ಸಂವಿಧಾನ ತಿದ್ದುಪಡಿಗೆ ಜನಪ್ರತಿನಿಧಿಗಳ ಖರೀದಿ

0
194

✍️ ಅರಫಾ ಮಂಚಿ

ಮಹಾರಾಷ್ಟ್ರದಲ್ಲಿ ಅಸಲಿ ಶಿವಸೇನೆ ಎರಡನೇ ಬಾರಿ ಹೋಳಾಗಿದೆ. ಉದ್ಧವ್ ಶಿವಸೇನೆಯ ಆರು ಮಂದಿ ಸಂಸದರಾದ ಸಂಜಯ್ ದೀನಾ ಪಾಟೀಲ್, ಸಂಜಯ್ ದೇಶ್‌ಮುಖ್, ಸಂಜಯ್ ಜಾಧವ್, ಬಾವೂಸಾಹೇಬ್ ವಾಕಚೌರೆ, ಪಾಟೀಲ್ ಅಷ್ಟೀಕರ್, ಓಮ್ ಪ್ರಕಾಶ್ ರಾಜೆನಿಂಬಾಲ್ಕರ್‌ರವರನ್ನು ಏಕನಾಥ ಶಿಂಧೆ ತನ್ನ ಬಣಕ್ಕೆ ಪಕ್ಷಂತಾರ ಮಾಡಿಸಿಕೊಂಡಿದ್ದಾರೆ. ಇದೇವೇಳೆ ಆಪರೇಷನ್ ಸಕ್ಸಸ್ ಎಂದು ಉದ್ಘಾರ ತೆಗೆದದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್. ಇವರಿಗೆೆ ಖುಷಿಯಾಗುವುದಕ್ಕೆ ಆ ಆರೂ ಸಂಸದರು ಬಿಜೆಪಿ ಸೇರಿದ್ದಾ? ಅಲ್ಲ. ಅವರು ಉದ್ಧವ್‌ರಿಂದ ಶಿಂಧೆಯ ಕಡೆ ನಿಷ್ಠೆ ಬದಲಿಸಿದ್ದು ಮತ್ತು ಮಹಾರಾಷ್ಟ್ರದಲ್ಲಿ ಫಡ್ನವಿಸ್ ನೇತೃತ್ವದ ಮಹಾಯುತಿ ಸರಕಾರ ಗಟ್ಟಿಯಾಗಿಯೇ ಇದೆ. ಹಾಗಿದ್ದೂ ಫಡ್ನವಿಸ್ ಹೊರಡಿಸಿದ ಸಕ್ಸಸ್ ಉದ್ಘಾರಕ್ಕೆ ದೇಶದ ಪಾರ್ಲಿಮೆಂಟಿನಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ ಎಂಬರ್ಥ ಇದೆ. ಎನ್‌ಡಿಎಗೆ(ಬಿಜೆಪಿಗೆ) 20 ತೃಣಮೂಲ ಕಾಂಗ್ರೆಸ್ ಸಂಸದರು ಬಂದ ಬಳಿಕ ಈಗ ಮಹಾರಾಷ್ಟ್ರದ ಉದ್ಧವ್ ಕಡೆಯ ಆರು ಎಂಪಿಗಳ ಬಲ ಹೆಚ್ಚಿತು. ಮೋದಿ ಸರಕಾರ ಸಂವಿಧಾನ ತಿದ್ದುಪಡಿ ಸಹಿತ ಮುಸ್ಲಿಮರನ್ನು ಸದೆ ಬಡಿಯುವ ಯಾವುದೇ ಮಸೂದೆಯನ್ನು ಪಾಸು ಮಾಡಬಹುದು ಎಂಬ ಅರ್ಥವೂ ಅದಕ್ಕೆ ಇದೆ.

45 ದಿವಸ; 23 ಮುಸ್ಲಿಂ ಧಾರ್ಮಿಕ ಸಂಸ್ಥೆಗಳ ಧ್ವಂಸ:

ಹೌದು, ಈಗ ಬಿಜೆಪಿಗೆ ಅಧಿಕಾರ ಸಿಕ್ಕ ಮೇಲೆ ಮುಸ್ಲಿಂ ದಮನ ಹೇಗೆ ಸಾಗುತ್ತದೆ ಎಂಬುದನ್ನು ಮೇಲಿನ ಲೆಕ್ಕ ಹೇಳುತ್ತಿದೆ. ಸಾವಿರ ವರ್ಷದಿಂದ ಹಿಡಿದು ಎರಡು ಶತಮಾನ ಕಾಲದ ಮಸೀದಿಗಳು, ದರ್ಗಾಗಳು, ಮದರಸಗಳ ಸಹಿತ ಒಟ್ಟು 23 ಮುಸ್ಲಿಂ ಧಾರ್ಮಿಕ ಕೇಂದ್ರಗಳನ್ನು ಬರೇ 45 ದಿವಸಗಳಲ್ಲಿ ಬುಲ್ಡೋಝ್ ಮಾಡಿದ್ದಾರೆ. ನೋಡಿ ಉತ್ತರ ಪ್ರದೇಶದ ಸಂಭಾಲ್, ವಾರಣಾಸಿ, ಜೈಪುರ ಸಹಿತ ಬಿಜೆಪಿ ರಾಜ್ ಇರುವ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದಿರುವ ಬುಲ್ಡೊಝಿಂಗ್ ಕ್ರಮಗಳು ಜಸ್ಟಿಸ್ ಫಾರ್ ಆಲ್ ನಡೆಸಿದ ಅಧ್ಯಯನದಲ್ಲಿ ಗೊತ್ತಾಗಿದೆ. ಅನುಮತಿಯಿಲ್ಲದೆ ಕಟ್ಟಿದ್ದೆಂದು ಆರೋಪಿಸುವುದು ಮತ್ತು ಮುಸ್ಲಿಮರ ಕೇಂದ್ರಗಳನ್ನು ಕೆಡವಿಹಾಕುವುದು. ಒಂದು ಉದಾಹರಣೆ ಎತ್ತಿಕೊಳ್ಳುವುದಾದರೆ ದಿಲ್ಲಿಯ 200 ವರ್ಷ ಹಿಂದಿನ ಮಂಗೋಲ್ಪುರಿ ದರ್ಗಾ ಮತ್ತು ಮುಂಬೈ ಬಾಂದ್ರ ದಲ್ಲಿ ಎರಡು ಮಸೀದಿಗಳನ್ನು ಕೆಡವಿ ಹಾಕಿದ್ದನ್ನು ಉಲ್ಲೇಖಿಸ ಬಹುದು.

ಈಗ ಬುಲ್ಡೋಝಿಂಗ್ ಪಾರ್ಟಿಗಳ ಸೌಧದ ಬುಡಕ್ಕೆ:

ದೇಶದಲ್ಲಿರುವ ಪ್ರತಿಪಕ್ಷ ಪಾರ್ಟಿಗಳು ಸಂವಿಧಾನಕ್ಕೆ ಬದ್ಧವಾಗಿದ್ದರೆ ದೇಶಾದ್ಯಂತ ಮುಸ್ಲಿಮರ ವಿರುದ್ಧ ನಡೆ ಯುವ ದೌರ್ಜನ್ಯಗಳ ವಿರುದ್ಧ ಹೋರಾಟ ಕಟ್ಟಬೇಕಿತ್ತು. ಅವರ ಅಸ್ತಿತ್ವದ ಮೇಲಿನ ಪ್ರಹಾರಗಳನ್ನು ಪ್ರತಿ ಪಕ್ಷಗಳು ಪ್ರತಿಭಟಿಸಬೇಕಿತ್ತು. ಮುಸ್ಲಿಮರ ವೋಟುಗಳನ್ನು ಪಡೆಯುತ್ತಿರುವ ಪಾರ್ಟಿಗಳು ಬಾಯುಪಚಾರಕ್ಕೆ ಒಂದ್ಮಾತಾಡಿ ಮುಸ್ಲಿಮರಿಗೆ ಬೆನ್ನು ಹಾಕಿದ್ದೇ ಹೆಚ್ಚು. ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್ಸಿನ ವರಿಷ್ಠ ನಾಯಕರು ಕೂಡ ಸುಮ್ಮಗೆ ಬಿಲದಲ್ಲಿ ಕೂತದ್ದೇ ಹೆಚ್ಚು. ಇದು ಕೂಡ ಮುಸ್ಲಿಮ್ ವಿರೋಧಿ ರಾಜಕೀಯ ಅಜೆಂಡ. ಪ್ರತಿ ಪಕ್ಷಗಳ ಮೌನ ನಿಜಕ್ಕೂ ಬಿಜೆಪಿಗೆ ಮುಸ್ಲಿಮರ ಮೇಲೆ ಮುಗಿಬೀಳಲು ಇನ್ನಷ್ಟು ಹುಮ್ಮಸ್ಸು ಕೊಟ್ಟಿದೆ.

ಈಗ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೀಗೆ ಹೇಳುತ್ತಾರೆ: ಮುಸ್ಲಿಂ ಕ್ರಿಶ್ಚಿಯನ್ ಮತದಾರರನ್ನು ಬಿಜೆಪಿ ನಮ್ಮ ದೇಶದ ನಾಗರಿಕರೇ ಅಲ್ಲ ಎಂದು ಮಾಡಲು ಮುಂದಾಗಿದೆ. ಹಾಗಿದ್ದರೆ ಪಾರ್ಟಿಯನ್ನು ಒಡೆಯುವುದು ಮತ್ತು ಎಸ್‌ಐಆರ್ ತಂದುದು ಎಲ್ಲ ಮುಸ್ಲಿಂ ದಮನಕ್ಕಾಗಿದೆ ಎಂದು ಕಾಂಗ್ರೆಸ್ ಒಪ್ಪಿಕೊಂಡಂತೆ ಇದು. ಆದರೆ ಈಗ ಬಿಜೆಪಿಯ ತಂತ್ರ ಕುತಂತ್ರಗಳಿಗೆ ಬಹುಶಃ ಕರ್ನಾಟಕವೇ ತಿರುಮಂತ್ರ ಹೆಣೆಯುವ ದಿಟ್ಟತನವನ್ನು ಮಾಡಿ ತೋರಿಸ ತೊಡಗಿದೆ.

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಡಿ ತೋರಿಸಿದ್ದಾರೆ. ಅವರು ಸಂಸದರನ್ನು ಕಿತ್ತುಕೊಂಡರೆ. ಡಿಕೆಶಿ ಬಿಜೆಪಿ ದಳಗಳ ಶಾಸಕರ ವೋಟುಗಳನ್ನು ಕಿತ್ತುಕೊಂಡರು. ಬಿಜೆಪಿ ಅಜೆಂಡಕ್ಕೆ ಚಿಕ್ಕಮಟ್ಟದ್ದಾದರೂ ಇಲ್ಲಿಂದ ಕಾಂಗ್ರೆಸ್ ತಿರುಗು ಏಟು ಕೊಟ್ಟಿದೆ. ಏಳು ಸೀಟುಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ತನ್ನ ಪಾರ್ಟಿಯ ಐದು ಅಭ್ಯರ್ಥಿಗಳನ್ನು ಡಿಕೆಶಿ ಗೆಲ್ಲಿಸಿದ್ದಾರೆ. ಮತಗಳ ಲೆಕ್ಕದಲ್ಲಿ ನಾಲ್ಕು ಮಂದಿ ಮಾತ್ರ ಗೆಲ್ಲುತ್ತಿದ್ದರು. ಬಿಜೆಪಿ ಜೆಡಿಎಸ್ ಕಾಂಗ್ರೆಸ್‌ಗೆ ಅಡ್ಡಮತದಾನ ಮಾಡಿದ್ದರಿಂದ ಡಿಕೆಶಿಗೆ ಐದನೇ ಅಭ್ಯರ್ಥಿಯನ್ನೂ ಗೆಲ್ಲಿಸಲು ಸಾಧ್ಯವಾಗಿದೆ. ಪಕ್ಷ ಒಡೆದು ಸಂಸದರನ್ನು ತಮ್ಮ ಪರಮಾಡಿಕೊಳ್ಳುತ್ತಿರುವ ಬಿಜೆಪಿಯ ಶಾಸಕರನ್ನೇ ಕರ್ನಾಟಕದಲ್ಲಿ ಡಿಕೆಶಿ ತಾತ್ವಿಕವಾಗಿ ಕಾಂಗ್ರೆಸ್ ಪರ ವಾಲಿಸಿದ್ದಾರೆ.

ಕಾನೂನು ಪಾಸಿಗೆ ರಾಜ್ಯಸಭೆಯಲ್ಲಿಯೂ ಶಕ್ತಿ ಬೇಕು:

ಮುಸ್ಲಿಮರ ವಿರುದ್ಧ ಯಾವುದೇ ಅಜೆಂಡವನ್ನು ಕಾನೂನು ರೂಪಕ್ಕೆ ತರುವುದಾದರೂ ಬಿಜೆಪಿಗೆ ರಾಜ್ಯಸಭೆಯಲ್ಲಿಯೂ ಬಹುಮತ ಇರಬೇಕಾಗುತ್ತದೆ. ಮೋದಿ ಸರಕಾರದ ಬಹುತೇಕ ಎಲ್ಲ ಕಾನೂನುಗಳನ್ನು ಒಂದಿಲ್ಲ ಒಂದು ಕಾರಣಕ್ಕೆ ಮುಸ್ಲಿಂ ವಿರೋಧಿಯಾಗಿರುತ್ತದೆ. ಅಥವಾ ಕಾಂಗ್ರೆಸ್ ವಿರೋಧಿ. ನೋಡಿ, ನಾಗ ರಿಕ ತಿದ್ದುಪಡಿ, ಚುನಾವಣಾ ಆಯೋಗದ ಮೂಲಕ ಎಸ್‌ಐಆರ್, ಕಾಶ್ಮೀರದ ಪ್ರತ್ಯೇಕ ಸ್ಥಾನಮಾನ ರದ್ದು. ಅಗತ್ಯ ಇಲ್ಲದಿದ್ದರೂ ಮುತ್ತಲಾಕ್ ನಿಷೇಧ. ಮುಂದಕ್ಕೆ ಬರುವ ಯುನಿಫಾರ್ಮ್ ಸಿವಿಲ್ ಕೋಡ್. ಎಲ್ಲವೂ ಮುಸ್ಲಿಮರನ್ನು ಹಣಿಯುವ ಗುರಿಯಿಟ್ಟು ಕೊಂಡಿರುತ್ತದೆ. ಸಂವಿಧಾನ ತಿದ್ದುಪಡಿ ಡಿಲಿಮಿಟೇಶನ್ ಪ್ರಯತ್ನಗಳು ಕೂಡ ಅದೇ ಹಿಂದುತ್ವ ಸಿದ್ಧತೆಯ ಭಾಗ.

ಜೂನ್ 11ಕ್ಕೆ ತೃಣಮೂಲ ಕಾಂಗ್ರೆಸ್ಸಿನ ರಾಜ್ಯ ಸಭಾ ಎಂಪಿ ಪ್ರಕಾಶ್ ಚಿಕ್ ಬಾರಿಕ್ ರಾಜ್ಯಸಭೆಗೆ ರಾಜೀನಾಮೆ ನೀಡಿದರು. ಅದಕ್ಕಿಂತ ಮೊದಲು ತೃಣಮೂಲದ ಸುಖೇಂದು ಸೇಕರ್ ರಾಯ್ ಮತ್ತು ಸುಶ್ಮಿತ ಸೇನ್ ರಾಜೀನಾಮೆ ನೀಡಿ ದ್ದರು. ಈ ರಾಜೀನಾಮೆಗಳಲ್ಲಿ ಕೂಡ ಬಿಜೆಪಿಯ ನಂಬರ್ ಗೇಮ್ ಉದ್ದೇಶ ಇದೆ. ಇನ್ನೊಂದು ಕಡೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಉಚ್ಚಾಟಿತ ಎಂಎಲ್‌ಎ ಋತಬ್ರತ ಬ್ಯಾನರ್ಜಿಯನ್ನು ಸ್ಪೀಕರ್ ರತೀಂದ್ರ ಬೋಸ್ ವಿಪಕ್ಷ ನಾಯಕ ಎಂದು ಅಂಗೀಕರಿಸಿದ್ದಾರೆ. ಟಿಎಂಸಿಯಿಂದ ಸಿಡಿದ 58 ಶಾಸಕರು ಜೊತೆಗಿದ್ದಾರೆ. ಇವೆಲ್ಲವೂ ರಾಜ್ಯಸಭೆಯಲ್ಲಿ ಬಿಜೆಪಿ ತನ್ನ ನಂಬರ್ ಹೆಚ್ಚಿಸುವುದಕ್ಕೆ ಮಾಡಿದ್ದು. ಸಂವಿಧಾನ ತಿದ್ದುಪಡಿ ಮಸೂದೆಯ ಪಾಸಿಗೆ ಮಾಡಿದ ಲೆಕ್ಕಾಚಾರಗಳು. ಬಿಜೆಪಿ ಆರೆಸ್ಸೆಸ್‌ಗಳು ಬೇರೆ ಸಂವಿಧಾನ ತರುವುದಿಲ್ಲ. ಸಂವಿಧಾನದ ಒಂದೋಂದೇ ಪುಟಗಳು ಒಂದೊಂದೇ ಕಲಂಗಳು ಕೂಡ ತಿದ್ದುವುದು ಪ್ಲಾನ್. ಹೀಗೆ ಮಾಡಿದರೂ ಅದು ಗುರಿ ತಲುಪುತ್ತದೆ.

ಮಹಾರಾಷ್ಟ್ರದಲ್ಲಿ ಟೈಗರ್ ಎದ್ದದ್ದು ಯಾವಾಗ?:

ಮಹಾರಾಷ್ಟ್ರದಲ್ಲಿ ಬಿಜೆಪಿ ಪ್ರಾಯೋ ಜಿತ ದಳ್‌ಬದಲ್ ಆಟದಲ್ಲಿ ರಾಜಕಾರಣಿಗಳು ಮಗ್ನರಾಗಿದ್ದಾಗ ಮಹಾ ರಾಷ್ಟ್ರದ ರೈತರು ಸಂಪೂರ್ಣ ಸಾಲಮನ್ನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಜಲ್ನ ಜಿಲ್ಲೆಯ ರೈತರು ವಿವಿಧ ಬೇಡಿಕೆಗಳೊಂದಿಗೆ ಬತ್ತಿದ ಬಾವಿಯೊಳಗೆ ಮಂಚ ಹಾಕಿ ಕೂತು ಪ್ರತಿಭಟಿಸಿದ್ದು ಚರ್ಚೆಯಾಗಿತ್ತು. ಬಿಜೆಪಿಗಾಗಲಿ, ಅಲ್ಲಿ ಸರಕಾರದಲ್ಲಿ ಅದರ ಸಖ್ಯ ಮಹಾಯುತಿಯ ಇತರ ಪಾರ್ಟಿಗಳಿಗಾಗಲಿ ಜನರ – ರೈತರ ಬವಣೆ ಲೆಕ್ಕಕ್ಕಿಲ್ಲ. ರೈತರ ಎರಡು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಬಿಜೆಪಿ ಘೋಷಿಸಿತ್ತು. ಆದರೆ ಮನ್ನಕ್ಕೆ ಹಲವು ಶರ್ತಗಳನ್ನೊಡ್ಡಿ ರೈತರು ಫಲಾನುಭವಿಯಾಗದಂತೆ ಅದು ಮಾಡಿದೆ.

ಬಿಜೆಪಿಯ ಹಿಂದುತ್ವ ಮ್ಯಾಜಿಕ್ಕು ಜನರ ಬೆಂಬಲವಿಲ್ಲದೆಯೂ ಚುನಾವಣೆ ಗೆಲ್ಲಿಸುತ್ತಿದೆ. ಇವತ್ತು ಬಿಜೆಪಿ ಆರೆಸ್ಸೆಸ್ ತಂತ್ರ ಅಷ್ಟು ಬಲಿಷ್ಟವೂ ಇದೆ. ಹಿಂದೂ ಮುಸ್ಲಿಂ ಮಾಡಿದರಾಯಿತು ಜನ ಎಲ್ಲವನ್ನೂ ಮರೆಯುತ್ತಾರೆ.
ನೋಡಿ, ಬಂಡುಕೋರ 58 ಎಂಎಲ್‌ಎಗಳು ಟಿಎಂಸಿ ಪಾರ್ಟಿ ತಮ್ಮದೇ ಎಂದು ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ್ದು ಹೊಸ ಸುದ್ದಿ ಬಂತಲ್ಲ. ಬಂಡುಕೋರ ಟಿಎಂಸಿಯನ್ನು ಬಿಜೆಪಿ ಸೇರಿಸಿಕೊಂಡಿಲ್ಲ. 20 ಸಂಸದರಲ್ಲಿ ಮೂವರು ಮುಸ್ಲಿಮರಿದ್ದಾರೆ. ಶಾಸಕರಲ್ಲಿ ಕೂಡ ಮುಸ್ಲಿಮರಿದ್ದಾರೆ. ಆರೆಸ್ಸೆಸ್ಸಿನ ಅಣತಿಯಂತೆ ಮುಸ್ಲಿಮರ ವಿರುದ್ಧ ಬಹಿರಂಗ ರಾಜಕೀಯ ಮಾಡುವ ಬಿಜೆಪಿ ಮುಸ್ಲಿಮರನ್ನು ಹೇಗೆ ಸೇರಿಸಿಕೊಳ್ಳುತ್ತದೆ.

ಬಿಜೆಪಿ ವ್ಯಕ್ತಿ ಕೇಂದ್ರಿತವಾಗಿ ರೂಪುಗೊಂಡ ಎಲ್ಲ ಪಾರ್ಟಿಗಳನ್ನು ಮುಳುಗಿಸಿದೆ ಮತ್ತು ಮುಳುಗಿಸುತ್ತಿದೆ. ಯಾಕೆ? ಸಂಸತ್ತಿನಲ್ಲಿ ತನ್ನ ಸಂಖ್ಯೆ ಬಲ ಹೆಚ್ಚಿಸಿಕೊಳ್ಳಲು. ಸಂವಿಧಾನ ತಿದ್ದುಪಡಿ ಕಾನೂನು ಪಾಸು ಮಾಡಿಸಲು, ಮುಸ್ಲಿಮರನ್ನು ಟೈಟ್ ಮಾಡಲು ಅದು ತನ್ನ ಸ್ಥಾಪನೆಯ ಕಾಲದಿಂದಲೂ ಇದೇ ಆಟಕ್ಕೆ ಮತ್ತು ಹೂಟಕ್ಕೆ ಇಳಿದಿದೆ. ಅಧಿಕಾರಕ್ಕೆ ಬಂದ ಮೊದಲ ದಿನದಿಂದ ರಭಸ ಹೆಚ್ಚಿದೆ. ಹೊಡೆತ ತೀವ್ರವಾಗಿದೆ. ಕಾಂಗ್ರೆಸ್ಸನ್ನೂ ಬಿಡದೆ ವ್ಯಕ್ತಿ ಕೇಂದ್ರಿತ ಪಾರ್ಟಿಗಳ ರಾಜಕೀಯ ಅಸ್ತಿತ್ವವೇ ಇಂದು ಪ್ರಶ್ನಾ ಚಿಹ್ನೆಯಾಗಿದ್ದರೆ ಅವು ಮುಸ್ಲಿಮರ ಅಸ್ತಿತ್ವವನ್ನೇ ಪ್ರಶ್ನಾರ್ಥಕಗೊಳಿಸುತ್ತಿದೆ. ಇದಕ್ಕೆ ಈ ಎಸ್‌ಐಆರ್, ಮೋಬ್ ಲಿಂಚಿಂಗ್, ಮುಸ್ಲಿಮರ ಮಸೀದಿ, ಮಝಾರಗಳನ್ನು ಹುಡಿಹುಡಿ ಮಾಡುವುದು ಎಂಬುದು ಸ್ಪಷ್ಟ. ಈ ಅರ್ಥದಲ್ಲಿ ಪರ್ಸನಲ್ ಲಾ ಬೋರ್ಡ್ ದೇಶಾದ್ಯಂತ ಪ್ರತಿಭಟನೆಗೆ ಹೊರಟದ್ದು ಅರ್ಥ ಪೂರ್ಣ. ತಮ್ಮ ಅಸ್ತಿತ್ವ ಅಸ್ಮಿತೆಯನ್ನು ಉಳಿಸಿಕೊಳ್ಳುವುದಕ್ಕೆ ಅವರಿಗೆ ಬೇರೆಂಥ ಇದೆ.