ಸಾಮಾಜಿಕ ಮಾಧ್ಯಮ: ಸವಾಲುಗಳು ಮತ್ತು ಮುಸ್ಲಿಮರು

0
374

✍️ ಆಲಿಯಾ ರುಮಾನ್
ಅನುವಾದ: ಮುಖ್ತಾರ್ ಅಹ್ಮದ್

ಕಳೆದ ಕೆಲವು ದಶಕಗಳಲ್ಲಿ ಸಾಮಾಜಿಕ ಮಾಧ್ಯಮವು ಮಾನವ ಮನೋ ವಿಜ್ಞಾನದ ಮೇಲೆ ಪ್ರಭಾವ ಬೀರುವ ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಮೂಲತಃ ಸಂವಹನ ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ರಚಿಸಲಾದ ವೇದಿಕೆಗಳು ನಿರಂತರ ಹೋಲಿಕೆ, ಸ್ವಯಂ ಪ್ರಚಾರ ಮತ್ತು ಡಿಜಿಟಲ್ ಪ್ರಚಾರದ ಅಂತ್ಯವಿಲ್ಲದ ಅನ್ವೇಷಣೆಯ ತಾತ್ವಿಕ ಕ್ಷೇತ್ರಗಳಾಗಿ ವಿಕಸನಗೊಂಡಿದೆ. ಆಧುನಿಕ ವ್ಯಕ್ತಿಗಳು, ವಿಶೇಷವಾಗಿ ಯುವಕರು, ಸಾಮಾನ್ಯವಾಗಿ ಲೈಕ್‌ಗಳು, ಕಾಮೆಂಟ್‌ಗಳು, ಫಾಲೋವರ್‌ಗಳು ಮತ್ತು ಶೇರ್‌ಗಳ ಮೂಲಕ ತಮ್ಮ ಮೌಲ್ಯವನ್ನು ಅಳೆಯುತ್ತಾರೆ. ಆನ್‌ಲೈನ್ ಹೊಗಳಿಕೆಯಿಂದ ಪಡೆಯುವ ಆನಂದ ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತದೆ. ಆದರೆ ಅದರ ಮಾನಸಿಕ ಬೆಲೆಯು ದೀರ್ಘಕಾಲೀನವಾಗಿರುತ್ತದೆ.

ಇಸ್ಲಾಮ್ ಒಂದು ಸಮಗ್ರ ಜೀವನ ವಿಧಾನವಾಗಿದ್ದು, ಮಾನವರ ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತದೆ. ಸಾಮಾಜಿಕ ಮಾಧ್ಯಮದ ಆವಿಷ್ಕಾರಕ್ಕೂ ಬಹಳ ಹಿಂದೆಯೇ, ಕುರ್‌ಆನ್ ಮತ್ತು ಸುನ್ನತ್ ಜನರಿಂದ ದೃಢೀಕರಣವನ್ನು ಪಡೆಯುವುದು, ತಮ್ಮನ್ನು ತಾವು ಪ್ರದರ್ಶಿಸುವುದು ಮತ್ತು ಇತರರರೊಂದಿಗೆ ಹೋಲಿಸಿಕೊಳ್ಳುವುದರ ವಿರುದ್ಧ ಎಚ್ಚರಿಸಿದ್ದವು. ಈ ಬೋಧನೆಗಳು ಇಂದು ಪ್ರಸ್ತುತವಾಗಿದ್ದು, ಡಿಜಿಟಲ್ ಶಬ್ದದಿಂದ ತುಂಬಿರುವ ಜಗತ್ತಿನಲ್ಲಿ ಸ್ಪಷ್ಟತೆ ಮತ್ತು ಸಮತೋಲನವನ್ನು ನೀಡುತ್ತದೆ.

ಸಾಮಾಜಿಕ ಮಾಧ್ಯಮ ಮೌಲೀಕರಣವನ್ನು ಅರ್ಥ ಮಾಡಿಕೊಳ್ಳುವುದು

ಸಾಮಾಜಿಕ ಮಾಧ್ಯಮ ಮೌಲ್ಯೀಕರಣ ಎಂದರೆ ಒಬ್ಬ ವ್ಯಕ್ತಿಯು ಆನ್‌ಲೈನ್‌ನಲ್ಲಿ ಸಕರಾತ್ಮಕ ತೊಡಗಿಸಿಕೊಳ್ಳುವಿಕೆ. ಉದಾಹರಣೆಗೆ ಲೈಕ್‌ಗಳು ಅಥವಾ ಕಾಮೆಂಟ್‌ಗಳನ್ನು ಪಡೆದಾಗ ಅನುಭವಿಸುವ ಸ್ವೀಕಾರ ಅಥವಾ ಮೌಲ್ಯದ ಭಾವನೆ. ಈ ಮೌಲ್ಯೀಕರಣವು ವ್ಯಸನಕಾರಿಯಾಗಬಹುದು. ಆದಾಗ್ಯೂ, ಅನುಮೋದನೆಯ ಬಯಕೆ ಅತಿಯಾದಾಗ, ಅದು ಒತ್ತಡ, ಆತಂಕ, ಅಭದ್ರತೆ ಮತ್ತು ಭಾವನಾತ್ಮಕ ಅಸ್ಥಿರತೆಯನ್ನು ಸೃಷ್ಟಿಸುತ್ತದೆ.
ಮಾನಸಿಕ ಚಕ್ರವು ಈ ರೀತಿ ಕಾಣುತ್ತದೆ: ಪೋಸ್ಟ್ ಮಾಡಿ ನಂತರ ಪ್ರತಿಕ್ರಿಯೆಗಳಿಗಾಗಿ ಕಾಯುವುದು, ನಂತರ ಪದೇ ಪದೇ ಪರಿಶೀಲಿಸಿ ನೋಡುವುದು, ಬಳಿಕ ಮೆಚ್ಚುಗೆಯಿಂದ ಸಂತೋಷ ಪಡುವುದು, ನಂತರ ಅದು ಇಲ್ಲದೆ ಹೋದಾಗ ಆತಂಕ ಅಥವಾ ದುಃಖವನ್ನು ಅನುಭವಿಸುವುದು.

ಈ ಚಕ್ರವು ಕ್ರಮೇಣ ವ್ಯಕ್ತಿಗಳಿಗೆ ಆಂತರಿಕ ದೃಢ ನಿಶ್ಚಯ ಅಥವಾ ಆಧ್ಯಾತ್ಮಿಕ ತೃಪ್ತಿಯ ಬದಲು ಬಾಹ್ಯ ಪ್ರತಿಕ್ರಿಯೆಗಳ ಆಧಾರದ ಮೇಲೆ ತಮ್ಮ ಗುರುತನ್ನು ರೂಪಿಸಿಕೊಳ್ಳಲು ಕಲಿಸುತ್ತದೆ.

ಮಾನವನ ದೃಢೀಕರಣದ ಅಗತ್ಯದ ಬಗ್ಗೆ ಇಸ್ಲಾಮ್ ಏನು ಹೇಳುತ್ತದೆ?

ಮಾನವರು ಸ್ವಾಭಾವಿಕವಾಗಿ ಪ್ರೋತ್ಸಾಹ ಮತ್ತು ಪ್ರೀತಿಯನ್ನು ಇಷ್ಟಪಡುತ್ತಾರೆ ಎಂದು ಇಸ್ಲಾಮ್ ಒಪ್ಪಿಕೊಳ್ಳುತ್ತದೆ. ಅಲ್ಲಾಹನು ನಮ್ಮನ್ನು ಭಾವನಾತ್ಮಕ ಅಗತ್ಯಗಳೊಂದಿಗೆ ಸೃಷ್ಟಿಸಿರುತ್ತಾನೆ. ಆದರೂ ನಿಜವಾದ ದೃಢೀಕರಣ ಮತ್ತು ಶಾಶ್ವತ ತೃಪ್ತಿ ಅಲ್ಲಾಹನಿಂದ ಮಾತ್ರ ಬರುತ್ತದೆ. ಸಾರ್ವಜನಿಕ ಪ್ರಶಂಸೆಯಿಂದ ಅಲ್ಲ ಎಂದು ಇಸ್ಲಾಮ್ ಕಲಿಸುತ್ತದೆ.

ಪವಿತ್ರ ಕುರ್‌ಆನ್ ಹೇಳುತ್ತದೆ: “ಖಂಡಿತವಾಗಿಯೂ ನನ್ನ ನಮಾಝ್, ನನ್ನ ಬಲಿದಾನ, ನನ್ನ ಜೀವನ ಮತ್ತು ನನ್ನ ಮರಣವು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೇ ಮೀಸಲಾಗಿದೆ.” (6: 162)

ಈ ವಚನವು ವಿಶ್ವಾಸಿಗಳಿಗೆ ಅವರ ಜೀವನದ ಉದ್ದೇಶವು ಜನರನ್ನು ಮೆಚ್ಚಿಸುವುದಲ್ಲ, ಅಲ್ಲಾಹನನ್ನು ಮೆಚ್ಚಿಸುವುದರೊಂದಿಗೆ ಸಂಬಂಧಿಸಿದೆ ಎಂದು ನೆನಪಿಸುತ್ತದೆ. ಒಬ್ಬ ಮುಸ್ಲಿಮ್ ಇದನ್ನು ಮೈಗೂಡಿಸಿಕೊಂಡಾಗ, ಅವನು ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಲಶಾಲಿಯಾಗುತ್ತಾನೆ/ಳೆ. ಜನರ ಅಭಿಪ್ರಾಯಗಳು ಏರಿಳಿತಗೊಳ್ಳಬಹುದು, ಆದರೆ ಅಲ್ಲಾಹನ ಸ್ವೀಕಾರವು ಯಾವಾಗಲೂ ಬದಲಾಗುವುದಿಲ್ಲ.

ಪ್ರವಾದಿ(ಸ) ಹೇಳಿದರು: “ಯಾರು ಜನರ ಕೋಪಕ್ಕಿಂತ ಅಲ್ಲಾಹನ ಮೆಚ್ಚುಗೆಯನ್ನು ಬಯಸುತ್ತಾರೋ, ಅಲ್ಲಾಹನು ಅವರಿಗೆ ಸಾಕಾಗುತ್ತಾನೆ ಮತ್ತು ಯಾರು ಅಲ್ಲಾಹನ ಕೋಪಕ್ಕಿಂತ ಜನರ ಮೆಚ್ಚುಗೆಯನ್ನು ಬಯಸುತ್ತಾರೋ, ಅಲ್ಲಾಹನು ಅವರನ್ನು ಜನರ ವಶಕ್ಕೆ ಒಪ್ಪಿಸುತ್ತಾನೆ.” (ಜಾಮಿಅ ಅತ್ತಿರ್ಮಿದಿ)

ಈ ಹದೀಸ್ ಮಾನವ ಅನುಮೋದನೆಯನ್ನು ಪಡೆಯುವ ಬಿಕ್ಕಟ್ಟನ್ನು ನೇರವಾಗಿ ತಿಳಿಸುತ್ತದೆ. ಓರ್ವರು ಜನರ ಪ್ರತಿಕ್ರಿಯೆಗಳ ಮೇಲೆ ಅವಲಂಬಿತರಾದಾಗ, ಅವರು ಭಾವನಾತ್ಮಕವಾಗಿ ಗುಲಾಮರಾಗುತ್ತಾರೆ. ಆದರೆ ಅಲ್ಲಾಹನ ಮೆಚ್ಚುಗೆಗೆ ಪಾತ್ರರಾಗಲು ಪ್ರಯತ್ನಿಸುವವರು ಇದರಿಂದ ಮುಕ್ತರಾಗುತ್ತಾರೆ.

ಡಿಜಿಟಲ್ ಯುಗದಲ್ಲಿ ಅಪಾಯಕಾರಿ ರಿಯಾ (ತೋರಿಕೆ)

ಸಾಮಾಜಿಕ ಮಾಧ್ಯಮವು ವರ್ಧಿಸುವ ಅತ್ಯಂತ ದೊಡ್ಡ ಅನಿಷ್ಠದ ಸೂಚನೆ ಎಂದರೆ ರಿಯಾ(ತೋರಿಕೆ)ಯಾಗಿದೆ. ನೋಡಲ್ಪಡುವ ಅಥವಾ ಹೊಗಳಲ್ಪಡುವ ಸಲುವಾಗಿ ಕೆಲಸಗಳನ್ನು ಮಾಡುವುದು. ಒಳ್ಳೆಯ ಕಾರ್ಯಗಳು, ದಾನ, ಧಾರ್ಮಿಕ ಕಾರ್ಯಗಳು ಅಥವಾ ಸಾಧನೆಗಳನ್ನು ಪ್ರಕಟಿಸುವುದರ ಪ್ರಾಥಮಿಕ ಉದ್ದೇಶವು ಸಾಮಾಜಿಕ ಮೆಚ್ಚುಗೆಯಾದಾಗ ಸುಲಭವಾಗಿ ಪ್ರದರ್ಶಿಸುವ ಸ್ಥಿತಿಗೆ ತಲುಪಬಹುದು.

ಪ್ರವಾದಿವರ್ಯರ(ಸ) ಎಚ್ಚರಿಕೆ;

ನಿಮ್ಮ ವಿಷಯದಲ್ಲಿ ನನಗೆ ಅತೀ ಹೆಚ್ಚು ಭಯವಾಗುವುದು ಚಿಕ್ಕ ಶಿರ್ಕ್'ನದ್ದಾಗಿದೆ. ಸಹಾಬಿಗಳು(ರ) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಚಿಕ್ಕ ಶಿರ್ಕ್ ಎಂದರೇನು?" ಅವರು(ಸ) ಹೇಳಿದರು, "ಇದು ರಿಯಾ(ತೋರಿಕೆ) ಆಗಿದೆ." (ಮುಸ್ನದ್ ಅಹ್ಮದ್)

ಕ್ಯಾಮೆರಾಗಳು, ಅನುಯಾಯಿಗಳು ಅಥವಾ ಸಾರ್ವಜನಿಕ ಪ್ರೋಫೈಲ್‌ಗಳು ಇಲ್ಲದಿದ್ದ ಕಾಲದಲ್ಲಿಯೂ ತೋರಿಕೆಯ ಪ್ರದರ್ಶನವನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು. ಇಂದು ಪ್ರಲೋಭನೆಯು ತುಂಬಾ ಜಾಸ್ತಿಯಾಗಿದೆ. ಮೆಚ್ಚುಗೆಯನ್ನು ಗಳಿಸಲು ಆನ್‌ಲೈನ್‌ನಲ್ಲಿ "ಪರಿಪೂರ್ಣ ಪ್ರಾಮಾಣಿಕ" ಎಂಬ ಟ್ಯಾಗನ್ನು ವರ್ಣಿಸುವ ಬಲೆಗೆ ಬೀಳುವುದು ಸುಲಭ.

ರಿಯಾ ಮಾನಸಿಕ ಹೊರೆ:

ಒಬ್ಬ ವ್ಯಕ್ತಿಯು ಸಾರ್ವಜನಿಕ ಹೊಗಳಿಕೆಯ ಮೇಲೆ ಅವಲಂಬಿತವಾದಾಗ, ಅವರ ಭಾವನೆಗಳು ಇತರರ ಅಭಿಪ್ರಾಯಗಳೊಂದಿಗೆ ಏರಿಳಿತಗೊಳ್ಳುತ್ತದೆ. ಅವರು ಒಂದು ನಿರ್ದಿಷ್ಟ ಕಲ್ಪನೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಆತಂಕಕ್ಕೊಳಗಾಗುತ್ತಾರೆ, ಅವರು ಟೀಕೆ ಮತ್ತು ತೀರ್ಪಿಗೆ ಹೆದರುತ್ತಾರೆ ಮತ್ತು ಅವರು ದೃಢತೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಆಧ್ಯಾತ್ಮಿಕವಾಗಿ ಖಾಲಿತನವನ್ನು ಅನುಭವಿಸುತ್ತಾರೆ.

ಇಖ್ಲಾಸ್ (ಪ್ರಾಮಾಣಿಕತೆ) ಈ ಹೊರೆಯನ್ನು ಗುಣಪಡಿಸುತ್ತದೆ ಎಂದು ಇಸ್ಲಾಮ್ ಕಲಿಸುತ್ತದೆ. ಅಲ್ಲಾಹನಿಗಾಗಿ ಮಾತ್ರ ಕಾರ್ಯಗಳನ್ನು ಮಾಡಿದಾಗ, ಹೃದಯವು ಹಗುರ ಮತ್ತು ಶಾಂತಿಯುತವಾಗಿರುತ್ತದೆ.

ಹೋಲಿಕೆಯ ಸಂಸ್ಕೃತಿ ಮತ್ತು ಅಸೂಯೆ:

ಸಾಮಾಜಿಕ ಮಾಧ್ಯಮವು ಜನರು ತಮ್ಮ ಜೀವನವನ್ನು ಇತರ ರೊಂದಿಗೆ ಹೋಲಿಸಲು ಪ್ರೋತ್ಸಾಹಿಸುತ್ತದೆ. ರಜಾ ದಿನಗಳು, ಸಾಧನೆಗಳು, ಸೌಂದರ್ಯ ಮತ್ತು ಸಂಪತ್ತಿನ ಪೋಟೋಗಳು ಅವಾಸ್ತವಿಕ ಮಾನದಂಡಗಳನ್ನು ಸೃಷ್ಟಿಸುತ್ತದೆ. ಈ ಹೋಲಿಕೆಯು ಅಲ್ಪ ಸ್ವಾಭಿಮಾನ, ಅಸೂಯೆ, ಖಿನ್ನತೆ, ಕೃತಘ್ನತೆ ಮತ್ತು ಒಬ್ಬರ ಹರಸುವಿಕೆಯ ಬಗ್ಗೆ ಅತೃಪ್ತಿಗೆ ಕಾರಣವಾಗುತ್ತದೆ.

ಅಲ್ಲಾಹನು ನಮ್ಮನ್ನು ಎಚ್ಚರಿಸುತ್ತಾನೆ;

"ಅಲ್ಲಾಹನು ನಿಮ್ಮಲ್ಲಿ ಕೆಲವರಿಗೆ ಇನ್ನೂ ಕೆಲವರಿಗಿಂತ ಅಧಿಕವಾಗಿ ನೀಡಿದ್ದರೆ ಅದಕ್ಕಾಗಿ ಆಶೆ ಪಡಬೇಡಿರಿ." (4: 32)

ಹೋಲಿಕೆ ಮಾಡುವುದು ಆಧ್ಯಾತ್ಮಿಕವಾಗಿ ಹಾನಿಕಾರಕ ಮಾತ್ರವಲ್ಲದೆ, ಮಾನಸಿಕವಾಗಿಯೂ ಕ್ಷೀಣಗೊಳಿಸುತ್ತದೆ. ಒಬ್ಬ ವ್ಯಕ್ತಿಯು ತನ್ನನ್ನು ತಾನು ಸುಧಾರಿಸಿಕೊಳ್ಳುವ ಬದಲು ಅಥವಾ ಅಲ್ಲಾಹನು ತನಗೆ ನೀಡಿದ್ದನ್ನು ಶ್ಲಾಘಿಸುವ ಬದಲು ಇತರರ ವಿರುದ್ಧ ತನ್ನನ್ನು ತಾನು ಅಳೆದುಕೊಳ್ಳಲು ತನ್ನ ಶಕ್ತಿಯನ್ನು ವ್ಯಯಿಸುತ್ತಾನೆ.

ಪ್ರವಾದಿಯವರು(ಸ) ಇದಕ್ಕೊಂದು ಪ್ರಾಯೋಗಿಕ ಪರಿಹಾರವನ್ನು ಹೀಗೆ ಹೇಳಿದರು, "ನಿಮಗಿಂತ ಕೆಳಗಿರುವವರನ್ನು ನೋಡಿ ಮತ್ತು ನಿಮಗಿಂತ ಮೇಲಿರುವವರನ್ನು ನೋಡಬೇಡಿ, ಏಕೆಂದರೆ ಅದು ನಿಮ್ಮ ಮೇಲಿರುವ ಅಲ್ಲಾಹನ ಅನುಗ್ರಹವನ್ನು ಕುಂಠಿತಗೊಳಿಸುವುದರಿಂದ ನಿಮ್ಮನ್ನು ತಡೆಯುವ ಸಾಧ್ಯತೆಯಿದೆ." (ಬುಖಾರಿ, ಮುಸ್ಲಿಮ್)

ಈ ಬೋಧನೆಯು ಸಾಮಾಜಿಕ ಮಾಧ್ಯಮದಿಂದ ಪ್ರಚೋದಿಸಲ್ಪಟ್ಟ ಅಸೂಯೆ ಮತ್ತು ಹೋಲಿಕೆಯ ಸಂಸ್ಕೃತಿಯನ್ನು ನೇರವಾಗಿ ವಿರೋಧಿಸುತ್ತದೆ.

ಪರಿಪೂರ್ಣತೆಯ ಭ್ರಮೆ:

ಸಾಮಾಜಿಕ ಮಧ್ಯಮ ಪೋಷಿಸುವ ಜನರು ತಮ್ಮ ನ್ಯೂನತೆಗಳು, ಹೋರಾಟಗಳು ಮತ್ತು ಅಪೂರ್ಣತೆಗಳನ್ನು ಮರೆ ಮಾಚುತ್ತಾ ತಮ್ಮ ಅತ್ಯುತ್ತಮ ಉಲ್ಲೇಖವನ್ನು ಪ್ರಸ್ತುತಪಡಿಸುವ ಸಂಸ್ಕೃತಿಯನ್ನು ಬೆಳೆಸುತ್ತದೆ. ಕಾಣದ ವಾಸ್ತವದ ಅರಿವಿಲ್ಲದ ವೀಕ್ಷಕರು ಇತರರು ಪರಿಪೂರ್ಣ ಜೀವನವನ್ನು ನಡೆಸುತ್ತಾರೆ ಎಂದು ಭಾವಿಸಬಹುದು. ಇಸ್ಲಾಮೀ ದೃಷ್ಟಿಕೋನದ, ಈ ಭ್ರಮೆ ಎರಡು ಕಾರಣಗಳಿಗಾಗಿ ಹಾನಿಕಾರವಾಗಿದೆ: ಮೊದಲನೆಯದಾಗಿ, ಇದು ಪೋಸ್ಟ್ ಮಾಡುವ ವ್ಯಕ್ತಿಗೆ ಆಂತರಿಕ ಒತ್ತಡವನ್ನುಂಟು ಮಾಡುತ್ತದೆ. ಎರಡನೆಯದಾಗಿ, ಇದು ಇತರರನ್ನು ಹಾದಿ ತಪ್ಪಿಸುತ್ತದೆ.

ಇಸ್ಲಾಮ್ ನಮ್ರತೆ ಮತ್ತು ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುತ್ತದೆ. ಪ್ರವಾದಿಯವರು(ಸ) ಉತ್ಪ್ರೇಕ್ಷೆ ಮತ್ತು ಸುಳ್ಳು ಚಿತ್ರಣಗಳಳನ್ನು ವಿರೋಧಿಸಿದ್ದಾರೆ. ಕೇವಲ ಮೆಚ್ಚುಗೆಯನ್ನು ಆಕರ್ಷಿಸಲು ನೈಜವಲ್ಲದ ಜೀವನಶೈಲಿಯನ್ನು ಪ್ರಸ್ತುತ ಪಡಿಸುವುದು, ಪ್ರವಾದಿವರ್ಯರ(ಸ) ಬೋಧನೆಗಳಿಗೆ ವಿರುದ್ಧವಾಗಿದೆ ಮತ್ತು ಹೋಲಿಕೆಯಿಂದ ಕೀಳರಿಮೆ ಅನುಭವಿಸುವ ಇತರರಿಗೆ ಹಾನಿಯನ್ನುಂಟು ಮಾಡುತ್ತದೆ.

ಆನ್‌ಲೈನ್‌ನಲ್ಲಿ ದೃಢೀಕರಣವನ್ನು ಪಡೆಯುವುದರಿಂದ ಉಂಟಾಗುವ ಮಾನಸಿಕ ಆರೋಗ್ಯದ ಪರಿಣಾಮಗಳು ಆತಂಕ ಮತ್ತು ಒತ್ತಡ:

ಇಷ್ಟಗಳು ಮತ್ತು ಕಾಮೆಂಟ್‌ಗಳಿಗಾಗಿ ನಿರಂತರವಾಗಿ ಪರಿಶೀಲಿಸುವುದರಿಂದ ಒತ್ತಡದ ಮಟ್ಟ ಜಾಸ್ತಿಯಾಗುತ್ತದೆ. ಜನಪ್ರಿಯವಲ್ಲದ ಯಾವುದನ್ನಾದರೂ ಪೋಸ್ಟ್ ಮಾಡುವ ಅಥವಾ ನಿರ್ಣಯಿಸಲ್ಪಡುವ ಭಯವು ಸಾಮಾಜಿಕ ಆತಂಕವನ್ನು ಪ್ರಚೋದಿಸುತ್ತದೆ.

ಖಿನ್ನತೆ: ಒಬ್ಬ ವ್ಯಕ್ತಿಗೆ ನಿರೀಕ್ಷಿತ ಮಾನ್ಯತೆ ಸಿಗದಿದ್ದಾಗ ಅವರು ಮುಖ್ಯವಲ್ಲ ಅಥವಾ ಪ್ರೀತಿಗೆ ಪಾತ್ರರಲ್ಲ ಎಂದು ಭಾವಿಸಬಹುದು. ನಕಾರಾತ್ಮಕ ಕಾಮೆಂಟ್‌ಗಳು ದುಃಖ ಮತ್ತು ಸ್ವಯಂ-ಅನುಮಾನದ ಭಾವನೆಗಳಿಗೆ ಸಹ ಕಾರಣವಾಗುತ್ತದೆ.

ಗುರುತಿನ ಸಂಕಟ: ತಮ್ಮ ಆನ್‌ಲೈನ್ ಸಾನಿಧ್ಯವನ್ನು ರೂಪಿಸಿ ಕೊಳ್ಳುವ ಜನರು ಇತರರನ್ನು ಮೆಚ್ಚಿಸುವ ಸಲುವಾಗಿ ಅವರು ತಮ್ಮ ಅಧಿಕೃತ ವ್ಯಕ್ತಿತ್ವದೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುತ್ತಾರೆ. ಅವರು ಗುರುತು ವೈಯಕ್ತಿಕ ಮೌಲ್ಯಗಳು ಅಥವಾ ನಂಬಿಕೆಗಿಂತ ಹೆಚ್ಚಾಗಿ ಸಾರ್ವಜನಿಕ ಮೆಚ್ಚುಗೆಯ ಮೇಲೆ ಅವಲಂಬಿತವಾಗಿರುತ್ತದೆ.

ಕುಂಠಿತವಾದ ಏಕಾಗ್ರತೆ ಮತ್ತು ಫಲವತ್ತತೆ: ಅಂತ್ಯವಿಲ್ಲದ ಸ್ಕ್ರೋಲಿಂಗ್‌ ಮತ್ತು ತೊಡಗಿಸಿಕೊಳ್ಳುವಿಕೆಯು ಗಮನದ ಅವಧಿಯನ್ನು ಕುಂಠಿತಗೊಳಿಸುತ್ತದೆ. ನಿದ್ರೆಯನ್ನು ಅಡ್ಡಿಪಡಿಸುತ್ತದೆ ಮತ್ತು ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ಇಸ್ಲಾಮ್ ಸಮತೋಲವನ್ನು ಪ್ರೋತ್ಸಾಹಿಸುತ್ತದೆ ಮತ್ತು ಕಾಲಹರಣ ಮಾಡುವುದರ ವಿರುದ್ಧ ಎಚ್ಚರಿಸುತ್ತದೆ.

ಅಲ್ಲಾಹನು ಹೇಳುತ್ತಾನೆ; "ಕಾಲದಾಣೆ, ನಿಜವಾಗಿ ಮನುಷ್ಯನು ಮಹಾ ನಷ್ಟದಲ್ಲಿದ್ದಾನೆ." (103: 1-2)

ದೃಢೀಕರಣದ ಅಗತ್ಯವನ್ನು ಗುಣಪಡಿಸುವ ಇಸ್ಲಾಮೀ ಪರಿಕರಗಳು:

ಇಖ್ಲಾಸ್(ಪ್ರಾಮಾಣಿಕತೆ) ಬಲಪಡಿಸುವುದು: ಏನ್ನನಾದರೂ ಪೋಸ್ಟ್ ಮಾಡುವ ಮೊದಲು ನಿಮ್ಮ ಉದ್ದೇಶಗಳನ್ನು ಶುದ್ಧೀಕರಿಸಿಕೊಳ್ಳಿ. ಈ ರೀತಿಯ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ. ನಾನು ಇದನ್ನು ಅಲ್ಲಾಹನಿಗಾಗಿ ಹಂಚಿಕೊಳ್ಳುತ್ತಿದ್ದೇನೆಯೇ? ಇದು ಇತರರಿಗೆ ಪ್ರಯೋ ಜನವನ್ನು ನೀಡುತ್ತದೆಯೇ? ಯಾರಿಗೂ ತಿಳಿದಿಲ್ಲದಿದ್ದರೂ ನಾನು ಇದನ್ನು ಮಾಡುತ್ತೇನೆಯೇ?

ಅತ್ಯಂತ ಪ್ರಮುಖ ಹದೀಸ್‌ನಲ್ಲಿ ಹೀಗೆ ಹೇಳಲಾಗಿದೆ; "ಕ್ರಿಯೆಗಳು ಉದ್ದೇಶಗಳಿಂದ ಮಾತ್ರ ನಿರ್ಣಯಿಸಲ್ಪಡುತ್ತದೆ." (ಬುಖಾರಿ, ಮುಸ್ಲಿಮ್)

ಪ್ರಾಮಾಣಿಕತೆಯ ಹೃದಯವನ್ನು ತೋರಿಕೆ ಮತ್ತು ಭಾವನಾತ್ಮಕ ಅಸ್ಥಿರತೆ ಎರಡರಿಂದಲೂ ರಕ್ಷಿಸುತ್ತದೆ.

ಝಿಕ್ರ್: ಅಲ್ಲಾಹನನ್ನು ಸ್ಮರಿಸುವುದರಿಂದ ಭಾವನಾತ್ಮಕ ನೆಮ್ಮದಿ ಸಿಗುತ್ತದೆ ಎಂದು ಕುರ್‌ಆನ್ ಕಲಿಸುತ್ತದೆ:

"ಮನಶಾಂತಿಯೊದಗುವುದು ಅಲ್ಲಾಹನ ಸ್ಮರಣೆಯಿಂದಲೇ ಎಂಬುದು ಖಚಿತ." (13: 28)

ನೋಟಿಫಿಕೇಷನ್(ಪ್ರಕಟನೆ)ಗಳಿಂದ ತ್ವರಿತವಾಗಿ ಭಾವನಾತ್ಮಕ ಹೊಡೆತಗಳನ್ನು ಹುಡುಕುವ ಬದಲು, ಆಧ್ಯಾತ್ಮಿಕ ಸಂಪರ್ಕದಿಂದ ಆಳವಾದ ಶಾಂತಿಯನ್ನು ಕಂಡುಕೊಳ್ಳಬಹುದು.

ಶುಕ್ರ್ (ಕೃತಜ್ಞತೆ): ಪ್ರತಿದಿನ ಕೃತಜ್ಞತೆ ಸಲ್ಲಿಸುವ ಅಭ್ಯಾಸ ಮಾಡಿ. ಒಬ್ಬ ವ್ಯಕ್ತಿಯು ತನ್ನ ಸ್ವಂತ ಅನುಗ್ರಹಗಳ ಮೇಲೆ ಹೆಚ್ಚು ಗಮನ ಹರಿಸಿದಷ್ಟೂ, ಹೋಲಿಕೆ ಅಥವಾ ಅಸೂಯೆಗೆ ಅವಕಾಶ ಕಡಿಮೆಯಾಗುತ್ತದೆ.

ಅಲ್ಲಾಹನು ಕುರ್‌ಆನ್‌ನಲ್ಲಿ ವಾಗ್ದಾನ ನೀಡುತ್ತಾನೆ: "ನೀವು ಕೃತಜ್ಞತೆ ಸಲ್ಲಿಸಿದರೆ ನಾನು ನಿಮಗೆ ಇನ್ನಷ್ಟು ಹೆಚ್ಚಿಸಿ ಕೊಡುವೆನು." (14: 7)

ಶುಕ್ರ್ ಹೃದಯಕ್ಕೆ ಶಕ್ತಿ ತುಂಬುತ್ತದೆ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಮಾನಸಿಕ ಹಾನಿಯನ್ನು ಕಡಿಮೆ ಮಾಡುತ್ತದೆ.

ಗೌಪ್ಯತೆಗೆ ಬೆಲೆ ಕೊಡುವುದು: ಇಸ್ಲಾಮ್ ಧರ್ಮವು ನಮ್ರತೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ವೈಯಕ್ತಿಕ ಅನುಗ್ರಹಗಳನ್ನು ಅತಿಯಾಗಿ ಪ್ರದರ್ಶಿಸುವುದನ್ನು ನಿರುತ್ಸಾಹಗೊಳಿಸುತ್ತದೆ.

ಪ್ರವಾದಿ(ಸ) ಹೇಳಿದರು; “ನಿಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ವಿವೇಚನೆಯಿಂದ ಸಹಾಯ ಪಡೆಯಿರಿ, ಏಕೆಂದರೆ ಯಾರಿಗೆ ಏನಾದರೂ ಅನುಗ್ರಹ ಸಿಕ್ಕಿದೆಯೋ ಅವರೆಲ್ಲರೂ ಮತ್ಸರವನ್ನುಂಟು ಮಾಡುತ್ತಾರೆ.” (ತಬ್ರಾನಿ)

ಈ ಹದೀಸ್ ಸಾಮಾಜಿಕ ಮಾಧ್ಯಮ ನಡವಳಿಕೆಗೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಇಲ್ಲಿ ಎಲ್ಲವನ್ನೂ ಹಂಚಿಕೊಳ್ಳಬೇಕಾಗಿಲ್ಲ. ಅನುಗ್ರಹ ಮತ್ತು ಮಾನಸಿಕ ಯೋಗಕ್ಷೇಮವನ್ನು ಗೌಪ್ಯತೆಯಿಂದ ರಕ್ಷಿಸಿಕೊಳ್ಳಬಹುದು.

ಸಾಮಾಜಿಕ ಮಾಧ್ಯಮ ಬಳಕೆಯನ್ನು ಮಿತಿಗೊಳಿಸುವುದು: ಸ್ವಯಂ ಶಿಸ್ತು ಬಹಳ ಮುಖ್ಯ. ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ. ಅತಿಯಾದ ಬಳಕೆ ಬೇಗನೆ ವ್ಯಸನವಾಗಿ ಬದಲಾಗಬಹುದು. ಪ್ರವಾದಿಯವರು(ಸ) ಎಲ್ಲಾ ವಿಷಯಗಳಲ್ಲಿ, ಆರಾಧನೆಯಲ್ಲಿಯೂ ಸಹಮಿತವಾಗಿರುವುದನ್ನು ಕಲಿಸಿದರು. ಈ ಸಮತೋಲಿತ ವಿಧಾನವು ತಂತ್ರಜ್ಞಾನಕ್ಕೂ ಅನ್ವಯಿಸುತ್ತದೆ.

ಅಲ್ಲಾಹನು ನಿಮ್ಮನ್ನು ನೋಡುತ್ತಿದ್ದಾನೆ ಎಂದು ನೆನಪಿಸಿಕೊಳ್ಳುವುದು: ಒಬ್ಬ ಸತ್ಯವಿಶ್ವಾಸಿ ತನ್ನ ಕಾರ್ಯಗಳು, ಉದ್ದೇಶಗಳು ಮತ್ತು ಹೋರಾಟಗಳನ್ನು ಅಲ್ಲಾಹನು ನೋಡುತ್ತಾನೆ ಎಂಬ ಅರಿವಿನಿಂದ ಪ್ರೇರಿತನಾಗುತ್ತಾನೆ. ಜನರು ನಿರ್ಲಕ್ಷಿಸಬಹುದು ಅಥವಾ ಮರೆತು ಬಿಡಬಹುದು, ಆದರೆ ಅಲ್ಲಾಹನು ಎಂದಿಗೂ ಹಾಗೆ ಮಾಡುವುದಿಲ್ಲ.

ಕುರ್‌ಆನ್ ಹೇಳುತ್ತದೆ; “ನೀವೇನು ಮಾಡುತ್ತಿರುವಿರೋ ಆ ಕುರಿತು ನಿಮ್ಮ ಒಡೆಯನು ಅಜ್ಞನಾಗಿಲ್ಲ.” (11: 123)

ಸಾಮಾಜಿಕ ಮಾಧ್ಯಮ ಒಳ್ಳೆಯದಕ್ಕಾಗಿ ಒಂದು ಸಾಧನ:

ಸಾಮಾಜಿಕ ಮಾಧ್ಯಮವು ಹರಾಮ್(ನಿಷಿದ್ಧವಲ್ಲ) ಅಲ್ಲ; ಅದನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರಲ್ಲಿ ಸಮಸ್ಯೆ ಅಡಗಿದೆ. ಇಸ್ಲಾಮ್ ತಂತ್ರಜ್ಞಾನವನ್ನು ನಿರುತ್ಸಾಹಗೊಳಿಸುವುದಿಲ್ಲ. ಇದು ಸಕಾರಾತ್ಮಕ ಬಳಕೆಗಳನ್ನು ಪ್ರೋತ್ಸಾಹಿಸುತ್ತದೆ. ಇದರಲ್ಲಿ ಪ್ರಯೋಜನಕಾರಿ ಜ್ಞಾನವನ್ನು ಹರಡುವುದು, ಒಬ್ಬರ ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದು, ಸಮಾಜ ಸೇವಾ ಚಟುವಟಿಕೆಗಳನ್ನು ಬೆಂಬಲಿಸುವುದು, ಇಸ್ಲಾಮೀ ಬೋಧನೆಗಳು ಮತ್ತು ನೆನಪಿಸುವಂತಹವುಗಳನ್ನು ಹಂಚಿಕೊಳ್ಳುವುದು, ಸಕರಾತ್ಮಕ ಮತ್ತು ಕರುಣೆಯನ್ನು ಪ್ರೋತ್ಸಾಹಿಸುವುದು ಸೇರಿವೆ.

ಆದರೆ ಈ ಕಾರ್ಯಗಳು ಪ್ರಾಮಾಣಿಕತೆ, ನಮ್ರತೆ ಮತ್ತು ಯುಕ್ತಿಯೊಂದಿಗೆ ನೆಲೆಗೊಂಡಿರಬೇಕು.

ಸಮಾಪ್ತಿ:

ಸಾಮಾಜಿಕ ಮಾಧ್ಯಮದ ಪ್ರಶಂಸೆಯು ಭಾರಿ ಮಾನಸಿಕ ನಷ್ಟವನ್ನುಂಟು ಮಾಡುತ್ತದೆ. ಇದು ಆಧ್ಯಾತ್ಮಿಕ ಶೂನ್ಯತೆ, ಹೋಲಿಕೆ, ಅಸೂಯೆ ಮತ್ತು ಅಭದ್ರತೆಯನ್ನು ಪ್ರೋತ್ಸಾಹಿಸುತ್ತದೆ. ಇಖ್ಲಾಸ್, ಶುಕ್ರ್, ಝಿಕ್ರ್, ನಮ್ರತೆ ಮತ್ತು ಸಮಯ ನಿರ್ವಹಣೆ ಇಸ್ಲಾಮಿನ ಕಾಲಾತೀತ ಯುಕ್ತಿಯು ಈ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಲು ನೀಡುವ ಕೆಲವು ಉತ್ತಮ ಸಾಧನಗಳಾಗಿವೆ.

ನಿಜವಾದ ಮೌಲ್ಯದ ಮೂಲ ಅಲ್ಲಾಹನೇ ಹೊರತು ಇಷ್ಟಗಳು ಅಥವಾ ಅನುಯಾಯಿಗಳಲ್ಲ ಎಂದು ಅರಿತುಕೊಂಡಾಗ ಸತ್ಯವಿಶ್ವಾಸಿಯು ಆಂತರಿಕ ಶಾಂತಿ ಮತ್ತು ಭಾವನಾತ್ಮಕ ಸ್ವಾತಂತ್ರ್ಯವನ್ನು ಕಂಡುಕೊಳ್ಳುತ್ತಾನೆ. ಡಿಜಿಟಲ್ ಮೆಚ್ಚುಗೆಗಿಂತ ಅಲ್ಲಾಹನಿಗೆ ಹತ್ತಿರವಾಗುವುದರಿಂದ ಹೃದಯಕ್ಕೆ ಶಾಹಿ ಸಮಾಧಾನ ಸಿಗುವುದು.

ಪ್ರವಾದಿಯವರು(ಸ) ಬಹಳ ಸುಂದರವಾಗಿ ಸಂಕ್ಷೇಪಿಸಿದ್ದಾರೆ: ಅವರು ಹೇಳಿದರು; “ಸಂಪತ್ತು ಎಂದರೆ ಬಹಳಷ್ಟು ಆಸ್ತಿಗಳನ್ನು ಹೊಂದಿರುವುದು ಅಲ್ಲ, ಬದಲಾಗಿ (ನಿಜವಾದ) ಸಂಪತ್ತು ಎಂದರೆ ಆತ್ಮದಲ್ಲಿ ತೃಪ್ತಿಯನ್ನು ಅನುಭವಿಸುವುದು.” (ಬುಖಾರಿ)

ಸಾಮಾಜಿಕ ಜಾಲತಾಣಗಳು ತಾತ್ಕಾಲಿಕ ಸಂತಸವನ್ನು ನೀಡಬಹುದು, ಆದರೆ ಇಸ್ಲಾಮ್ ಅದರ ಹಿಂದೆ ಆಂತರಿಕ ಶಾಂತಿ ಮತ್ತು ಶಾಶ್ವತ ಉದ್ದೇಶವನ್ನು ನೀಡುತ್ತದೆ.