“ಸ್ಪೀಚ್ ಕೇಳುತ್ತೇವೆ, ಕುರ್‌ಆನ್ ಓದುತ್ತೇವೆ ಆದರೆ ಬದಲಾವಣೆ ಯಾಕಿಲ್ಲ?”

0
389

✍️ ಆಯಿಶಾ ಶಿವಮೊಗ್ಗ

ಉಪವಾಸ ಇರುತ್ತೇವೆ. ಹೃದಯ ಬದಲಾವಣೆಯಾಗುವುದಿಲ್ಲ ಯಾಕೆ?

ಇಂದು ನಾವು ಎಲ್ಲೆಡೆ ನೈತಿಕ ಮೌಲ್ಯಗಳ ಕುರಿತಾದ ಸ್ಪೀಚ್‌ಗಳು, ಕಥೆಗಳು, ಡ್ರಾಮಾಗಳು, ಸ್ಕಿಟ್‌ಗಳು ನೋಡುತ್ತಾ ಇದ್ದೇವೆ. ಮಸೀದಿಗಳಲ್ಲಿ ಖುತ್ಬಾಗಳು ನಡೆಯುತ್ತಿವೆ, ಮದರಸಾಗಳಲ್ಲಿ ತರ್ಬಿಯತ್ ಪಾಠಗಳು ನಡೆಯುತ್ತಿವೆ, ಯೂಟ್ಯೂಬ್-ವಾಟ್ಸಪ್‌ಗಳಲ್ಲಿ ಇಸ್ಲಾಮಿಕ್ ಲೆಕ್ಚರ್‌ಗಳು ಹರಿದಾಡುತ್ತಿವೆ. ಆದರೂ ಸಮಾಜದಲ್ಲಿ ಕ್ರೈಮ್‌ಗಳು ಕಡಿಮೆಯಾಗುತ್ತಿಲ್ಲ. ಕೊಲೆ, ದರೋಡೆ, ಮೋಸ, ವಂಚನೆ, ಅಕ್ರಮ ಸಂಬಂಧಗಳು, ನಶೆಯ ಪದಾರ್ಥಗಳ ವ್ಯಸನ ಇವುಗಳೆಲ್ಲ ಹೆಚ್ಚುತ್ತಿರುವಂತೆ ಕಾಣಿಸುತ್ತಿವೆ.

ಪ್ರಶ್ನೆ ಏನು?

ನೈತಿಕ ಕಥೆಗಳು ಇವೆ. ಉಪದೇಶಗಳು ಇವೆ. ಕುರ್‌ಆನ್-ಹದೀಸ್‌ಗಳ ಪಾಠ ಇವೆ. ಆದರೆ ಬದಲಾವಣೆ ಯಾಕೆ ಆಗುತ್ತಿಲ್ಲ?

ಸಮಸ್ಯೆಯ ಮೂಲ- “ಹೃದಯದ ಬದಲಾವಣೆ ಇಲ್ಲ”

ಕುರ್‌ಆನ್ ಹೇಳುತ್ತದೆ: “ಅಲ್ಲಾಹ್ ಒಂದು ಜನಾಂಗದ ಸ್ಥಿತಿಯನ್ನು ಬದಲಾಯಿಸುವುದಿಲ್ಲ, ಅವರು ತಮ್ಮನ್ನು ಬದಲಾಯಿಸುವವರೆಗೆ.” (13:11)
ನಾವು ಸ್ಪೀಚ್ ಕೇಳುತ್ತೇವೆ, ಆದರೆ ಅದನ್ನು ಹೃದಯದಲ್ಲಿ ಇಳಿಸಿಕೊಳ್ಳುವುದಿಲ್ಲ.

ಇಸ್ಲಾಂನಲ್ಲಿ ‘ಇಲ್ಮ್’ (ಜ್ಞಾನ) ಮಾತ್ರ ಸಾಲದು; ‘ಅಮಲ್’ (ಅಮಲು) ಅಗತ್ಯ.

ಇಂದಿನ ಸಮಸ್ಯೆ ಏನೆಂದರೆ- ಜ್ಞಾನ ಇದೆ, ಭಾಷಣ ಇದೆ, ಕಾರ್ಯಕ್ರಮ ಇದೆ. ಆದರೆ ತಕ್ವಾ (ಅಲ್ಲಾಹ್ ಭಯ) ಕಡಿಮೆಯಾಗಿದೆ.
ಹೃದಯದಲ್ಲಿ ಅಲ್ಲಾಹನ ಭಯ ಕಡಿಮೆಯಾದಾಗ, ಕ್ರೈಮ್‌ಗಳು ಹೆಚ್ಚಾಗುತ್ತವೆ.

ಪ್ರವಾದಿ(ಸ) ಹೇಳಿದರು: “ದೇಹದಲ್ಲಿ ಒಂದು ತುಂಡು ಮಾಂಸ ಇದೆ. ಅದು ಸರಿ ಇದ್ದರೆ ದೇಹವೆಲ್ಲ ಸರಿ. ಅದು ಹಾಳಾದರೆ ದೇಹವೆಲ್ಲ ಹಾಳು. ಅದು ಹೃದಯ.” (ಬುಖಾರಿ, ಮುಸ್ಲಿಂ)

ಕುಟುಂಬದ ಪಾತ್ರ- ತಂದೆ ತಾಯಿಗಳ ಜವಾಬ್ದಾರಿ

ಇಂದು ಬಹಳಷ್ಟು ಸಮಸ್ಯೆಗಳು ಮನೆಯಲ್ಲೇ ಆರಂಭವಾಗುತ್ತಿವೆ. ಮಕ್ಕಳಿಗೆ ದುಆ ಕಲಿಸೋದು ಬಿಟ್ಟು ಮೊಬೈಲ್ ಕೊಡ್ತಿದ್ದೇವೆ. ನಮಾಝ್ ಕಲಿಸೋದು ಬಿಟ್ಟು ಟಿವಿ ಸೀರಿಯಲ್ ಕಲಿಸುತ್ತಿದ್ದೇವೆ. ಶಿಷ್ಟಾಚಾರ ಕಲಿಸೋದು ಬಿಟ್ಟು ಸ್ಪರ್ಧೆ ಕಲಿಸುತ್ತಿದ್ದೇವೆ.

ಪ್ರವಾದಿ(ಸ) ಹೇಳಿದರು: “ನಿಮ್ಮಲ್ಲಿ ಪ್ರತಿಯೊಬ್ಬರೂ ನಾಯಕರು; ತಮ್ಮ ಜವಾಬ್ದಾರಿಯ ಬಗ್ಗೆ ಕೇಳಲ್ಪಡುವರು.” (ಬುಖಾರಿ)

ತಂದೆ-ತಾಯಿಗಳು ಮಕ್ಕಳಿಗೆ ದೀನ್ ಕಲಿಸದೇ, ಕೇವಲ ಡಿಗ್ರಿ ಕೊಡಲು ಪ್ರಯತ್ನಿಸಿದರೆ, ಅವರು ದೊಡ್ಡ ಅಧಿಕಾರಿಯಾಗಬಹುದು. ಆದರೆ ಒಳ್ಳೆಯ ಮಾನವನಾಗಲಾರ.

ಸಮಾಜ ಮತ್ತು ಸ್ನೇಹ ವಲಯದ ಪರಿಣಾಮ

ಒಳ್ಳೆಯ ಸ್ನೇಹಿತ ಒಳ್ಳೆಯ ದಾರಿಗೆ ಕರೆದು ಕೊಂಡು ಹೋಗುತ್ತಾನೆ. ಕೆಟ್ಟ ಸ್ನೇಹಿತ ನಾಶದ ದಾರಿಗೆ. ಪ್ರವಾದಿ(ಸ) ಹೇಳಿದರು:
“ಒಳ್ಳೆಯ ಸ್ನೇಹಿತ ಸುಗಂಧ ಮಾರುವವನಂತೆ. ಕೆಟ್ಟ ಸ್ನೇಹಿತ ಕಬ್ಬಿಣ ಹೊಡೆಯುವವನಂತೆ. ಕಲ್ಲಿದ್ದಲು ಮಾರುವವನಂತೆ.” (ಬುಖಾರಿ)

ಇಂದು ಯುವಕರು ಮಾದಕ ವಸ್ತು, ಅಶ್ಲೀಲತೆ, ಅಕ್ರಮ ಸಂಬAಧ ತ್ವರಿತ ಹಣ ಗಳಿಸುವ ದಾರಿ ಇವೆಲ್ಲಕ್ಕೆ ಸಿಲುಕುತ್ತಿದ್ದಾರೆ. ಕಾರಣ – ಸರಿಯಾದ ಪರಿಸರ ಇಲ್ಲ.

ಸರ್ಕಾರ ಮತ್ತು ಕಾನೂನು ವ್ಯವಸ್ಥೆ

ಸಮಾಜದಲ್ಲಿ ನ್ಯಾಯ ಇಲ್ಲದಿದ್ದರೆ, ಕ್ರೈಮ್‌ಗಳು ಹೆಚ್ಚಾಗುತ್ತವೆ. ಭ್ರಷ್ಟಾಚಾರ, ಅನ್ಯಾಯ, ಬಡತನ, ನಿರುದ್ಯೋಗ- ಇವುಗಳೆಲ್ಲ ಅಪರಾಧಗಳಿಗೆ ದಾರಿ. ಇಸ್ಲಾಮ್ ನಲ್ಲಿ ನ್ಯಾಯಕ್ಕೆ ಮಹತ್ವ ನೀಡಲಾಗಿದೆ.

“ನ್ಯಾಯದಲ್ಲೇ ನಿಲ್ಲಿರಿ; ಅದು ಅಲ್ಲಾಹನಿಗೆ ಹತ್ತಿರ.” (ಕುರ್‌ಆನ್- 5:8)

ಸರ್ಕಾರ ನ್ಯಾಯವಾಗಿ ನಡೆದುಕೊಳ್ಳಬೇಕು. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು.

ಮೀಡಿಯಾ ಮತ್ತು ಆಧುನಿಕ ಸಂಸ್ಕೃತಿ

ಇಂದು ಟಿವಿ, ಸೋಶಿಯಲ್ ಮೀಡಿಯಾ, ಸಿನೆಮಾ- ಇವುಗಳೆಲ್ಲ ಮನಸ್ಸನ್ನು ಬದಲಾಯಿಸುತ್ತಿವೆ. ಪಾಪವನ್ನು “ಸ್ಟೈಲ್‌” ಆಗಿ ತೋರಿಸುತ್ತಾರೆ. ಮೋಸವನ್ನು “ಸ್ಮಾರ್ಟ್ನೆಸ್” ಎಂದು ಹೇಳುತ್ತಾರೆ. ಅಶ್ಲೀಲತೆಯನ್ನು “ಫ್ರೀಡಮ್” ಎಂದು ಹೇಳುತ್ತಾರೆ. ಹೃದಯ ಹೀಗೆ ನಿಧಾನವಾಗಿ ಕಠಿಣವಾಗುತ್ತದೆ.

ನೈತಿಕ ಕಥೆಗಳು ಏಕೆ ಕೆಲಸ ಮಾಡುತ್ತಿಲ್ಲ?

ಕಾರಣಗಳು:

  • ಕೇಳುವವರು ಬದಲಾವಣೆ ಉದ್ದೇಶದಿಂದ ಕೇಳುತ್ತಿಲ್ಲ.
  • ಹೇಳುವವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ.
  • ತಕ್ಷಣದ ಲಾಭದ ಮನೋಭಾವ.
  • ದುನಿಯಾ ಪ್ರೀತಿ- ಆಖಿರತ್ ಮರೆತು ಹೋಗಿದೆ.

ಪ್ರವಾದಿ(ಸ) ಎಚ್ಚರಿಕೆ ನೀಡಿರುವರು:
“ಜನರಿಗೆ ಒಂದು ಕಾಲ ಬರುತ್ತದೆ; ಅವರು ಲೋಕ ಪ್ರೀತಿಯಿಂದ ಆಖಿರತ್ ಮರೆತು ಬಿಡುತ್ತಾರೆ.”

ಪರಿಹಾರ- ಇಸ್ಲಾಮಿಕ್ ದೃಷ್ಟಿಯಿಂದ

  1. ತಕ್ವಾ ಬೆಳೆಸೋಣ
    ಅಲ್ಲಾಹ್ ಎಲ್ಲ ನೋಡುತ್ತಾನೆ ಎಂಬ ಭಾವನೆ ಮನಸ್ಸಿನಲ್ಲಿ ಇರಲಿ.
  2. ನಮಾಝ್ ಸ್ಥಾಪಿಸೋಣ
    ನಮಾಝ್ ಬಗ್ಗೆ ಅಲ್ಲಾಹ್ ಹೇಳುತ್ತಾನೆ:
    “ನಮಾಝ್ ಅಶ್ಲೀಲತೆ ಮತ್ತು ಕೆಟ್ಟ ಕಾರ್ಯಗಳಿಂದ ತಡೆಯುತ್ತದೆ.” (ಸೂರಃ ಅಂಕಬೂತ್- 29: 45)
  3. ಕುಟುಂಬದಲ್ಲಿ ದೀನ್ ವಾತಾವರಣ
    ಪ್ರತಿದಿನ ಕನಿಷ್ಠ 10 ನಿಮಿಷ ದೀನ್ ಚರ್ಚೆ.
  4. ಒಳ್ಳೆಯ ಸ್ನೇಹ ವಲಯ
    ಮಸೀದಿ, ಮದರಸ, ಒಳ್ಳೆಯ ಸಂಘಟನೆಗಳಿಗೆ ಮಕ್ಕಳನ್ನು ಕಳುಹಿಸೋಣ.
  5. ಸಮಾಜ ಒಟ್ಟಾಗಿ ಕೆಲಸ ಮಾಡಲಿ
    ಮಸೀದಿ, ಶಾಲೆ, ಮನೆ, ಸರ್ಕಾರ- ಎಲ್ಲರೂ ಸೇರಿ ನೈತಿಕತೆ ಬೆಳೆಸಬೇಕು.

ಸಮಾಪ್ತಿ!

ಸಮಾಜ ಹಾಳಾಗಿದೆ ಎಂದು ಕೇವಲ ಅಳುವುದರಿಂದ ಪ್ರಯೋಜನವಿಲ್ಲ. ಬದಲಾವಣೆ ನನ್ನಿಂದಲೇ ಆರಂಭವಾಗಬೇಕು. ನಾನು ಸರಿ ಆಗಿದ್ದರೆ ನನ್ನ ಮನೆ ಸರಿ ಆಗುತ್ತದೆ. ಮನೆ ಸರಿ ಆಗಿದ್ದರೆ ಸಮಾಜ ಸರಿ ಆಗುತ್ತದೆ. ಇಸ್ಲಾಂ ಕೇವಲ ಭಾಷಣಗಳ ಧರ್ಮವಲ್ಲ; ಅದು ಕಾರ್ಯದಲ್ಲಿ ಮಾಡಿ ತೋರಿಸುವ ಧರ್ಮ. ಅಲ್ಲಾಹ್ ನಮ್ಮ ಹೃದಯಗಳನ್ನು ಶುದ್ಧ ಗೊಳಿಸಿ, ನಮ್ಮ ಸಮಾಜವನ್ನು ನೈತಿಕತೆ, ನ್ಯಾಯ ಮತ್ತು ತಕ್ವಾದ ದಾರಿಯಲ್ಲಿ ನಡೆಸಲಿ.