ಢಾಕ, ಜು. 15: ಬಾಂಗ್ಲಾದೇಶದ ಮಾಜಿ ಸೈನಿಕಾಧಿಕಾರಿ ಜನರಲ್ ಹುಸೈನ್ ಮುಹಮ್ಮದ್ ಇರ್ಷಾದ್(89) ನಿಧನರಾದರು. ಹತ್ತು ವರ್ಷಗಳ ಕಾಲ ಅವರು ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು. 1990ರಲ್ಲಿ ಪ್ರಜಾಪ್ರಭುತ್ವ ಪ್ರತಿಭಟನೆಯಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ನಂತರ ಕೆಲವು ವರ್ಷ ಭ್ರಷ್ಟಾಚಾರ ಪ್ರಕರಣದಲ್ಲ ಜೈಲು ಶಿಕ್ಷೆ ಅನುಭವಿಸಿದ್ದರು.
ಬಹಳ ಸಮಯದಿಂದ ಅವರು ವಯೋಸಹಜ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. 1982 ರಲ್ಲಿ ಅವರು ಸಶಸ್ತ್ರ ಸೇನೆಯ ಮುಖ್ಯಸ್ಥರಾಗಿದ್ದರು. ಪ್ರಜಾಪ್ರಭುತ್ವ ಸರಕಾರವನ್ನು ಬುಡಮೇಲು ಗೊಳಿಸಿ ಅಧಿಕಾರಕ್ಕೆ ಬಂದಿದ್ದರು. ಅವರ ಕಾಲದಲ್ಲಿ ಜಾತ್ಯತೀತ ರಾಷ್ಟ್ರವಾಗಿದ್ದ ಬಾಂಗ್ಲಾದೇಶ ಇಸ್ಲಾಮಿಕ್ ದೇಶವೆಂದು ಘೋಷಿಸಲಾಗಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು. ಈಗಿನ ಪ್ರಧಾನಿ ಶೇಖ್ ಹಸೀನಾ ಪ್ರತಿಪಕ್ಷ ನಾಯಕಿ ಖಾಲಿದಾ ಝಿಯಾ ಇರ್ಷಾದ್ರನ್ನು ಅಧಿಕಾರದಿಂದ ಕೆಳಗಿಳಿಸಲು ಒಟ್ಟುಗೂಡಿ ಹೋರಾಡಿದ್ದರು. ನಂತರ ಇರ್ಷಾದ್ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು.












