✍️ ಏ.ಕೆ. ಕುಕ್ಕಿಲ
ಆಧಾರ್ ಕಾರ್ಡ್
ಪಾನ್ ಕಾರ್ಡ್
ಓಟರ್ ಐಡಿ ಕಾರ್ಡ್
ಪಾಸ್ಪೋರ್ಟ್
ಇವು ಯಾವುವೂ ನಿಮ್ಮನ್ನು ಪರಿಪೂರ್ಣ ನಾಗರಿಕ ಎಂಬುದಾಗಿ ದೃಢೀಕರಿಸುವುದಿಲ್ಲ.
ಈ ದೇಶದಲ್ಲಿ ಸುಮಾರು 138 ಕೋಟಿ ಜನರಲ್ಲಿ ಆಧಾರ್ ಕಾರ್ಡ್ ಇದೆ. ಹಾಗಂತ, ಇದು ಯಾರಿಗೂ ಸುಲಭವಾಗಿ ದಕ್ಕಿಲ್ಲ. ಈ ಆಧಾರ್ ಕಾರ್ಡನ್ನು ಮಾಡಿಕೊಡುವುದಕ್ಕಾಗಿ ಯಾವ ಸರ್ಕಾರಿ ಅಧಿಕಾರಿಯೂ ಮನೆಗೆ ಬಂದಿಲ್ಲ. ಬದಲು 138 ಕೋಟಿ ಜನರೂ ಈ ಅಧಿಕಾರಿಗಳು ಇರುವ ಕಚೇರಿಗೆ ಹೋಗಿದ್ದಾರೆ. ಹೋದ ದಿನವೇ ಆಧಾರ್ ಕಾರ್ಡ್ ಆಗಿದ್ದೂ ಇಲ್ಲ. ಪದೇ ಪದೇ ಹೋಗಿದ್ದಾರೆ. ಲೈನಲ್ಲಿ ನಿಂತಿದ್ದಾರೆ. ಸರ್ವರ್ ತೊಂದರೆ, ಅದೂ ಇದೂ ಎಂದು ಹೇಳಿ ಈ ಬಡ ಭಾರತೀಯರನ್ನು ಪದೇ ಪದೇ ಕಚೇರಿಗೆ ಕರೆಸಲಾಗಿದೆ. ಹೀಗೆ ಹೋಗುವಾಗ ಇವರು ಖಾಲಿ ಕೈಯಲ್ಲಿ ಹೋಗುವಂತಿಲ್ಲ. ಫೋಟೋ ಜೊತೆ ಇರಬೇಕು. ಅದಕ್ಕಾಗಿ ಸ್ಟುಡಿಯೋಕ್ಕೆ ಹೋಗಿ ಫೋಟೋ ತೆಗೆಸಬೇಕು. ಅರ್ಜಿ ತುಂಬುವ ವೇಳೆ ಪಾಸ್ಪೋರ್ಟ್, ಓಟರ್ ಐಡಿ, ರೇಶನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಫೋಟೋ, ವಿದ್ಯುತ್ ಅಥವಾ ನೀರಿನ ಬಿಲ್, ಸರ್ಕಾರಿ ಗುರುತಿನ ಕಾರ್ಡ್, ಶಾಲಾ-ಕಾಲೇಜು ಸರ್ಟಿಫಿಕೇಟ್, ಜನನ ಪ್ರಮಾಣ ಪತ್ರ ಇತ್ಯಾದಿಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ದಾಖಲೆಗಳನ್ನು ಲಗತ್ತಿಸಬೇಕು. ಇನ್ನು,
5 ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ತಂದೆ ಅಥವಾ ತಾಯಿ ಮೂಲಕ ದೃಢೀಕರಣ ದಾಖಲೆ ಸಲ್ಲಿಸಬೇಕು. 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರದ ಜೊತೆ ತಂದೆ ಅಥವಾ ತಾಯಿ ಮೂಲಕ ದೃಢೀಕರಣ ನಡೆಯಬೇಕು. ಇಷ್ಟೆಲ್ಲ ಪ್ರಕ್ರಿಯೆಗಳ ಬಳಿಕ ನಿಮಗೆ ಆಧಾರ್ ಕಾರ್ಡ್ ಸಿಗುತ್ತದೆ. ಇದಕ್ಕಾಗಿ ಬಡವರು ಪಡಬಾರದ ಕಷ್ಟ ಪಟ್ಟಿರುತ್ತಾರೆ. ಆಧಾರ್ ಮಾಡಿಸುವುದಕ್ಕೆಂದು ಕಚೇರಿಗೆ ಹೋದರೂ ಮಾಹಿತಿ ಮತ್ತು ತಿಳುವಳಿಕೆಯ ಕೊರತೆಯ ಕಾರಣ ಅಗತ್ಯ ದಾಖಲೆಗಳನ್ನು ಕೊಂಡೊಯ್ಯದೇ ಮರಳಿ ಬಂದವರಿದ್ದಾರೆ. ಮತ್ತೊಮ್ಮೆ ಎಲ್ಲವನ್ನೂ ಸರಿಪಡಿಸಿ ಕೊಂಡು ಹೋದರೂ ಸರ್ವರ್ ಸಮಸ್ಯೆ ಅಥವಾ ಮುಗಿಯದ ಕ್ಯೂ ಕಾರಣಕ್ಕಾಗಿ ಮರಳಿ ಬಂದವರಿದ್ದಾರೆ. ಹೀಗೆ ಒಂದಕ್ಕಿಂತ ಹೆಚ್ಚು ದಿನಗಳ ಕಾಲ ಕೆಲಸಕ್ಕೆ ಹೋಗದೇ ಈ ಆಧಾರ್ ಕಾರ್ಡ್ ಮಾಡಿಸಿಕೊಂಡು ನಿಟ್ಟುಸಿರು ಬಿಟ್ಟ ಕೋಟ್ಯಂತರ ಬಡ ಭಾರತೀಯರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಇಷ್ಟೆಲ್ಲಾ ಮಾಡಿದ್ದರೂ ಇದು ಪೌರತ್ವವನ್ನು ದೃಢೀಕರಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. ಇದು ಬರೇ ಗುರುತಿನ ಚೀಟಿ ಮಾತ್ರ. ಅಂದಹಾಗೆ,
ಈಗಾಗಲೇ ನಮ್ಮ ಕೈಯಲ್ಲಿರುವ ಓಟರ್ ಐಡಿ ಅಮಾನ್ಯವಾಗಿದೆ. ಇದೀಗ ಹೊಸ ಓಟರ್ ಐಡಿಗಾಗಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಹಾಗಂತ, ಈ ಹಿಂದಿನ ಓಟರ್ ಐಡಿ ಕಾರ್ಡ್ ಸುಲಭದಲ್ಲಿ ಸಿಕ್ಕಿಲ್ಲ. ಅದಕ್ಕೂ ದಾಖಲೆಗಳನ್ನು ಸಲ್ಲಿಸಿಯೇ ಪಡಕೊಳ್ಳಲಾಗಿದೆ. ಈಗಿನ ಎಸ್ಐಆರ್ ಪ್ರಕ್ರಿಯೆಯಂತೂ ಬಡವರು ಬಿಡಿ ಎಲ್ಲರನ್ನೂ ಗೊಂದಲದಲ್ಲಿ ಸಿಲುಕಿಸಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ನೀವು ಗೆದ್ದು, ಓಟರ್ ಐಡಿ ನಿಮ್ಮ ಕೈಗೆ ಸಿಗಬೇಕಾದರೆ ಅರ್ಜಿಯೊಂದಿಗೆ ಇತ್ತೀಚಿನ ಪಾಸ್ ಪೋರ್ಟ್ ಸೈಝ್ ಫೋಟೋ ಲಗತ್ತಿಸಬೇಕು. ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಪಾನ್ ಕಾರ್ಡ್, 10 ಅಥವಾ 12ನೇ ತರಗತಿ ಸರ್ಟಿಫಿಕೇಟ್, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಪುಸ್ತಕ, ರೇಶನ್ ಕಾರ್ಡ್, ರಿಜಿಸ್ಟರ್ಡ್ ರೆಂಟ್ ಅಥವಾ ಲೀಸ್ ಡೀಡ್ ಇತ್ಯಾದಿಗಳನ್ನು ಅಗತ್ಯಕ್ಕೆ ತಕ್ಕಂತೆ ಲಗತ್ತಿಸಬೇಕು. ಎಲ್ಲ ದಾಖಲೆಗಳಲ್ಲೂ ಹೆಸರು ಒಂದೇ ರೀತಿ ಇರಬೇಕು. ಇಲ್ಲದಿದ್ದರೆ ಸರಿ ಇರುವ ಒಂದು ದಾಖಲೆಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ವಾಸ್ತವ್ಯ ಸರ್ಟಿಫಿಕೇಟ್ ಅಥವಾ ಪಾಸ್ಪೋರ್ಟ್ಗಳ ಪೈಕಿ ಯಾವುದಾದರೂ ಒಂದರಲ್ಲಿ ಸರಿಯಾದ ಹೆಸರು ಬರುವಂತೆ ನೋಡಿಕೊಳ್ಳಬೇಕು. ಹಾಗಂತ,
ಈ ದಾಖಲೆಗಳೆಲ್ಲ ಚಿಟಿಕೆ ಹೊಡೆಯುವಷ್ಟು ಸುಲಭ ದಲ್ಲಿ ಸಿಗುವುದಿಲ್ಲ. ಈ ಹಿಂದಿನ ಓಟರ್ ಐಡಿಯಲ್ಲಿ ಯಾವ ಹೆಸರಿದೆಯೋ ಅದೇ ರೀತಿಯಲ್ಲಿ ಇತರ ದಾಖಲೆಗಳಲ್ಲಿ ಹೆಸರಿರುವವರ ಸಂಖ್ಯೆ ಬಹಳ ಕಡಿಮೆ. ಸ್ಪೆಲ್ಲಿಂಗ್ ವ್ಯತ್ಯಾಸ ಇರುತ್ತದೆ. ತಂದೆ-ತಾಯಿಯ ಹೆಸರಿನಲ್ಲಿ ಅಕ್ಷರ ವ್ಯತ್ಯಾಸ ಇರುತ್ತದೆ. ಜನನ ಪ್ರಮಾಣ ಪತ್ರದಲ್ಲಿ ಇರುವಂತೆಯೇ ಶಾಲಾ ಸರ್ಟಿಫಿಕೇಟ್ನಲ್ಲಿ ಹೆಸರು ಇಲ್ಲದವರ ಸಂಖ್ಯೆ ಕೋಟ್ಯಂತರವಿದೆ. ಇವರೆಲ್ಲ ಈಗಿನ ಎಸ್ಐಆರ್ಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ವಾಸ್ತವ್ಯ ಸರ್ಟಿಫಿಕೇಟ್ ಪಡಕೊಳ್ಳುವುದಕ್ಕಾಗಿ ಕಚೇರಿ ಬಾಗಿಲಲ್ಲಿ ನಿಂತಿದ್ದಾರೆ. ರೇಶನ್ ಕಾರ್ಡ್ನಲ್ಲಿ ವಿಳಾಸ ಸರಿಪಡಿಸುತ್ತಿದ್ದಾರೆ. ಅಫಿದಾವಿತ್ಗಳನ್ನು ಮಾಡಿಕೊಡುತ್ತಾ, ಅದಕ್ಕಾಗಿ ನೋಟರಿಗಳ ಬಾಗಿಲು ತಟ್ಟುತ್ತಾ ದಿನಗಳನ್ನು ವ್ಯಯಿಸುತ್ತಿದ್ದಾರೆ. ಇಷ್ಟೆಲ್ಲ ಕಷ್ಟಪಟ್ಟು ಪಡಕೊಳ್ಳುವ ಓಟರ್ ಐಡಿ ಕಾರ್ಡ್ ಕೂಡ ಭಾರತೀಯ ನಾಗರಿಕತ್ವವನ್ನು ದೃಢೀಕರಿಸುವ ಪುರಾವೆ ಆಗುವುದಿಲ್ಲ ಎಂದು ಸರಕಾರ ಹೇಳಿದೆ. ಇದನ್ನು ಮತದಾನ ಮಾಡಲು ಇರುವ ಗುರುತಿನ ಕಾರ್ಡ್ ಎಂದಷ್ಟೇ ಪರಿಗಣಿಸಲಾಗುತ್ತದೆ. ಇಂಥ ಓಟರ್ ಐಡಿ ಈ ದೇಶದ 97 ಕೋಟಿ ಜನರಲ್ಲಿದೆ. ಅಂದಹಾಗೆ,
ಈ ದೇಶದ 15 ಕೋಟಿ ಜನರಲ್ಲಿ ಪಾಸ್ಪೋರ್ಟ್ ಇದೆ. ಈ ಪಾಸ್ಪೋರ್ಟ್ ಕೂಡಾ ಸುಲಭದಲ್ಲಿ ಲಭ್ಯ ಇಲ್ಲ. ಇದು ಲಭ್ಯವಾಗ ಬೇಕಾದರೆ ಜನನ ಪ್ರಮಾಣ ಪತ್ರ, ಎಸ್ಸೆಸ್ಸೆಲ್ಸಿ ಪ್ರಮಾಣ ಪತ್ರ, ಪಾನ್ ಕಾರ್ಡ್, ಆಧಾರ್ ಕಾರ್ಡ್, ಓಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ಬುಕ್, ನೀರು ಅಥವಾ ವಿದ್ಯುತ್ ಬಿಲ್, ರೇಷನ್ ಕಾರ್ಡ್, ರೆಂಟ್ ಡೀಡ್.. ಇತ್ಯಾದಿಗಳಲ್ಲಿ ಅಗತ್ಯ ಕಂಡುಬಂದವುಗಳನ್ನು ಸಲ್ಲಿಸಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪೋಷಕರ ವಿಳಾಸ ಮತ್ತು ಅವರ ಸಮ್ಮತಿ ಪತ್ರಗಳನ್ನು ದಾಖಲಿಸಬೇಕು. ವಿವಾಹಿತರು ಪತ್ನಿ ಅಥವಾ ಪತಿಯ ಹೆಸರನ್ನು ಸೇರಿಸಲು ವಿವಾಹ ಪ್ರಮಾಣ ಪತ್ರ ಲಗತ್ತಿಸಬೇಕು. ಅಲ್ಲದೇ,
ಪಾಸ್ಪೋರ್ಟ್ ಅರ್ಜಿ ಸಲ್ಲಿಸುವುದೂ ಸುಲಭ ಅಲ್ಲ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಅಪಾಯಿಂಟ್ಮೆಂಟ್ ಪಡೆದುಕೊಂಡು ಕಚೇರಿಗೆ ಹೋಗ ಬಹುದಾದರೂ ಹೀಗೆ ಮಾಡುವುದು ದುಸ್ತರವಾಗಿರುವುದರಿಂದ ಹೆಚ್ಚಿನ ಎಲ್ಲರೂ ಏಜೆಂಟ್ಗಳ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಯಾಕೆಂದರೆ, ಪಾಸ್ಪೋರ್ಟ್ ಕಚೇರಿಯ ಅಧಿಕಾರಿಗಳು ಸಣ್ಣ ಸಣ್ಣ ತಪ್ಪುಗಳ ಕಾರಣಕ್ಕಾಗಿ ಮರಳಿ ಕಳಿಸಿಕೊಡುತ್ತಾರೆ. ಹಾಗಾದಾಗ, ಪುನಃ ಆನ್ಲೈನ್ನಲ್ಲಿ ಅಪಾಯಿಂಟ್ಮೆಂಟ್ ಪಡೆಯಬೇಕು. ಪುನಃ ಕಚೇರಿಗೆ ಹೋಗಬೇಕು. ಇಂಥ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಏಜೆಂಟರ ಮೂಲಕ ಹೋಗುವುದು ಹೆಚ್ಚು ಉತ್ತಮ ಎಂದು ಭಾವಿಸುವವರೇ ಹೆಚ್ಚು. ಹೀಗೆ ಕನಿಷ್ಠ ಒಂದು ದಿನವನ್ನಂತೂ ಈ ಪಾಸ್ಪೋರ್ಟ್ ಮೀಸಲಿಡಬೇಕಾಗುತ್ತದೆ. ಹಾಗಂತ,
ಇಷ್ಟೆಲ್ಲಾ ದಾಖಲೆಗಳನ್ನು ಒದಗಿಸಿ ಪಾಸ್ಪೋರ್ಟ್ ಕಚೇರಿಯಲ್ಲಿ ಪಾಸ್ ಆದರೂ ಪಾಸ್ಪೋರ್ಟ್ ಕೈಗೆ ಸಿಗುವ ಖಚಿತತೆ ಇರುವುದಿಲ್ಲ. ಆ ಬಳಿಕ ಪೊಲೀಸ್ ವೆರಿಫಿಕೇಶನ್ ಇರುತ್ತದೆ. ಪೊಲೀಸರು ಮನೆಗೆ ಬಂದು ವ್ಯಕ್ತಿಯ ಇರುವಿಕೆಯ ಬಗ್ಗೆ ಖಚಿತಪಡಿಸಿಕೊಳ್ಳುತ್ತಾರೆ. ಪಕ್ಕದ ಮನೆಯವರ ಜೊತೆ ಫೋಟೋ ತೆಗೆಸಿಕೊಂಡು ಅವರ ಆಧಾರ್ ಕಾರ್ಡ್ನ ಜೊತೆ ಈ ಫೋಟೋವನ್ನು ಪೊಲೀಸ್ ಠಾಣೆಗೆ ಸಲ್ಲಿಸಬೇಕಾಗುತ್ತದೆ. ಆ ಬಳಿಕ ಇನ್ಸ್ಪೆಕ್ಟರ್ರಿಂದ ವಿಚಾರಣೆ ನಡೆಯುತ್ತದೆ. ಹೀಗೆ ಸ್ಪಷ್ಟಪಡಿಸಿಕೊಂಡ ಬಳಿಕ ಪಾಸ್ಪೋರ್ಟ್ ಸಿಗುತ್ತದೆ. ಆದರೂ ಇದು ಭಾರತೀಯ ನಾಗರಿಕತ್ವಕ್ಕೆ ಪರಿಪೂರ್ಣ ದಾಖಲೆಯಾಗುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಸರಕಾರದ ಪ್ರಕಾರ,
- ಪಾಸ್ಪೋರ್ಟ್: ವಿದೇಶ ಪ್ರಯಾಣವನ್ನು ಸುಲಭಗೊಳಿಸುವ ದಾಖಲೆ ಮಾತ್ರ.
- ಆಧಾರ್ ಕಾರ್ಡ್: 12 ಸಂಖ್ಯೆಗಳ ಬರೇ ಗುರುತಿನ ಚೀಟಿ ಮಾತ್ರ.
- ಓಟರ್ ಐಡಿ: ಮತದಾನ ಮಾಡುವುದಕ್ಕೆ ಇರುವ 10 ಸಂಖ್ಯೆಯ ಗುರುತಿನ ಚೀಟಿ ಮಾತ್ರ.
- ಪಾನ್ ಕಾರ್ಡ್: ತೆರಿಗೆ ಗುರುತಿನ ದಾಖಲೆ ಮಾತ್ರ.
ಅಂದಹಾಗೆ,
ಈ ಎಲ್ಲವೂ ಚರ್ಚೆಗೆ ಬರುವುದಕ್ಕೆ ಕಾರಣ ಏನೆಂದರೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿ ರುವ ಹೇಳಿಕೆ. ಓರ್ವರಲ್ಲಿ ಪಾಸ್ ಪೋರ್ಟ್ ಇದೆ ಎಂಬುದು ಆತ/ಆಕೆ ಭಾರತೀಯ ನಾಗರಿಕರು ಎಂಬುದನ್ನು ಪರಿಪೂರ್ಣವಾಗಿ ದೃಢಪಡಿಸುವುದಿಲ್ಲ ಎಂದು ಕೇಂದ್ರ ಸಚಿವಾಲಯ ಹೇಳಿದೆ. 14ನೇ ಪಾಸ್ಪೋರ್ಟ್ ಸೇವಾ ದಿನದಂದು ನೀಡಿರುವ ಈ ಹೇಳಿಕೆಯು ಪೌರತ್ವದ ಬಗ್ಗೆ ಹತ್ತು-ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪಾಸ್ಪೋರ್ಟನ್ನು ನೋಡಿ ವಿದೇಶಿ ರಾಯಭಾರ ಕಚೇರಿಗಳು ವೀಸಾ ಗಳನ್ನು ನೀಡುತ್ತವೆ. ಆದರೆ, ಇನ್ನು ಮುಂದೆ ಯಾವುದೇ ಭಾರತೀಯ ಪ್ರಜೆಗೆ ವಿದೇಶಿ ರಾಯಭಾರ ಕಚೇರಿಗಳು ವೀಸಾ ನಿರಾಕರಿಸಬಹುದು, ಭಾರತೀಯ ನಾಗರಿಕ ಎಂಬುದನ್ನು ಸಾಬೀತುಪಡಿಸುವಂತೆ ಕೋರಬಹುದು, ಈಗಾಗಲೇ ವಿದೇಶದಲ್ಲಿರುವ ಭಾರತೀಯರಲ್ಲಿ ಪೌರತ್ವ ದಾಖಲೆಯನ್ನು ಕೇಳಬಹುದು. ಇದನ್ನೆಲ್ಲಾ ನಿಭಾಯಿಸುವುದು ಹೇಗೆ? ಅಲ್ಲದೇ, ಇನ್ನೂ ಒಂದು ಪ್ರಶ್ನೆ ಇದೆ. ಭಾರತೀಯರನ್ನು ಬಿಡಿ, ರಾಷ್ಟ್ರಪತಿ, ಪ್ರಧಾನಿ, ಉಪ ರಾಷ್ಟ್ರಪತಿ, ಮಂತ್ರಿಗಳು, ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶರು, ರಾಜ್ಯ ಪಾಲರುಗಳು, ಮುಖ್ಯಮಂತ್ರಿಗಳು.. ಮುಂತಾದವರೆಲ್ಲ ಭಾರತೀಯ ಪೌರರಾ? ಅವರ ಪೌರತ್ವವನ್ನು ಸಾಬೀತುಪಡಿಸುವ ಏಕ ಐಡಿ ಯಾವುದಿದೆ? ಅಷ್ಟಕ್ಕೂ,
ಚರ್ಚೆಯೇ ಅಲ್ಲದ ಸಮಯದಲ್ಲಿ ಕೇಂದ್ರ ಸರಕಾರ ಯಾಕೆ ಈ ಪೌರತ್ವದ ವಿಷಯವನ್ನು ಚರ್ಚಾಸ್ಪದ ಮಾಡಿಕೊಂಡಿದೆ? ಇದರ ಹಿಂದೆ ಕಾಕ್ರೋಚ್ ಪ್ರತಿಭಟನೆ, ನೀಟ್ ಆತ್ಮಹತ್ಯೆ ಇತ್ಯಾದಿಗಳನ್ನು ಪರದೆಯ ಹಿಂದೆ ಸರಿಸುವ ಮತ್ತು ಜನರನ್ನು ದಿಕ್ಕು ತಪ್ಪಿಸುವ ಉದ್ದೇಶ ಇದೆಯಾ? ಟಿವಿ ಚಾನೆಲ್ಗಳನ್ನು ಈ ವಿಷಯದಲ್ಲಿ ಮಗ್ನಗೊಳಿಸುವ ಸಂಚು ಅಡಗಿದೆಯಾ?
ಜನರನ್ನು ಒಂದಿಲ್ಲೊಂದು ನೆಪದಲ್ಲಿ ದಾಖಲೆಗಳ ಹಿಂದೆ ಓಡುವಂತೆ ಮಾಡುವ ಮೂಲಕ ಸದಾ ಬ್ಯುಝಿಯಾಗಿಡುವುದು ಮತ್ತು ಆಡಳಿತ ವೈಫಲ್ಯಗಳ ಕಡೆಗೆ ಗಮನ ಹರಿಯದಂತೆ ಅವರನ್ನು ತಡೆಯುವುದಕ್ಕೆ ಹೀಗೆ ಮಾಡಲಾಗುತ್ತಿದೆಯಾ? ಜನರನ್ನು ಸದಾ ಭಯದಲ್ಲಿರಿಸುವುದಕ್ಕೆ ಪ್ರಭುತ್ವ ತಂತ್ರ ರೂಪಿಸಿದೆಯಾ? ಅಥವಾ,
ಎನ್ಆರ್ಸಿಯನ್ನು ಮತ್ತೆ ಜಾರಿಗೊಳಿಸುವುದು ಕೇಂದ್ರದ ಉದ್ದೇಶವಾ? ಅದಕ್ಕಾಗಿಯೇ ನಾಗರಿಕತ್ವ ಚರ್ಚೆಯನ್ನು ಹುಟ್ಟು ಹಾಕಲಾಗಿದೆಯಾ? ಎಸ್ಐಆರ್ನ ಬಳಿಕ ಎನ್ಆರ್ಸಿಯನ್ನು ತರುವುದಕ್ಕೆ ಪೂರಕ ಯೋಜನೆ ರೂಪಿಸಲಾಗಿದೆಯಾ? ಆಧಾರ್ ಕಾರ್ಡ್ನಂತೆ ಪೌರತ್ವ ಕಾರ್ಡನ್ನು ಕೊಡುವುದು ಕೇಂದ್ರದ ಉದ್ದೇಶವಾ? ಸಾಧ್ಯತೆ ಇದೆ.












