✍️ ಅರಫಾ ಮಂಚಿ
ಮೋದಿ ಸರ್ಕಾರ ತಂದ 131ನೇ ಸಂವಿಧಾನ ತಿದ್ದುಪಡಿ ಮಸೂದೆ ಬಿದ್ದು ಹೋದಾಗ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ “ದಿಸ್ ವಿಕ್ಟರಿ ಈಸ್ ಜಸ್ಟ್ ಎ ಟ್ರೇಲರ್” ಎಂದು ಪ್ರತಿಕ್ರಿಯಿಸಿದರು. (ಎಎನ್ಐ ವರದಿ). ಅಂದರೆ ದೇಶದ ಗಣರಾಜ್ಯ ವ್ಯವಸ್ಥೆ ಗೆದ್ದಿತೇ? ಈ ಮಸೂದೆ ಬಿದ್ದು ಹೋದದ್ದಕ್ಕೆ ಬಿಜೆಪಿ ಮತ್ತು ಸಂಘಿಗಳನ್ನು ಹೊರತು ಪಡಿಸಿ ಉಳಿದ ಎಲ್ಲರೂ ಸಂಭ್ರಮಿಸಿದ್ದು ಅದಕ್ಕೆ ಸಾಕ್ಷಿ. ಯಾರು ಏನೇ ಹೇಳಲಿ, ಒಟ್ಟು ಪ್ರತಿಪಕ್ಷಗಳು ಒಗ್ಗಟ್ಟಿನಿಂದ ವರ್ತಿಸಿವೆ. ಮೋದಿ ಸರ್ಕಾರಕ್ಕೆ ಪಾರ್ಲಿಮೆಂಟಿನಲ್ಲಿ ಹಿನ್ನಡೆಯಾಗಿದೆ. ಬಿಜೆಪಿಯವರು ಎಂತಹ ಲೆಕ್ಕ ಹೇಳಿದರೂ ಜನ ಇಂದು ಮೂರ್ಖರಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿ ರುವುದು ದೇಶದ ಗಣರಾಜ್ಯ ಸ್ವಭಾವಕ್ಕೆ ಕತ್ತಿ ಇಡುತ್ತಿರುವ ಬಿಜೆಪಿ. ಹಿಂದಿ ಹೇರಿಕೆಯಿಂದ ಹಿಡಿದು ಏಕರೂಪ ನಾಗರಿಕ ಸಂಹಿತೆ, ಏಕ ಚುನಾವಣೆ, ಒಂದೇ ತೆರಿಗೆ ಹೀಗೆ ಏನೇನೋ ತರಲು ಹೊರಟಿದೆ. ದೇಶದ ಬಹುತ್ವ ಏನಿತ್ತೋ ಅದನ್ನು ಪುಡಿ ಪುಡಿ ಮಾಡಿದೆ. ಇತಿಹಾಸ ತಿದ್ದುವ ಮೂಲಕ ರಾಜ್ಯಗಳಿಂದಾದ ಒಕ್ಕೂಟ ಭಾರತ' ಎಂಬುದನ್ನುಹಿಂದುತ್ವ ಭಾರತ’ ಎಂದು ಧ್ರುವೀಕರಿಸಲು ಹೆಣಗಾಟ ನಡೆಸಿದ ಪಾರ್ಟಿ ಅದು.
ಈ ದೇಶದ ವಿವಿಧ ಜನವಿಭಾಗ, ಅನೇಕ ಧರ್ಮ, ಆಚಾರ ಮತ್ತು ಆಚ ರಣೆಗಳನ್ನು ಕಿತ್ತೆಸೆಯುವುದಕ್ಕೆ ಅಲ್ಪಸಂಖ್ಯಾತರ ಮೇಲೆ ಜೈಗೋವಿಂದನಿಂದ ಹಿಡಿದು ಜೈಶ್ರೀರಾಮ್ವರೆಗೆ ಏರಿ ಹೋಗುವ ಆಕ್ರಮಣಕಾರಿ ಸಂಸ್ಕೃತಿಯನ್ನು ಜನಮನಸ್ಸಿಗೆ ತುಂಬುತ್ತಿದೆ. ಇತಿಹಾಸದಲ್ಲಿ ಈ ಅಪಕೀರ್ತಿಯನ್ನು ಹೊತ್ತುಕೊಳ್ಳುವಷ್ಟು ಈಗಲೇ ಸಂಘಿಗಳು ಮಾಡಿ ಮುಗಿಸಿದ್ದಾರೆ. ಪಾರ್ಲಿಮೆಂಟನ್ನು ತಿದ್ದುವುದು ಇದರಲ್ಲಿ ಒಂದನೆಯದು, ಸೆಂಟ್ರಲ್ ವಿಸ್ತಾಕ್ಕೆ ಸಂಸದರನ್ನು ಎತ್ತಿ ತಂದು ಹಾಕುವ ಮೂಲಕ ಅದನ್ನು ಕೂಡಾ ಮಾಡಿ ಆಯಿತು. ಈಗ ಇದೇ ಸಂಸದರ ಮೂಲಕ ಸಂವಿಧಾನ ತಿದ್ದುಪಡಿ ಮಾಡಿ ಸಂಘಿ ಪಾರಮ್ಯವೊಂದೇ ದೇಶವನ್ನು ಆವರಿಸಿ ಬಿಡುವಂತೆ ಮಾಡಲು ಯತ್ನಿಸಿದರು. ಅವರು ದೇಶದ ಜಾತ್ಯತೀತ ಅಸ್ಮಿತೆ, ಸಂವಿಧಾನದ ತೂಕ, ಪ್ರಜಾಪ್ರಭುತ್ವ, ಗಣರಾಜ್ಯ ವ್ಯವಸ್ಥೆ ಎಲ್ಲವನ್ನೂ ಸಂಘಿಗಳು ಸ್ವಾಹಾ ಮಾಡುತ್ತಿದ್ದರು.
ಆದ್ದರಿಂದ ಪ್ರತಿ ಪಕ್ಷದಲ್ಲಿರುವ ಹಿಂದಿ ಭಾಷಿಕ ನಾಡಿನ ರಾಜಕೀಯ ಪಾರ್ಟಿಗಳು, ಪಶ್ಚಿಮ ಬಂಗಾಳದ ಟಿಎಂಸಿ, ದಕ್ಷಿಣ ಭಾರತದ ಪಾರ್ಟಿಗಳ ಜೊತೆ ಸೇರಿ ಎಲ್ಲ ವಿಪಕ್ಷಗಳು ಒಗ್ಗೂಡಿ ಸಂವಿಧಾನ ತಿದ್ದುಪಡಿಗೆ ಬಹುಮತ ಸಿಗದಂತೆ ಮಾಡಿದ್ದು ದೊಡ್ಡ ಸಾಧನೆ. ಸದ್ಯಕ್ಕೆ ಬಿಜೆಪಿ ಸರ್ಕಾರಕ್ಕೆ ಸಂವಿಧಾನಕ್ಕೆ ಕತ್ತರಿ ಹಾಕುವ ಶಕ್ತಿ ಇಲ್ಲ ಎಂದು ಪಾರ್ಲಿಮೆಂಟು ಘೋಷಿಸಿದೆ. ಇದಕ್ಕೆ ಎಂ.ಕೆ. ಸ್ಟಾಲಿನ್ ಮೋದಿ ಸರ್ಕಾರದ ಈ ಪರಾಭವವನ್ನು “ದಿಸ್ ವಿಕ್ಟರಿ ಈಸ್ ಜಸ್ಟ್ ಎ ಟ್ರೇಲರ್” ಎಂದು ಕರೆದಿದ್ದು.
ಮಸೂದೆ ಬಿದ್ದದ್ದು ಯಾಕೆ:
ಪ್ರತಿಪಕ್ಷಗಳು ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆ ಯಲ್ಲಿ 66% ಮತ ಬೀಳದಂತೆ ನೋಡಿಕೊಂಡಿವೆ. ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಪ್ರಭಾವ ಹೊಂದಿರುವ ಬಿಜೆಪಿಯೇತರ ಪಾರ್ಟಿಗಳು ತಮ್ಮ ಅಸ್ತಿತ್ವ, ನಾಡಿನ ಭಾಷೆ, ಸಂಸ್ಕೃತಿ ಹೀಗೆ ಎಲ್ಲ ನೆಲೆ ಕಳೆದುಕೊಳ್ಳುತ್ತವೆ ಎಂಬ ಕಾರಣಕ್ಕಾಗಿ ಮಸೂದೆಯನ್ನು ವಿಫಲಗೊಳಿಸಿವೆ. ಮೋದಿ ಸರ್ಕಾರ ಹೇಳುವಂತೆ ಶೇ. 33 ಮಹಿಳಾ ಮೀಸಲಾತಿಯನ್ನು ವಿಫಲಗೊಳಿಸುವ ಉದ್ದೇಶದಿಂದ ಮಸೂದೆಯ ಕಟ್ಟು ಬಿಚ್ಚದಂತೆ ಪ್ರತಿಪಕ್ಷಗಳು ಮಾಡಿದ್ದಲ್ಲ ಎಂಬುದು ನಿಮಗೂ ಅರ್ಥವಾಗಿರಬಹುದು. ಈಗ ಮೋದಿ ಸರ್ಕಾರ 2011ರ ಜನಗಣತಿಯ ಪ್ರಕಾರ ಪಾರ್ಲಿಮೆಂಟು ಸೀಟು ಪುನರ್ವಿಂಗಡನೆ ಮಾಡಿತ್ತೆಂದಿಟ್ಟುಕೊಳ್ಳಿ, ಆಗ ಏನಾಗುತ್ತದೆ? ಪಾರ್ಲಿಮೆಂಟಿನ ಸೀಟುಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸಿದರೆ ಉತ್ತರ ಭಾರತದ ಎಂಪಿಗಳ ಆಧಾರದಲ್ಲಿ ಈ ದೇಶವನ್ನು ಶತಮಾನಗಳ ಕಾಲ ಆಳಬಹುದು.
2021ರಲ್ಲಿ ಮೋದಿ ಸರ್ಕಾರ ಜನಗಣತಿ ನಡೆಸಬೇಕಿತ್ತು. 2029ಕ್ಕಾಗುವಾಗ ಎಲ್ಲರನ್ನೂ ಮಂಗ ಮಾಡುವ ಉದ್ದೇಶದಿಂದ ಅದು ಜನಗಣತಿಯನ್ನು ಮುಂದೂಡುತ್ತಾ ಬಂದಿತ್ತು ಎಂಬುದನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿದ ಮಸೂದೆಗಳ ಗುಚ್ಛ ಬಹಿರಂಗಪಡಿಸಿದೆ. ಈ ಲೆಕ್ಕ ಸರಳ. 2011ರ ಲೆಕ್ಕದಲ್ಲಿ ಪುನರ್ವಿಂಗಡನೆ ಮಾಡಿದರೆ ಉತ್ತರ ಭಾರತದ ಪಾರ್ಲಿಮೆಂಟು ಸೀಟುಗಳ ಸಂಖ್ಯೆ ಹೆಚ್ಚುತ್ತದೆ, ಸರಾಸರಿಯಲ್ಲಿ ದಕ್ಷಿಣ ಭಾರ ತದ್ದು ಕಡಿಮೆಯಾಗುತ್ತದೆ. ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ರಾಜಸ್ಥಾನ, ಹರಿಯಾಣ, ಛತ್ತೀಸ್ಗಢ, ಉತ್ತರಾಖಂಡ, ದಿಲ್ಲಿ ಮುಂತಾದ ರಾಜ್ಯಗಳಲ್ಲಿ ಈಗ 207 ಸೀಟುಗಳಿವೆ; ಅದು 366ಕ್ಕೆ ಏರುತ್ತದೆ. ಇತ್ತ ದಕ್ಷಿಣ ಭಾರತದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ, ತೆಲಂಗಾಣ, ಪುದುಚ್ಚೇರಿಯ 132 ಸೀಟುಗಳು ಹೆಚ್ಚಿ 176ಕ್ಕೆ ತಲುಪುತ್ತದೆ. ಲೋಕಸಭೆಯಲ್ಲಿ ದಕ್ಷಿಣ ಭಾರತದ ಪ್ರಾತಿನಿಧ್ಯ ಈಗ 24.3% ಇರುವುದು 20.7%ಕ್ಕೆ ಕುಸಿಯುತ್ತದೆ. ಉತ್ತರ ಭಾರತದ ಪ್ರಾತಿನಿಧ್ಯ ಹೆಚ್ಚುತ್ತದೆ.
ಉತ್ತರ ಭಾರತ ಹಿಂದುತ್ವದ ಪ್ರಭಾವ ವಲಯ. ಈ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದರೆ, ಮತ್ತೆ ದಕ್ಷಿಣ ಭಾರತದ ಎಂಪಿ ಸೀಟುಗಳ ಹಂಗಿಲ್ಲದೆಯೇ ಈ ದೇಶವನ್ನು ನೂರು ವರ್ಷಕ್ಕೂ ಹೆಚ್ಚು ಅವಧಿಗೆ ಆಳಬಹುದು ಎಂಬ ಪ್ಲಾನ್ ಬಿಜೆಪಿಯದ್ದಾಗಿತ್ತು. ಹಾಗಾಗಿ 2021ರಲ್ಲಿ ಬಿಜೆಪಿ ಜನಗಣತಿ ಮಾಡಿಸಲಿಲ್ಲ. 2029ರ ಲೋಕಸಭೆ ಚುನಾವಣೆ ಬರುವ ಮೊದಲು ಎಂಪಿ ಸೀಟುಗಳನ್ನು ಹೆಚ್ಚಿಸಲು ಸಂವಿಧಾನ ತಿದ್ದು ಪಡಿಯ ಸಹಾಯ ಪಡೆಯುವುದು ಬಿಜೆಪಿಯ ಮಟ್ಟಿಗೆ ಒಳ್ಳೆಯ ಪ್ಲಾನ್; ಅಧಿಕಾರ ಶಾಶ್ವತವಾಗುತ್ತದೆ. ಆದರೆ ಭಾರತದ ಬಹುಸಂಸ್ಕೃತಿ ಮತ್ತು ಒಕ್ಕೂಟ ವ್ಯವಸ್ಥೆಗೆ ಇದು ಕೊನೆಯ ಮೊಳೆ ಆಗಿಬಿಡುತ್ತದೆ. ಮಹಿಳಾ ಮೀಸಲಾತಿಯ ಹೆಸರಿಟ್ಟು ದೇಶವನ್ನು ದೀರ್ಘಕಾಲ ಆಳುವ ಪ್ಲಾನ್ ಎಂದು ಪ್ರತಿಪಕ್ಷಗಳು ಅರ್ಥ ಮಾಡಿಕೊಂಡವು. ಎಲ್ಲಕ್ಕಿಂತ ಮುಖ್ಯವಾಗಿ ಉತ್ತರ ಮತ್ತು ದಕ್ಷಿಣ ಎಂಬ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಗೆ ತಡೆ ಬಿದ್ದದ್ದು ಪ್ರಜಾ ಸಂಘರ್ಷದಿಂದ ದೇಶವನ್ನು ಪಾರು ಮಾಡಿದಂತಾಯಿತು.
ಚುನಾವಣಾ ಲಾಭಕ್ಕಿಳಿದ ಮೋದಿ:
ಮೋದಿ ಸರ್ಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಮೊತ್ತ ಮೊದಲ ಬಾರಿಗೆ ಸಂಸತ್ತಿನಲ್ಲಿ ಮಸೂದೆಗಳ ಗೊಂಚಲು ಮಂಡಿಸಿ ಪಾಸು ಮಾಡಲು ಸಾಧ್ಯವಾಗದೇ ಹೋಯಿತು. ಈ ಹಿಂದೆ ಸಿಎಎ, ಜಮ್ಮು ಕಾಶ್ಮೀರದ ವಿಭಜನೆ, ಮುತ್ತಲಾಕ್, ವಕ್ಫ್ ಬಿಲ್ ಹೀಗೆ ಮುಸ್ಲಿಮರಿಗೆ ಸಂಬಂಧಿಸಿದ ಎಲ್ಲ ಮಸೂದೆಗಳನ್ನು ಕಾನೂನು ಮಾಡಲು ಪ್ರತಿಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಸಹಕರಿಸಿದ್ದನ್ನು ದೇಶ ಕಂಡಿದೆ. ಮುಸ್ಲಿಮರ ಅಸ್ತಿತ್ವವನ್ನು ಅತಂತ್ರಗೊಳಿಸುವಂತಹ ಮಸೂದೆಗೆ ಸಹಕರಿಸಿ ಪ್ರತಿಪಕ್ಷಗಳಿಗೆ ಏನೂ ಸಿಗಲಿಲ್ಲ, ಆದರೆ ಬಿಜೆಪಿಗೆ ಹಿಂದೂಗಳ ವೋಟು ಧ್ರುವೀಕರಣ ಸಾಧ್ಯವಾಗಿದೆ.
ಪಾರ್ಲಿಮೆಂಟಿನಲ್ಲಿ ಮಸೂದೆ ಬಿದ್ದು ಹೋಗಿದ್ದಕ್ಕೆ ಮೋದಿ ಬಹಳ ಭಾವನಾತ್ಮಕವಾಗಿ ಭಾಷಣ ಮಾಡಿದ್ದಾರೆ. ಇದರಲ್ಲಿ ಮೋದಿಯ ಚುನಾವಣಾ ಗಿಮಿಕ್ಕನ್ನು ಗುರುತಿಸಿದವರೂ ಇದ್ದಾರೆ. ಐದು ರಾಜ್ಯಗಳಲ್ಲಿ ಚುನಾವಣೆ ಇರುವಾಗಲೇ ವಿಶೇಷ ಅಧಿವೇಶನ ಕರೆದು, ಸಂಸದರನ್ನೆಲ್ಲ ದಿಲ್ಲಿಗೆ ಬರುವಂತೆ ಮಾಡಿ ಮೂರು ಮಸೂದೆಗಳ ಗೊಂಚಲನ್ನು ಇಟ್ಟದ್ದರಲ್ಲಿ ಎರಡು ಉದ್ದೇಶವಿತ್ತು: ಸೋತರೂ ಗೆದ್ದೆ, ಗೆದ್ದರೂ ಗೆದ್ದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿಕ್ಕಿದೆ. ಪ್ರತಿಪಕ್ಷಗಳು, ಅದರಲ್ಲೂ ಮಮತಾ ಬ್ಯಾನರ್ಜಿಯವರ ಟಿಎಂಸಿ ಕೂಡ ಮಹಿಳಾ ಮೀಸಲಾತಿ ವಿರುದ್ಧ ಇದೆ ಎಂದು ಕೂಗು ಹಾಕಿ ಪಶ್ಚಿಮ ಬಂಗಾಳದ ಮಹಿಳಾ ಮತದಾರರ ಮನವೊಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಒಂದು ತಂತ್ರ.
ಮಸೂದೆ ಗೆದ್ದರೆ ಮಹಿಳಾ ಮೀಸಲಾತಿ ನಾವೇ ತಂದದ್ದು ಎಂದು ಹೇಳಿಕೊಂಡು ಮಹಿಳಾ ಮತದಾರರನ್ನು ಒಲಿಸುವುದು ಇನ್ನೊಂದು ಪ್ಲಾನ್. ದಕ್ಷಿಣ ಭಾರತದ ರಾಜ್ಯಗಳನ್ನು ಹೊರತುಪಡಿಸಿದರೆ ಪಶ್ಚಿಮ ಬಂಗಾಳವನ್ನು ತಮ್ಮ ಹಿಡಿತಕ್ಕೆ ಪಡೆಯುವ ತಂತ್ರ ಇದಾಗಿತ್ತು. ಅಲ್ಲಿ ಎಂತಹ ತಿಪ್ಪರಲಾಗ ಹಾಕಿದರೂ ಜನ ಬಿಜೆಪಿಯತ್ತ ಈವರೆಗೆ ಒಲಿದಿಲ್ಲ. ಮಮತಾ ಬ್ಯಾನರ್ಜಿಯವರ ವೋಟು ಬ್ಯಾಂಕಾಗಿರುವ ಮುಸ್ಲಿಮರ ವೋಟುಗಳನ್ನು SIR ಮೂಲಕ ಕಡಿತಗೊಳಿಸಿ ಆಗಿದೆ. ಮಹಿಳೆ ಯರನ್ನು ಒಲಿಸುವ ಯೋಜನೆ ಮೋದಿಯ ಭಾವನಾತ್ಮಕ ಭಾಷಣದಲ್ಲಿತ್ತು ಎನ್ನಬಹುದು. ಪ್ರತಿಪಕ್ಷಗಳನ್ನು ಶೇ. 33 ಮಹಿಳಾ ಮೀಸಲಾತಿಯ ಹಂತಕರಂತೆ ಚಿತ್ರಿಸಿ ಮೋದಿ ಶಾಪ ಹಾಕಿದಂತೆ ಮಾತಾಡಿದ್ದು ಇದಕ್ಕೇ. ಆದರೆ ಮೋದಿ ತೋಡಿದ ಭಾವನಾತ್ಮಕ ಖೆಡ್ಡಾಕ್ಕೆ ಪಶ್ಚಿಮ ಬಂಗಾಳದ ಮತದಾರರು ವೋಟಿನ ಮೂಲಕ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕು.
ಹೌದು, ಮಹಿಳಾ ಮೀಸಲಾತಿಯನ್ನು ವಿರೋಧಿಸಿದವರೆಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಡಿಎಂಕೆ, ಸಮಾಜ ವಾದಿ ಪಾರ್ಟಿ, ಕಾಂಗ್ರೆಸ್ ಮೇಲೆ ಏರಿ ಹೋಗಿದ್ದಾರೆ. 2023ರಲ್ಲಿ ಪಾಸಾದ ಮಹಿಳಾ ಮೀಸಲಾತಿ ಈವರೆಗೆ ಜಾರಿ ಗೊಳಿಸಲು ತನ್ನಿಂದ ಸಾಧ್ಯವಾಗಿಲ್ಲ ಎಂಬ ಪಶ್ಚಾತ್ತಾಪ ಇರಬೇಕಿತ್ತು. ಆದರೆ ಕಾಂಗ್ರೆಸ್, ಅಖಿಲೇಶ್ ಯಾದವ್, ಡಿಎಂಕೆ, ಮಮತಾ ಬ್ಯಾನರ್ಜಿಯವರನ್ನು ಟೀಕಿಸುವುದರಲ್ಲೇ ಭಾಷಣ ಸುತ್ತುತ್ತಿತ್ತು. ಇದು ಪ್ರಧಾನಿ ಪದವಿಯ ದುರ್ಬಳಕೆ. ಅವರ ಭಾಷಣದಲ್ಲಿ ಅಧಿಕಾರಕ್ಕೆ ಬರಲು, ಚುನಾವಣೆ ಗೆಲ್ಲಲು ಬೇಕಾದ್ದೆಲ್ಲ ಇತ್ತು.
ನಿಜಕ್ಕೂ ಬಿಜೆಪಿ ಮಹಿಳಾ ಪರವೇ ಅಲ್ಲ
ನಿಮಗೂ ನೆನಪಿರಬಹುದು, 1990 ರಲ್ಲಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ತರಲು ಹೊರಟಾಗ ಇದೇ ಬಿಜೆಪಿ ಪ್ರತಿಪಕ್ಷದಲ್ಲಿ ಕೂತು ವಿರೋಧಿಸಿತ್ತು. 2023ರಲ್ಲಿ ಘೋಷಿಸಿದ ಮಹಿಳಾ ಮೀಸಲಾತಿಯನ್ನು ಈವರೆಗೂ ಜಾರಿಗೊಳಿಸಿಲ್ಲ. ಜನಗಣತಿ ನಡೆಸದೆ ಸೀಟು ಮರು ವಿಂಗಡನೆ ನಡೆಸಲು ಅವಕಾಶ ಕೊಟ್ಟಿದ್ದರೆ ಬಿಜೆಪಿಯ ಕೈಯಲ್ಲಿ ಮಹಿಳಾ ಸಶಕ್ತೀಕರಣ ಆಗಬಹುದು ಎಂಬ ಮಾತಿಗೆ ಆಧಾರಗಳಿಲ್ಲ. 2020ರಲ್ಲಿ ಉತ್ತರ ಪ್ರದೇಶದ ಹಾಥ್ರಸ್ನಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ 19 ವರ್ಷದ ಹುಡುಗಿಯ ಗ್ಯಾಂಗ್ ರೇಪ್ ನಡೆದಾಗ ಮೋದಿ ಮಾತಾಡಲಿಲ್ಲ.
2017ರಲ್ಲಿ ಬಿಜೆಪಿ ಎಂಎಲ್ಎ ಆಗಿದ್ದ ಕುಲ್ದೀಪ್ ಸೇಂಗರ್ ಮೂಲಕ 17 ವರ್ಷದ ಹುಡುಗಿಯ ಗ್ಯಾಂಗ್ ರೇಪ್ ಆದಾಗ ಮೋದಿ ಕಣ್ಣೀರಿಳಿಸಲಿಲ್ಲ. ಕಠುವಾದಲ್ಲಿ ಎಂಟು ವರ್ಷದ ಬಾಲಕಿಯ ಗ್ಯಾಂಗ್ ರೇಪ್, ಮಣಿಪುರದಲ್ಲಿ 2023ರಲ್ಲಿ ನಡೆದ ದೌರ್ಜನ್ಯ – ಇಲ್ಲೆಲ್ಲೂ ಮೋದಿ ಧ್ವನಿ ಎತ್ತಿಲ್ಲ. ಕಠುವಾದಲ್ಲಿ ಬಿಜೆಪಿಯವರು ರೇಪಿಸ್ಟ್ಗಳನ್ನು ಬೆಂಬಲಿಸಿ ಮೆರವಣಿಗೆ ನಡೆಸಿದರು. ಬಿಜೆಪಿ ಎಂಪಿ ಬೃಜ್ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಆರೋಪ ಮಾಡಿದಾಗಲೂ ಏನೂ ಕ್ರಮ ಆಗಲಿಲ್ಲ, ಅವರನ್ನು ಪಕ್ಷದಿಂದ ಕಿತ್ತು ಹಾಕಲಿಲ್ಲ. ಇಂತಹ ಮೋದಿ ಪಾರ್ಲಿಮೆಂಟಿನಲ್ಲಿ ಮಸೂದೆ ತಂದು ಮಹಿಳಾ ಸಶಕ್ತೀಕರಣದ ಕುರಿತು ಕಣ್ಣೀರಿಟ್ಟಿದ್ದನ್ನು ಕಂಡು ಜನ ನಗುತ್ತಿದ್ದಾರೆ. ಅಂದರೆ ಇವೆಲ್ಲವೂ ಅವಾಸ್ತವಿಕ ರಾಜಕೀಯ ಮತ್ತು ಹಿಡನ್ ಅಜೆಂಡಾಗಳು ಎಂದು ಸಾಮಾನ್ಯರಲ್ಲಿ ಸಾಮಾನ್ಯರು ಗುರುತಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯ ಮಗಳು ಪ್ರಧಾನಿಯ ಇನ್ನೊಂದು ಮುಖವನ್ನು ವಿವರಿಸುತ್ತಿರುವುದು ಜನಜಾಗೃತಿಗೆ ಕಾರಣವಾಗುತ್ತಿದೆ.
131ನೇ ಸಂವಿಧಾನ ತಿದ್ದುಪಡಿ ಮಸೂದೆ ಬಿದ್ದು ಹೋಗಿದೆ. ಸ್ಪೀಕರ್ ಮಧ್ಯ ಪ್ರವೇಶಿಸಿದಾಗಲೂ ಪ್ರತಿಪಕ್ಷಗಳು ಹೇಳಿದ್ದು ಒಂದೇ- “ಸಂವಿಧಾನ ತಿದ್ದುಪಡಿಯಿಂದ ಮಹಿಳಾ ಮೀಸಲಾತಿ ಮಸೂದೆಯನ್ನು ಬೇರೆ ಮಾಡಿದರೆ ಸಂಪೂರ್ಣ ಬೆಂಬಲ ಕೊಡಬಹುದು”. ಅಂದರೆ ಪ್ರತಿ ಪಕ್ಷಗಳು ವಿಫಲಗೊಳಿಸಿದ್ದು ಮಹಿಳಾ ಮೀಸಲಾತಿಯನ್ನಲ್ಲ, ಬದಲಾಗಿ ಕ್ಷೇತ್ರ ಮರುವಿಂಗಡನೆ ಮತ್ತು ಅವೈಜ್ಞಾನಿಕವಾಗಿ ಎಂಪಿ ಸೀಟುಗಳ ಸಂಖ್ಯೆ ಹೆಚ್ಚಿಸುವ ಸಂಚನ್ನು. ಅಂದರೆ ಪ್ರತಿ ಪಕ್ಷಗಳು ದೇಶಕ್ಕೆ ಎದುರಾಗಿದ್ದ ದುಃಸ್ಥಿತಿಯಿಂದ ಮಸೂದೆಯನ್ನು ಸೋಲಿಸುವ ಮೂಲಕ ಪಾರು ಮಾಡಿದವು.
ಜೊತೆಗೆ 2014ರ ನಂತರ ಮೋದಿ ಕಂಡ ಮೊದಲ ಸೋಲು ಇದು. ಈ ಮಸೂದೆಯನ್ನು ಸೋಲಿಸುವುದಕ್ಕಾಗಿ ಪಶ್ಚಿಮ ಬಂಗಾಳದ ಚುನಾವಣಾ ಬ್ಯುಸಿಯ ವೇಳೆಯೂ ಟಿಎಂಸಿಯ 20 ಸಂಸದರು ಸಂಸತ್ತಿನಲ್ಲಿ ಹಾಜರಾದರು ಎಂಬುದು ಮೋದಿತ್ವದ ವಿರುದ್ಧ ವಿಪಕ್ಷ ಗಳ ಸಂಘಟಿತ ಹೋರಾಟಕ್ಕೆ ಸಾಕ್ಷಿ. ಪ್ರತಿಪಕ್ಷಗಳೆಲ್ಲರೂ ಒಟ್ಟಾಗಿ ನಿಂತು ಈ ಮಸೂದೆಯನ್ನು ಸಮರ್ಥವಾಗಿ ವಿರೋಧಿಸಿದ್ದಾರೆ. ಇದೊಂದು `ಟ್ರೇಲರ್’- ಪ್ರಜಾಪ್ರಭುತ್ವದ ಶಕ್ತಿಯ ಸದ್ಬಳಕೆಗೆ ಮತ್ತು ಭಿನ್ನಾಭಿಪ್ರಾಯಗಳ ನಡುವೆಯೂ ಒಗ್ಗಟ್ಟಿಗೆ ಸಾಕ್ಷ್ಯ ವಹಿಸುವ ಟ್ರೇಲರ್. ಕ್ಷೇತ್ರ ಪುನರ್ ವಿಂಗಡನೆ ಎಂಬ ಸಂಚಿಗೆ ನೀಡಿದ ಆರಂಭಿಕ ಹೊಡೆತ. 2029ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಆ ಸಂಪೂರ್ಣ ದೃಶ್ಯಗಳು ಹೊರಬರುತ್ತವೆಯೇ? ಪ್ರಜಾಪ್ರಭುತ್ವದ ಮಾನದಂಡದಲ್ಲಿ ಅಳೆಯುವವರಿಗೆ ಇದು ಜನತೆಗೆ, ಅದ ರಲ್ಲೂ ದಕ್ಷಿಣ ಭಾರತದ ಜನತೆಗೆ ಸಿಕ್ಕಿದ ಗೆಲುವು ಆಗಿದೆ ಎನ್ನಬಹುದು.












