ಸನ್ಮಾರ್ಗ ಸಂಪಾದಕೀಯ
ಬುರ್ಖಾ, ಹಿಜಾಬ್, ನಕಾಬ್, ಮಾಸ್ಕ್ ಮತ್ತು ಹೆಲ್ಮೆಟ್ಗಳಿಗೆ ಬಿಹಾರದ ಚಿನ್ನದಂಗಡಿಗಳು ಹೇರಿರುವ ನಿಷೇಧವು ಇದೀಗ ಉತ್ತರ ಪ್ರದೇಶಕ್ಕೂ ವ್ಯಾಪಿಸಿದೆ. ಇಲ್ಲಿನ ವಾರಣಾಸಿ ಮತ್ತು ಝಾನ್ಸಿ ಜಿಲ್ಲೆಗಳ ಚಿನ್ನದಂಗಡಿಗಳಲ್ಲೂ ಇವುಗಳಿಗೆ ನಿಷೇಧ ಹೇರಲಾಗಿದೆ. ಚಿನ್ನದಂಗಡಿ ಮಾಲಕರ ರಾಷ್ಟ್ರೀಯ ಅಸೋಸಿಯೇಶನ್ ಹೇರಿರುವ ಈ ನಿಷೇಧಕ್ಕೆ ಕಳ್ಳತನವನ್ನು ಕಾರಣವಾಗಿ ನೀಡಲಾಗಿದೆ. ಮುಖ ಮುಚ್ಚುವ ವಸ್ತ್ರವು ಗುರುತನ್ನು ಮರೆಮಾಚುವುದರಿಂದ ಅವನ್ನು ನಾವು ನಿಷೇಧಿಸಿದ್ದೇವೆ ಎಂದು ಅಸೋಸಿಯೇಶನ್ ಸಮರ್ಥಿಸಿಕೊಂಡಿದೆ. ಆದರೆ,
ಮುಖ ಮುಚ್ಚುವ ಉಡುಪುಗಳಾದ ನಕಾಬ್ ಮತ್ತು ಮಾಸ್ಕ್ನ ಜೊತೆಗೇ ಮುಖ ಮುಚ್ಚದ ಉಡುಪುಗಳಾದ ಬುರ್ಖಾ ಮತ್ತು ಹಿಜಾಬನ್ನು ಯಾಕೆ ನಿಷೇಧದ ಪಟ್ಟಿಯಲ್ಲಿಟ್ಟಿದ್ದೀರಿ ಎಂಬ ಪ್ರಶ್ನೆಗೆ ಅಸೋಸಿಯೇಶನ್ ಈವರೆಗೂ ಸಮರ್ಪಕ ಉತ್ತರ ಕೊಟ್ಟಿಲ್ಲ. ಹಿಜಾಬ್ ಎಂಬುದು ತಲೆಗೂದಲನ್ನು ಮರೆಮಾಚಲು ಉಪಯೋಗಿಸುವ ಬಟ್ಟೆ. ಬುರ್ಖಾ ಎಂಬುದು ನಿಲುವಂಗಿಯಂಥ ಉದ್ದದ ಉಡುಪು. ಇವೆರಡೂ ಮುಖ ಮುಚ್ಚುವ ಉಡುಪುಗಳಲ್ಲ. ಚಿನ್ನದಂಗಡಿ ಮಾಲಕರ ರಾಷ್ಟ್ರೀಯ ಅಸೋಸಿಯೇಶನ್ಗೆ ಇಷ್ಟೂ ಸಾಮಾನ್ಯ ಜ್ಞಾನ ಇಲ್ಲ ಎಂಬುದನ್ನು ಒಪ್ಪುವುದು ಕಷ್ಟ. ಆದ್ದರಿಂದಲೇ,
ಈ ನಿಷೇಧದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಬೇಕಾಗುತ್ತದೆ. ಕಳ್ಳತನ ಎಂಬುದು ಬುರ್ಖಾ ಮತ್ತು ಹಿಜಾಬನ್ನು ನಿಷೇಧಿಸುವುದಕ್ಕಾಗಿ ಕೃತಕವಾಗಿ ಉತ್ಪತ್ತಿ ಮಾಡಲಾದ ಕಾರಣವೇ? ಬುರ್ಖಾ ಮತ್ತು ಹಿಜಾಬನ್ನು ಕಳ್ಳತನದ ಮಾದರಿ ವಸ್ತ್ರಗಳು ಎಂದು ಅಪಪ್ರಚಾರ ಮಾಡುವ ಸಂಚು ಇದರ ಹಿಂದಿದೆಯೇ? ಕಳ್ಳನತಕ್ಕೂ ಬುರ್ಖಾ ಮತ್ತು ಹಿಜಾಬ್ಗೂ ಏನು ಸಂಬಂಧ? ಸೀರೆ ಉಟ್ಟವರು ಕಳ್ಳತನ ಮಾಡುವುದಿಲ್ಲವೇ? ಪ್ಯಾಂಟ್ ಧರಿಸಿದವರು ಕಳ್ಳತನ ಮಾಡುವುದಿಲ್ಲವೇ? ಚೂಡಿದಾರ್ ಧರಿಸಿದವರಿಂದ ಕಳ್ಳತನ ನಡೆದಿಲ್ಲವೇ? ಸಂಪೂರ್ಣ ಮುಖ ತೆರೆದವರು ಕಳ್ಳತನ ನಡೆಸಿಲ್ಲವೇ? ಉಡುಪಿನ ಹಂಗಿಲ್ಲದೇ ರಾಜಾರೋಷವಾಗಿ ಪ್ರತಿದಿನವೆಂಬಂತೆ ಕಳ್ಳತನದ ಘಟನೆಗಳು ನಡೆಯುತ್ತಿರುವಾಗ ಬುರ್ಖಾ ಮತ್ತು ಹಿಜಾಬನ್ನು ಮಾತ್ರ ಕಳ್ಳತನದ ವಸ್ತುಗಳು ಎಂಬ ಪ್ರತ್ಯೇಕ ಪಟ್ಟಿಯಲ್ಲಿಟ್ಟು ನಿಷೇಧಿಸಲು ಕಾರಣವೇನು? ಇಸ್ಲಾಮೋಫೋಬಿಯಾವನ್ನು ಹಬ್ಬಿಸುವ ಸಂಚಿನ ಭಾಗವಾಗಿಯೇ ಈ ನಿಷೇಧ ಕ್ರಮವನ್ನು ಕೈಗೊಳ್ಳಲಾಯಿತೇ? ಅದರಲ್ಲೂ,
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೈದ್ಯೆ ನುಸ್ರತ್ ಪರ್ವೀನ್ರ ನಕಾಬ್ ಎಳೆದು ವಿವಾದಕ್ಕೆ ಗುರಿಯಾದ ತಿಂಗಳೊಳಗೆ ಈ ನಿಯಮ ಜಾರಿಗೆ ಬರಲು ಕಾರಣವೇನು? ಅದೂ ದೇಶದಲ್ಲಿ ಪ್ರಪ್ರಥಮವಾಗಿ ಬಿಹಾರದಲ್ಲಿ ಮೊದಲು ಜಾರಿಯಾಗಲು ಕಾರಣವೇನು? ಬಿಹಾರವೆಂಬುದು ದೇಶದಲ್ಲಿ ಅತ್ಯಂತ ಬಡ ರಾಜ್ಯಗಳಲ್ಲಿ ಒಂದು. ಅಲ್ಲಿ ಚಿನ್ನ ಖರೀದಿಸುವ ಸಾಮರ್ಥ್ಯ ಉಳ್ಳವರೂ ಕಡಿಮೆ. ಹೀಗಿದ್ದೂ ಈ ನಿಯಮ ಜಾರಿಗೆ ತರಲು ಅಸೋಸಿಯೇಶನ್ ಬಿಹಾರವನ್ನೇ ಆಯ್ಕೆ ಮಾಡಿಕೊಂಡದ್ದೇಕೆ? ಕೇರಳ, ಕರ್ನಾಟಕ, ತೆಲಂಗಾಣದಂಥ ಅತೀ ಹೆಚ್ಚು ಚಿನ್ನ ಖರೀದಿ ರಾಜ್ಯಗಳ ಬದಲು ಬಿಹಾರವನ್ನೇ ಆಯ್ಕೆ ಮಾಡಿರುವುದರ ಹಿಂದೆ ಯಾವ ದುರುದ್ದೇಶವೂ ಇಲ್ಲವೇ? ಅಥವಾ ನಿತೀಶ್ ಕುಮಾರ್ ಅವರು ಹಗೆ ಸಾಧಿಸುತ್ತಿದ್ದಾರೆಯೇ? ಅಂದಹಾಗೆ,
ಮುಖ ಮರೆಮಾಚುವ ರೀತಿಯ ಮಾಸ್ಕ್, ನಕಾಬ್, ಹೆಲ್ಮೆಟ್, ಗೂಂಗಟ್ಗಳು ಕೆಲವೊಮ್ಮೆ ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದು ಸರಿ. ದುಷ್ಕರ್ಮಿಗಳು ಈ ಉಡುಪು ವಿಧಾನವನ್ನು ದುರುಪಯೋಗಿಸಬಲ್ಲರು ಎಂಬುದೂ ಸರಿ. ಇನ್ನು, ಮಾಸ್ಕ್, ನಕಾಬ್ ಮತ್ತು ಗೂಂಗಟ್ಗಳನ್ನು ಧರಿಸುವವರು ಅಗತ್ಯ ಬಂದಾಗ ಅದನ್ನು ಬಿಚ್ಚುವುದೂ ಮತ್ತು ಗುರುತು ಪತ್ತೆಗೆ ಸಹಕರಿಸುತ್ತಿರುವುದೂ ನಡೆಯುತ್ತಿದೆ. ಈ ಮುಖ ಮುಚ್ಚುವ ವಸ್ತ್ರಗಳನ್ನು ಸುರಕ್ಷತೆಗಾಗಿ, ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಮುಖದ ತೊಂದರೆಗಳನ್ನು ಮರೆಮಾಚುವುದಕ್ಕಾಗಿ… ಇತ್ಯಾದಿ ಕಾರಣಕ್ಕಾಗಿಯೂ ಬಳಸುವವರಿದ್ದಾರೆ. ಒಂದುವೇಳೆ, ಈ ಮುಖ ಮರೆಮಾಚುವ ವಸ್ತ್ರಗಳ ಬಗ್ಗೆ ಚಿನ್ನದಂಗಡಿಗಳಿಗೆ ಆತಂಕ ಇದೆ ಎಂದಾದರೆ, ಇಂಥವರ ತಪಾಸಣೆಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು ಮತ್ತು ಇವುಗಳನ್ನು ಕಳಚಿಟ್ಟು ಹೋಗುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ,
ಇದಕ್ಕೂ ಈ ಮಾಸ್ಕ್ಗೂ ಬುರ್ಖಾಕ್ಕೂ ಸಂಬಂಧ ಏನಿದೆ? ಹಿಜಾಬ್ಗೂ ಈ ನಕಾಬ್ಗೂ ಸಂಬಂಧ ಏನಿದೆ? ತೀರಾ ಸಂಬಂಧವೇ ಇಲ್ಲದ ಉಡುಪುಗಳನ್ನು ಕಳ್ಳತನದ ಉಡುಪುಗಳಾಗಿ ಬಿಂಬಿಸಿದ್ದೇಕೆ ಅಸೋಸಿಯೇಶನ್?
ಈ ಹಿನ್ನೆಲೆಯಲ್ಲಿ ನೋಡುವಾಗ, ಈ ನಿಷೇಧದ ಹಿಂದೆ ಕಳ್ಳತನಕ್ಕಿಂತ ಹೊರತಾದ ಬೇರೆ ದುರುದ್ದೇಶಗಳೇ ಎದ್ದು ಕಾಣುತ್ತಿದೆ. ಇಸ್ಲಾಮೋಫೋಬಿಯಾವನ್ನು ಹರಡಲು ಈ ಅಸೋಸಿಯೇಶನನ್ನು ಯಾರೋ ದುರ್ಬಳಕೆ ಮಾಡಿಕೊಂಡಿರುವಂತೆ ಕಾಣಿಸುತ್ತಿದೆ. ಬುರ್ಖಾ ಮತ್ತು ಹಿಜಾಬ್ನ ಬಗ್ಗೆ ಸಾರ್ವಜನಿಕವಾಗಿ ಅನುಮಾನದ ಭಾವವನ್ನು ಬಿತ್ತುವುದು ಮತ್ತು ನಾಗರಿಕರು ಈ ಎರಡು ಉಡುಪು ವಿಧಾನಗಳ ಬಗ್ಗೆ ಭಯಪಡುವಂತೆ ಮಾಡುವ ತಂತ್ರ ಇರುವಂತಿದೆ. ಇವತ್ತು ಚಿನ್ನದಂಗಡಿಯಾದರೆ ನಾಳೆ ಶಾಪಿಂಗ್ ಮಾಲ್ಗಳು ಈ ನಿಷೇಧ ಕ್ರಮವನ್ನು ಅನುಸರಿಸುವುದಕ್ಕೆ ಮುಂದಾಗಬಹುದು ಅಥವಾ ಅವುಗಳ ಮೇಲೂ ಆ ಕಾಣದ ಕೈಗಳು ಇಂಥ ಒತ್ತಡವನ್ನು ಹೇರಬಹುದು. ಮುಂದೆ ವಿವಿಧ ಮಾಲ್ಗಳು, ಅಂಗಡಿಗಳು, ಸೂಪರ್ ಬಝಾರ್ಗಳು ಇವೇ ನಿಯಮವನ್ನು ಅನುಸರಿಸಬಹುದು. ಮುಂದೆ ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲಿ ಈ ನಿಷೇಧ ಕ್ರಮವನ್ನು ಜಾರಿ ಮಾಡುವ ಪ್ರಯತ್ನ ನಡೆಯಬಹುದು. ಸರಕಾರಿ ಸಂಸ್ಥೆಗಳಲ್ಲಿ, ಶಿಕ್ಷಣ ಕೇಂದ್ರಗಳಲ್ಲಿ ಸಹಿತ ನಿಧಾನಕ್ಕೆ ಒಂದೊಂದೇ ಕಡೆ ಈ ನಿಷೇಧ ಕ್ರಮವನ್ನು ಜಾರಿಗೆ ತರುವ ಹುನ್ನಾರ ನಡೆಸಬಹುದು. ಮಾತ್ರವಲ್ಲ,
ಇವನ್ನು ಸಮರ್ಥಿಸುವುದಕ್ಕಾಗಿ ಅವರೇ ಕಳ್ಳತನವನ್ನೋ ಅಥವಾ ಇನ್ನೇನೋ ಕೃತಕ ಸಮಸ್ಯೆಗಳನ್ನು ಸೃಷ್ಟಿ ಮಾಡಬಹುದು. ಬುರ್ಖಾ ಹಾಕಿದವರು ಇಂಥ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ತೋರಿಸುತ್ತಾ ಬುರ್ಖಾ ನಿಷೇಧಕ್ಕೆ ಸಮರ್ಥನೆಯನ್ನು ಕಂಡುಕೊಳ್ಳಬಹುದು. ಆದ್ದರಿಂದಲೇ, ಬುರ್ಖಾದ ನಿಷೇಧ ಕ್ರಮವನ್ನು ಆತಂಕದಿಂದಲೇ ನೋಡಬೇಕಾಗಿದೆ. ಇದು ಬಿಹಾರಕ್ಕೆ ಮಾತ್ರ ನೀಮಿತವಾಗುವ ಬೆಳವಣಿಗೆಯಲ್ಲ. ಈ ನಿಷೇಧವನ್ನು ರಾಷ್ಟ್ರವ್ಯಾಪಿ ಮಾಡಬಯಸುವವರು ಪ್ರಾಯೋಗಿಕವಾಗಿ ಬಿಹಾರವನ್ನು ಆಯ್ಕೆ ಮಾಡಿರುವ ಸಾಧ್ಯತೆಯೇ ಹೆಚ್ಚಿದೆ. ಈ ನೆಲೆಯಲ್ಲಿ ನೋಡಿದರೆ,
ಈ ನಿಷೇಧ ಕ್ರಮವನ್ನೇ ಪ್ರಶ್ನಿಸುವುದು ಸರಿ ಅನ್ನಿಸುತ್ತಿದೆ. ನಕಾಬ್, ಮಾಸ್ಕ್, ಹೆಲ್ಮೆಟ್ ಇತ್ಯಾದಿಗಳನ್ನು ಧರಿಸಿ ಕಳ್ಳತನ ಮಾಡುತ್ತಾರೆ ಎಂದಾದರೆ, ಅವುಗಳನ್ನು ನಿಷೇಧಿಸುವ ಬದಲು, ಪ್ರವೇಶ ದ್ವಾರದಲ್ಲಿ ಇಂಥವನ್ನು ತಪಾಸಣೆ ಮಾಡುವ ಮತ್ತು ಅವುಗಳನ್ನು ಕಳಚಿಟ್ಟು ಚಿನ್ನದಂಗಡಿ ಪ್ರವೇಶಿಸುವಂತೆ ಮಾಡುವ ಅಥವಾ ಅಂಥವರ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಮಾಡುವುದೇ ಹೆಚ್ಚು ಸೂಕ್ತ ಎಂದು ಹೇಳಬಹುದು. ಅಪಘಾತವಾಗುತ್ತಿದೆಯೆಂದು ಯಾರೂ ವಾಹನಗಳನ್ನು ನಿಷೇಧಿಸುವಂತೆ ಒತ್ತಾಯಿಸುವುದಿಲ್ಲ. ಘರ್ಷಣೆಗಳಾಗುತ್ತದೆಂದು ಯಾರೂ ಧರ್ಮಗಳನ್ನು ನಿಷೇಧಿಸುವಂತೆ ಕೋರುವುದಿಲ್ಲ. ಅದರ ಬದಲು ಗಲಭೆಯಲ್ಲಿ ಭಾಗಿಯಾಗುವವರನ್ನು ಹುಡುಕಿ ಹುಡುಕಿ ಬಂಧಿಸಲಾಗುತ್ತದೆ.
ಅಪಘಾತಕ್ಕೆ ಕಾರಣರಾದವರ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಚಿನ್ನದಂಗಡಿಗಳಲ್ಲಿ ಕಳ್ಳತನವಾಗುತ್ತಿದ್ದರೆ, ಅದಕ್ಕಾಗಿ ನಿರ್ದಿಷ್ಟ ಮಾದರಿಯ ಉಡುಪನ್ನೇ ನಿಷೇಧಿಸುವುದು ಪರಿಹಾರ ಅಲ್ಲ. ಕಳ್ಳತನ ಮಾಡಬಯಸುವವರು ಮಾಸ್ಕ್, ನಕಾಬ್, ಹೆಲ್ಮೆಟ್, ಗೂಂಗಟ್ಗಳು ಇಲ್ಲದೆಯೂ ಕಳ್ಳತನ ಮಾಡ ಬಲ್ಲರು. ಚಾಣಾಕ್ಷತನವೇ ಅವರ ಆಯುಧ. ಅವರನ್ನು ತಡೆಯುವುದಕ್ಕೆ ತಪಾಸಣೆ ಮತ್ತು ನಿಗಾ ಎಂಬೆರಡು ಕ್ರಮಗಳೇ ಸರಿಯಾದುದು. ಅದನ್ನು ಬಿಟ್ಟು ಮುಸ್ಲಿಮ್ ಮಹಿಳೆಯರು ಧರಿಸುವ ಉಡುಪುಗಳನ್ನೇ ಗುರಿ ಮಾಡಿ ನಿಷೇಧಿಸುವುದು ಮತ್ತು ಅದಕ್ಕೆ ಕಳ್ಳತನದ ಸಮರ್ಥನೆಯನ್ನು ನೀಡುವುದೆಲ್ಲ ಇಸ್ಲಾಮೋಫೋಬಿಯದ ಅನುಮಾನವನ್ನೇ ಹೆಚ್ಚಿಸುತ್ತದೆ. ಬುರ್ಖಾ-ಹಿಜಾಬ್ನ ಬಗ್ಗೆ ಭಯ ಬಿತ್ತುವ ದುರುದ್ದೇಶದಿಂದಲೇ ಈ ನಿಷೇಧವನ್ನು ಹೇರಲಾಗಿದೆ ಎಂಬ ಸಂದೇಹವನ್ನೇ ಬಲಪಡಿಸುತ್ತದೆ.












