ಸನ್ಮಾರ್ಗ ನ್ಯೂಸ್ ಚಾನೆಲ್‌ಗೆ 5 ವರ್ಷ: ವಿಶಿಷ್ಟವಾಗಿ ನೆರವೇರಿದ ಸನ್ಮಾರ್ಗ ನ್ಯೂಸ್ ಕಾಂಕ್ಲೇವ್ ಕಾರ್ಯಕ್ರಮ

0
463

ಸನ್ಮಾರ್ಗ ವಾರ್ತೆ

ಮಂಗಳೂರು: ಸನ್ಮಾರ್ಗ ನ್ಯೂಸ್ ಚಾನೆಲ್‌ಗೆ 5 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಲ್ಲಿನ ರಾಯಲ್ ಪ್ಲಾಜಾದಲ್ಲಿ ಸನ್ಮಾರ್ಗ ನ್ಯೂಸ್ ಕಾಂಕ್ಲೇವ್ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಆಯ್ದ ಸಭಿಕರ ಮುಂದೆ ನಡೆದ ಈ ಕಾರ್ಯಕ್ರಮವನ್ನು ನ್ಯಾಯವಾದಿ ಮತ್ತು ಚಿಂತಕರಾದ ಸುಧೀರ್ ಕುಮಾರ್ ಮುರೊಳ್ಳಿ ಉದ್ಘಾಟಿಸಿದರು ಮತ್ತು ಸ್ವಸ್ಥ ಮಾಧ್ಯಮ, ಸಶಕ್ತ ರಾಷ್ಟ್ರ ಎಂಬ ಕೇಂದ್ರೀಯ ವಿಷಯದ ಮೇಲೆ ಮಾತಾಡಿದರು.

ಈ ಕಾರ್ಯಕ್ರಮದಲ್ಲಿ ದ.ಕ. ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್, ಅನುಪಮಾ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ ಅವರು ಅತಿಥಿಗಳಾಗಿ ಭಾಗವಹಿಸಿ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸನ್ಮಾರ್ಗ ನ್ಯೂಸ್ ಚಾನೆಲ್‌ನ ಬಗ್ಗೆ ನರೇಂದ್ರ ರೈ ದೇರ್ಲ, ಬಶೀರ್ ಬೈರಿಕಟ್ಟೆ, ಉದಯ ಆಚಾರ್ಯ, ರೆ| ಫಾ| ಇಮ್ಯಾನುಯೆಲ್ ಆರ್. ಪುನೀತ್, ಮತ್ತು ಶಮೀಮಾ ಕುತ್ತಾರ್ ಅವರು ಅಭಿಪ್ರಾಯಗಳನ್ನು ಹಂಚಿಕೊಂಡರು.

ಸನ್ಮಾರ್ಗ ನ್ಯೂಸ್ ಚಾನೆಲ್‌ನ ಆಂಕರ್ ಗಳಿಗೆ ಗೌರವ ಕಾಣಿಕೆಗಳನ್ನು ನೀಡಲಾಯಿತು.

ಸಂಪಾದಕ ಏ.ಕೆ. ಕುಕ್ಕಿಲ ಅವರು ಪ್ರಾಸ್ತಾವಿಕವಾಗಿ ಮಾತಾಡಿದರು. ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ದಾನಿಶ್ ಸ್ವಾಗತಿಸಿದರು. ಸನ್ಮಾರ್ಗ ನ್ಯೂಸ್ ಆಂಕರ್ ಪ್ರಿಯಾ ಸುದೇಶ್ ಕಾರ್ಯಕ್ರಮ ನಿರೂಪಿಸಿದರು.

ಆ ಬಳಿಕ ಅವಕಾಶ ವಂಚಿತರ ತಲ್ಲಣಗಳು ಮತ್ತು ಮಾಧ್ಯಮ ಎಂಬ ವಿಷಯದ ಮೇಲೆ ಖ್ಯಾತ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಜೊತೆ ಸಂವಾದ ನಡೆಯಿತು. ಅವಕಾಶ ವಂಚಿತರ ಬಗ್ಗೆ ಮತ್ತು ಅವರ ತಲ್ಲಣಗಳಿಗೆ ಮಾಧ್ಯಮಗಳು ಕಣ್ಣಾಗದೇ ಇರುವ ಮತ್ತು ಕಣ್ಣಾಗಲೇ ಬೇಕಾದ ಸಂಗತಿಗಳ ಸುತ್ತ ಅವರು ಅಭಿಪ್ರಾಯಗಳನ್ನು ಹಂಚಿಕೊಂಡರು. ಸಭಿಕರೂ ಈ ಸಂವಾದದಲ್ಲಿ ಭಾಗಿಯಾದರು. ಈ ಕಾರ್ಯಕ್ರಮವನ್ನು ಸಂಪಾದಕ ಏ.ಕೆ. ಕುಕ್ಕಿಲ ನಡೆಸಿಕೊಟ್ಟರು.

ಮಾಧ್ಯಮ: ನೈತಿಕತೆ, ಸವಾಲುಗಳು ಮತ್ತು ಹೊಣೆಗಾರಿಕೆ ಎಂಬ ವಿಷಯದ ಮೇಲೆ ದ್ವಿತೀಯ ಸಂವಾದ ಗೋಷ್ಠಿ ನಡೆಯಿತು. ಇದರಲ್ಲಿ ಹಿರಿಯ ಪತ್ರಕರ್ತರಾದ ಬಿ.ಎಂ. ಹನೀಫ್ ಮತ್ತು ಈ ದಿನ ಡಾಟ್ ಕಾಂ ನ ಮುಖ್ಯಸ್ಥರಾದ ವಾಸು ಅವರು ಅತಿಥಿಗಳಾಗಿ ಭಾಗಿಯಾದರು. ಸಭಿಕರೂ ಭಾಗಿಯಾದ ಈ ಸಂವಾದ ಗೋಷ್ಠಿಯಲ್ಲಿ ಮಾಧ್ಯಮಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಅದನ್ನು ಎದುರುಗೊಳ್ಳಬೇಕಾದ ವಿಧಾನಗಳ ಸುತ್ತ ಅಭಿಪ್ರಾಯಗಳು ವ್ಯಕ್ತವಾದವು. ಈ ಕಾರ್ಯಕ್ರಮವನ್ನು ಏ.ಕೆ. ಕುಕ್ಕಿಲ ಮತ್ತು ಸನ್ಮಾರ್ಗ ನ್ಯೂಸ್ ಪ್ರೋಗ್ರಾಮ್ ಇಂಚಾರ್ಜ್ ಆಗಿರುವ ಆರ್. ಎ. ಲೋಹಾನಿ ನಡೆಸಿಕೊಟ್ಟರು.

ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ನ ಅಧ್ಯಕ್ಷ ಅಶ್ಪಾಕ್ ಅಹ್ಮದ್ ಶರೀಫ್ ಸಮಾರೋಪ ನುಡಿಗಳನ್ನಾಡಿದರು. ಸನ್ಮಾರ್ಗ ನ್ಯೂಸ್ ಆಂಕರ್ ಸಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

ಆರಂಭದಲ್ಲಿ ಸನ್ಮಾರ್ಗ ನ್ಯೂಸ್ ನಡೆದು ಬಂದ ದಾರಿಯ ಸುತ್ತ ಡಾಕ್ಯುಮೆಂಟರಿ ಪ್ರದರ್ಶನ ನಡೆಯಿತು.