ಉತ್ತರಾಧಿಕಾರ: ಮುಸ್ಲಿಮ್ ಮಹಿಳೆ ಸಂತ್ರಸ್ತಳೇ?

0
308

✍️ ಏ.ಕೆ. ಕುಕ್ಕಿಲ

ಹೆಣ್ಣು ಮತ್ತು ಗಂಡಿನ ನಡುವೆ ಇಸ್ಲಾಮ್ ತಾರತಮ್ಯ ನೀತಿಯನ್ನು ಅನುಸರಿಸುತ್ತದೆ ಎಂದು ಆರೋಪಿಸುವವರು ಅದಕ್ಕೆ ಪುರಾವೆಯಾಗಿ ಉತ್ತರಾಧಿಕಾರ ನಿಯಮವನ್ನು ಉಲ್ಲೇಖಿಸುತ್ತಾರೆ. ಆಸ್ತಿಯಲ್ಲಿ ಗಂಡಿಗೆ ಎರಡು ಪಾಲು ಸಿಗುವಾಗ ಹೆಣ್ಣಿಗೆ ಕೇವಲ ಒಂದೇ ಪಾಲು ಸಿಗುತ್ತದೆ ಎಂದು ಹೇಳುತ್ತಾರೆ ಅಥವಾ ಹೆಣ್ಣಿಗಿಂತ ಗಂಡಿಗೆ ದುಪ್ಪಟ್ಟು ಪಾಲು ಸಿಗುತ್ತದೆ ಎಂದು ವಿವರಿಸುತ್ತಾರೆ. ಇದಕ್ಕೆ ಆಧಾರವಾಗಿ ಪವಿತ್ರ ಕುರ್‌ಆನಿನ 4ನೇ ಅಧ್ಯಾಯ ಅನ್ನಿಸಾದ 11, 12 ಮತ್ತು 176ನೇ ವಚನಗಳನ್ನು ಮುಂದಿಡುತ್ತಾರೆ.

ಇದು ಸಂಪೂರ್ಣ ಸುಳ್ಳಲ್ಲ. ಆದರೆ ಸಂಪೂರ್ಣ ನಿಜವೂ ಇಲ್ಲ. ಅಂದಹಾಗೆ,

ಇಸ್ಲಾಮಿನ ಉತ್ತರಾಧಿಕಾರ ನಿಯಮವು ಲಿಂಗ ತಾರತಮ್ಯದಿಂದ ಕೂಡಿದ್ದು, ಇದನ್ನು ರದ್ದುಪಡಿಸಬೇಕು ಎಂದು ಕೋರಿ ಪೌಲೋಮಿ ಪಾವಿನಿ ಶುಕ್ಲ ಮತ್ತು ನಯಾ ನಾರಿ ಫೌಂಡೇಶನ್‌ಗಳು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಮಾರ್ಚ್ 10ರಂದು ಸುಪ್ರೀಮ್ ಕೋರ್ಟ್ ವಿಚಾರಣೆ ನಡೆಸಿದೆ. ಇಸ್ಲಾಮಿನ ಉತ್ತರಾಧಿಕಾರ ನಿಯಮಗಳು ಮಹಿಳೆಗಿಂತ ಎರಡು ಪಟ್ಟು ಪಾಲನ್ನು ಪುರುಷನಿಗೆ ನೀಡುತ್ತಿದೆ ಮತ್ತು ಇದು ಸಂವಿಧಾನದ ಅನುಚ್ಛೇದ 14, 15 ಮತ್ತು 21ರ ಉಲ್ಲಂಘನೆ ಎಂದು ಅರ್ಜಿದಾರರ ಪರ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ವಾದಿಸಿದರು. ಶರೀಅತ್ ಕಾಯ್ದೆಯನ್ನು ರದ್ದುಗೊಳಿಸ ಬೇಕು ಮತ್ತು ಅದರ ಬದಲಿಗೆ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಭಾರತೀಯ ಉತ್ತರಾಧಿಕಾರ ಕಾಯ್ದೆಯನ್ನು ಅನ್ವಯಿಸ ಬೇಕು ಎಂದು ಆಗ್ರಹಿಸಿದರು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಹಾಗೂ ಆರ್. ಮಹಾದೇವನ್ ಅವರಿದ್ದ ಪೀಠವು ವಾದವನ್ನು ಆಲಿಸಿತಲ್ಲದೇ, ‘ಇಸ್ಲಾಮಿನ ಉತ್ತರಾಧಿಕಾರ ನಿಯಮ ವನ್ನು ರದ್ದುಗೊಳಿಸುವುದರಿಂದ ಕಾನೂನು ಶೂನ್ಯತೆ ಉಂಟಾಗಬಹುದು..’ ಎಂದು ಆತಂಕ ವ್ಯಕ್ತಪಡಿಸಿದೆ. ‘ಹಾಗೆ ಏಕಾಏಕಿ ರದ್ದುಪಡಿಸಿದರೆ ಮುಸ್ಲಿಮರಿಗೆ ಉತ್ತರಾಧಿಕಾರಕ್ಕೆ ಯಾವುದೇ ಕಾನೂನು ಉಳಿಯುವುದಿಲ್ಲ, ಆದ್ದರಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದೇ ಏಕೈಕ ಪರಿಹಾರ..’ ಎಂದು ಹೇಳಿದೆ ಮತ್ತು ಈ ಮೂಲಕ ಈ ಜವಾಬ್ದಾರಿಯನ್ನು ಸಂಸತ್ತಿಗೆ ವರ್ಗಾಯಿಸುವ ಸೂಚನೆ ನೀಡಿದೆ.

ಇನ್ನೊಂದು ಪ್ರಕರಣವೂ ಸುಪ್ರೀಮ್ ಕೋರ್ಟ್‌ನಲ್ಲಿದೆ.

ಇಸ್ಲಾಮನ್ನು ತ್ಯಜಿಸಿರುವ ಕೇರಳದ ಸಫಿಯಾ ಎಂಬವರು ಸುಪ್ರೀಮ್ ಕೋರ್ಟ್‌ನಲ್ಲಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ನನ್ನ ಸಂಪೂರ್ಣ ಆಸ್ತಿಯನ್ನು ಮಗಳಿಗೆ ನೀಡಲು ನಾನು ಬಯಸುತ್ತೇನೆ, ಆದರೆ ಇಸ್ಲಾಮಿನ ಉತ್ತರಾಧಿಕಾರ ನಿಯಮ ಇದಕ್ಕೆ ಅಡ್ಡಿಯಾಗುತ್ತಿದೆ, ಆದ್ದರಿಂದ ಭಾರತೀಯ ಉತ್ತರಾಧಿಕಾರ ಕಾಯ್ದೆಯಂತೆ ನನ್ನ ಆಸ್ತಿಯನ್ನು ಹಂಚಿಕೆ ಮಾಡಲು ಅನು ಮತಿಸಬೇಕು… ಎಂದು ಅವರು ಕೋರಿದ್ದರು. ಈ ಅರ್ಜಿಯನ್ನು ಜನವರಿ 28, 2025ರಂದು ಸುಪ್ರೀಮ್ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿತು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ (ಈಗ ನಿವೃತ್ತರಾಗಿದ್ದಾರೆ) ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ. ವಿಶ್ವನಾಥನ್ ಅವರ ನ್ನೊಳಗೊಂಡ ಪೀಠವು ಈ ಬಗ್ಗೆ ವಾದ ಆಲಿಸಿತಲ್ಲದೇ, ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೇಳಿ 2025 ಮೇ ತಿಂಗಳಿಗೆ ವಿಚಾರಣೆಯನ್ನು ಮುಂದೂಡಿತು. ಆದರೆ, ಆ ಬಳಿಕ ವಿಚಾರಣೆ ನಡೆದಿಲ್ಲ. ಅಂದಹಾಗೆ,

ಮೃತಪಟ್ಟ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದು, ಅದರಲ್ಲಿ ಮಗಳಿಗಿಂತ ಮಗ ಎರಡು ಪಟ್ಟು ಪಾಲು ಪಡೆಯುತ್ತಾನೆ ಎಂದು ಹೇಳುವವರು ಇಸ್ಲಾಮಿನ ಉತ್ತರಾಧಿಕಾರ ನಿಯಮದ ತೀರಾ ತೀರಾ ಸಣ್ಣದೊಂದು ಭಾಗವನ್ನು ಮಾತ್ರ ದರ್ಶಿಸಿದ್ದಾರೆಯೇ ಹೊರತು ಅದರ ದೊಡ್ಡದೊಂದು ಭಾಗದ ಬಗ್ಗೆ ಅವರು ತಿಳುವಳಿಕೆಯನ್ನೇ ಹೊಂದಿಲ್ಲ ಎಂದೇ ಹೇಳಬಹುದು. ಇಸ್ಲಾಮಿನ ಉತ್ತರಾಧಿಕಾರ ನಿಯಮದ ಪ್ರಕಾರ ಗಂಡು ಮತ್ತು ಹೆಣ್ಣಿನ ನಡುವೆ 11 ಸಂದರ್ಭಗಳಲ್ಲಿ ಸಮಾನ ಪಾಲು ನೀಡಬೇಕಾಗುತ್ತದೆ. ಉದಾಹರಣೆಗೆ,

ಓರ್ವ ವ್ಯಕ್ತಿ ಮೃತಪಡುತ್ತಾರೆ ಎಂದಿಟ್ಟುಕೊಳ್ಳಿ. ಅವರಿಗೆ ಮಕ್ಕಳಿದ್ದಾರೆ ಮತ್ತು ತಂದೆ-ತಾಯಿಯೂ ಜೀವಂತವಿದ್ದಾರೆ ಎಂದಾದರೆ, ತಂದೆ ಮತ್ತು ತಾಯಿಗೆ ಒಟ್ಟು ಆಸ್ತಿಯ ಆರರಲ್ಲಿ ಒಂದು ಪಾಲನ್ನು (1/6) ಹಂಚಬೇಕಾಗುತ್ತದೆ. ಉಳಿದ ಆಸ್ತಿಯು ಮಕ್ಕಳು ಮತ್ತು ಇತರರಲ್ಲಿ ಹಂಚಿಕೆಯಾಗುತ್ತದೆ. ಇಲ್ಲಿ ಮೃತ ವ್ಯಕ್ತಿಯ ತಂದೆ ಮತ್ತು ತಾಯಿಯನ್ನು ಲಿಂಗ ತಾರತಮ್ಯವಿಲ್ಲದೆ ಸಮಾನವಾಗಿ ಕಾಣಲಾಗಿದೆ. ಇನ್ನೊಂದು ಉದಾಹರಣೆ,

ಮೃತ ವ್ಯಕ್ತಿಗೆ ತಂದೆ ಅಥವಾ ಮಕ್ಕಳಿಲ್ಲ ಎಂದಿಟ್ಟುಕೊಳ್ಳಿ. ಅವರ ತಾಯಿಯ ಕಡೆಯಿಂದ ಬಂದ ಒಬ್ಬನೇ ಸಹೋದರ ಮತ್ತು ಒಬ್ಬಳೇ ಸಹೋದರಿ ಇದ್ದರೆ ಅವರಿಬ್ಬರಿಗೂ ಸಮಾನವಾಗಿ ಆರರಲ್ಲಿ ಒಂದು ಪಾಲನ್ನು (1/6) ಹಂಚಬೇಕಾಗುತ್ತದೆ. ಇಲ್ಲಿ ಸಹೋದರ ಮತ್ತು ಸಹೋದರಿ ನಡುವೆ ಲಿಂಗ ತಾರತಮ್ಯ ಮಾಡುವಂತಿಲ್ಲ. ಇದನ್ನು ಪವಿತ್ರ ಕುರ್‌ಆನಿನ ಅಧ್ಯಾಯ 4ರ 11ನೇ ವಚನದಲ್ಲಿ ವಿವರಿಸಲಾಗಿದೆ. ಇನ್ನು,
ಗಂಡಿಗಿಂತ ಹೆಣ್ಣು ಹೆಚ್ಚು ಪಾಲು ಪಡೆಯುವ 14 ಸನ್ನಿವೇಶಗಳು ಇಸ್ಲಾಮೀ ಉತ್ತರಾಧಿಕಾರ ಕಾಯ್ದೆಯಲ್ಲಿದೆ. ಉದಾಹರಣೆಗೆ,

ಮೃತಪಟ್ಟ ವ್ಯಕ್ತಿಗೆ ಒಬ್ಬಳೇ ಮಗಳಿದ್ದಾಳೆ ಮತ್ತು ಅವರಿಗೆ ಹಲವು ಸಹೋದರರು ಇದ್ದಾರೆ ಎಂಬ ಪರಿಸ್ಥಿತಿಯಲ್ಲಿ ಗಂಡಿಗಿಂತ ಹೆಚ್ಚು ಪಾಲನ್ನು ಹೆಣ್ಣು ಪಡೆಯುತ್ತಾಳೆ. ಮೃತ ವ್ಯಕ್ತಿಯ ಮಗಳಿಗೆ ಆಸ್ತಿಯಲ್ಲಿ ಅರ್ಧದಷ್ಟು ಸಿಗುತ್ತದೆ. ಅಂದರೆ ನೂರು ರೂಪಾಯಿಯಲ್ಲಿ 50 ರೂಪಾಯಿಯನ್ನು ಮಗಳೋರ್ವಳೇ ಪಡೆಯುತ್ತಾಳೆ. ಉಳಿದ 50 ರೂಪಾಯಿಯನ್ನು ಆ ಸಹೋದರರಲ್ಲಿ ಹಂಚಿಕೆ ಮಾಡಬೇಕಾಗುತ್ತದೆ. ಇನ್ನೊಂದು ಉದಾಹರಣೆ,

ಮೃತಪಟ್ಟ ಮಹಿಳೆಗೆ ಒಬ್ಬಳೇ ಮಗಳಿದ್ದಾಳೆ ಮತ್ತು ಗಂಡ ಕೂಡ ಜೀವಂತ ಇದ್ದಾರೆ ಎಂದಿಟ್ಟುಕೊಳ್ಳಿ. ಆಗ ಆ ಮಗಳು ಆಸ್ತಿಯ ಅರ್ಧಭಾಗವನ್ನು ಪಡೆಯುತ್ತಾಳೆ. ಆದರೆ ಮಗಳ ತಂದೆ ಅಥವಾ ಮೃತಳ ಪತಿ ನಾಲ್ಕರಲ್ಲಿ ಒಂದು ಭಾಗವನ್ನು (1/4) ಮಾತ್ರ ಪಡೆಯುತ್ತಾರೆ. ಇಲ್ಲಿ ಹೆಣ್ಣು ಮತ್ತು ಗಂಡು ಎಂಬ ಲಿಂಗಾಧಾರಿತ ಮಾಪಕದಲ್ಲಿ ನೋಡಿದರೆ ಹೆಣ್ಣಿನ ಪಾಲು ಗಂಡಿಗಿಂತ ಅಧಿಕವಿದೆ. ಇನ್ನೊಂದು ಉದಾಹರಣೆ,

ಮೃತ ವ್ಯಕ್ತಿಗೆ ಮಕ್ಕಳಿಲ್ಲ ಮತ್ತು ಒಬ್ಬಳೇ ಸಹೋದರಿ ಇದ್ದಾಳೆ ಎಂದಿಟ್ಟುಕೊಳ್ಳಿ. ಆಗ ಒಟ್ಟು ಆಸ್ತಿಯ ಅರ್ಧಭಾಗವನ್ನು ಆಕೆಯೋರ್ವಳೇ ಪಡೆಯುತ್ತಾಳೆ. ಆದರೆ ಮೃತ ವ್ಯಕ್ತಿಯ ಸಹೋದರ ಸಂಬಂಧಿ ಪುರುಷರು ಆಕೆಗಿಂತ ಕಡಿಮೆ ಪಾಲನ್ನು ಪಡೆಯುತ್ತಾರೆ. ಇಲ್ಲೂ ಲಿಂಗಾಧಾರಿತ ಮಾಪಕವನ್ನು ಅನ್ವಯಿಸಿ ನೋಡಿದರೆ ಹೆಣ್ಣಿಗೆ ಹೆಚ್ಚು ಪಾಲು ಸಿಗುತ್ತದೆ. ಇನ್ನು,

ಕೆಲವು ಅಪರೂಪದ ಮತ್ತು ನಿರ್ದಿಷ್ಟ ಸನ್ನಿವೇಶಗಳಲ್ಲಿ ಹೆಣ್ಣು ಪಾಲು ಪಡೆಯುತ್ತಾಳೆ ಮತ್ತು ಅದೇ ಸ್ಥಾನದಲ್ಲಿರುವ ಗಂಡು ಪಾಲಿನಿಂದ ವಂಚಿತನಾಗುತ್ತಾನೆ. ಇದು ಬಹಿರಂಗಕ್ಕೆ ಅಚ್ಚರಿಯಂತೆ ಕಂಡರೂ ಇದರ ಹಿಂದೆ ತತ್ವಗಳು ಅಡಗಿವೆ. ಮೃತರಿಗೆ ಅವರು ಹತ್ತಿರದ ಸಂಬಂಧಿ ಎಂಬ ನೆಲೆಯಲ್ಲಿ ಈ ಆಸ್ತಿ ಹಂಚಿಕೆ ನಡೆಯುತ್ತದೆ. ಉದಾಹರಣೆಗೆ,

ಮೃತ ವ್ಯಕ್ತಿಗೆ ಹತ್ತಿರದ ಸಂಬಂಧಿಕರಾಗಿ ತಂದೆಯಾಗಲಿ ಮಕ್ಕಳಾಗಲಿ ಪತ್ನಿಯಾಗಲಿ ಇಲ್ಲದೇ ಇರುವಾಗ ಅವರ ಆಸ್ತಿಯ ಹಕ್ಕುದಾರರಾಗಿ ಅವರ ಸಹೋದರಿಯ ಮಕ್ಕಳು ಪರಿಗಣನೆಗೆ ಒಳಪಡುತ್ತಾರೆ. ಆದರೆ ಸಹೋದರಿಯ ಮಗಳು ಮಾತ್ರ ವಾರಸು ದಾರಳಾಗಿ ಪರಿಗಣಿಸಲ್ಪಡುತ್ತಾಳೆಯೇ ಹೊರತು ಮಗ ಆ ವ್ಯಾಪ್ತಿಯಿಂದ ಹೊರಗುಳಿಯುತ್ತಾರೆ. ಇನ್ನು,

ಇಲ್ಲಿ ಚರ್ಚೆಗೆ ಒಳಗಾಗದ ಇನ್ನೊಂದು ಸಂಗತಿಯಿದೆ. ಮೃತಪಟ್ಟ ವ್ಯಕ್ತಿಯ ಆಸ್ತಿಯ ಹಂಚಿಕೆಯ ಸಮಯದಲ್ಲಿ ಗಂಡಿಗೆ ಹೆಣ್ಣಿಗಿಂತ ದುಪ್ಪಟ್ಟು ಪಾಲು ಸಿಗುತ್ತದೆಯೇ ಹೊರತು ವ್ಯಕ್ತಿ ಜೀವಂತ ಇರುವಾಗಲೇ ಆಸ್ತಿಯನ್ನು ಪಾಲು ಮಾಡುವುದಾದರೆ, ಆ ವ್ಯತ್ಯಾಸ ಮಾಡಬೇಕಿಲ್ಲ. ಮಗ ಮತ್ತು ಮಗಳಲ್ಲಿ ಸಮಾನವಾಗಿ ಆಸ್ತಿಯನ್ನು ಹಂಚಿಕೆ ಮಾಡುವುದಕ್ಕೆ ಇಸ್ಲಾಮೀ ತತ್ವಗಳು ವಿರೋಧಿಯಾಗಿಲ್ಲ. ನಿಜವಾಗಿ,

ಉತ್ತರಾಧಿಕಾರಕ್ಕೆ ಸಂಬಂಧಿಸಿ ಪ್ರಚಲಿತ ದೃಷ್ಟಿಕೋನ ಏನಿದೆಯೋ ಅದಕ್ಕಿಂತ ತೀರಾ ಭಿನ್ನವಾದ ಮತ್ತು ಹೆಚ್ಚು ಸಮತೋಲಿತವಾದ ದೃಷ್ಟಿಕೋನವನ್ನು ಇಸ್ಲಾಮಿನ ಉತ್ತರಾಧಿಕಾರ ತತ್ವಗಳು ಹೊಂದಿವೆ. ಇಸ್ಲಾಮಿನ ಉತ್ತರಾಧಿಕಾರ ತತ್ವಗಳು ಕೇವಲ ಹೆಣ್ಣು-ಗಂಡು ಎಂಬ ಲಿಂಗಾಧಾರಿತ ಆಧಾರದಲ್ಲಿ ರಚಿತವಾಗಿಲ್ಲ. ಮೃತ ವ್ಯಕ್ತಿಯೊಂದಿಗಿನ ಸಂಬಂಧದ ನಿಕಟತೆ ಮತ್ತು ಆರ್ಥಿಕ ಜವಾಬ್ದಾರಿಗಳ ಮೇಲೆ ಅದನ್ನು ರಚಿಸಲಾಗಿದೆ. ಇಸ್ಲಾಮ್ ಪುರುಷನ ಮೇಲೆ ಕುಟುಂಬದ ಸಂಪೂರ್ಣ ಆರ್ಥಿಕ ಭಾರವನ್ನು ಹೊರಿಸುತ್ತದೆ. ಪತ್ನಿ, ಮಕ್ಕಳು, ತಂದೆ-ತಾಯಿ ಎಲ್ಲರ ಆರ್ಥಿಕ ಜವಾಬ್ದಾರಿಯನ್ನು ಪುರುಷ ವಹಿಸಿಕೊಳ್ಳಬೇಕು. ಅವರ ಆಹಾರ, ಬಟ್ಟೆ-ಬರೆಯ ಖರ್ಚು ವೆಚ್ಚಗಳಿಂದ ತೊಡಗಿ ವೈದ್ಯಕೀಯ ಖರ್ಚುಗಳ ವರೆಗೆ ಎಲ್ಲದರ ಜವಾಬ್ದಾರಿಯನ್ನು ಪುರುಷ ವಹಿಸಿಕೊಳ್ಳಬೇಕು. ಆದರೆ,

ಮಹಿಳೆಗೆ ಈ ಯಾವ ಜವಾಬ್ದಾರಿಯೂ ಇಲ್ಲ. ಉದ್ಯೋಗ ಮಾಡುತ್ತಿದ್ದರೂ ಕುಟುಂಬ ನಿರ್ವಹಣೆಯ ಜವಾಬ್ದಾರಿಯಿಂದ ಆಕೆಯನ್ನು ಮುಕ್ತಗೊಳಿಸಲಾಗಿದೆ. ಆಕೆ ಎಷ್ಟೇ ಸಂಪಾದಿಸಿದರೂ ಅದು ಸಂಪೂರ್ಣವಾಗಿ ಆಕೆಯದ್ದೇ ಆಗಿರುತ್ತದೆ ಮತ್ತು ಅದನ್ನು ಆಕೆ ಬಯಸಿದಂತೆ ಖರ್ಚು ಮಾಡುವುದಕ್ಕೆ ಸ್ವತಂತ್ರಳಿರುತ್ತಾಳೆ. ಈ ತತ್ವದ ಅಡಿಯಲ್ಲಿ ಮಗನಿಗೆ ಎರಡು ಪಾಲು ಮತ್ತು ಮಗಳಿಗೆ ಒಂದು ಪಾಲು ಎಂಬುದನ್ನು ನಿಗದಿಪಡಿಸಲಾಗಿದೆ. ಈ ಒಂದು ಪಾಲನ್ನು ಮಗಳು ಪೂರ್ಣವಾಗಿ ಸ್ವಯಂ ಅನು ಭವಿಸಬಹುದು. ಆಸ್ತಿಯನ್ನು ಮಾರಿ ಉದ್ಯಮದಲ್ಲಿ ಹೂಡಿಕೆ ಮಾಡಬಹುದು. ಬಂದ ಲಾಭವನ್ನು ಸ್ವಯಂ ತಾನೋರ್ವಳೇ ಅನುಭವಿಸಬಹುದು. ಆ ಹಣದ ಮೇಲೆ ಗಂಡನಿಗೆ ಯಾವ ಅಧಿಕಾರವೂ ಇಲ್ಲ. ಆದರೆ,

ಗಂಡಿಗೆ ಸಿಗುವ ಎರಡು ಪಾಲಿನಲ್ಲಿ ಈ ತಂಗಿಯನ್ನು ಸಾಕುವ ಜವಾಬ್ದಾರಿಯೂ ಇರುತ್ತದೆ. ಆಕೆಯ ಬೇಕು-ಬೇಡಗಳನ್ನೆಲ್ಲ ಒದಗಿಸುವ ಜವಾಬ್ದಾರಿ ಗಂಡು ಮಗನ ಮೇಲಿರುತ್ತದೆ. ತಂಗಿಯನ್ನು ಮದುವೆ ಮಾಡಿಕೊಡುವ ಜವಾಬ್ದಾರಿಯೂ ಆತನ ಮೇಲಿರುತ್ತದೆ. ಶಿಕ್ಷಣದ ಜವಾಬ್ದಾರಿಯಿಂದ ಹಿಡಿದು ಆಹಾರ-ಬಟ್ಟೆಬರೆಗಳ ವರೆಗೆ ಎಲ್ಲದರ ಜವಾಬ್ದಾರಿಯನ್ನೂ ಎರಡು ಪಾಲು ಪಡೆದ ಗಂಡು ವಹಿಸಿಕೊಳ್ಳಬೇಕಾಗುತ್ತದೆ. ಇದು ಗಂಡಿನ ಮೇಲೆ ಕಡ್ಡಾಯ ಹೊಣೆಗಾರಿಕೆಯಾಗಿರುತ್ತದೆ. ಒಂದುವೇಳೆ,

ಈ ಎಲ್ಲವನ್ನೂ ಎದುರಿಟ್ಟುಕೊಂಡು ನೋಡಿದರೆ, ಗಂಡಿಗೆ ಸಿಗುವ ಎರಡು ಪಾಲಿಗಿಂತ ಹೆಣ್ಣಿಗೆ ಸಿಗುವ ಒಂದು ಪಾಲಿನಲ್ಲೇ ಹೆಚ್ಚು ಸುಖವಿದೆ ಎಂದೇ ಅನಿಸಬಹುದು. ಹೆಣ್ಣನ್ನು ಆರ್ಥಿಕ ಜವಾಬ್ದಾರಿಯಿಂದ ಮುಕ್ತಗೊಳಿಸಿದ ಇಸ್ಲಾಮ್, ಆಕೆಯನ್ನು ಸಾಂಸಾರಿಕ ಜಂಜಡದಿಂದ ಸ್ವತಂತ್ರಗೊಳಿಸಿದೆ. ಆದರೆ, ಇಸ್ಲಾಮಿನ ಉತ್ತರಾಧಿಕಾರದ ನಿಯಮಗಳನ್ನು ಹೆಣ್ಣು ಮತ್ತು ಗಂಡು ಎಂಬ ಲಿಂಗಾಧಾರಿತ ದೃಷ್ಟಿಕೋನದಿಂದ ಮಾತ್ರ ನೋಡುವವರಿಗೆ ಹೆಣ್ಣು ಸಂತ್ರಸ್ತಳಂತೆ ಕಾಣುತ್ತಾಳೆ. ಇಸ್ಲಾಮಿನ ಉತ್ತರಾಧಿಕಾರ ತತ್ವಗಳು ಪುರುಷ ಪರ ತತ್ವಗಳಂತೆ ಕಾಣುತ್ತವೆ. ಒಂದುವೇಳೆ,

ಇಸ್ಲಾಮ್ ಪುರುಷ ಪಕ್ಷಪಾತಿ ಆಗಿರುತ್ತಿದ್ದರೆ, ಈ ಮೇಲೆ ಉಲ್ಲೇಖಿಸಿರುವ ಉದಾಹರಣೆಗಳೂ ಸೇರಿದಂತೆ ಸುಮಾರು 30 ಸಂದರ್ಭಗಳಲ್ಲಿ ಹೆಣ್ಣಿಗೆ ಪುರುಷನಿಗಿಂತ ಹೆಚ್ಚು ಆದ್ಯತೆ ಸಿಕ್ಕಿರುವುದೇಕೆ ಎಂಬ ಪ್ರಶ್ನೆಯನ್ನು ಕೇಳಬೇಕಾಗುತ್ತದೆ. ಈ ಪ್ರಶ್ನೆಯೇ ಇಸ್ಲಾಮೀ ಉತ್ತರಾಧಿಕಾರದ ತತ್ವಗಳು ಲಿಂಗ ತಾರತಮ್ಯದಿಂದ ಕೂಡಿಲ್ಲ ಮತ್ತು ಆರ್ಥಿಕ ಜವಾಬ್ದಾರಿಯೇ ಈ ತತ್ವಗಳ ರಚನೆಯ ಮೂಲ ಆಧಾರವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.