ಸನ್ಮಾರ್ಗ ವಾರ್ತೆ
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಜ. 4 ರಂದು ಮಂಗಳೂರು ತಾಲೂಕಿನ ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಿಗ್ಗೆ 9:30ಕ್ಕೆ ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್ಬಿರ್ ಶಾಲಾ ವಠಾರದಿಂದ ಸಭಾಂಗಣದ ತನಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಜಿ ಎಂ.ಎಚ್. ಮೊಹಿದಿನ್ ಅಡ್ಡೂರು ಮೆರವಣಿಗೆ ಉದ್ಘಾಟಿಸುವರು.
ಬೆಳಗ್ಗೆ 10:15ಕ್ಕೆ ಸ್ಪೀಕರ್ ಯು.ಟಿ. ಖಾದರ್ ಸಮ್ಮೇಳನ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಅಕಾಡಮಿ ಅಧ್ಯಕ್ಷ ಉಮರ್ ಯು.ಎಚ್. ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಒಂದು ಹನಿಗವನ ಸಂಕಲನ ಬಿಡುಗಡೆಗೆಯಾಗಲಿದೆ. ಮಧ್ಯಾಹ್ನ 12ಕ್ಕೆ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ಚರ್ಚಾಗೋಷ್ಠಿ ನಡೆಯಲಿದೆ.
ಅಪರಾಹ್ನ 2ಕ್ಕೆ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ಜರುಗಲಿದೆ. ಅಪರಾಹ್ನ 3ಕ್ಕೆ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ದಫ್ ತಂಡದಿಂದ ದಫ್ ಹಾಡು ಮತ್ತು ಬ್ಯಾರಿ ಹಾಡುಗಾರರ ತಂಡದಿಂದ ಹಾಡುಗಳ ಸಂಭ್ರಮವಿರಲಿದೆ ಎಂದು ತಿಳಿಸಿದರು.
ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಬ್ದುಲ್ ಲತೀಫ್ ಗುರುಪುರ, ಪಾತುಂಗ್ ಮೂಡುಶೆಡ್ಡೆ, ಎಂ.ಪಿ. ಉಸ್ಮಾನ್ ಮುಕ್ತಿಕ ಸೂರಲ್ಪಾಡಿ, ಸುಲೈಮಾನ್ ಗುರುಪುರ, ಸಲೀಕಾ ಸೂರಲ್ಪಾಡಿ, ಆರ್.ಎಸ್. ಅಶ್ರಫ್ ಸೂರಲ್ಪಾಡಿ, ಅಬ್ದುಲ್ ಶರೀಫ್ ಸಾಮರಸ್ಯ ನ್ಯೂಸ್ ಮತ್ತು ಮುಹಮ್ಮದ್ ನಝೀರ್ ಬಜ್ಪೆಯವರನ್ನು ಸನ್ಮಾನಿಸಲಾಗುವುದು. ಬ್ಯಾರಿ ಇನ್ಫೋ.ಕಾಂನ ಮುಖ್ಯಸ್ಥ ಬಿ.ಎ. ಮುಹಮ್ಮದ್ ಅಲಿ ಸಮಾರೋಪ ಭಾಷಣ ಮಾಡುವರು ಎಂದರು.
ಸಂಜೆ 6:30ರಿಂದ ರಾತ್ರಿ 8ರ ತನಕ ಚಲನಚಿತ್ರ ನಿರ್ದೇಶಕ ಇಸ್ಮಾಯೀಲ್ ಮೂಡುಶೆಡ್ಡೆ ನಿರ್ದೇಶನದ ಟ್ರೋಕರ್ ಪೋಕರ್ ಬ್ಯಾರಿ ನಾಟಕ ಮತ್ತು ಗುರುಪುರದ ಎಂ.ಜಿ.ಎಂ. ತಾಲೀಮು ತಂಡದಿಂದ ತಾಲೀಮು ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಇ.ಕೆ.ಎ. ಸಿದ್ದೀಕ್ ಅಡ್ಡೂರು, ಕಾರ್ಯಕ್ರಮದ ಸದಸ್ಯ ಸಂಚಾಲಕ ತಾಜುದ್ದೀನ್ ಅಮ್ಮುಂಜೆ, ಅಕಾಡಮಿಯ ಸದಸ್ಯರಾದ ಯು.ಎಚ್. ಖಾಲಿದ್ ಉಜಿರೆ, ಅನ್ಸಾರ್ ಕಾಟಿಪಳ್ಳ, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎಂ.ಜಿ.ಶಾಹುಲ್ ಹಮೀದ್ ಗುರುಪುರ, ಸಲೀಂ ಹಂಡೇಲ್, ಕಾರ್ಯದರ್ಶಿಗಳಾದ ಅಬ್ದುಲ್ ಜಲೀಲ್ ಅರಳ ಎಂ.ಡಿ. ನವಾಝ್ ಉಪಸ್ಥಿತರಿದ್ದರು.
ಬ್ಯಾರಿ ಭವನಕ್ಕೆ ಹೊಸ ನೀಲ ನಕ್ಷೆ
ಉಳ್ಳಾಲ ತಾಲೂಕಿನ ಅಸೈಗೋಳಿಯ 51 ಸೆಂಟ್ಸ್ ಜಮೀನಿನಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯ ಭವನ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ನಡೆದಿದ್ದು, ಮುಂದಿನ ತಿಂಗಳೊಳಗೆ ಶಿಲಾನ್ಯಾಸ ನೆರವೇರುವ ಸಾಧ್ಯತೆ ಇದೆ. ಈ ಹಿಂದಿನ ಅವಧಿಯಲ್ಲಿ ತಯಾರಿಸಲಾದ ನೀಲನಕ್ಷೆಯನ್ನು ಬದಲಾಯಿಸಿ ಹೊಸ ನಕ್ಷೆ ತಯಾರಿಸಲಾಗಿದೆ. ಇದರಲ್ಲಿ ಮ್ಯೂಸಿಯಂ, ಗ್ರಂಥಾಲಯ, ವಾಚನಾಲಯ, ಸಂಶೋಧನಾ ಕೇಂದ್ರ, ಬಹುವಿಧದ ಸಭಾಂಗಣ, ವಾಣಿಜ್ಯ ಕೊಠಡಿ ಇತ್ಯಾದಿ ಇರಲಿದೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.












