ಕರ್ನಾಟಕದ ಅಮೀರ್-ಎ-ಶರೀಯಃ ಮೌಲಾನಾ ಸಘೀರ್ ಅಹ್ಮದ್ ಖಾನ್ ರಶಾದಿ ನಿಧನ

0
422

ಸನ್ಮಾರ್ಗ ವಾರ್ತೆ

ಬೆಂಗಳೂರು: ಕರ್ನಾಟಕದ ಅಮೀರ್-ಎ-ಶರೀಯಃ ಹಾಗು ಬೆಂಗಳೂರಿನ ಸುಪ್ರಸಿದ್ಧ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಸಂಸ್ಥೆ ಸಬೀಲ್-ಉರ್-ರಶಾದಿನ ರೆಕ್ಟರ್ ಮೌಲಾನಾ ಸಘೀರ್ ಅಹ್ಮದ್ ಖಾನ್ ರಶಾದಿ ಅವರು ಇಂದು ಮುಂಜಾನೆ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು. ಅವರ ನಿಧನದೊಂದಿಗೆ ರಾಜ್ಯದ ಇಸ್ಲಾಮಿಕ್ ಪಾಂಡಿತ್ಯ ಮತ್ತು ಧಾರ್ಮಿಕ ನಾಯಕತ್ವದ ಒಂದು ಮಹತ್ವದ ಅಧ್ಯಾಯ ಮುಕ್ತಾಯಗೊಂಡಂತಾಗಿದೆ.

ಇಸ್ಲಾಮಿನ ಶೈಕ್ಷಣಿಕ ದಿಗ್ಗಜರಾಗಿದ್ದ ಮೌಲಾನಾ ಸಘೀರ್ ಅಹ್ಮದ್ ಅವರು ಐದು ದಶಕಕ್ಕೂ ಹೆಚ್ಚು ಕಾಲ ತಮ್ಮ ಜೀವನವನ್ನು ಬೋಧನೆ, ಮಾರ್ಗದರ್ಶನ ಮತ್ತು ಸಮುದಾಯದ ಸೇವೆಗೆ ಅರ್ಪಿಸಿದ್ದರು.

ಅವರು ಐವರು ಪುತ್ರರು ಮತ್ತು ಎರಡು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ಐದು ಪುತ್ರರೂ ಹಾಫಿಝ್-ಎ-ಕುರ್‌ಆನ್ ಆಗಿದ್ದು, ಪ್ರಾವೀಣ್ಯ ಪಡೆದ ಇಸ್ಲಾಮಿಕ್ ಪಂಡಿತರಾಗಿದ್ದಾರೆ. ಅವರು ಪ್ರಸ್ತುತ ಮಧ್ಯಪ್ರಾಚ್ಯದ ವಿವಿಧ ದೇಶಗಳ ಮಸೀದಿಗಳಲ್ಲಿ ಇಮಾಮರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೊಮ್ಮಕ್ಕಳಲ್ಲಿ ಇಬ್ಬರೂ ಪವಿತ್ರ ಕುರ್‌ಆನ್ ಅನ್ನು ಸಂಪೂರ್ಣವಾಗಿ ಹಿಫ್ಝ್ ಮಾಡಿಕೊಂಡಿದ್ದು, ಕುಟುಂಬದಲ್ಲಿ ಅವರು ಬೆಳೆಸಿದ ವಿದ್ಯಾಸಂಪತ್ತಿನ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಒಬ್ಬರನ್ನು ಹೊರತುಪಡಿಸಿ, ಅವರ ಎಲ್ಲಾ ಪುತ್ರರು ಹಾಗೂ ಮೊಮ್ಮಕ್ಕಳು ಸಬೀಲ್-ಉರ್-ರಶಾದ್‌ ನಲ್ಲಿ ಅವರ ನೇರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ನಡೆಸಿದ್ದರು.

ಮೈಸೂರು ಸಮೀಪದ ಕೊಲಾಂಡ ಗ್ರಾಮದಲ್ಲಿ ಹುಟ್ಟಿದ ಮೌಲಾನಾ ಸಘೀರ್ ಅಹ್ಮದ್ ಖಾನ್ ಅವರು, ಸಬೀಲ್-ಉರ್-ರಶಾದ್‌ ನ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು. ಸುಮಾರು ಆರು ದಶಕಗಳ ಹಿಂದೆ ಅವರು ಈ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು. ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ, ಅದೇ ಸಂಸ್ಥೆಯ ಅಧ್ಯಾಪಕರಾಗಿ ನೇಮಕಗೊಂಡ ಅವರು, ಜೀವನಪೂರ್ತಿ ಆ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು. ಶಿಕ್ಷಕರಾಗಿ ಅವರು ಕುರ್‌ಆನ್ ತಫ್ಸೀರ್ ಮತ್ತು ಹದೀಸ್ ಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದು, ವಿಶೇಷವಾಗಿ, ಬುಖಾರಿ ಶರೀಫ್ ಬೋಧನೆಯಲ್ಲಿ ಅಪಾರ ಗೌರವ ಪಡೆದಿದ್ದರು.

ಸುಮಾರು 50 ವರ್ಷಗಳ ಕಾಲ ಅವರು ಅಗಣಿತ ವಿದ್ಯಾರ್ಥಿಗಳನ್ನು ರೂಪಿಸಿದ್ದು, ಅವರಲ್ಲಿ ಹಲವರು ಇಂದು ಭಾರತ ಹಾಗೂ ವಿದೇಶಗಳಲ್ಲಿ ಪಂಡಿತರಾಗಿ, ಇಮಾಮರಾಗಿ ಮತ್ತು ಧಾರ್ಮಿಕ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಬೀಲ್-ಉರ್-ರಶಾದಿನ ಸ್ಥಾಪಕರಾಗಿದ್ದ ಮೌಲಾನಾ ಅಬು ಸಊದ್ ಅವರ ಪುತ್ರ ಮುಫ್ತಿ ಅಶ್ರಫ್ ಅಲಿ ಅವರ ನಿಧನದ ಬಳಿಕ ಮೌಲಾನಾ ಸಘೀರ್ ಅಹ್ಮದ್ ಖಾನ್ ಅವರನ್ನು ಸಂಸ್ಥೆಯ ರೆಕ್ಟರ್ ಆಗಿ ನೇಮಕ ಮಾಡಲಾಯಿತು.

ಅವರ ಪಾಂಡಿತ್ಯ, ಪ್ರಾಮಾಣಿಕತೆ ಮತ್ತು ನಾಯಕತ್ವ ಗುಣವನ್ನು ಗುರುತಿಸಿ, 2018ರಲ್ಲಿ ಅವರನ್ನು ಕರ್ನಾಟಕದ ಅಮೀರ್-ಎ-ಶರೀಯಃ ಆಗಿ ಆಯ್ಕೆ ಮಾಡಲಾಯಿತು. ಇದರೊಂದಿಗೆ ಅವರು ಮೂರನೇ ಅಮೀರ್-ಎ-ಶರೀಯಃ ಆಗಿದ್ದರು. ವಿನಮ್ರತೆ, ಆಳವಾದ ಪಾಂಡಿತ್ಯ ಮತ್ತು ಇಸ್ಲಾಮಿಕ್ ವಿದ್ಯಾಭ್ಯಾಸ ಹಾಗೂ ಶರೀಯತ್ ಮಾರ್ಗದರ್ಶನಕ್ಕೆ ಅವರ ಅಚಲ ಬದ್ಧತೆಗಾಗಿ ಮೌಲಾನಾ ಸಘೀರ್ ಅಹ್ಮದ್ ಖಾನ್ ಸದಾ ಸ್ಮರಿಸಲ್ಪಡುವರು. ಅವರ ಅಗಲಿಕೆಯು ಕರ್ನಾಟಕ ಹಾಗೂ ಅದರ ಹೊರಗಿನ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಮತ್ತು ಸಮಸ್ತ ಮುಸ್ಲಿಂ ಸಮುದಾಯಕ್ಕೆ ಭರಿಸಲಾಗದ ನಷ್ಟವನ್ನುಂಟು ಮಾಡಿದೆ.