ಶಾಸಕರೆಲ್ಲ ರೆಸಾರ್ಟ್ ನಲ್ಲಿ: ತುಮಕೂರು ರೈತ ಸಂಘದಿಂದ ಛೀ ಥೂ ಪ್ರತಿಭಟನೆ

0
629

ತುಮಕೂರು, ಜು. ೧೫: ಶಾಸಕರ ರೆಸಾರ್ಟ್ ರಾಜಕಾರಣದ ವಿರುದ್ಧ ಸಾರ್ವಜನಿಕರ ಆಕ್ರೋಶ ಕಾವೇರತೊಡಗಿದೆ. ಶಾಸಕರನ್ನು ಹೀನಾಯವಾಗಿ ಬೈಯ್ಯುವ ಸ್ಥಿತಿ ಅಲ್ಲಲ್ಲಿ ಕಾಣತೊಡಗಿದೆ.

ತುಮಕೂರು ಜಿಲ್ಲೆಯ ಉದ್ದಕ್ಕೂ ರಾಜ್ಯ ರೈತ ಸಂಘದ ಕಾರ್ಯಕರ್ತರು ರೆಸಾರ್ಟ್ ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಎಲೆ ಅಡಿಕೆಯ ಎಂಜಲನ್ನು ಉಗಿದು ಥೂ ಥೂ.. ಅನ್ನುತ್ತಿದ್ದಾರೆ.

ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ನಲ್ಲಿ ಜಿಲ್ಲಾಧ್ಯಕ್ಷ ಆನಂದ ಹುಲಿಕಟ್ಟೆ ನೇತೃತ್ವದಲ್ಲಿ ನೂರಾರು ಜನ ರೈತರು ಸೇರಿದ್ದರು ಮತ್ತು ರೆಸಾರ್ಟ್ ಜನಪ್ರತಿನಿಧಿಗಳ ಫೋಟೋಗೆ ಎಂಜಲಿನ ಮಜ್ಜನ ಮಾಡಿಸಿ, ಚಪ್ಪಲಿ ಏಟು ಕೊಟ್ಟರು ಹಾಗೂ ಅವರ ಪ್ರತಿಕೃತಿ ದಹಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಮಂದಿ ಶಾಸಕರು ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ತಂಗಿದ್ದು ಅವರ ನ್ನು ಮತ್ತೆ ತಮ್ಮ ಪಾಳಯದಲ್ಲಿ ಸೇರಿಸಿಕೊಳ್ಳುವ ಪ್ರಯತ್ನಗಳೂ ವಿಫಲವಾಗಿರುವಂತಿದೆ. ವಿಶ್ವಾಸ ಮತಯಾಚನೆ ಗುರುವಾರದಂದು ನಡೆಯಲಿದ್ದು ಅಲ್ಲಿವರೆಗೆ ಎಲ್ಲ ಪಕ್ಷಗಳಿಗೂ ತಂತಮ್ಮ ಶಾಸಕರನ್ನು ಉಳಿಸಿಕೊಳ್ಳುವ ಸಂಕಟ ಎದುರಾಗಿದೆ. ಬಿಜೆಪಿಯೂ ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದೆ. ಬಿಜೆಪಿ ಶಾಸಕರು ರಮಡ ಮತ್ತು ಸಾಯಿಲೀಲಾ ರೆಸಾರ್ಟ್ ಸೇರಿದ್ದಾರೆ. ಜೆಡಿಎಸ್ ಪಕ್ಷ ತನ್ನ ಶಾಸಕರನ್ನು ನಂದಿಬೆಟ್ಟದ ಬಳಿಯಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಇಟ್ಟುಕೊಂಡಿದೆ. ಇತ್ತ ಕಾಂಗ್ರೆಸ್ ನಾಯಕರು ತಾಜ್ ವಿವಾಂತ ರೆಸಾರ್ಟಿನಲ್ಲಿದ್ದಾರೆಂದು ವರದಿಯಿದೆ.