ಮಹಾರಾಷ್ಟ್ರದಲ್ಲಿ ಭಾರೀ ಮಳೆ: ನದಿಯಲ್ಲಿ ಕೊಚ್ಚಿ ಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ಸಾರ್ವಜನಿಕರಿಗೆ ಮುನ್ನೆಚ್ಚರಿಕೆ

0
477

ಸನ್ಮಾರ್ಗ ವಾರ್ತೆ

ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿಯುತ್ತಿರುವ ಪ್ರವಾಹ ಸದೃಶ ಭಾರೀ ಮಳೆಯಿಂದಾಗಿ ಪನ್ವೇಲ್ ತಾಲೂಕಿನ ಚಾವನೆ ಗ್ರಾಮದಲ್ಲಿರುವ ಹೆಚ್‌ಪಿಸಿಎಲ್ (HPCL) ಬಾಟ್ಲಿಂಗ್ ಘಟಕಕ್ಕೆ ನೀರು ನುಗ್ಗಿದೆ. ಪರಿಣಾಮವಾಗಿ, ಘಟಕದಲ್ಲಿದ್ದ ಸುಮಾರು ಮೂರು ಸಾವಿರ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ಪಾತಾಳಗಂಗಾ ನದಿಯಲ್ಲಿ ಕೊಚ್ಚಿ ಹೋಗಿವೆ. ನದಿಯ ನೀರಿನಲ್ಲಿ ಸಾವಿರಾರು ಸಿಲಿಂಡರ್‌ಗಳು ಸಾಲುಸಾಲಾಗಿ ತೇಲುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ಹೀಗೆ ನದಿಯಲ್ಲಿ ತೇಲಿ ಹೋಗಿರುವ ಸಿಲಿಂಡರ್‌ಗಳಲ್ಲಿ ಗ್ಯಾಸ್ ತುಂಬಿರುವ ಮತ್ತು ಖಾಲಿ ಇರುವ ಎರಡೂ ತರಹದ ಸಿಲಿಂಡರ್‌ಗಳು ಸೇರಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಯಗಢ ಜಿಲ್ಲಾಧಿಕಾರಿ ಕಿಶನ್ ಜಾವಳೆ ಅವರು ಮಹತ್ವದ ಜಾಗರೂಕತಾ ಸಲಹೆಯನ್ನು ಜಾರಿ ಮಾಡಿದ್ದಾರೆ. ನದಿಯಲ್ಲಾಗಲಿ ಅಥವಾ ನದಿಯ ದಡದಲ್ಲಾಗಲಿ ಸಾರ್ವಜನಿಕರಿಗೆ ಯಾವುದೇ ಸಿಲಿಂಡರ್‌ಗಳು ಕಂಡುಬಂದರೂ ಅದರ ಹತ್ತಿರ ಹೋಗಬಾರದು ಮತ್ತು ಯಾವುದೇ ಕಾರಣಕ್ಕೂ ಯಾರೂ ಅವುಗಳನ್ನು ಎತ್ತಲು, ಸ್ಥಳಾಂತರಿಸಲು ಅಥವಾ ಮನೆಗೆ ಕೊಂಡೊಯ್ಯಲು ಪ್ರಯತ್ನಿಸಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.

ಒಂದೊಮ್ಮೆ ಎಲ್ಲಾದರೂ ಸಿಲಿಂಡರ್‌ಗಳು ಕಾಣಿಸಿದರೆ ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅವುಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಡಳಿತ ಜನತೆಯಲ್ಲಿ ಕಳಕಳಿಯ ಮನವಿ ಮಾಡಿದೆ. ಪ್ರಸ್ತುತ ಜಿಲ್ಲೆಯ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿರುವುದರಿಂದ ಅಧಿಕಾರಿಗಳು ಇಡೀ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜನರು ಕೂಡ ಅತ್ಯಂತ ಜಾಗರೂಕರಾಗಿರಲು ಸೂಚಿಸಲಾಗಿದೆ.

https://x.com/ke_nuu/status/2074877948377846131/photo/1