ಸನ್ಮಾರ್ಗ ವಾರ್ತೆ
ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಮತಾಂತರದ ಆರೋಪಗಳಿಗೆ ಈಗ ದೊಡ್ಡ ತಿರುವು ಸಿಕ್ಕಿದೆ. ನಾಗರಿಕ ಹಕ್ಕುಗಳ ರಕ್ಷಣಾ ಸಂಘ ಅಥವಾ APCR ನಡೆಸಿದ ಸತ್ಯಶೋಧನಾ ವರದಿಯು ಈ ಎಲ್ಲಾ ಆರೋಪಗಳು ಆಧಾರರಹಿತ ಎಂದು ಹೇಳಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ನಿಡಾ ಖಾನ್ ಅವರು ಕಂಪನಿಯ ಎಚ್.ಆರ್ (HR) ಮ್ಯಾನೇಜರ್ ಎಂದು ಮಾಧ್ಯಮಗಳು ಬಿಂಬಿಸಿದ್ದವು. ಆದರೆ, ಈ ಸುದ್ದಿಯನ್ನು ಸ್ವತಃ ಟಿ.ಸಿ.ಎಸ್ ಸಿಇಒ ಕೆ. ಕೃತಿವಾಸನ್ ಅವರು ನಿರಾಕರಿಸಿದ್ದಾರೆ. ನಿಡಾ ಖಾನ್ ಒಬ್ಬ ಜೂನಿಯರ್ ಉದ್ಯೋಗಿಯಾಗಿದ್ದು, ಅವರಿಗೆ ಯಾವುದೇ ನೇಮಕಾತಿ ಜವಾಬ್ದಾರಿ ಇರಲಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ವರದಿಯ ಪ್ರಕಾರ, ಇದು ಕೇವಲ ಕೆಲಸದ ಸ್ಥಳದಲ್ಲಿ ನಡೆದ ಸಾಮಾನ್ಯ ವೈಯಕ್ತಿಕ ವಿವಾದವಾಗಿತ್ತು. ಆದರೆ ಕೆಲವು ಬಾಹ್ಯ ಶಕ್ತಿಗಳು ಮತ್ತು ಮಾಧ್ಯಮಗಳು ಇದನ್ನು ಉದ್ದೇಶಪೂರ್ವಕವಾಗಿ ಕೋಮುವಾದಗೊಳಿಸಿವೆ ಎಂದು ಎಪಿಸಿಆರ್ ತಂಡ ಗಂಭೀರವಾಗಿ ಆರೋಪಿಸಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನಲಾದ ಡ್ಯಾನಿಶ್ ಶೇಖ್ ಮತ್ತು ದೂರುದಾರ ಮಹಿಳೆಯ ನಡುವಿನ ವೈಯಕ್ತಿಕ ಸಂಬಂಧ ಹದಗೆಟ್ಟಿದ್ದೇ ಈ ಎಲ್ಲಾ ಗೊಂದಲಗಳಿಗೆ ಕಾರಣ ಎನ್ನಲಾಗಿದೆ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಎಫ್ಐಆರ್ಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಸತ್ಯಶೋಧನಾ ವರದಿಯು ಮಾತ್ರ ಈ ಪ್ರಕರಣವನ್ನು ಕಟ್ಟುಕಥೆ ಎಂದು ಕರೆದಿದೆ. ರಾಜಕೀಯ ಒತ್ತಡದಿಂದ ಮುಕ್ತವಾದ ನಿಷ್ಪಕ್ಷಪಾತ ತನಿಖೆಗೆ ಎಪಿಸಿಆರ್ ಆಗ್ರಹಿಸಿದೆ.”
ಬಜರಂಗದಳದಂತಹ ಸಂಘಟನೆಗಳು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ಪ್ರಕರಣವನ್ನು ದಾರಿತಪ್ಪಿಸಿವೆ ಎಂದು ಎಪಿಸಿಆರ್ (APCR) ವರದಿ ಬೆಟ್ಟು ಮಾಡಿದೆ. ಸದ್ಯಕ್ಕೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಆಂತರಿಕ ತನಿಖೆಗೆ ಆದೇಶಿಸಿದ್ದಾರೆ.












