ಸನ್ಮಾರ್ಗ ವಾರ್ತೆ
ಅಲ್ ಫಲಾಹ್ ಯುನಿವರ್ಸಿಟಿಯ ಚೇರ್ಮನ್ ಜವಾದ್ ಅಹಮದ್ ಸಿದ್ದಿಕಿ ಅವರನ್ನು ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಯುಜಿಸಿ ನೀಡಿದ ದೂರಿನಂತೆ ಈ ಬಂಧನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣವನ್ನು ದಾಖಲಿಸಲಾಗಿದೆ. ವಂಚನೆ ಮತ್ತು ತಪ್ಪಾದ ಪ್ರಾತಿನಿಧ್ಯ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ತಿಂಗಳ ಹಿಂದೆ ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ವೈದ್ಯರನ್ನು ಬಂಧಿಸಲಾದ ಬಳಿಕ ಈ ಬೆಳವಣಿಗೆ ನಡೆದಿದೆ.
ಸಿದ್ದಿಕಿ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನ್ಯಾಯಾಧೀಶರು ಅನುಮತಿಸಿದ್ದಾರೆ.
ಹಣಕಾಸು ದಾಖಲೆಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸುವುದಕ್ಕೆ ಅವರು ವಿಚಾರಣೆಗೆ ಒಳಗಾಗಬೇಕಾದ ಅಗತ್ಯ ಇದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಅಲ್ ಫಲಾಹ್ ಚಾರಿಟೇಬಲ್ ಟ್ರಸ್ಟ್ ಮತ್ತು ಜವಾದ್ ಸಿದ್ದಿಕಿ ವಿರುದ್ಧ ಈಗಾಗಲೇ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿದೆ. ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಫೆಬ್ರವರಿ 13ಕ್ಕೆ ದೆಹಲಿಯ ಸಾಕೆತ್ ಕೋರ್ಟ್ ನಿಗದಿಪಡಿಸಿದೆ.












