ಮುಸ್ಲಿಮರ ಮುಂದಿರುವ ರಾಜಕೀಯ ಪ್ರಾತಿನಿಧ್ಯದ ಸವಾಲು ಮತ್ತು ಪರಿಹಾರ

0
416

✍️ ಏ.ಕೆ. ಕುಕ್ಕಿಲ

ಚುನಾವಣೆಗಳು ಹತ್ತಿರ ಬರುವಾಗ ಮುಸ್ಲಿಮ್ ಸಮುದಾಯದಲ್ಲಿ ತಲ್ಲಣಗಳು ಪ್ರಾರಂಭವಾಗುತ್ತವೆ. ಅಸ್ತಿತ್ವದ ಭಯ ಕಾಡತೊಡಗುತ್ತದೆ. ರಾಜಕೀಯ ಪ್ರಾತಿನಿಧ್ಯದ ಕೊರತೆಯು ಚರ್ಚೆಯ ಆದ್ಯತೆಯಾಗಿ ಮಾರ್ಪಡುತ್ತದೆ. ಟಿಕೆಟ್ ವಿತರಣೆಯ ವೇಳೆ ರಾಜಕೀಯ ಪಕ್ಷಗಳು ಮುಸ್ಲಿಮ್ ಸಮುದಾಯವನ್ನು ಕಡೆಗಣಿಸುತ್ತಿವೆ ಎಂಬ ಆಕ್ರೋಶ ವ್ಯಕ್ತವಾಗುತ್ತದೆ. ಪರ್ಯಾಯ ರಾಜಕೀಯದ ಮಾತುಗಳಾಗುತ್ತದೆ. ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗಳಲ್ಲಿ ಬರಹಗಳು, ವೀಡಿಯೋಗಳು ಮತ್ತು ವಾಯ್ಸ್ ಮೆಸೇಜ್‌ಗಳು ರಾಶಿ ರಾಶಿಯಾಗಿ ಬೀಳತೊಡಗುತ್ತವೆ. ಸಮು ದಾಯದಲ್ಲಿ ಹಲವು ನಾಯಕರು ದಿಗ್ಗನೆ ಕಾಣಿಸಿಕೊಳ್ಳುತ್ತಾರೆ. ನಾಮಪತ್ರ ಸಲ್ಲಿಸುತ್ತಾರೆ. ಭಾಷಣಗಳಾಗುತ್ತದೆ. ಹೀಗೆ ಗೌಜಿ-ಗದ್ದಲಗಳ ನಡುವೆಯೇ ಚುನಾವಣೆ ಕೊನೆಗೊಳ್ಳುತ್ತದೆ. ಅಲ್ಲಿಗೇ ಈ ಎಲ್ಲ ಚರ್ಚೆಗಳೂ ಕೊನೆಗೊಳ್ಳುತ್ತವೆ. ಮತ್ತೆ ಮುಸ್ಲಿಮ್ ಸಮುದಾಯ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿಕೊಳ್ಳಬೇಕಾದರೆ ಇನ್ನೊಂದು ಚುನಾವಣೆ ಬರಬೇಕು. ಹಾಗಂತ,

ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ ಕೊರತೆಗೆ ಕಾರಣ ಏನು ಎಂಬ ಪ್ರಶ್ನೆಯೊಂದು ಸದಾ ಸಮುದಾಯವನ್ನು ಕಾಡುತ್ತಲೇ ಇದೆ. ಇನ್ನೊಂದು ಪ್ರಶ್ನೆ ಏನೆಂದರೆ, ರಾಜಕೀಯ ಪ್ರಾತಿನಿಧ್ಯದ ಅಗತ್ಯ ಏನು ಎಂಬುದು. ಎರಡನೇ ಪ್ರಶ್ನೆಯನ್ನು ಮೊದಲು ಎತ್ತಿಕೊಳ್ಳೋಣ.

ಒಂದು ಉದಾಹರಣೆ,

ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ನಾಗಾಲ್ಯಾಂಡ್ ನಲ್ಲಿ ಇತ್ತೀಚೆಗೆ ಬೃಹತ್ ಪ್ರತಿಭಟನೆ ನಡೆಯಿತು. ನಾಗಾ ಸ್ಟೂಡೆಂಟ್ ಫೆಡರೇಶನ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನಾಗಾಲ್ಯಾಂಡ್ ಕ್ರಿಶ್ಚಿಯನ್ ಫಾರಂ, ಕ್ಯಾಥೋಲಿಕ್ ಅಸೋಸಿಯೇಶನ್ ಫಾರ್ ನಾಗಾಲ್ಯಾಂಡ್, ನಾಗಾಲ್ಯಾಂಡ್ ಕ್ರಿಶ್ಚಿಯನ್ ರಿವೈವಲ್ ಚರ್ಚ್ ಮುಂತಾದ ಸಂಘಟನೆಗಳು ಭಾಗಿಯಾಗಿದ್ದುವು. ರಾಜಧಾನಿ ಕೊಹಿಮಾದಲ್ಲಿ ಬೃಹತ್ ಪ್ರತಿಭಟನೆ ನಡೆಯುವಾಗ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಅದೇ ದಿನ ಸಮಾನಾಂತರ ಪ್ರತಿಭಟನೆಗಳು ನಡೆದುವು. ಕೊಹಿಮಾದ ಓಲ್ಡ್ ಎಂ.ಎಲ್.ಎ. ಜಂಕ್ಷನ್‌ನಿಂದ ರಾಜಭವನ್‌ಗೆ ಮೆರವಣಿಗೆ ನಡೆಯಿತು. ಆದರೆ,

ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆದರೂ ರಾಜ್ಯದ ಪೊಲೀಸರು ಲಾಠಿಚಾರ್ಜ್ ನಡೆಸಲಿಲ್ಲ. ಅಲ್ಲಿನ 11 ಮಂದಿ ಬಿಜೆಪಿ ಶಾಸಕರಲ್ಲಿ ಒಬ್ಬರೂ ಈ ಪ್ರತಿಭಟನಾಕಾರರನ್ನು ದೇಶ ದ್ರೋಹಿಗಳು ಎಂದು ಹೇಳಲಿಲ್ಲ. ಪಾಕಿಸ್ತಾನಕ್ಕೆ ಹೋಗಿ ಎಂದು ಕರೆ ಕೊಡಲಿಲ್ಲ. ಮುಖ್ಯಮಂತ್ರಿ ನಿಫಿಯು ರಿಯೋ ಅವರೂ ಈ ಪ್ರತಿಭಟನಾಕಾರರನ್ನು ದೂಷಿಸಲಿಲ್ಲ. ಅವರ ದೇಶಪ್ರೇಮವನ್ನು ಪ್ರಶ್ನಿಸಲಿಲ್ಲ. ‘ಈ ಗೀತೆಯು ಮಾತೃಭೂಮಿಯನ್ನು ಹಿಂದೂ ದೇವಿಯಂತೆ ವರ್ಣಿಸುತ್ತದೆ, ದೇವತಾರಾಧನೆಗೆ ಬಲವಂತ ಪಡಿಸುತ್ತದೆ, ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ…’ ಎಂದು ಪ್ರತಿ ಭಟನಾಕಾರರು ಹೇಳಿದ್ದನ್ನು ಆಡಳಿತ ಪಕ್ಷವಾಗಲಿ ಅದನ್ನು ಬೆಂಬಲಿಸುತ್ತಿರುವ ಅಲ್ಲಿನ ಬಿಜೆಪಿಯಾಗಲಿ ತಪ್ಪು ಎಂದು ಹೇಳಿಯೂ ಇಲ್ಲ. ಇದಕ್ಕಿಂತ ಮೊದಲು ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಈ ಹಾಡನ್ನು ಹಾಡದೇ ಕುಳಿತೇ ಇದ್ದಾಗಲೂ ಇವರಾರೂ ಅದನ್ನು ದೇಶದ್ರೋಹದಂತೆ ಕಾಣಲೂ ಇಲ್ಲ. ಅದರ ಬದಲು ವಿಧಾನ ಸಭೆಯಲ್ಲಿ ಈ ಹಾಡಿನ ಬಗ್ಗೆ ಚರ್ಚೆ ನಡೆದು ವಿಷಯವನ್ನು ಮುಖ್ಯಮಂತ್ರಿಯವರ ಆಯ್ಕೆ ಸಮಿತಿಗೆ ಒಪ್ಪಿಸಿದರು. ನಿಮಗೆ ಗೊತ್ತಿರಲಿ,

ನಾಗಾಲ್ಯಾಂಡ್‌ನ ಆಡಳಿತಾರೂಢ ಎನ್‌ಪಿಎಫ್ ಪಕ್ಷಕ್ಕೆ ಬಿಜೆಪಿಯ ಬೆಂಬಲವಿದೆ.

ಇಲ್ಲೊಂದು ಸೂಕ್ಷ್ಮ ಸಂಗತಿಯಿದೆ. ಮೂರೂವರೆ ಕೋಟಿ (2.3%)ಯಷ್ಟಿರುವ ಕ್ರೈಸ್ತರು ಈ ದೇಶದಲ್ಲಿ ಮೂರನೇ ಅತಿ ದೊಡ್ಡ ಧಾರ್ಮಿಕ ಸಮುದಾಯವಾಗಿದ್ದಾರೆ. ಜನಸಂಖ್ಯೆಯ ಅನುಪಾತಕ್ಕೆ ತಕ್ಕಂತೆ ಪಾರ್ಲಿಮೆಂಟ್‌ನಲ್ಲಿ ಕ್ರೈಸ್ತರಿಗೆ ಪ್ರಾತಿನಿಧ್ಯ ಸಿಗದೇ ಇದ್ದರೂ (10 ಸಂಸದರು) ಅವರು ಭಾರತೀಯ ರಾಜಕೀಯದಲ್ಲಿ ಪ್ರಭಾವಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ಜನಸಂಖ್ಯೆ ಭಾರತೀಯ ಮುಸ್ಲಿಮರಂತೆ ಚದುರಿ ಹೋಗಿಲ್ಲ ಅನ್ನುವುದು. ನಾಗಾಲ್ಯಾಂಡ್‌ನಲ್ಲಿ 88% ಕ್ರೈಸ್ತರಿದ್ದಾರೆ. ಮಿಝೋರಾಮ್‌ನಲ್ಲಿ 87% ಕ್ರೈಸ್ತರಿದ್ದಾರೆ. ಮೇಘಾಲಯದಲ್ಲಿ 75% ಕ್ರೈಸ್ತರಿದ್ದಾರೆ. ಈ ಮೂರೂ ರಾಜ್ಯಗಳಲ್ಲಿಯೂ ಸ್ಥಳೀಯ ಪಕ್ಷಗಳ ಮೈತ್ರಿಕೂಟವೇ ಅಧಿಕಾರದಲ್ಲಿದೆ. ಮಿಝೋರಾಮ್ ಒಂದು ಬಿಟ್ಟರೆ ಉಳಿದೆರಡು ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ಪಾಲುದಾರ ಪಕ್ಷವಾಗಿದೆ. ಗೋವಾದಲ್ಲಿ 25% ಕ್ರೈಸ್ತರಿದ್ದಾರೆ. ಅರುಣಾಚಲ ಪ್ರದೇಶದಲ್ಲಿ 30% ಕ್ರೈಸ್ತರಿದ್ದಾರೆ. ಮಣಿಪುರದಲ್ಲಿ 41% ಕ್ರೈಸ್ತರಿದ್ದಾರೆ. ಕೇರಳದಲ್ಲಿ 18% ಕ್ರೈಸ್ತರಿದ್ದಾರೆ. ಪಾರ್ಲಿಮೆಂಟ್ ಪ್ರವೇಶಿಸಿದ 10 ಮಂದಿಯಲ್ಲಿ 5 ಮಂದಿ ಕೇರಳದಿಂದಲೇ ಬಂದಿದ್ದಾರೆ. ಉಳಿದವರು ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಮಿಝೋರಾಂಗಳಿಂದ ಆಯ್ಕೆಯಾಗಿದ್ದಾರೆ. ನಿಜವಾಗಿ,

ಕ್ರೈಸ್ತರ ಜನಸಂಖ್ಯೆಯು ಚದುರದೇ ಒಂದೇ ಕಡೆ ನೆಲೆ ನಿಂತಿರುವುದರಿಂದ ಅವರನ್ನು ನಿರ್ಲಕ್ಷಿಸಿ ರಾಜಕೀಯ ಮಾಡುವ ಧೈರ್ಯ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ನಾಗಾಲ್ಯಾಂಡ್ ನಲ್ಲಿ ವಂದೇ ಮಾತರಂ ಪ್ರತಿಭಟನೆಯನ್ನು ಬಿಜೆಪಿ ಮೌನವಾಗಿ ವೀಕ್ಷಿಸಿರುವುದಕ್ಕೆ ಈ ವಾತಾವರಣವೇ ಕಾರಣವಾಗಿದೆ. ಆದರೆ,

ದೇಶದ ಎರಡನೇ ಅತೀ ದೊಡ್ಡ ಅಲ್ಪಸಂಖ್ಯಾತ ಸಮು ದಾಯವಾದ ಮುಸ್ಲಿಮರಿಗೆ ಇಂಥದ್ದೊಂದು ಅವಕಾಶವೇ ಇಲ್ಲ. ಅವರೆಲ್ಲ ದೇಶದ ಉದ್ದಕ್ಕೂ ಚದುರಿ ಹೋಗಿದ್ದಾರೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ಒಂದೇ ಒಂದು ರಾಜ್ಯ ದೇಶದಲ್ಲಿಲ್ಲ. ಲಕ್ಷದ್ವೀಪ ಮತ್ತು ಜಮ್ಮು-ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಮುಸ್ಲಿಮರು ಬಹುಸಂಖ್ಯಾತರಾಗಿದ್ದು, ಇದರಲ್ಲಿ ಲಕ್ಷದ್ವೀಪದಲ್ಲಿ 96% ಮುಸ್ಲಿಮರಿದ್ದಾರೆ. ಇಲ್ಲಿನ ಒಟ್ಟು ಜನಸಂಖ್ಯೆಯೇ ಕೇವಲ 64 ಸಾವಿರ. ಜಮ್ಮು-ಕಾಶ್ಮೀರದಲ್ಲಿ 68% ಮುಸ್ಲಿಮರಿದ್ದಾರೆ.

ಈ ಮಾಹಿತಿಗಳು ಒಂದು ಅಂಶವನ್ನು ಸ್ಪಷ್ಟಪಡಿಸುತ್ತದೆ.

ಕ್ರೈಸ್ತರ ಜನಸಂಖ್ಯೆಗೆ ಅನುಗುಣವಾಗಿ ಪಾರ್ಲಿಮೆಂಟ್‌ನಲ್ಲಿ ಪ್ರಾತಿನಿಧ್ಯ ಇಲ್ಲದೇ ಇದ್ದರೂ ಕೆಲವು ರಾಜ್ಯಗಳಲ್ಲಿ ಅವರೇ ಪ್ರಭಾವಿಯಾಗಿರುವುದರಿಂದ ಸಂಸತ್ ಪ್ರಾತಿನಿಧ್ಯದ ಕೊರತೆಯನ್ನು ಇದು ತುಂಬುತ್ತದೆ. ಅವರ ಧ್ವನಿಯನ್ನು ಈ ಜನಸಂಖ್ಯೆ ಪ್ರಭಾವಿತಗೊಳಿಸುತ್ತದೆ. ಎಲ್ಲ ರಾಜಕೀಯ ಪಕ್ಷಗಳೂ ಅವರನ್ನು ಪರಿಗಣಿಸಲೇಬೇಕಾದ ಅನಿವಾರ್ಯತೆಯನ್ನು ಉಂಟು ಮಾಡುತ್ತದೆ. ಆದರೆ,

ಮುಸ್ಲಿಮರಿಗೆ ಈ ಅವಕಾಶ ಇಲ್ಲದೇ ಇರುವುದರಿಂದ ಮತ್ತು ಹಿಂದುಳಿದ ಜಾತಿ ಮತ್ತು ವರ್ಗಗಳಿಗಿರುವಂತೆ ಮುಸ್ಲಿಮರಿಗೆ ಚುನಾವಣಾ ಮೀಸಲಾತಿ ಇಲ್ಲದೇ ಇರುವುದರಿಂದ ಅವರು ಪರಿಸ್ಥಿತಿಗೆ ಹೊಂದಿಕೊಂಡು ಸ್ಟ್ರಾಟಜಿಯನ್ನು ತಯಾರಿಸಬೇಕಾಗುತ್ತದೆ.

1. 2006ರಲ್ಲಿ ತಯಾರಿಸಲಾದ ಸಾಚಾರ್ ವರದಿ ಮತ್ತು ಆ ಬಳಿಕದ ಹಲವು ಅಧ್ಯಯನ ವರದಿಗಳು ಒಂದು ಮುಖ್ಯ ವಿಷಯದತ್ತ ಮುಸ್ಲಿಮ್ ಸಮುದಾಯದ ಗಮನವನ್ನು ಸೆಳೆದಿವೆ. ದೇಶದ ಸರಾಸರಿಗೆ ಹೋಲಿಸಿದರೆ, ಮುಸ್ಲಿಮ್ ಸಮುದಾಯದಲ್ಲಿ ಶಿಕ್ಷಣದ ಕೊರತೆಯಿದೆ. ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಲ್ಲಿ ಮುಸ್ಲಿಮರ ಅನುಪಾತ ಕಡಿಮೆ ಇದೆ. ನಿರುದ್ಯೋಗ ಇದೆ. ಆರ್ಥಿಕ ಸಬಲೀಕರಣದಲ್ಲಿ ಹಿಂದುಳಿದಿದೆ. ನಿಜವಾಗಿ,

ರಾಜಕೀಯ ನಾಯಕತ್ವದ ಅಭಾವದಲ್ಲಿ ಈ ಎಲ್ಲ ಕೊರತೆಗಳ ಪಾತ್ರ ಬಹಳ ದೊಡ್ಡದಿದೆ. ಶೈಕ್ಷಣಿಕವಾಗಿ ಬೆಳೆಯದ ಮತ್ತು ಆರ್ಥಿಕವಾಗಿ ಸಬಲವಾಗದ ಯಾವುದೇ ಸಮುದಾಯ ನಾಯಕರನ್ನು ಸೃಷ್ಟಿಸುವುದು ಕಷ್ಟಸಾಧ್ಯ. ಅಲ್ಲೊಂದು ಇಲ್ಲೊಂದು ನಾಯಕರು ತಯಾರಾಗಬಹುದಾದರೂ ನಾಯಕತ್ವದ ನಿರ್ವಾತವನ್ನು ತಡೆಯುವಲ್ಲಿ ಇಂಥ ಅಪರೂಪದ ನಾಯಕರು ಶಕ್ತವಾಗಲಾರರು. ಇನ್ನೊಂದು ಕಡೆ, ಆರ್ಥಿಕ ಚೈತನ್ಯವನ್ನು ಸಮುದಾಯ ಪಡಕೊಂಡರೂ ನಾಯಕತ್ವ ತಯಾರಿಗೆ ಒಂದು ಸ್ಟ್ರಾಟಜಿ ಇರಬೇಕಾದುದು ಅಗತ್ಯ ಎಂದೆನಿಸುತ್ತದೆ. ಮಸೀದಿ ಕೇಂದ್ರಿತವಾಗಿ ಮತ್ತು ಸಂಘಟನೆಗಳ ಮೂಲಕ ನಾಯಕತ್ವ ಕಾರ್ಯಾಗಾರ ನಡೆಸುವ ಪ್ರಯತ್ನಗಳು ನಡೆಯುತ್ತಲೇ ಇರಬೇಕು. ಮಸೀದಿಗಳು ಮತ್ತು ಸಂಘಟನೆಗಳ ನಾಯಕರು ತಮ್ಮ ಸದಸ್ಯರಲ್ಲಿ ನಾಯಕತ್ವ ಗುಣ ಇರುವವರನ್ನು ಗುರುತಿಸಿ ಬೆಳೆಸುವುದು ಮತ್ತು ತರಬೇತಿ ಕೊಡುವುದನ್ನು ಒಂದು ಕಡ್ಡಾಯ ಕರ್ಮವೆಂಬಂತೆ ಮಾಡಬೇಕು.

2. ಐಡೆಂಟಿಟಿ ರಾಜಕೀಯದಿಂದ ಇಶ್ಶೂ ಆಧಾರಿತ ರಾಜಕೀಯಕ್ಕೆ ಮುಸ್ಲಿಮ್ ಸಮುದಾಯ ಬದಲಾಗುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಉದ್ಯೋಗ, ಬೆಲೆ ಏರಿಕೆ, ಅಭಿವೃದ್ಧಿ, ಭದ್ರತೆ ಇತ್ಯಾದಿಗಳ ಮೇಲೆ ಮಾತಾಡುವವರನ್ನು ಮತ್ತು ಇವುಗಳ ಮೇಲೆ ಅಧಿಕೃತವಾಗಿ ಮಾತಾಡಬಲ್ಲ ಸಮರ್ಥರನ್ನು ತಯಾರಿಸ ಬೇಕು. ಮುಸ್ಲಿಮ್ ಸಹಿತ ಸಮಾಜದ ಎಲ್ಲರನ್ನೂ ಒಳಗೊಳ್ಳುವ ವಿಷಯಗಳ ಮೇಲೆ ಗಮನಹರಿಸಬೇಕು. ಮುಸ್ಲಿಮ್ ಸಮುದಾಯದ ಮೇಲೆ ಆಗುತ್ತಿರುವ ದಾಳಿಗಳು ಮತ್ತು ತಾರತಮ್ಯಗಳ ಬಗ್ಗೆ ಮಾತಾಡುವುದರ ಜೊತೆಗೇ ದಲಿತರು ಮತ್ತು ದುರ್ಬಲರನ್ನು ಈ ದೇಶ ನಡೆಸಿಕೊಳ್ಳುತ್ತಿರುವುದರ ಬಗ್ಗೆಯೂ ಅಷ್ಟೇ ಪ್ರಬಲವಾಗಿ ಮಾತಾಡುವ ಸಮರ್ಥರನ್ನು ತಯಾರಿಸಬೇಕು.

3. ಸ್ಥಳೀಯ ಸಂಸ್ಥೆಗಳ ಚುನಾವಣೆಯು ನಾಯಕರ ತಯಾರಿಯ ಪ್ರಬಲ ಮೆಟ್ಟಿಲಾಗಿರುತ್ತದೆ. ಇಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಉದಾರಿಯಾಗಿರುತ್ತವೆ. ಮಾತ್ರವಲ್ಲ, ರಾಜಕೀಯ ಪಕ್ಷಗಳನ್ನು ಅವಲಂಬಿಸದೆಯೇ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲಲು ಅವಕಾಶ ಇರುವುದೂ ಇಲ್ಲೇ. ಮುಸ್ಲಿಮ್ ಮತಗಳನ್ನು ಮಾತ್ರ ಅವಲಂಬಿಸದೇ ಸಮಾಜದ ಎಲ್ಲರ ಮತಗಳನ್ನೂ ಪಡೆಯ ಬಲ್ಲವರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸುವ ಮತ್ತು ಅವರ ಗೆಲುವಿಗಾಗಿ ಸಮಾಜದ ಎಲ್ಲ ಧರ್ಮೀಯರನ್ನೂ ಒಳಗೊಂಡ ಸಮಿತಿ ರಚಿಸುವ ಪ್ರಯತ್ನ ನಡೆಯಬೇಕು. ಹೀಗೆ ಒಂದು ಸಮಾಜವೇ ಓರ್ವ ಅಭ್ಯರ್ಥಿಯ ಪರ ನಿಲ್ಲುವುದೆಂದರೆ, ಅದನ್ನು ರಾಜಕೀಯ ಪಕ್ಷಗಳು ಆಸಕ್ತಿಯಿಂದ ನೋಡುತ್ತವೆ. ಸಮುದಾಯದಲ್ಲಿ ಓರ್ವ ನಾಯಕ ಬೆಳೆಯುತ್ತಿದ್ದಾನೆ ಎಂಬುದು ಅವುಗಳ ಗಮನಕ್ಕೆ ಬಂದರೆ ನಿಧಾನಕ್ಕೆ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಪ್ರಾತಿನಿಧ್ಯಕ್ಕೆ ಅದುವೇ ಮೆಟ್ಟಿಲಾಗುವುದಕ್ಕೆ ಅವಕಾಶ ಇದೆ.

4. ಸರಕಾರಿ ಸೌಲಭ್ಯಗಳನ್ನು ಸಮುದಾಯ ಯಥೇಚ್ಛವಾಗಿ ಬಳಸುವ ವ್ಯವಸ್ಥೆ ಮಾಡಬೇಕು. ಸರಕಾರ ಅಲ್ಪಸಂಖ್ಯಾತರಿಗೆಂದೇ ರಚಿಸಿದ ಯೋಜನೆಗಳ ಬಗ್ಗೆ ತಿಳಿದುಕೊಂಡು ಅದನ್ನು ಸಮುದಾಯಕ್ಕೆ ತಿಳಿಸುವ ಮತ್ತು ಅವರಿಗೆ ತಲುಪಿಸುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆಯಬೇಕು. ಇಂಥ ಪ್ರಯತ್ನದಲ್ಲಿ ತೊಡಗುವವರಿಗೆ ಸಮುದಾಯ ಮತ್ತು ಸಮಾಜದ ಸಂಪರ್ಕ ಆಗುತ್ತಿರುತ್ತದೆ. ಆದ್ದರಿಂದ ಇಂಥ ಕೆಲಸಕ್ಕೆ ನಾಯಕತ್ವ ಗುಣ ಇರುವವರನ್ನೇ ಆಯ್ಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಸಂಪರ್ಕವು ಮತವಾಗಿ ಪರಿವರ್ತಿತವಾಗುವಂತೆ ನೋಡಿಕೊಳ್ಳುವ ಜಾಣ್ಮೆಯೂ ಇಂಥವರಲ್ಲಿ ಇರಬೇಕಾಗುತ್ತದೆ. ಇದರ ಜೊತೆಗೇ ಇಂಥವರು ನಾಗರಿಕ ಹಕ್ಕು ಸಂಘಟನೆಗಳು ಸಹಿತ ವಿವಿಧ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ತಳಮಟ್ಟದ ಹೋರಾಟದಲ್ಲಿ ಭಾಗಿಯಾಗುತ್ತಿರಬೇಕು. ಅಂದಹಾಗೆ,

ರಾಜಕೀಯ ಪ್ರಾತಿನಿಧ್ಯದ ಹೆಚ್ಚಳವು ದಿನ ಬೆಳಗಾಗುವುದರ ಒಳಗೆ ನಡೆಯುವ ಪವಾಡ ಅಲ್ಲ. ಅದಕ್ಕೆ ದೀರ್ಘಕಾಲೀನ ಯೋಜನೆಗಳು ಮತ್ತು ಸಾಮಾಜಿಕ ಬದ್ಧತೆ ಬೇಕಾಗಿದೆ. ಒಂದೊಳ್ಳೆಯ ಸ್ಟ್ರಾಟಜಿಯೊಂದಿಗೆ ಮಸೀದಿ ಮತ್ತು ಸಂಘಟನೆ ಕೇಂದ್ರಿತವಾಗಿ ನಾಯಕತ್ವ ಗುಣವುಳ್ಳವರನ್ನು ಬೆಳೆಸುವ ಪ್ರಯತ್ನಗಳು ನಡೆದರೆ ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ಆರಂಭವನ್ನು ಒದಗಿಸಬಲ್ಲುದು.