ಸನ್ಮಾರ್ಗ ವಾರ್ತೆ
“ಚಿತ್ತದ ಆದೇಶದ ವಿರುದ್ಧ ದೇವಾದೇಶವನ್ನು ಪಾಲಿಸುವುದೇ ಉಪವಾಸದ ನಿಜವಾದ ಉದ್ದೇಶವಾಗಿದೆ” ಎಂದು ಜ.ಇ ಹಿಂದ್ ಕರ್ನಾಟಕ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು. ಅವರು ನಗರದ ಅಂಬೇಡ್ಕರ್ ಭವನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನವಲಗುಂದ ವತಿಯಿಂದ ಆಯೋಜಿಸಿದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. “ಇಂದು ಜಾತಿ, ಧರ್ಮ ಹಾಗೂ ಭಾಷೆಯ ಆಧಾರದಲ್ಲಿ ಜನರನ್ನು ವಿಂಗಡಿಸುತ್ತಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದ್ದು ಧರ್ಮವನ್ನು ನಂಬುವರು ಸಮಾನತೆಯ ಪ್ರತಿಪಾದಕರಾಗಬೇಕು” ಎಂದು ಹೇಳಿದರು.

ಈರಣ್ಣ ಶಿಡಗಂಟಿ ಸಾಮಾಜಿಕ ಕಾರ್ಯಕರ್ತರು ಮಾತನಾಡಿ ” ದೇಶದ ದೊಡ್ಡ ಪಿಡುಗು ಅಸ್ಪೃಶ್ಯತೆ ಆಚರಣೆಯಾಗಿದೆ, ಇಂದು ಮಸೀದಿ ಅಥವಾ ದರ್ಗಾಗಳಿಗೆ ಭೇಟಿ ನೀಡುವಾಗ ದಲಿತರಿಗೆ ಯಾವ ಅಡೆತಡೆಗಳು ಇರುವುದಿಲ್ಲ ಆದರೆ ಅದೇ ಕೆಲವು ಕಡೆಗಳಲ್ಲಿ ಇವರ ಪ್ರವೇಶವು ನಿಷೇಧವಾಗಿರುವುದು, ನಿಜಕ್ಕೂ ಆತಂಕದ ಸಂಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಎಸ್ ಎನ್ ಡಂಬಲ್ ವಕೀಲರು “ಉಪವಾಸ ಬದುಕಿ ನಲ್ಲಿ ಶಿಸ್ತಿನ ಪಾಠ ಕಲಿಸುತ್ತದೆ” ಎಂದು ಹೇಳಿದರು.
ಜ.ಇ. ಹಿಂದ್ ಸ್ಥಾನಿಯ ಅಧ್ಯಕ್ಷ ಮುಖ್ತಾರ್ ಅಹ್ಮದ್ ಎಂ.ಕೆ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭವು ಕುರ್ ಆನ್ ಪಠಣದೊಂದಿಗೆ ಪ್ರಾರಂಭಗೊಂಡಿತು. ಜಾಫರ್ ಸಾದಿಕ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.













