ಸನ್ಮಾರ್ಗ ವಾರ್ತೆ
ಗೋಪಾಲ್ಗಂಜ್: ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಕೊಳವೊಂದರಲ್ಲಿ 14 ವರ್ಷದ ಇಬ್ಬರು ಮದರಸಾ ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮೊಹಮ್ಮದ್ ಜೈದ್ ಶಾಹಿದಿ ಮತ್ತು ಅಶ್ರಫ್ ಅಲಿ ಎಂದು ಗುರುತಿಸಲಾಗಿದೆ. ಹೊಲದಿಂದ ಕಬ್ಬು ಕಿತ್ತಿದ್ದಕ್ಕಾಗಿ ಮಕ್ಕಳನ್ನು ಕ್ರೂರವಾಗಿ ಥಳಿಸಿ, ನಂತರ ಕೊಲ್ಲುವ ಉದ್ದೇಶದಿಂದ ಕೊಳಕ್ಕೆ ಎಸೆಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ನವೆಂಬರ್ 23 ರಂದು ಈ ಘಟನೆ ನಡೆದಿದೆ ಎಂದು ಅಶ್ರಫ್ ಸಂಬಂಧಿ ಮುಹಮ್ಮದ್ ಶಹಾಬುದ್ದೀನ್ ತಿಳಿಸಿದ್ದಾರೆ. ಅಂದು ದೇಣಿಗೆ ಸಂಗ್ರಹಿಸಲು ಹೋಗಿದ್ದ ಐವರು ಮದರಸಾ ವಿದ್ಯಾರ್ಥಿಗಳು ಹೊಲದಿಂದ ಕಬ್ಬು ಕಿತ್ತಿದ್ದರು. ಇದರ ಬೆನ್ನಲ್ಲೇ ಹೊಲದ ಮಾಲೀಕ ಸತ್ಯೇಂದ್ರ ಪಾಂಡೆ, ಆತನ ಪುತ್ರರು ಹಾಗೂ ಸ್ಥಳೀಯರು ಮಕ್ಕಳನ್ನು ಬೆನ್ನಟ್ಟಿ ಥಳಿಸಿದ್ದು, 10,000 ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ತಪ್ಪಿಸಿಕೊಳ್ಳಲು ಯತ್ನಿಸುವಾಗ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಮುಹಮ್ಮದ್ ಜೈದ್ ಶಾಹಿದಿ ಮತ್ತು ಅಶ್ರಫ್ ಅಲಿ ಅವರನ್ನು ಸುಮಾರು ಐದು ಮಂದಿ ಹಿಡಿದು ಕೊಳಕ್ಕೆ ಎಸೆದಿದ್ದಾರೆ ಎಂದು ಸಂಬಂಧಿ ಆರೋಪಿಸಿದ್ದಾರೆ.
ಇದು ದ್ವೇಷ ಅಪರಾಧ ಎಂದ ಕುಟುಂಬ
ಮೃತಪಟ್ಟ ಇಬ್ಬರು ಮಕ್ಕಳಿಗೆ ಈಜು ಬರುತ್ತಿರಲಿಲ್ಲ ಎಂದು ಮೊಹಮ್ಮದ್ ಶಹಾಬುದ್ದೀನ್ ಹೇಳಿದ್ದಾರೆ. ಟೋಪಿ ಧರಿಸಿದ್ದ ಮದರಸಾ ವಿದ್ಯಾರ್ಥಿಗಳಾಗಿದ್ದ ಕಾರಣಕ್ಕಾಗಿಯೇ ಮಕ್ಕಳನ್ನು ಗುರಿಯಾಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಬೇರೆ ಸಮುದಾಯದ ಮಕ್ಕಳಾಗಿದ್ದರೆ ಹೀಗಾಗುತ್ತಿರಲಿಲ್ಲ ಎಂದೂ ಅವರು ಸೇರಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನವೆಂಬರ್ 27 ರಂದು ಸತ್ಯೇಂದ್ರ ಪಾಂಡೆ ಮತ್ತು ಆತನ ಮಕ್ಕಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದಾಗ್ಯೂ, ಮಕ್ಕಳ ಸಾವನ್ನು ಕೇವಲ ನೀರಿನಲ್ಲಿ ಮುಳುಗಿ ಆದ ಸಾವು ಎಂದು ಬಿಂಬಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿಯೂ ಕುಟುಂಬ ಎಚ್ಚರಿಕೆ ನೀಡಿದೆ.












