ದುಬೈ ಕನ್ನಡಿಗರ ವತಿಯಿಂದ ದಿವಂಗತ ಸಮೀರ್ ಅನುಸ್ಮರಣೆ ಕಾರ್ಯಕ್ರಮ, ಭಾವುಕರಾದ ಕನ್ನಡಿಗರು

0
714

ಸನ್ಮಾರ್ಗ ವಾರ್ತೆ

ಇತ್ತೀಚೆಗೆ ಅಲ್ಪ ಕಾಲದ ಅಸೌಖ್ಯದಿಂದ ಅಗಲಿದ ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಾವರದ ಸಮೀರ್ ಶರೀಫ್ ರವರಿಗೆ ಅನಿವಾಸಿ ಕನ್ನಡಿಗರಿಂದ ಸಂತಾಪ ಸೂಚಿಸಲಾಯಿತು. ದುಬೈಯ ಫಾರ್ಚುನ್ ಪ್ಲಾಝ ಹೋಟೆಲ್ ನಲ್ಲಿ ಆಯೋಜಿಸಿದ್ದ ಅನುಸ್ಮರಣೆ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ನೂರಾರು ಕನ್ನಡಿಗರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 

ಜಾತಿ, ಧರ್ಮಗಳ ಎಲ್ಲೆ ಮೀರಿ ಸದಾ ತನ್ನನ್ನು ಸಮಾಜ ಸೇವೆ ಮತ್ತು ಸಾಹೋದರ್ಯತೆಗಾಗಿ ಒಟ್ಟು ಕೊಟ್ಟು ದುಡಿದ ಅನಿವಾಸಿ ಕನ್ನಡಿಗ ಸಮೀರ್ ರವರ ಅಕಾಲಿಕ ಮೃತ್ಯು ಅನಿವಾಸಿ ಕನ್ನಡಿಗರ ವಲಯದಲ್ಲಿ ತೀವ್ರ ನೋವನ್ನು ಉಂಟು ಮಾಡಿತ್ತು. ಅವರ ಅಗಲಿಕೆಯ ನೋವನ್ನು ವಿವರಿಸಲು ಅಸಾಧ್ಯ ಎಂದು ಎನ್ ಆರ್ ಐ ಫೋರಂ ಇದರ ಅಧ್ಯಕ್ಷರೂ ಫಾರ್ಚುನ್ ಹೋಟೆಲ್ ನ ಮಾಲೀಕರೂ ಆದ ಪ್ರವೀಣ್ ಶೆಟ್ಟಿ ಹೇಳಿದರು.

ಸಮೀರ್ ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಸಾಹೋದರ್ಯತೆಯಿಂದ ಬೆರೆತು ಸಮಾಜದಲ್ಲಿ ಕಷ್ಟ ಅನುಭವಿಸುವವರಿಗೆ, ಸಹಾಯ ಬೇಕಾದವರಿಗೆ ತನ್ನಿಂದಾಗುವ ಸಹಾಯವನ್ನು ಮಾಡುತ್ತಾ ಅದಕ್ಕಾಗಿ ಇತರರನ್ನು ಪ್ರೇರೇಪಿಸುವ ಮೂಲಕ ಒಂದು ಕ್ರಾಂತಿಯನ್ನೇ ಮಾಡಿದ್ದಾರೆ ಮತ್ತು ಅವರ ಅಗಲಿಕೆ ಅತೀವ ನೋವು ತಂದಿದೆ ಎಂದು ಅನೇಕ ಗಣ್ಯರು ಅಭಿಪ್ರಾಯ ಪಟ್ಟರು.

ದುಬೈಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಇನ್ಸ್ಯುರೆನ್ಸ್ ಸೇವೆ ಸಲ್ಲಿಸುತ್ತಿರುವ ಶ್ವೇತ ರವರು ಮಾತನಾಡುತ್ತಾ ಸಮೀರ್ ನೊಂದಿಗಿನ ಒಡನಾಟ ಮತ್ತು ಅವರ ಪ್ರೀತಿ ಹಾಗೂ ಕಾಳಜಿಯನ್ನು ಬಿಚ್ಚಿಟ್ಟು ಭಾವುಕರಾದರು.

ದುಬೈಯ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಶಶಿಧರ ನಾಗರಾಜಪ್ಪ ರವರು ಮಾತನಾಡುತ್ತಾ ಸಮೀರ್ ರಂತಹ ಒಬ್ಬ ನಿಷ್ಠಾವಂತ ವ್ಯಕ್ತಿಯನ್ನು ನಾವು ಕಳೆದು ಕೊಂಡಿದ್ದೇವೆ ಮತ್ತು ಅವರ ಸೇವೆಯನ್ನು ಮರೆಯಲು ಅಸಾಧ್ಯ ಎಂದು ಹೇಳುತ್ತಾ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾಡಿದ ಸೇವೆ ಮತ್ತು ಕೆಲಸದ ಮಧ್ಯೆ ಅವರು ಅನುಭವಿಸಿದ ನೋವನ್ನು ಸ್ಮರಿಸುತ್ತಾ ಅವರ ಹೆಸರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದರು.

ಬಿಸಿಸಿಐಯ ಅಧ್ಯಕ್ಷರಾದ ಹಿದಾಯತ್ ಅಡ್ಡೂರ್ ಮಾತನಾಡಿ ಅವರೊಂದಿಗಿದ್ದ ಒಡನಾಟ, ಪ್ರೀತಿ ಭಾಂದವ್ಯವನ್ನು ಸ್ಮರಿಸಿದರು. ಅವರು ತನಗಾಗಿ ಬದುಕುವುದರ ಬದಲು ಇತರರಿಗಾಗಿ ಬದುಕಿದ ಒಬ್ಬ ನಿಷ್ಠಾವಂತ ಕನ್ನಡಿಗ ಮತ್ತು ಅವರು ಬಿಟ್ಟು ಹೋದ ಹೊಣೆಗಾರಿಕೆಯನ್ನು ನಾವು ಅವರ ಹೆಸರಲ್ಲಿ ಮುಂದುವರಿಸುವುದಾಗಿ ಹೇಳಿದರು ಮತ್ತು ಏಪ್ರಿಲ್ ಹತ್ತೊಂಬತ್ತರಂದು ಅವರ ಸ್ಮರಣಾರ್ಥ ರಕ್ತದಾನ ಶಿಬಿರವನ್ನು ಆಯೋಜಿಸಲಾಗುವುದೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡಿಗರಾದ ಮಲ್ಲಿಕಾರ್ಜುನ್ ಗೌಡ, ನಸ್ರೀನ್ ಬಿಂತ್ ಅಹ್ಮದ್ ಬಾವ, ಬಿಸಿಎಫ್ ಇದರ ಉಪಾಧ್ಯಕ್ಷರಾದ ಎಮ್ ಈ ಮೂಳೂರು, ಕನ್ನಡ ಒಕ್ಕೂಟದ ಅರುಣ್ ಕುಮಾರ್, ಕನ್ನಡ ಸಂಘ ದುಬೈಯ ಉಪಾಧ್ಯಕ್ಷರಾದ ದಯಾ ಕೆರೋಡಿಯನ್, ಕಿರಣ್ ಗೌಡ, ದೀಪಕ್ ಪೂಜಾರಿ, ಅಬ್ದುಲ್ ಖಾಲಿಕ್, ಮುಸ್ತಾಖ್ ಕದ್ರಿ, ಉದ್ಯಮಿ ಸಲೀಂ ಮೂಡುಬಿದ್ರೆ, ಉದ್ಯಮಿ ಜೇಮ್ಸ್ ಮಂಡೋನ್ಸ ಹಾಗೂ ಇನ್ನಿತರ ಅನೇಕ ವ್ಯಕ್ತಿಗಳು ಮಾತನಾಡಿ ಅವರಿಗೆ ಶ್ರಾದ್ದಾ೦ಜಲಿ ಅರ್ಪಿಸಿದರು.

ಕಾರ್ಯಕ್ರಮದ ಮೊದಲು ಜನಾಝ ನಮಾಝನ್ನು ನಿರ್ವಹಿಸಲಾಯಿತು. ಸಮದ್ ಬಿರಾಲಿಯವರು ಸಮಾರೋಪ ಮಾಡಿ ಧನ್ಯವಾದವಿತ್ತರು.