✍️ ಖಾಸಿಂ ಸಾಬ್ ಎ.
ದಾವಣಗೆರೆ ಉಪಚುನಾವಣೆಯ ನಂತರದ ಕಾಂಗ್ರೆಸ್ ಪಕ್ಷದ ನಿಲುವು, ಮುಸ್ಲಿಮ್ ಮುಖಂಡರ ತಲೆದಂಡ, ಮುಸ್ಲಿಮ್ ಧಾರ್ಮಿಕ ಮುಖಂಡರ ಪ್ರತಿರೋದ ಇವುಗಳನ್ನು ಒಂದಷ್ಟು ಸೂಕ್ಷ್ಮವಾಗಿಗಮನಿಸಲು ‘ಇತಿಹಾಸದ ಮುಸ್ಲಿಮ್ ರಾಜಕಾರಣ’ ವನ್ನು ಅವಲೋಕಿಸಬೇಕಿದೆ.
ಭಾರತದ ಪ್ರಜಾಪ್ರಭುತ್ವದ ಶಕ್ತಿಯು ಅದರ ವೈವಿಧ್ಯದಲ್ಲಿದೆ ಎಂಬುದು ಸಾಮಾನ್ಯವಾಗಿ ಹೇಳಲಾಗುವ ಮಾತು. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ವೈವಿಧ್ಯವನ್ನು ಸ್ವೀಕರಿಸುವ ರಾಜಕಾರಣದ ಬದಲು ಗುರುತುಗಳ ರಾಜಕಾರಣವೇ ಹೆಚ್ಚು ಪ್ರಬಲವಾಗುತ್ತಿರುವುದು ಸ್ಪಷ್ಟವಾಗುತ್ತದೆ. ವಿಶೇಷವಾಗಿ ಮುಸ್ಲಿಂ ಸಮುದಾಯದ ರಾಜಕೀಯ ಸ್ಥಾನಮಾನ ಮತ್ತು ಪ್ರತಿನಿಧಿತ್ವದ ಪ್ರಶ್ನೆ ಇಂದು ಹೊಸ ಚರ್ಚೆಗೆ ಕಾರಣವಾಗಿದೆ.
ಒಬ್ಬ ವ್ಯಕ್ತಿ “ನಾನು ಮುಸ್ಲಿಂ” ಎಂಬ ಅಸ್ಮಿತೆಯನ್ನು ಘೋಷಿಸುವ ಕ್ಷಣದಲ್ಲಿ ಅವನು ಕೇವಲ ಧಾರ್ಮಿಕ ಗುರುತಿನ ವ್ಯಕ್ತಿಯಾಗಿಬಿಡುವುದಿಲ್ಲ; ಆ ಘೋಷಣೆಯೊಂದಿಗೆ ಧರ್ಮ, ದೇಶಭಕ್ತಿ, ರಾಜಕೀಯ ನಿಷ್ಠೆ ಮತ್ತು ರಾಷ್ಟ್ರೀಯತೆ ಕುರಿತ ಅನುಮಾನಗಳ ರಾಜಕಾರಣವೂ ಆರಂಭವಾಗುತ್ತದೆ. ಇದೇ ಭಾರತೀಯ ರಾಜಕೀಯದ ಇಂದಿನ ದುರಂತ. ಆದರೆ ಇದೇ ಸಂದರ್ಭ ಜಾತ್ಯತೀತ ರಾಜಕಾರಣಕ್ಕೆ ಹೊಸ ಅವಕಾಶವನ್ನೂ ನೀಡುತ್ತದೆ. ಮುಸ್ಲಿಂ ರಾಜಕಾರಣವು ತನ್ನನ್ನು ಕೇವಲ ಸಮುದಾಯದ ರಕ್ಷಣೆಗೆ ಸೀಮಿತಗೊಳಿಸದೇ, ಪ್ರಜಾಪ್ರಭುತ್ವದ ಸಮಾನ ಹಕ್ಕುಗಳ ಹೋರಾಟದ ಭಾಗವಾಗಬೇಕಾದ ಅಗತ್ಯ ಇಂದು ಹೆಚ್ಚಾಗಿದೆ.
ಮುಖ್ಯವಾಗಿ ಅರಿತುಕೊಳ್ಳಬೇಕಾದ ಸಂಗತಿ ಏನೆಂದರೆ, “ಏಕರೂಪಿ ಮುಸ್ಲಿಂ ರಾಜಕಾರಣ” ಎಂಬ ಕಲ್ಪನೆ ಕಾರ್ಯಸಾಧುವಲ್ಲ. ಭಾರತದಲ್ಲಿನ ಮುಸ್ಲಿಮರು ಒಂದೇ ಸಂಸ್ಕೃತಿ, ಭಾಷೆ ಅಥವಾ ಸಾಮಾಜಿಕ ಹಿನ್ನೆಲೆಯ ಸಮುದಾಯವಲ್ಲ. ಅವರು ರೈತರು, ನೇಕಾರರು, ಕಾರ್ಮಿಕರು, ಮಧ್ಯಮವರ್ಗದವರು, ಉದ್ಯಮಿಗಳು, ವಿದ್ಯಾರ್ಥಿಗಳು, ಬಹುಭಾಷ ಹಿನ್ನೆಲೆಯ ಅನೇಕ ವರ್ಗಗಳ ಸಂಕೀರ್ಣದ ಸಮೂಹ. ಏಕೀಕೃತ ವಲ್ಲದ ಮುಸ್ಲಿಮರ ಒಳಗಿನ ‘ಸಮುದಾಯಗಳು’ ಕಲ್ಪನೆಗಳ ವೈವಿಧ್ಯವನ್ನು ನಿರ್ಲಕ್ಷಿಸಿ ಮುಸ್ಲಿಮರನ್ನು ಧಾರ್ಮಿಕವಾಗಿ ಒಂದಾಗಿದ್ದರೂ ಸಾಮಾಜಿಕವಾಗಿ ಒಂದೇ ರಾಜಕೀಯ ಘಟಕವಾಗಿ ನೋಡುವುದು ವಾಸ್ತವಿಕತೆಯ ವಿರೋಧವಾಗುತ್ತದೆ. ಮುಸ್ಲಿಮರನ್ನು ಈ ಏಕರೂಪಗೊಳಿಸುವ ಪ್ರಯತ್ನಗಳು ವಾಸ್ತವದಲ್ಲಿ ಮತ್ತೊಂದು ರಾಜಕೀಯ ಕಥನಕ್ಕೆ ಬಲ ನೀಡುತ್ತದೆ.
ಹೀಗಾಗಿ ಆರೋಗ್ಯಕರ ಮುಸ್ಲಿಂ ರಾಜಕಾರಣವು ವಿಭಿನ್ನ ರಾಜಕೀಯ ಆಯ್ಕೆಗಳನ್ನು ಒಳಗೊಂಡಿರಬೇಕು. ಅದು ಮುಸ್ಲಿಮರಸ್ಟೆ ಹಿಂದುಳಿದ ಇತರೆ ದಲಿತ, ಆದಿವಾಸಿ, ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯ ರಾಜಕಾರಣದೊಂದಿಗೆ ಕೈಜೋಡಿಸಬೇಕಾಗಿದೆ. ಈ ಮೂಲಕ ಸಮಾನ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳು ಧರ್ಮದ ಗಡಿಗಳನ್ನು ಮೀರಿದ ‘ಸಾಮಾಜಿಕ ನ್ಯಾಯ’ ದ ಎಂಬ ಅರಿವು ಮೂಡುತ್ತದೆ ಕರ್ನಾಟಕದ ರಾಜಕೀಯ ಇತಿಹಾಸ ಇದಕ್ಕೆ ಸಾಕ್ಷಿ. ಹಿಂದಿನ ದಶಕಗಳಲ್ಲಿ ಜಾಫರ್ ಷರೀಫ್, ನಜೀರ್ ಸಾಬ್, ಅಜೀಜ್ ಸೇಠ್ ಮುಂತಾದ ನಾಯಕರು ಧರ್ಮದ ಪ್ರತಿನಿಧಿಗಳಾಗಿ ಅಲ್ಲ, ಸಾಮರ್ಥ್ಯ ಮತ್ತು ಸಾರ್ವಜನಿಕ ಸೇವೆಯ ಆಧಾರದ ಮೇಲೆ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಹಿಂದುತ್ವ ರಾಜಕೀಯ ಪ್ರಬಲವಾದ ನಂತರ ಮುಸ್ಲಿಂ ನಾಯಕತ್ವ ಕ್ರಮೇಣ ಅಂಚಿಗೆ ತಳ್ಳಲ್ಪಟ್ಟು, ಪ್ರಾತಿನಿಧಿಕ ಮಟ್ಟಕ್ಕೆ ಸೀಮಿತಗೊಂಡಿದೆ.
ಕೋಮು ಧ್ರುವೀಕರಣದ ರಾಜಕಾರಣವು ಹಂತ ಹಂತವಾಗಿ ನಿರ್ಮಿಸಲಾಯಿತು. ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ, ಬಾಬಾಬುಡನ್ಗಿರಿ ವಿಚಾರ, ಗೋಸಾಗಣೆ, ‘ಲವ್ ಜಿಹಾದ್’, ಗೋಮಾಂಸ ಮತ್ತು ಟಿಪ್ಪು ಜಯಂತಿ ವಿರೋಧ ಇಂತಹ ವಿಷಯಗಳನ್ನು ರಾಜಕೀಯವಾಗಿ ಮುಂದಿಟ್ಟುಕೊಂಡು ಮತಗಳ ಧ್ರುವೀಕರಣ ಸಾಧಿಸಲಾಯಿತು. ಇದರ ಪರಿಣಾಮವಾಗಿ ಮುಸ್ಲಿಮರನ್ನು ಸಹಪೌರರಾಗಿ ನೋಡುವ ದೃಷ್ಟಿಕೋನದ ಬದಲು, ಅವರನ್ನು ‘ಪರಕೀಯ’ರೆಂದು ಕಾಣುವ ಮನೋಭಾವ ಬಲವತ್ತಾಯಿತು. ಈ ರಾಜಕೀಯ ವಾತಾವರಣದ ಪರಿಣಾಮವಾಗಿ ದೇಶಾದ್ಯಂತ ಮುಸ್ಲಿಂ ರಾಜಕೀಯ ಪ್ರತಿನಿಧಿತ್ವ ಕುಸಿಯುತ್ತಿರುವುದು ಅಂಕಿಅಂಶಗಳಿಂದಲೇ ಸ್ಪಷ್ಟವಾಗುತ್ತದೆ. ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.14ರಷ್ಟು ಇದ್ದರೂ ಲೋಕಸಭೆಯಲ್ಲಿ ಮುಸ್ಲಿಂ ಸದಸ್ಯರ ಪ್ರಮಾಣ ಶೇ.5ಕ್ಕಿಂತ ಕಡಿಮೆಯಲ್ಲೇ ಉಳಿದಿದೆ. 1980ರಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಪ್ರತಿನಿಧಿತ್ವ ನಂತರ ಕ್ರಮೇಣ ಇಳಿಮುಖವಾಗಿದೆ. 2024ರ ಲೋಕಸಭೆಯಲ್ಲಿ ಕೇವಲ 24 ಮುಸ್ಲಿಂ ಸದಸ್ಯರು ಆಯ್ಕೆಯಾಗಿರುವುದು ಪ್ರಜಾಪ್ರಭುತ್ವದ ಸಮಾನ ಪ್ರತಿನಿಧಿತ್ವದ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದೆ.
ಇತರೆ ರಾಜ್ಯಗಳಲ್ಲಿಯೂ ಇದೇ ಧೋರಣೆ ಗೋಚರಿಸುತ್ತದೆ. ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲೂ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರತಿನಿಧಿತ್ವ ಇಲ್ಲ. ಕರ್ನಾಟಕದಲ್ಲಿಯೂ ಜನಸಂಖ್ಯೆಯ ಪ್ರಮಾಣಕ್ಕೆ ಹೋಲಿಸಿದರೆ ಶಾಸಕರ ಸಂಖ್ಯೆ ಕಡಿಮೆಯೇ ಇದೆ. ಇದು ಕೇವಲ ಒಂದು ಸಮುದಾಯದ ಸಮಸ್ಯೆಯಲ್ಲ, ಬದಲಿಗೆ ಪ್ರಜಾಪ್ರಭುತ್ವದ ಪ್ರತಿನಿಧಿತ್ವದ ಗುಣಮಟ್ಟದ ಪ್ರಶ್ನೆಯಾಗಿದೆ.
ಚಿಂತಾಜನಕ ಸಂಗತಿ ಏನೆಂದರೆ, ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದೇ ರಾಜಕೀಯವಾಗಿ ‘ಅಪಾಯ’ ಎಂಬ ಮನೋಭಾವವು ಹಲವಾರು ಜಾತ್ಯತೀತ ಪಕ್ಷಗಳಲ್ಲೂ ಬೆಳೆದುಬಂದಿದೆ. ಇದು ಚುನಾವಣಾ ಲೆಕ್ಕಾಚಾರದಲ್ಲಿ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳನ್ನು ಮೀರಿಸುತ್ತಿರುವುದನ್ನು ಸೂಚಿಸುತ್ತದೆ. ಇಂದು ಇಸ್ಲಾಮೋಫೋಬಿಯಾ ಎಂಬ ಭಾವನೆ ರಾಜಕೀಯ ಲಾಭದ ಸಾಧನವಾಗಿ ಬಳಕೆಯಾಗುತ್ತಿರುವುದು ದೀರ್ಘಾವಧಿಯಲ್ಲಿ ಸಾಮಾಜಿಕ ಏಕತೆಗೆ ಧಕ್ಕೆಯೇ ಆಗಿದೆ.ಆದರೆ, ಈ ಸಂದಿಗ್ತತೆಗೆ ಪರಿಹಾರ ಏನು ಎಂದು ಯೋಚಿಸಬೇಕಿದೆ. ಮುಸ್ಲಿಂ ರಾಜಕಾರಣವು ಪ್ರತ್ಯೇಕತೆಯ ರಾಜಕಾರಣವಾಗಬಾರದು. ಅದು ಒಳಗೊಳ್ಳುವ ರಾಜಕಾರಣವಾಗಬೇಕು. ಮುಸ್ಲಿಮರು ತಮ್ಮನ್ನು ಕೇವಲ ಧಾರ್ಮಿಕ ಸಮುದಾಯವಾಗಿ ಯಲ್ಲದೆ ಎಲ್ಲಾ ಜಾತಿ, ಧರ್ಮಗಳ ಶೋಷಿತರು, ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಮಹಿಳೆರನ್ನೂ ಒಳಗೊಂಡ ಬಹು ಗುರುತುಗಳೊಂದಿಗೆ ರಾಜಕೀಯವಾಗಿ ವ್ಯಕ್ತಪಡಿಸಬೇಕಾಗಿದೆ. ಇದೇ ಜಾತ್ಯತೀತ ರಾಜಕಾರಣದ ದೃಢ ನೆಲೆಯಾಗಿದೆ.
ಭಾರತದ ಸಂವಿಧಾನವು ಜಾತಿ ಅಥವಾ ಧರ್ಮಾಧಾರಿತ ರಾಷ್ಟ್ರದ ಕಲ್ಪನೆಯಲ್ಲದೆ ನಾಗರಿಕರ ಸಮಾನತೆಯನ್ನು ಆಧಾರವಾಗಿಟ್ಟ ರಾಷ್ಟ್ರವನ್ನು ನಿರ್ಮಿಸುವ ಕನಸುಗಂಡಿತ್ತು. ಆ ಕನಸು ಜೀವಂತವಾಗಿರಬೇಕಾದರೆ, ಯಾವುದೇ ಸಮುದಾಯದ ರಾಜಕೀಯದ ಅಳಿವು ಅಥವಾ ಅಂಚುಗೊಳಿಸುವಿಕೆ ಸಾಮಾನ್ಯ ಸಂಗತಿಯಾಗಬಾರದು. ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಬಹುಮತದ ಅಧಿಕಾರದಲಲ್ಲ ಅಲ್ಪಸಂಖ್ಯಾತರ ವಿಶ್ವಾಸದಲ್ಲಿರುತ್ತದೆ. ಮುಸ್ಲಿಂ ರಾಜಕೀಯದ ಪ್ರಶ್ನೆ ಅಂತಿಮವಾಗಿ ಒಂದು ಸಮುದಾಯದ ಪ್ರಶ್ನೆಯಲ್ಲ, ಅದು ಭಾರತದ ಜಾತ್ಯತೀತ ಆತ್ಮದ ಭವಿಷ್ಯದ ಪ್ರಶ್ನೆಯಾಗಿದೆ.
ಭಾರತದ ಮುಸ್ಲಿಮರ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಗೆ ಪ್ರಮುಖ ಕಾರಣಗಳಲ್ಲಿ ಮುಸ್ಲಿಂ ರಾಜಕೀಯ ಪ್ರಾತಿನಿಧ್ಯದ ಕೊರತೆ ಒಂದು ಪ್ರಮುಖ ಕಾರಣವಾಗಿದೆ. ಸಾಚಾರ್ ಆಯೋಗದ ವರದಿಯು (2006) ಎತ್ತಿ ತೋರಿಸಿದಂತೆ ಮುಸ್ಲಿಂ ರಾಜಕೀಯ ಪ್ರಾತಿನಿಧ್ಯವು ನೈತಿಕವಾಗಿ ಅಗತ್ಯ ಮತ್ತು ಪ್ರಜಾಸತ್ತಾತ್ಮಕವಾಗಿ ಅಪೇಕ್ಷಣೀಯವಾಗಿದೆ. ಭಾರತದಲ್ಲಿ ಮುಸ್ಲಿಂ ರಾಜಕೀಯ ಗುರುತುಗಳು ತುಂಬಾ ಸಂಕೀರ್ಣ ಇತಿಹಾಸವನ್ನು ಹೊಂದಿದೆ. ವಸಾಹತುಶಾಹಿ ಕಾಲದ ಭಾರತದಲ್ಲಿ ಮುಸ್ಲಿಂ ಲೀಗ್ ಪಕ್ಷದ ಸ್ಥಾಪನೆ ಮತ್ತು ಅದರ ಅತಿಯಾದ ಕೋಮು ರಾಜಕೀಯದ ಜ್ಯೋತೆಗೆ ಈ ಪಕ್ಷದ ಅಜಂಡಗಳಾದ ಮುಸ್ಲಿಮರಿಗೆ ಪ್ರತ್ಯೇಕ ಮತದಾನ ಪದ್ಧತಿ ಮತ್ತು ಅಂತಿಮವಾಗಿ ಎರಡು ರಾಷ್ಟ್ರಗಳ ಸಿದ್ಧಾಂತ ಆಧಾರಿತ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆ ಇವುಗಳು ಸ್ವಾತಂತ್ರ್ಯಾನಂತರದ ಮುಸ್ಲಿಂ ರಾಜಕಾರಣಕ್ಕೆ ಬಲವಾದ ಮತ್ತು ವಿವಾದಾತ್ಮಕವಾದ ಐತಿಹಾಸಿಕ ಹಿನ್ನಲೆಗಳನ್ನು ಒದಗಿಸುತ್ತವೆ. ಮುಸ್ಲಿಮರ ಈ ಐತಿಹಾಸಿಕ ಸೀಮಿತತೆಯು ಆಳವಾಗಿ ಸಮಸ್ಯಾತ್ಮಕವಾಗಿದೆ. ವಸಾಹತುಶಾಹಿ ಕಾಲದಲ್ಲಿ ಮುಸ್ಲಿಂ ರಾಜಕೀಯ ಪ್ರಾತಿನಿಧ್ಯವು ಗಣ್ಯ ಮತ್ತು ಪ್ರಭಾವಿ ಮುಸ್ಲಿಮರು ಮತದಾನದ ಹಕ್ಕನ್ನು ಹೊಂದಿದ್ದರು. ಈ ನಾಯಕರು ಮಾತ್ರ ಮುಸ್ಲಿಮರನ್ನು ರಾಜಕೀಯವಾಗಿ ಪ್ರತಿನಿಧಿಸುವುದಾಗಿ ಹೇಳಿಕೊಂಡರು .
1951 ರ ನಂತರದ ರಾಜಕೀಯ ಸನ್ನಿವೇಶವು ಭಾರತೀಯ ಸಂವಿಧಾನವು ಅನುಪಾತದ ಅಥವಾ ಸಮುದಾಯದ ಆಧರಿತ ಪ್ರಾತಿನಿಧ್ಯವನ್ನು ಆಧರಿಸಿರಲಿಲ್ಲ.
ಸಾರ್ವತ್ರಿಕವಾದ ಹೊಸ ರೀತಿಯ ವಯಸ್ಕ ಮತದಾನ ಪದ್ಧತಿಯ ರಾಜಕೀಯ ಪ್ರಾತಿನಿಧ್ಯವನ್ನು ಪ್ರಾರಂಭಿಸಿತು. ಚುನಾಯಿತ ಸಂಸದರು ಮತ್ತು ಶಾಸಕರು ಭೌಗೋಳಿಕವಾಗಿ ಗುರುತಿಸಲಾದ ರಾಜಕೀಯ ಕ್ಷೇತ್ರದಲ್ಲಿ ವಾಸಿಸುವ ಮತದಾರರನ್ನು ಪ್ರತಿನಿಧಿಸಬೇಕಾಗಿತ್ತು. ಅವರು ಜಾತ್ಯತೀತವಾಗಿ ಎಲ್ಲಾ ಸಮುದಾಯಗಳ ಆಕಾಂಕ್ಷೆ ಮತ್ತು ಬೇಡಿಕೆಗಳನ್ನು ಪ್ರತಿನಿಧಿಸಬೇಕಾಗಿತ್ತು . ಇಂತಹ ಸಂದರ್ಭದಲ್ಲಿಯೆ ಇಂದಿನ ಭಾರತದ ಮುಸ್ಲಿಮ್ ನಾಯಕತ್ವವು ಸಂದೀಗ್ದತೆಯನ್ನು ಎದುರಿಸಬೇಕಾಗಿದೆ. ಉದಾಹರಣೆಗೆ :ಅಸಾದುದ್ದೀನ್ ಓವೈಸಿ ಮುಸ್ಲಿಂ ನಾಯಕನಾಗಿ ತಮಗಾಗಿ ಒಂದು ಜಾಗವನ್ನು ರೂಪಿಸಿಕೊಂಡಿದ್ದಾರೆ. ದೇಶಾದ್ಯಂತ ನಡೆಯುವ ಅವರ ಸಾರ್ವಜನಿಕ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಭಾಗವಹಿಸುತ್ತಾರೆ. ಈ ಜನಪ್ರಿಯ ಬೆಂಬಲವು ಓವೈಸಿಯವರ ಪಕ್ಷವಾದ ಆಲ್ ಇಂಡಿಯಾ ಇತ್ತೆಹದುಲ್ ಮುಸ್ಲಿಮೀನ್ (AIMIM) ಈ ಅಗಾಧ ಮುಸ್ಲಿಂ ಉತ್ಸಾಹವನ್ನು ಚುನಾವಣಾ ಮತಗಳಾಗಿ ಪರಿವರ್ತಿಸಲು ಇನ್ನೂ ಸಾಧ್ಯವಾಗಿಲ್ಲ. AIMIM ಅನ್ನು ಚುನಾವಣಾ ಕ್ಷೇತ್ರಗಳ ಮಟ್ಟದಲ್ಲಿ ಎಲ್ಲಾ ಮುಸ್ಲಿಮರು ಒಪ್ಪುವುದಿಲ್ಲ. ಏಕೆಂದರೆ ಅದರ ಧಾರ್ಮಿಕ ಹಿನ್ನೆಲೆಯ ಮಾತುಗಳ ಆಕರ್ಷಣೆಯು ಯಾವಾಗಲೂ ಕ್ಷೇತ್ರ ಮಟ್ಟದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಂರಚನೆಗಳಿಗೆ ಹೊಂದಿಕೆಯಾಗುವುದಿಲ್ಲ. ಮತ್ತೊಂದು ರೀತಿಯಲ್ಲಿ ಮುಸ್ಲಿಮ್ ಏತರ ಮತಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಇದರರ್ಥ ಮುಸ್ಲಿಂ ರಾಜಕೀಯ ಐಡೆಂಟಿಟಿಯ ಜ್ಯೋತೆಗೆ ವಿಧಾನಸಭಾ, ಲೋಕಸಭಾ ಕ್ಷೇತ್ರದ ಜಾತ್ಯತೀತ ಮತಗಳನ್ನು ಪಡೆಯಲು ವಿಫಲತೆಯನ್ನು ಅನುಭವಿಸುತ್ತಾರೆ. ಇದು ಇಂದಿನ ಮುಸ್ಲಿಮ್ ಲೀಗ್, ಎಸ್ಡಿಪಿಐ, ವೆಲ್ಫೇರ್ ಪಾರ್ಟಿ, ಮುಸ್ಲಿಮ್ ಮುನ್ನೆತರ ಕಳಗಂ ನಂತರ ಎಲ್ಲಾ ಪಕ್ಷಗಳಿಗೂ ಅನ್ವಯ.
ಇದಲ್ಲದೆ, ಇದುವರೆಗೂ ಮುಸ್ಲಿಮ್ ರಾಜಕಾರಣವು ಮತ್ತೊಂದು ಸ್ವರೂಪದಲ್ಲಿಯೂ ಸಕ್ರಿಯವಾಗಿದೆ. ಅದು ರಾಜ್ಯಗಳ ಪ್ರಾದೇಶಿಕವಾರು ಇತರೆ ಜಾತಿಗಳ ಜ್ಯೋತೆ ಸಮೀಕರಣದ ರಾಜಕಾರಣ. ಮೋದಿ ಪೂರ್ವ ಗುಜರಾತ್ನಲ್ಲಿ KHAM (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ) ಮಾದರಿ ಮತ್ತು ಬಾಬರಿ ಮಸೀದಿ ನಂತರದ ಸನ್ನಿವೇಶದಲ್ಲಿ UP ಮತ್ತು ಬಿಹಾರದಲ್ಲಿ MY (ಮುಸ್ಲಿಂ-ಯಾದವ್) ಮಾದರಿಯು ಮತದಾನ ಸಮುದಾಯಗಳ ಅಂತಹ ರಾಜಕೀಯ ಒಕ್ಕೂಟಗಳಿಗೆ ಉತ್ತಮ ಉದಾಹರಣೆಗಳಾಗಿವೆ. ಕಳೆದ ಎಂಟು ವರ್ಷಗಳಲ್ಲಿ ಪ್ರಬಲ ಆಟಗಾರನಾಗಿ ಬಿಜೆಪಿ ಹೊರಹೊಮ್ಮಿರುವುದು ಈ ಸಂರಚನೆಗಳನ್ನು ಪ್ರಬಲ ರೀತಿಯಲ್ಲಿ ಮುರಿದಿದೆ. ಪಕ್ಷವು ಮುಸ್ಲಿಮರನ್ನು ಸೇರಿಸಿಕೊಳ್ಳಲು ಬಯಸದ ಮತದಾರರ ಹೊಸ ಸಂರಚನೆಯನ್ನು ಸೃಷ್ಟಿಸಲು ಒಲವು ತೋರುತ್ತದೆ. ಗೆಲ್ಲುವ ಸಂರಚನೆಯಿಂದ ಮುಸ್ಲಿಮರನ್ನು ಹೊರಗಿಡುವುದು ಸಮಕಾಲೀನ ಚುನಾವಣಾ ರಾಜಕೀಯದ ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ.
ಇತ್ತೀಚಿಗೆ ನಡೆದ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಓವೈಸಿ ಪಕ್ಷದ ಹಾಗು ಮಾಲೆಗಾಂವ್ ಕಾರ್ಪೊರೇಷನ್ ನಲ್ಲಿ “ಇಸ್ಲಾಂ” ಪಕ್ಷದ ಸಾಧನೆಗಳು ವಿಭಿನ್ನವಾಗಿತ್ತು . ಅಲ್ಲಿನ 80 ಸ್ಥಾನಗಳಲ್ಲಿ 35 “ಇಸ್ಲಾಂ” ಪಕ್ಷ, 22 ಓವೈಸಿ ಪಕ್ಷ ಗೆದ್ದಿದೆ. ಸೆಕ್ಯುಲರ್ ಪಕ್ಷಗಳೆಲ್ಲ ಮೂಲೆಗುಂಪಾಗಿವೆ. ಈ ಫಲಿತಾಂಶವನ್ನು ದೇಶಾದ್ಯಂತ ತಮ್ಮ ಪರವಾಗಿ ಬಳಸಿಕೊಳ್ಳುವ ಭಾಗವಾಗಿ ಬಿಜೆಪಿ ಪರ ಗುಂಪುಗಳು ಒಂದು ನರೇಟಿವ್ ಕಟ್ಟುತ್ತಿದ್ದಾರೆ. “ಮುಸ್ಲಿಮರು ಎಲ್ಲಿ ತಾವು 30 ಶೇಕಡಾ ಕ್ಕಿಂತ ಹೆಚ್ಚು ಜನಸಂಖ್ಯೆ ದಾಟಿದ್ದಾರೊ, ಅಲ್ಲಿ ಸೆಕ್ಯುಲರ್ ಪಕ್ಷಗಳಿಗೆ ಕೈಕೊಟ್ಟು ತಮ್ಮದೇ ಧರ್ಮಧಾರಿತ ಪಕ್ಷ ಕಟ್ಟಿಕೊಳ್ಳುತ್ತಾರೆ, ಜಾತ್ಯತೀತ ಪಕ್ಷಗಳಿಗೆ ಮತ ಹಾಕುವ ಹಿಂದುಗಳಿಗೆ ಇದು ಅರ್ಥ ಆಗಬೇಕು ” ಎಂಬ ಠಿಕೆಗಳ ವ್ಯಾಪಕ ಪ್ರಚಾರ ಮಾಡಲಾಯಿತು. ಇನ್ನೊಂದೆಡೆ, ಮುಸ್ಲಿಂ ಅಸ್ಮಿತೆ, ಮತೀಯತೆಯ ಪಕ್ಷಗಳ ಪರವಾಗಿರುವವರು, ಸೆಕ್ಯುಲರ್ ಪಕ್ಷಗಳನ್ನು ನಂಬಿ ಮೋಸ ಹೋದದ್ದು ಸಾಕು, ಇನ್ನು ನಮ್ಮ ದಾರಿ ನಾವೇ ನೋಡಿಕೊಳ್ಳುವ ಕಾಲ ಬಂದಿದೆ, ನಮ್ಮದೇ ಪಕ್ಷಗಳಿಗೆ ಭವಿಷ್ಯ ಇದೆ, ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಫಲಿತಾಂಶ ಇದಕ್ಕೆ ಸಾಕ್ಷಿ” ಎಂದು ಹುಮ್ಮಸ್ಸಿನಲ್ಲಿ ವಾದ ಮಂಡಿಸತೊಡಗಿದವು. ಅಸಾದುದ್ದೀನ್ ಓವೈಸಿಯ ಸೋದರ ಅಕ್ಬರುದ್ದೀನ್ ಓವೈಸಿ ಯ ಪ್ರಚಾರ ಭಾಷಣ ಆಕ್ರಮಣಕಾರಿಯಾಗಿತ್ತು ಎಂಬುದು ಒಂದು ವರದಿ. ಹಾಗೆಯೆ, ಮಾಲೆಗಾಂವ್ ನ ಪವಾರ್ ಪಕ್ಷದ ಮಾಜಿ ಶಾಸಕ ತನ್ನ ಹೊಸ ಪಕ್ಷದ ಹೆಸರಿನ ಪ್ರಥಮ ಅಕ್ಷರಗಳು ಒಟ್ಟಾದಾಗ ISLAM ಎಂದಾಗುವಂತೆ ಡಿಸೈನ್ ಮಾಡಿರುವುದು ಈ ಪಕ್ಷಗಳ ಚುನಾವಣಾ ತಂತ್ರಗಳು ಹೇಗಿದ್ದವು, ಧ್ರುವೀಕರಣ ಫಲಿತಾಂಶಕ್ಕೆ ಕಾರಣ ಏನಿರಬಹುದು ಎಂಬುದಕ್ಕೆ ಸಣ್ಣ ಅಂದಾಜನ್ನು ಒದಗಿಸುತ್ತದೆ.
ಬಿಹಾರದ ತರುವಾಯ ಇದೀಗ ಓವೈಸಿ ಮಹಾರಾಷ್ಟ್ರದಲ್ಲಿ ತನ್ನ ಕಮಾಲ್ ತೋರಿದ್ದಾರೆ. ಜೊತೆಗೆ ಇನ್ನೂ ಕೆಲವು ಮುಸ್ಲಿಮ್ ಅಸ್ಕಿತೆಯ ಪಕ್ಷಗಳು ತಲೆ ಎತ್ತಿವೆ, ಪುಟ್ಟದಾಗಿಯಾದರು ಗೆಲುವು ಸಾಧಿಸಿವೆ. ಈ ರೀತಿ ಮುಸ್ಲಿಂ ಮತಬ್ಯಾಂಕ್ ಮೇಲೆ ಹಿಡಿತ ಸಾಧಿಸತೊಡಗಿರುವ ಓವೈಸಿ ಬ್ರಾಂಡ್ ಪಕ್ಷಗಳು ಬದುಕಿನ (ಮುಸ್ಲಿಮರಿಗೆ ಸೀಮಿತವಾಗಿಯಾದರು ಸರಿ) ಪ್ರಶ್ನೆಗಳು, ಸಂಕಷ್ಟಗಳನ್ನು ಮುಂದಿಟ್ಟು, ಆರ್ಥಿಕ ನೀತಿಗಳು, ಉದ್ಯೋಗ, ವಸತಿ, ಆರೋಗ್ಯ ಮುಂತಾದ ವಿಷಯಗಳ ಮೇಲೆ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಾರ್ವಜನಿಕರ ಕಣ್ಣಿಗೆ ಬಿದ್ದಿಲ್ಲ. ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯ ವಾಚಕರ ವಾಣಿಯಲ್ಲಿ ‘ ಮುಸ್ಲಿಂ ನಾಯಕತ್ವದ ಅವಜ್ಞೆ ಸರಿಯೆ? ‘ ಎಂಬ ಶೀರ್ಷಿಕೆಯಡಿಯಲ್ಲಿ “ಪ್ರಜಾಪ್ರಭುತ್ವದಲ್ಲಿ ನೈಜ ಪ್ರತಿನಿಧಿತ್ವವು ಪ್ರತ್ಯಕ್ಷ ಚುನಾವಣೆಯ ಮೂಲಕವೇ ಬರ ಬೇಕು.
ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರಿಗೆ ನೇರ ಚುನಾವಣೆಯಲ್ಲಿ ಅವಕಾಶ ಕಡಿಮೆ ಮಾಡಲಾಗುತ್ತಿದೆ. ರಾಜ್ಯಸಭೆಗೆ ನೇಮಕದಂತಹ ಪರೋಕ್ಷ ಮಾರ್ಗದಲ್ಲಿ ಅವಕಾಶ ನೀಡುವುದು ಅವರ ರಾಜಕೀಯ ಬೆಳವಣಿಗೆಯನ್ನು ಸೀಮಿತಗೊಳಿಸುತ್ತದೆ. ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯು ಇದಕ್ಕೆ ಕನ್ನಡಿ ಹಿಡಿದಿವೆ. ಮುಸ್ಲಿಂ ಸಮುದಾಯದಿಂದ ಟಿಕೆಟ್ಗಾಗಿ ಬೇಡಿಕೆ ಇದ್ದರೂ ಪರಿಗಣಿಸಿಲ್ಲ. ಎಲ್ಲಾ ಪಕ್ಷಗಳು ನೈಜ ಸಮಾನತೆ ತೋರಿಸಬೇಕಾದರೆ ಗೆಲ್ಲುವ ಕ್ಷೇತ್ರ ಗಳಲ್ಲಿ ಸಮಾನ ಅವಕಾಶ ನೀಡಬೇಕಿದೆ. ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿದರೆ ಆ ಸಮುದಾಯದಲ್ಲಿ ಸಮರ್ಥ ರಾಜಕೀಯ ನಾಯಕರು ಬೆಳೆಯುವುದು ಹೇಗೆ? (24 ಮಾರ್ಚ್, 2026) ಎಂದು ಗುರಣ್ಣ ಗೌಡ ಪಾಟೀಲ, ಝಳಕಿ ಯವರು ಒಂದು ಸೂಕ್ಷ್ಮವಾದ ಮತ್ತು ಪ್ರಬುದ್ಧವಾದ ಪ್ರಶ್ನೆಯನ್ನು ಎತ್ತಿದ್ದರು. ಇದು ವರ್ತಮಾನದ ಎಲ್ಲಾ ಪಕ್ಷಗಳಿಗೆ ಮುಸ್ಲಿಮರು ಕೆಳಲೇಬೇಕಾದ ಪ್ರಶ್ನೆಯಾಗಿದೆ.
ಇಲ್ಲಿ ನಮ್ಮ ಭಾರತದ ನಾಗರೀಕರು ಬರಬೇಕಾದ ಒಂದು ಸ್ಪಷ್ಟತೆ ಎಂದರೆ. ಭಾರತೀಯ ಪ್ರಜಾಪ್ರಭುತ್ವದ ಮೂಲ ಆಧಾರ ಸಂವಿಧಾನ. ಅದು ಪ್ರತಿಯೊಬ್ಬ ನಾಗರಿಕನಿ/ಳಿಗೂ ಸಮಾನ ಹಕ್ಕು, ಸಮಾನ ಗೌರವ ಮತ್ತು ರಾಜಕೀಯದಲ್ಲಿ ಸಮಾನ ಪಾಲ್ಗೊಳ್ಳುವಿಕೆಯ ಅವಕಾಶವನ್ನು ಒದಗಿಸುತ್ತದೆ. ಆದರೆ ಇತ್ತೀಚಿನ ರಾಜಕೀಯ ಚರ್ಚೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ಸ್ಪಷ್ಟ ವೈಪರೀತ್ಯವೇನೆಂದರೆ ಕೆಲವು ಪಕ್ಷಗಳಿಗೆ ನೀಡಲಾಗುವ ಗುರುತು ಮತ್ತು ಇತರ ಪಕ್ಷಗಳಿಗೆ ಹೇರಲಾಗುವ ಮುದ್ರೆಗಳ ನಡುವಿನ ದ್ವಂದ್ವಗಳ ಮಾನದಂಡ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಅನೇಕ ಬ್ರಾಹ್ಮಣ ಮುಖಂಡರು ಪ್ರಮುಖ ಸ್ಥಾನಗಳನ್ನು ಹೊಂದಿದ್ದರೂ, ಕಾಂಗ್ರೆಸ್ ಅನ್ನು “ಬ್ರಾಹ್ಮಣರ ಪಕ್ಷ” ಎಂದು ಯಾರೂ ಸಾಮಾನ್ಯವಾಗಿ ವರ್ಣಿಸುವುದಿಲ್ಲ. ಅದೇ ರೀತಿ, ಸಿಪಿಐ ಮತ್ತು ಸಿಪಿಎಂ ಪಕ್ಷಗಳಲ್ಲಿ ಬ್ರಾಹ್ಮಣ ಹಿನ್ನೆಲೆಯ ನಾಯಕರು ಹೆಚ್ಚಾಗಿ ಇದ್ದ ಸಂದರ್ಭಗಳಲ್ಲಿಯೂ ಆ ಪಕ್ಷಗಳನ್ನು ಬ್ರಾಹ್ಮಣ ಸಮುದಾಯದ ಪಕ್ಷಗಳೆಂದು ಕರೆಯುತ್ತಿಲ್ಲ. ಭಾರತೀಯ ಜನತಾ ಪಾರ್ಟಿ BJP ಯ ಸ್ಥಾಪನೆಯಿಂದ ಇಂದಿನ ವರೆಗಿನ ಅಧ್ಯಕ್ಷರು ಬಹುತೇಕ ಬ್ರಾಹ್ಮಣ ಸಮುದಾಯದವರು. ಆದರೂ ಈ ಪಕ್ಷವನ್ನು ‘ಬ್ರಾಹ್ಮಣ’ ರ ಪಕ್ಷ ವೆಂದು ಕರೆಯುವುದಿಲ್ಲ. ಸಮಾಜವಾದಿ ಪಾರ್ಟಿ SP, ರಾಷ್ಟೀಯ ಜನತಾ ಪಾರ್ಟಿ RJD ಇವುಗಳು ಹಾಗು ಇಂದಿದ ನಿತೀಶ್ ಕುಮಾರರ ಪಕ್ಷ jdu, ಕರ್ನಾಟಕದ H D ಕುಮಾರ ಸ್ವಾಮಿಯವರ ಜಾತ್ಯತೀತ ಜನತಾ ದಳ jds ಈ ಎಲ್ಲಾ ಪಕ್ಷಗಳು ಯಾದವ, ಒಕ್ಕಲಿಗರ ನೇತೃತ್ವದ ಪಕ್ಷಗಳು ಆದರೂ ಈ ಪಕ್ಷಗಳನ್ನು ಒಕ್ಕಲಿಗ, ಯಾದವರ ಪಕ್ಷ ಎಂದು ಕರೆಯುವುದಿಲ್ಲ. ಕಾರಣ ಸ್ಪಷ್ಟವಾಗಿದೆ. ಆ ಪಕ್ಷಗಳ ರಾಜಕೀಯ ಧೋರಣೆಗಳನ್ನು ಅವರ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಆಧಾರದ ಮೇಲೆ ಅಳೆಯಲಾಗುತ್ತದೆ, ಸಮುದಾಯದ ಗುರುತಿನ ಆಧಾರದ ಮೇಲೆ ಅಲ್ಲ. ಆದರೆ ಇದೇ ಮಾನದಂಡಗಳು ದಲಿತ ಅಥವಾ ಮುಸ್ಲಿಂ ಸಮುದಾಯಗಳ ನೇತೃತ್ವದ ರಾಜಕೀಯ ಪಕ್ಷಗಳ ವಿಷಯದಲ್ಲಿ ಅನ್ವಯಿಸಿ ನೋಡುತ್ತಿಲ್ಲ. ಬಹುಜನ ಸಮಾಜ ಪಕ್ಷ (BSP), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI), ಲೋಕ ಜನಶಕ್ತಿ ಪಕ್ಷ (LJP), ದಲಿತ್ ಪ್ಯಾಂತರ್ಸ್ ಆಫ್ ಇಂಡಿಯ (DPI) ಮುಂತಾದ ಪಕ್ಷಗಳನ್ನು ತಕ್ಷಣವೇ “ದಲಿತ ಪಕ್ಷಗಳು” ಎಂದು ಗುರುತಿಸಲಾಗುತ್ತದೆ. ಅದೇ ರೀತಿಯಾಗಿ,
ಎಐಯುಎಂಎಲ್ (AIUML), ಎಐಎಂಐಎಂ (AIMIM), ಎಸ್ಡಿಪಿಐ (SDPI) ಪಕ್ಷಗಳನ್ನು “ಜಾತಿವಾದಿ” ಅಥವಾ “ಮುಸ್ಲಿಂ ಮೂಲಭೂತವಾದಿ” ಪಕ್ಷಗಳೆಂದು ಬಿಂಬಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇಲ್ಲಿ ಈ ರೀತಿಯ ವರ್ಗೀಕರಣಗಳು ರಾಜಕೀಯ ವಿಶ್ಲೇಷಣೆಯ ಭಾಗವೇ ಅಥವಾ ಒಂದು ನಿರ್ದಿಷ್ಟ ರಾಜಕಾರಣದ ಅಜೆಂಡಾದ ಭಾಗವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಂವಿಧಾನವು ಯಾವುದೇ ನಾಗರಿಕನಿಗೂ ತನ್ನ ಸಮುದಾಯದ ಹಕ್ಕುಗಳಿಗಾಗಿ ರಾಜಕೀಯವಾಗಿ ಸಂಘಟಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತದೆ. ಆದ್ದರಿಂದ, ಒಂದು ಸಮುದಾಯದ ಹಕ್ಕುಗಳ ಕುರಿತಾಗಿ ಮಾತನಾಡುವ ಪಕ್ಷಗಳನ್ನು ಮಾತ್ರ ಸಂಶಯದ ದೃಷ್ಟಿಯಿಂದ ನೋಡುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗುತ್ತದೆ.
ಭಾರತೀಯ ರಾಜಕೀಯದಲ್ಲಿ ದಲಿತ ಮತ್ತು ಮುಸ್ಲಿಂ ಸಮುದಾಯಗಳು ಐತಿಹಾಸಿಕವಾಗಿ ಸಾಮಾಜಿಕ ಹಾಗೂ ರಾಜಕೀಯ ಪ್ರತಿನಿಧಿತ್ವದ ಕೊರತೆಯನ್ನು ಅನುಭವಿಸಿರುವ ಹಿನ್ನೆಲೆ ಇದೆ. ಈ ಹಿನ್ನೆಲೆಯಲ್ಲಿ ಉದ್ಭವಿಸಿದ ರಾಜಕೀಯ ವೇದಿಕೆಗಳನ್ನು ಕೇವಲ ಗುರುತಿನ ರಾಜಕಾರಣವೆಂದು ನಿರಾಕರಿಸುವುದು, ಅವರ ರಾಜಕೀಯ ಹಕ್ಕುಗಳ ಚರ್ಚೆಯನ್ನು ಕುಗ್ಗಿಸುವ ಅಪಾಯವಿದೆ. ಇದೇ ಸಂದರ್ಭದಲ್ಲಿ, ಹಿಂದುತ್ವ ರಾಜಕೀಯದ ಬೆಳವಣಿಗೆಯ ನಡುವಿನಲ್ಲಿ ದಲಿತ–ಮುಸ್ಲಿಂ ರಾಜಕೀಯ ಒಕ್ಕೂಟದ ಸಾಧ್ಯತೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕೆಲವು ರಾಜಕೀಯ ನ್ಯಾರೇಟಿವ್ಗಳು ರೂಪುಗೊಳ್ಳುತ್ತಿವೆ. ರಾಜಕೀಯ ವಿರೋಧ ಸಹಜವಾದರೂ, ಒಂದು ಸಮುದಾಯದ ರಾಜಕೀಯ ಅಭಿವ್ಯಕ್ತಿಯನ್ನು “ಅತಿರೇಕ” ಅಥವಾ “ಮೂಲಭೂತವಾದ” ಎಂದು ಸಾಮಾನ್ಯೀಕರಿಸುವುದು ಪ್ರಜಾಪ್ರಭುತ್ವದ ಸಂವಾದವನ್ನು ದುರ್ಬಲಗೊಳಿಸಬಹುದು. ಪ್ರಜಾಪ್ರಭುತ್ವದಲ್ಲಿ ಪಕ್ಷಗಳನ್ನು ಅವರ ನೀತಿಗಳು, ಕಾರ್ಯಕ್ರಮಗಳು ಮತ್ತು ಆಡಳಿತದ ದೃಷ್ಟಿಕೋನದ ಆಧಾರದ ಮೇಲೆ ವಿಮರ್ಶಿಸುವುದು ಅಗತ್ಯ. ಆದರೆ ಸಮುದಾಯದ ಗುರುತು ಆಧಾರಿತ ಮುದ್ರೆಗಳ ಮೂಲಕ ರಾಜಕೀಯ ಚರ್ಚೆಯನ್ನು ಸರಳೀಕರಿಸುವುದು ಸಮಾಜದಲ್ಲಿ ಅವಿಶ್ವಾಸವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಭಾರತದ ಬಹುಸಾಂಸ್ಕೃತಿಕ ಮತ್ತು ಬಹುಧಾರ್ಮಿಕ ಸ್ವರೂಪವನ್ನು ಉಳಿಸಬೇಕಾದರೆ, ರಾಜಕೀಯದ ಬಗ್ಗೆ ನಡೆಯುವ ಚರ್ಚೆಗಳು ಸಮಾನ ಮಾನದಂಡಗಳನ್ನು ಪಾಲಿಸಬೇಕು. ಸಂವಿಧಾನದ ಆತ್ಮವೂ ಅದನ್ನೇ ಒತ್ತಿಹೇಳುತ್ತದೆ. ಸಮಾನತೆ, ನ್ಯಾಯ ಮತ್ತು ಎಲ್ಲರಿಗೂ ಸಮಾನ ರಾಜಕೀಯ ಗೌರವ.












