ಟ್ರಂಪ್ ‘ರಕ್ತಚರಿತ್ರೆ’ ಮತ್ತು ತೈಲ-ಯುರೇನಿಯಂ ದಾಹ; ಅಮೆರಿಕದಲ್ಲೇ ಭುಗಿಲೆದ್ದ ‘ನೋ ಕಿಂಗ್ಸ್’ ಆಕ್ರೋಶ

0
1168

✍️ ಎಂ.ಆರ್. ಮಾನ್ವಿ

ಜಗತ್ತು ಇಂದು ಮಹಾಯುದ್ಧದ ಅಂಚಿನಲ್ಲಿ ನಿಂತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಟ್ಟುಬಿಡದ ಯುದ್ಧೋನ್ಮಾದ ಮತ್ತು ಇರಾನ್ ಮೇಲಿನ ಸತತ ದಾಳಿಗಳು ಜಾಗತಿಕ ಶಾಂತಿಯನ್ನು ಹದಗೆಡಿಸಿವೆ. ತೈಲ ಮತ್ತು ಯುರೇನಿಯಂ ಮೇಲಿನ ಹಪಾಹಪಿಯಿಂದಾಗಿ ಟ್ರಂಪ್ ಬರೆಯುತ್ತಿರುವ ಈ ‘ರಕ್ತಚರಿತ್ರೆ’ ಈಗ ಅವರ ಸ್ವಂತ ದೇಶದಲ್ಲೇ ಭಾರಿ ಪ್ರತಿರೋಧಕ್ಕೆ ಕಾರಣವಾಗಿದೆ.

ಅಮೆರಿಕದ ಇತಿಹಾಸದಲ್ಲೇ ಕಾಣದ ರೀತಿಯಲ್ಲಿ ಸುಮಾರು 80 ಲಕ್ಷದಿಂದ 1 ಕೋಟಿ ಜನ ರಸ್ತೆಗಿಳಿದು ಟ್ರಂಪ್ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಒಬ್ಬ ಅಧ್ಯಕ್ಷನಂತೆ ವರ್ತಿಸದೆ, ಒಬ್ಬ ಸರ್ವಾಧಿಕಾರಿ ಅಥವಾ ‘ರಾಜ’ನಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಅಮೆರಿಕದಲ್ಲಿ ‘ನೋ ಕಿಂಗ್ಸ್’ (ನಮಗೆ ರಾಜ ಬೇಡ) ಎಂಬ ಬೃಹತ್ ಚಳವಳಿ ಮೂರನೇ ಬಾರಿಗೆ ಆರಂಭವಾಗಿದೆ. ಈ ಕಿಚ್ಚು ಕೇವಲ ಅಮೆರಿಕಕ್ಕೆ ಸೀಮಿತವಾಗದೆ ಇಟಲಿಯ ರೋಮ್ ಮತ್ತು ಫ್ರಾನ್ಸ್‌ನ ಪ್ಯಾರಿಸ್ ನಗರಗಳಿಗೂ ವ್ಯಾಪಿಸಿದೆ. ಜಗತ್ತಿನ ಯಾವುದೇ ದೇಶವು ಯುದ್ಧವನ್ನು ಬಯಸುತ್ತಿಲ್ಲ, ಆದರೆ ಟ್ರಂಪ್ ಮಾತ್ರ ‘ಸಂಧಾನ ಇಲ್ಲವೇ ವಿನಾಶ’ ಎಂಬ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ.

ಈ ಸಂಘರ್ಷದ ಹಿಂದೆ ಕೇವಲ ರಾಜತಾಂತ್ರಿಕ ಕಾರಣಗಳಿಲ್ಲ, ಬದಲಾಗಿ ಇರಾನ್‌ನ ನೈಸರ್ಗಿಕ ಸಂಪತ್ತಿನ ಮೇಲಿನ ಹಸಿವು ಎದ್ದು ಕಾಣುತ್ತಿದೆ. ಇರಾನ್‌ನ ಶೇ. 90ರಷ್ಟು ತೈಲ ರಫ್ತಾಗುವ ‘ಖರ್ಗ್ ದ್ವೀಪ’ (Kharg Island) ಮತ್ತು ಅಲ್ಲಿನ 400 ಕೆ.ಜಿ ಸಮೃದ್ಧ ಯುರೇನಿಯಂ ಅನ್ನು ವಶಪಡಿಸಿಕೊಳ್ಳುವುದು ಟ್ರಂಪ್ ಅವರ ಗುಪ್ತ ಅಜೆಂಡಾ ಆಗಿದೆ. “ತೈಲವನ್ನು ವಶಪಡಿಸಿಕೊಳ್ಳುವುದು ನನ್ನ ದೊಡ್ಡ ಇಚ್ಛೆ” ಎಂದು ಟ್ರಂಪ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಇರಾನ್‌ನ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇಷ್ಟು ದಿನ ಇಸ್ರೇಲ್ ಪರವಾಗಿ ಯುದ್ಧಕ್ಕೆ ನಿಂತಿದ್ದ ಟ್ರಂಪ್‌ಗೆ ಈಗ ಬೆನ್ನಿಗೆ ಚೂರಿ ಹಾಕಿದ ಅನುಭವವಾಗುತ್ತಿದೆ. ಇರಾನ್ ವಿರುದ್ಧ ನೆಲದ ಮೇಲೆ ಯುದ್ಧ (Ground Operation) ಮಾಡಲು ಅಮೆರಿಕ ಸಿದ್ಧತೆ ನಡೆಸುತ್ತಿದೆ, ಆದರೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಮಾತ್ರ ತಮ್ಮ ಸೈನಿಕರನ್ನು ಈ ಯುದ್ಧಕ್ಕೆ ಕಳುಹಿಸಲು ನಿರಾಕರಿಸಿದ್ದಾರೆ. ಅಮೆರಿಕವೇ ಈ ಯುದ್ಧವನ್ನು ಏಕಾಂಗಿಯಾಗಿ ಎದುರಿಸಲಿ ಎಂದು ಇಸ್ರೇಲ್ ಕೈತೊಳೆದುಕೊಂಡಿರುವುದು ಟ್ರಂಪ್ ಆಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಟ್ರಂಪ್ ಯಾವಾಗಲಾದರೂ ಶಾಂತಿಯ ಮಾತನಾಡಿದರೆ, ಇಸ್ರೇಲ್ ತಕ್ಷಣವೇ ಇರಾನ್ ಮೇಲೆ ದಾಳಿ ನಡೆಸಿ ಸಂಧಾನದ ಹಾದಿಯನ್ನು ಬಂದ್ ಮಾಡುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ.
ಒಂದು ಕಡೆ ಅಮೆರಿಕ ‘ಆಪರೇಷನ್ ಪೆಂಟಗನ್’ ಮೂಲಕ ಐದು ಹಂತಗಳಲ್ಲಿ ಇರಾನ್ ಮೇಲೆ ದಾಳಿ ಮಾಡಲು ಬ್ಲೂಪ್ರಿಂಟ್ ಸಿದ್ಧಪಡಿಸುತ್ತಿದೆ.

ಆದರೆ ಇರಾನ್ ಸುಮ್ಮನೆ ಕುಳಿತಿಲ್ಲ. “ಅಮೆರಿಕದ ಸೈನಿಕರು ನಮ್ಮ ನೆಲಕ್ಕೆ ಕಾಲಿಟ್ಟರೆ ಅವರು ವಾಪಸ್ ಹೋಗುವುದು ಶವಪೆಟ್ಟಿಗೆಯಲ್ಲೇ” ಎಂದು ಇರಾನ್ ಸೇನೆ ಎಚ್ಚರಿಸಿದೆ. “ಜಹನ್ನಂಗೆ (ನರಕಕ್ಕೆ) ಸ್ವಾಗತ” ಎಂಬ ಫಲಕಗಳ ಮೂಲಕ ಇರಾನ್ ತನ್ನ ಪ್ರತಿರೋಧವನ್ನು ಸಾರಿದೆ. ಇದರ ನಡುವೆ ಉತ್ತರ ಕೊರಿಯಾದ ಕಿಮ್ ಜಂಗ್ ಉನ್ ಅಮೆರಿಕದ ಮೇಲೆ ದಾಳಿ ಮಾಡಬಲ್ಲ ಹೈಪರ್ಸೋನಿಕ್ ಕ್ಷಿಪಣಿಗಳ ಪರೀಕ್ಷೆ ನಡೆಸುವ ಮೂಲಕ ಟ್ರಂಪ್ ಅವರ ರಕ್ತದೊತ್ತಡವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಒಟ್ಟಾರೆಯಾಗಿ, ಅಮೆರಿಕದ ಒಳಗೆ ಗೃಹ ಯುದ್ಧದ ಭೀತಿ ಮತ್ತು ಹೊರಗೆ ಇರಾನ್-ಉತ್ತರ ಕೊರಿಯಾಗಳ ಸವಾಲುಗಳ ನಡುವೆ ಟ್ರಂಪ್ ಸಿಲುಕಿದ್ದಾರೆ. ಟ್ರಂಪ್ ಅವರ ಈ ಮೊಂಡುತನದ ನಿರ್ಧಾರಗಳು ಅಮೆರಿಕವನ್ನು ವಿನಾಶದತ್ತ ಕೊಂಡೊಯ್ಯುತ್ತವೆಯೇ ಅಥವಾ ಇರಾನ್ ಮೇಲೆ ವಿಧ್ವಂಸಕ ಕೃತ್ಯಗಳಿಗೆ ಸಾಕ್ಷಿಯಾಗುತ್ತವೆಯೇ ಎಂಬುದು ಈಗ ಜಗತ್ತಿನ ಮುಂದಿರುವ ದೊಡ್ಡ ಪ್ರಶ್ನೆ. ಸತ್ಯವೇನೆಂದರೆ, ಟ್ರಂಪ್ ಸೃಷ್ಟಿಸಿದ ಈ ರಕ್ತಚರಿತ್ರೆಗೆ ಈಗ ಸ್ವತಃ ಅಮೆರಿಕದ ಜನರೇ ಅಂತ್ಯ ಹಾಡಲು ರಸ್ತೆಗಿಳಿದಿದ್ದಾರೆ.