ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರನ್ನು ಕಿತ್ತುಹಾಕಲು ಬಿಜೆಪಿ ಶಾಸಕನಿಂದ ಒತ್ತಡ: ಬಿಎಲ್‌ಒ ಆರೋಪ

0
784

ಸನ್ಮಾರ್ಗ ವಾರ್ತೆ

ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರನ್ನು ಕಿತ್ತುಹಾಕಲು ಬಿಜೆಪಿ ನಿರ್ಬಂಧ ಹೇರುತ್ತಿದೆ ಎಂದು ರಾಜಸ್ಥಾನದ ಬೂತ್ ಲೆವೆಲ್ ಆಫೀಸರ್ ಅಥವಾ ಬಿಎಲ್‌ಒ ಆರೋಪಿಸಿದ್ದಾರೆ. ಜೈಪುರದ ಹವಾ ಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಬಳಿಕ ಬಿಡುಗಡೆಗೊಳಿಸಲಾದ ಕರಡು ಮತದಾರರ ಪಟ್ಟಿಯಿಂದ 470 ಮತದಾರರ ಹೆಸರನ್ನು ಕಿತ್ತು ಹಾಕಬೇಕು ಎಂದು ಬಿಜೆಪಿ ನಾಯಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಎಲ್‌ಒ ಕೀರ್ತಿ ಕುಮಾರ್ ಆರೋಪಿಸಿದ್ದಾರೆ.

ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 974 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಾಲ ಮುಕುಂದ ಆಚಾರ್ಯ ಜಯಗಳಿಸಿದ್ದರು. ಮಹಾರಾಜ್ ಎಂದೇ ಗುರುತಿಸಿ ಕೊಂಡಿರುವ ಜೈಪುರದ ದಕ್ಷಿಣ ಮುಖಿಜಿ ಬಾಲಾಜಿ ಮಂದಿರದ ಮುಖ್ಯ ಪುರೋಹಿತನೂ ಆಗಿರುವ ಇವರು ಮುಸ್ಲಿಮರ ವಿರುದ್ಧ ಮಾತು ಮತ್ತು ಕೃತಿಗಳಿಗಾಗಿ ಕುಪ್ರಸಿದ್ಧಗೊಂಡಿದ್ದಾರೆ.

ಒತ್ತಡ ತಾಳಲಾರದೆ ಬಿಜೆಪಿ ಕೌನ್ಸಿಲರ್ ಗೆ ಈ ಕೀರ್ತಿ ಕುಮಾರ್ ಕರೆ ಮಾಡಿದ್ದಾರೆ ಮತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿದೆ.

ಎಲ್ಲ ಮುಸ್ಲಿಮರ ಹೆಸರನ್ನು ನಾನು ಡಿಲೀಟ್ ಮಾಡುತ್ತೇನೆ. ಅದು ನಿಮಗೂ ಮತ್ತು ಮಹಾರಾಜಗೂ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಹಾಯ ಮಾಡಬಹುದು. ಆ ಬಳಿಕ ನಾನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಆಡಿಯೋ ದಲ್ಲಿ ಕೀರ್ತಿ ಕುಮಾರ್ ಹೇಳಿದ್ದಾರೆ.

ಅಲ್ಲದೆ ಇದೇ ಕ್ಷೇತ್ರದ ಇನ್ನೊಂದು ಬೂತಿನಲ್ಲಿ ಬಿ ಎಲ್ ಒ ಆಗಿರುವ ಸರಸ್ವತಿ ಮೀನಾ ಅವರಿಗೆ 158 ಮುಸ್ಲಿಂ ಹೆಸರುಗಳನ್ನು ಪಟ್ಟಿಯಿಂದ ಕಿತ್ತು ಹಾಕುವುದಕ್ಕೆ ಒತ್ತಡ ಹೇರಲಾಗಿದೆ ಎಂದು ಇವರು ಹೇಳಿದ್ದಾರೆ.