋಷಿತ ದೇವಮಾನವನ ಮಾತನ್ನು ನಂಬಿ ಜನರು ಮೋಸ ಹೋದ ಘಟನೆ ಆಫ್ರಿಕನ್ ರಾಷ್ಟ್ರವಾದ ಘಾನದಲ್ಲಿ ನಡೆದಿದೆ. ಯಬೋ ಯನೋಕ್ ಎಂಬ ಈತ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ತಿಂಗಳುಗಳ ಮೊದಲೇ ಈ ಭವಿಷ್ಯವನ್ನು ನುಡಿದಿದ್ದ. ಮಾತ್ರ ಅಲ್ಲ ಈ ಪ್ರವಾಹದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬೃಹತ್ ದೋಣಿಗಳನ್ನು ತಯಾರಿಸಿದ್ದ. ಆಗಸ್ಟ್ ನಲ್ಲಿ ಈತ ಬಿಡುಗಡೆಗೊಳಿಸಿದ ಯೂಟ್ಯೂಬ್ ವಿಡಿಯೋದಲ್ಲಿ ಭಾರಿ ಮಳೆ ಪ್ರವಾಹ ಮತ್ತು ನಾಶದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದ. ತನಗೆ ದೇವನಿಂದ ಈ ಬಗ್ಗೆ ಸಂದೇಶ ಬಂದಿದೆ ಎಂದು ಹೇಳಿದ್ದ.

ಮೂರು ವರ್ಷಗಳ ಕಾಲ ನಿರಂತರ ಮಳೆ ಸುರಿಯಲಿದೆ. ಭವಿಷ್ಯದ ದುರಂತದಿಂದ ಜನರನ್ನು ರಕ್ಷಿಸುವುದಕ್ಕಾಗಿ ತಾನು ದೋಣಿಗಳನ್ನು ತಯಾರಿಸುವಂತೆ ದೇವನು ನನಗೆ ಸಂದೇಶ ನೀಡಿದ್ದಾನೆ ಎಂದು ಈತ ವಿಡಿಯೋದಲ್ಲಿ ಹೇಳಿದ್ದಲ್ಲದೆ ಮರದಿಂದ ಬೃಹತ್ ದೋಣಿಗಳು ತಯಾರಿಸುತ್ತಿರುವ ವಿಡಿಯೋವನ್ನು ಕೂಡ ಈತ ಹಂಚಿಕೊಂಡಿದ್ದ. ಸುಮಾರು ಹತ್ತರಷ್ಟು ಬೃಹತ್ ದೋಣಿಗಳನ್ನು ತಯಾರಿಸಿರುವುದಾಗಿಯೂ ಆತ ಹೇಳಿದ್ದ.

ಇದನ್ನು ನೋಡಿ ಅನೇಕ ಮಂದಿ ಪ್ರಭಾವಿತರಾದರು. ಮಾತ್ರ ಅಲ್ಲ ಘಾನಾದ ಕೆಲವು ಭಾಗಗಳಲ್ಲಿ ಭಾರಿ ಮಳೆಯು ಸುರಿಯತೊಡಗಿತು. ಇದರಿಂದ ಅನೇಕ ಮಂದಿ ಈ ದೇವಮಾನವನ ಮೇಲೆ ನಂಬಿಕೆ ಇರಿಸತೊಡಗಿದರು. ಇದು ಸಾಮೂಹಿಕ ಸನ್ನಿಯಾಗಿ ಮಾರ್ಪಾಡತೊಡಗಿತು. ಈತ ತಯಾರಿಸಿರುವ ದೋಣಿಯಲ್ಲಿ ಕುಳಿತು ಪ್ರವಾಹದಿಂದ ರಕ್ಷಣೆ ಹೊಂದುವ ಉದ್ದೇಶದಿಂದ ಅನೇಕರು ಸಮುದ್ರ ನಗರಿಯಾದ ಎಲ್ ಮಿನಾ ಎಂಬ ಪಟ್ಟಣದತ್ತ ವಲಸೆ ಹೋದರು.

ಈ ನಡುವೆ ಲೈಬೀರಿಯಾ ದಿಂದ ಹೊರಟು ಘಾನಾಗೆ ತಲುಪಿ ಎಲ್ ಮಿಯಾದಲ್ಲಿ ಸಿಲುಕಿಕೊಂಡ ವ್ಯಕ್ತಿ ಒಬ್ಬರು ಇನ್ನು ಏನು ಮಾಡಲಿ ಎಂದು ಅಳುತ್ತಿರುವ ದೃಶ್ಯಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರಮಾಣದಲ್ಲಿ ಹಂಚಿಕೆಯಾಗಿದೆ.

ಪ್ರವಾಹ ಉಂಟಾಗುತ್ತದೆ ಎಂಬ ಮಾತಿನಲ್ಲಿ ನಂಬಿಕೆ ಇರಿಸಿ ಒಂದು ಕುಟುಂಬ ದೋಣಿ ಹತ್ತಿರಕ್ಕೆ ತಮ್ಮ ವಾಸವನ್ನೇ ಬದಲಾಯಿಸಿತು. ಆದರೆ ತನ್ನ ಪ್ರಾರ್ಥನೆಯಿಂದಾಗಿ ದೇವನು ಪ್ರವಾಹವನ್ನು ಮುಂದೂಡಿದ್ದಾನೆ ಎಂದು ಈ ದೇವಮಾನವ ವಿಡಿಯೋದ ಮೂಲಕ ಹೇಳಿಕೊಂಡದ್ದನ್ನು ಅನುಸರಿಸಿ ಸಿಟ್ಟಿನಿಂದ ಈ ಕುಟುಂಬ ದೋಣಿಗೆ ಬೆಂಕಿ ಕೊಟ್ಟಿರುವುದಾಗಿ ಘಾನಾದ ಮಾಧ್ಯಮಗಳು ವರದಿ ಮಾಡಿವೆ.

ನಾನು ನಿರಂತರ ಪ್ರಾರ್ಥಿಸಿದೆ. ಉಪವಾಸ ಹಿಡಿದೆ. ದಾನ ಮಾಡಿದೆ. ನನ್ನ ಪ್ರಾರ್ಥನೆಯಿಂದ ನನಗೆ ಇನ್ನೊಂದು ಸಂದೇಶ ಲಭಿಸಿತು. ಈ ಸಂದೇಶ ದೇವನ ಹಲವು ಅದ್ಭುತಗಳಲ್ಲಿ ಒಂದು. ಈಗಾಗಲೇ ನಿರ್ಮಿಸಿರುವ 10 ದೋಣಿಗಳಿಗೆ ಹೊರತಾಗಿ ಇನ್ನೂ ಹೆಚ್ಚು ದೋಣಿಗಳನ್ನು ನಿರ್ಮಿಸುವುದಕ್ಕೆ ದೇವನು ನನಗೆ ಒಂದಷ್ಟು ಸಮಯವನ್ನು ನೀಡಿದ್ದಾನೆ. ನಾನು ಯಾರಿಗೂ ಟಿಕೆಟ್ ನೀಡುವುದಿಲ್ಲ. ಯಾರಿಂದಲೂ ಹಣ ಪಡೆದುಕೊಳ್ಳುವುದಿಲ್ಲ. ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಇರಿ ಎಂದು ಆತ ಹೊಸ ವಿಡಿಯೋದಲ್ಲಿ ಹೇಳಿದ್ದಾನೆ.

ಅನುಯಾಯಿಗಳಿಂದ ತಾನು ಎಂದು ಹಣ ಸ್ವೀಕರಿಸಿಲ್ಲ ಎಂದಾತ ಹೇಳಿದ್ದಾನೆ. ಆದರೆ 89,000 ಡಾಲರ್ ಬೆಲೆಯುಳ್ಳ ಮರ್ಸಿಡಿಸ್ ಕಾರನ್ನು ಆತ ಖರೀದಿಸಿರುವುದಾಗಿ ವರದಿ ಇದೆ. ದೋಣಿ ತಯಾರಿಸುವುದಕ್ಕೆ ಎಂದು ಆತ ಪಡಕೊಂಡ ಹಣದಿಂದ ಈ ಕಾರನ್ನು ಖರೀದಿಸಿದ್ದಾನೆ ಎಂದು ಹೇಳಲಾಗುತ್ತಿದೆ.