ಸನ್ಮಾರ್ಗ ವಾರ್ತೆ
ನವದೆಹಲಿ: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಮಿಲಿಟರಿ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಭಾರತದಲ್ಲಿ “ಸಂಭಾವ್ಯ ಹಿಂಸಾಚಾರ” ಮತ್ತು “ಅಲ್ಲಲ್ಲಿ ಪ್ರತಿಭಟನೆಗಳು” ನಡೆಯುವ ಸಾಧ್ಯತೆಯಿದೆ ಎಂದು ಕೇಂದ್ರ ಗೃಹ ಸಚಿವಾಲಯವು (MHA) ರಾಜ್ಯಗಳನ್ನು ಎಚ್ಚರಿಸಿದೆ ಎಂದು ವರದಿಯಾಗಿದೆ.
ಫೆಬ್ರವರಿ 28 ರಂದು ಅಮೇರಿಕ-ಇಸ್ರೇಲ್ ಮೈತ್ರಿಕೂಟ ನಡೆಸಿದ ಮಿಲಿಟರಿ ದಾಳಿಯಲ್ಲಿ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮ್ನೆಯಿ ಹತ್ಯೆಯನ್ನು ಪ್ರತಿಭಟಿಸಿ ದೇಶಾದ್ಯಂತ ಹಲವಾರು ಜನರು ಬೀದಿಗಿಳಿದಿದ್ದಾರೆ. ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ ಶಿಯಾ ಗುಂಪುಗಳು ಪ್ರತಿಭಟನೆ ನಡೆಸಿವೆ.
‘ಇರಾನ್ನ ವಿರೋಧಿಗಳು ಮತ್ತು ಮಿತ್ರರ ಪ್ರತಿಭಟನೆಗಳ ಮೇಲೆ ನಿಗಾ ಇರಿಸಿ’
ಫೆಬ್ರವರಿ 28 ರಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (DGP) ಕಳುಹಿಸಲಾದ ಸೂಚನೆಯಲ್ಲಿ, ಇರಾನ್, ಅಮೇರಿಕ ಮತ್ತು ಇಸ್ರೇಲ್ನ ರಾಯಭಾರ ಕಚೇರಿಗಳು ಹಾಗೂ ಕಾನ್ಸುಲೇಟ್ ಕಚೇರಿಗಳ ಬಳಿ “ಇರಾನ್ ಪರ ಮತ್ತು ವಿರೋಧಿ ಗುಂಪುಗಳು” ನಡೆಸುವ ಪ್ರತಿಭಟನೆ ಮತ್ತು ಪ್ರದರ್ಶನಗಳ ಮೇಲೆ ನಿಗಾ ಇಡುವಂತೆ ಗೃಹ ಸಚಿವಾಲಯವು ಸೂಚಿಸಿದೆ ಎಂದು ವರದಿಯಾಗಿದೆ.
ಅಲ್ಲದೆ, “ಉದ್ರೇಕಕಾರಿ ಭಾಷಣಗಳನ್ನು ಮಾಡುವ ಮತ್ತು ಹಿಂಸಾತ್ಮಕ ಕೃತ್ಯಗಳಿಗೆ ಪ್ರಚೋದನೆ ನೀಡುವ ಇರಾನ್ ಪರ ಮೂಲಭೂತವಾದಿ ಭಾಷಣಕಾರರನ್ನು” ಗುರುತಿಸುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ.
“ಇರಾನ್ ಪರ ಉಗ್ರಗಾಮಿಗಳು ಮತ್ತು ಜಾಗತಿಕ ಭಯೋತ್ಪಾದಕ ಗುಂಪುಗಳ (GTG) ಸೋಶಿಯಲ್ ಮೀಡಿಯಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು “ಇರಾನ್ ಪರ ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾಮಾಜಿಕ-ರಾಜಕೀಯ ಸಂಘಟನೆಗಳ” ಮೇಲೆ ನಿಗಾವನ್ನು ಹೆಚ್ಚಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.












