ಸನ್ಮಾರ್ಗ ವಾರ್ತೆ
ಮಕ್ಕಾ: ಪವಿತ್ರ ಕಾಬಾ ಶುದ್ಧೀಕರಣವು ಅತ್ಯಂತ ಶ್ರದ್ಧೆಯೊಂದಿಗೆ ನೆರವೇರಿತು. ಮಕ್ಕಾದ ಉಪ ರಾಜ್ಯಪಾಲ ಅಮೀರ್ ಮಿಶಾಲ್ ಬಿನ್ ಮಜೀದ್ ಬಿನ್ ಅಬ್ದುಲ್ ಅಝೀಝ್ ಅವರು ಸುಲ್ತಾನ್ ಸಲ್ಮಾನ್ ಅವರ ಪರವಾಗಿ ಈ ಕಾರ್ಯದ ನೇತೃತ್ವ ವಹಿಸಿದ್ದರು. ಗ್ರಾಂಡ್ ಮಸೀದಿಗೆ ಆಗಮಿಸಿದ ಉಪ ರಾಜ್ಯಪಾಲರನ್ನು ಎರಡು ಪವಿತ್ರ ಮಸೀದಿಗಳ ಪ್ರಾಧಿಕಾರದ (ಟೂ ಹೋಲಿ ಮಾಸ್ಕ್ ಅಥಾರಿಟಿ) ಮುಖ್ಯಸ್ಥರು ಮತ್ತು ಅಧಿಕಾರಿಗಳು ಬರಮಾಡಿಕೊಂಡರು.
ನಂತರ ಕಾಬಾದ ಒಳಗೆ ಪ್ರವೇಶಿಸಿದ ಉಪ ರಾಜ್ಯಪಾಲರು, ಗುಲಾಬಿ ಮಿಶ್ರಿತ ಝಮ್ಝಮ್ ನೀರನ್ನು ಬಳಸಿ ಕಾಬಾದ ನೆಲವನ್ನು ತೊಳೆದರು. ಒಳಗಿನ ಗೋಡೆಗಳನ್ನು ಗುಲಾಬಿ ನೀರಿನಲ್ಲಿ ನೆನೆಸಿದ ವಿಶೇಷ ಬಟ್ಟೆಗಳಿಂದ ಒರೆಸಿ ಸ್ವಚ್ಛಗೊಳಿಸಲಾಯಿತು. ಮುಖ್ಯ ದ್ವಾರದ ಪರದೆಯನ್ನು ಮೇಲಕ್ಕೆತ್ತುವುದರೊಂದಿಗೆ ತೊಳೆಯುವ ಈ ಕಾರ್ಯವು ಪ್ರಾರಂಭವಾಯಿತು.
ವಾರ್ಷಿಕ ಸ್ವಚ್ಛತೆಯ ಸಂದರ್ಭದಲ್ಲಿ ಅನುಸರಿಸಲಾಗುವ ಸಾಂಪ್ರದಾಯಿಕ ಕಾರ್ಯವಿಧಾನಗಳ ಪ್ರಕಾರ, ಕಾಬಾ ತೊಳೆಯುವ ಪ್ರಕ್ರಿಯೆಯನ್ನು ಮೂರು ಮುಖ್ಯ ಹಂತಗಳಲ್ಲಿ ಪೂರ್ಣಗೊಳಿಸಲಾಯಿತು: ಸಿದ್ಧತೆ, ತೊಳೆಯುವುದು, ತದನಂತರ ಸುಗಂಧ ದ್ರವ್ಯಗಳನ್ನು ಮತ್ತು ಧೂಪವನ್ನು ಹಾಕುವುದು.
ಉನ್ನತ ಗುಣಮಟ್ಟಕ್ಕೆ ಅನುಗುಣವಾಗಿ ಮುಂಚಿತವಾಗಿಯೇ ಸಿದ್ಧಪಡಿಸಲಾದ ಉತ್ತಮ ದರ್ಜೆಯ ಸುಗಂಧ ದ್ರವ್ಯಗಳನ್ನು ಇದಕ್ಕಾಗಿ ಬಳಸಲಾಗಿತ್ತು. ಈ ಉದ್ದೇಶಕ್ಕಾಗಿಯೇ ವಿಶೇಷವಾಗಿ 15 ಲೀಟರ್ ಝಮ್ಝಮ್ ನೀರು, 15 ಲೀಟರ್ ಗುಲಾಬಿ ನೀರು, 15 ಲೀಟರ್ ಗುಲಾಬಿ ಎಣ್ಣೆ ಮತ್ತು 100 ಮಿಲಿ ಔದ್ ಎಣ್ಣೆಯನ್ನು ಸಿದ್ಧಪಡಿಸಲಾಗಿತ್ತು. ಕಾಬಾದ ಪವಿತ್ರತೆ ಮತ್ತು ಮುಸ್ಲಿಮರ ಹೃದಯದಲ್ಲಿ ಅದಕ್ಕಿರುವ ಉನ್ನತ ಸ್ಥಾನಕ್ಕೆ ತಕ್ಕಂತೆ ಪ್ರತಿಯೊಂದು ಹಂತವನ್ನು ಅತ್ಯಂತ ಕಾಳಜಿ ಮತ್ತು ನಿಖರತೆಯಿಂದ ನಿರ್ವಹಿಸಲಾಗಿದೆ ಎಂದು ಎರಡು ಪವಿತ್ರ ಮಸೀದಿಗಳ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಪವಿತ್ರ ಕಾಬಾದ ಸ್ವಚ್ಛತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಪ್ರಾಧಿಕಾರವು ಈಗಾಗಲೇ ಪೂರ್ಣಗೊಳಿಸಿತ್ತು. ಕಾರ್ಯಕ್ಕೆ ಅಗತ್ಯವಿರುವ ತಾಂತ್ರಿಕ, ಸೇವೆ ಮತ್ತು ಮಾನವ ಸಂಪನ್ಮೂಲಗಳನ್ನು ಸಜ್ಜುಗೊಳಿಸಲಾಗಿತ್ತು ಹಾಗೂ ತಾಂತ್ರಿಕ ಮತ್ತು ಇಂಜಿನಿಯರಿಂಗ್ ಸಿಬ್ಬಂದಿಯಿಂದ ಪೂರ್ಣ ಬೆಂಬಲವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಬಾವನ್ನು ಸ್ವಚ್ಛತೆಯು ಸೌದಿ ಸಂಸ್ಥಾಪಕ ಸುಲ್ತಾನ್ ಅಬ್ದುಲ್ ಅಝೀಝ್ ಅವರ ಕಾಲದಿಂದಲೂ ನಡೆದುಕೊಂಡು ಬಂದಿರುವ ಒಂದು ನಿರಂತರ ಆಚರಣೆಯಾಗಿದೆ. ಸುಲ್ತಾನ್ ಸಲ್ಮಾನ್ ಮತ್ತು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಡಳಿತಾವಧಿಯಲ್ಲಿ ಈ ಸಂಪ್ರದಾಯವನ್ನು ಉನ್ನತ ಮಟ್ಟದಲ್ಲಿ ಮುಂದುವರಿಸಿಕೊಂಡು ಬರಲಾಗಿದೆ ಎಂದು ಎರಡು ಪವಿತ್ರ ಮಸೀದಿಗಳ ಪ್ರಾಧಿಕಾರ ವಿವರಿಸಿದೆ.












