‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿರುದ್ಧ ಕಾನೂನು ತಜ್ಞರು, ಮಾಜಿ ಅಧಿಕಾರಿಗಳ ಒಕ್ಕೂಟ ಸಮ್ಮೇಳನ

0
202

ಸನ್ಮಾರ್ಗ ವಾರ್ತೆ

ನವದೆಹಲಿ: ದೇಶದ ಮೇಲೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ (ONOE) ಕಾರ್ಯಸೂಚಿಯನ್ನು ಹೇರುತ್ತಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ನಡೆಯನ್ನು ನಿವೃತ್ತ ನ್ಯಾಯಾಧೀಶರು, ಮಾಜಿ ಚುನಾವಣಾ ಅಧಿಕಾರಿಗಳು, ನಾಗರಿಕ ಸೇವಾ ಅಧಿಕಾರಿಗಳು, ಸಾಂವಿಧಾನಿಕ ತಜ್ಞರು, ಶಿಕ್ಷಣ ತಜ್ಞರು ಹಾಗೂ ನಾಗರಿಕ ಸಮಾಜದ ನಾಯಕರ ವಿಶಾಲ ಒಕ್ಕೂಟವೊಂದು ತೀವ್ರವಾಗಿ ವಿರೋಧಿಸಿದೆ. ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಶನಿವಾರದಂದು ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ (CCG) ಮತ್ತು ಜಂಟಿಯಾಗಿ ಗ್ರೂಪ್ ಆನ್ ಫೆಡರಲಿಸಂ ಅಂಡ್ ಎಲೆಕ್ಷನ್ಸ್ ಆಯೋಜಿಸಿದ್ದ “ಒಂದು ರಾಷ್ಟ್ರ-ಒಂದು ಚುನಾವಣೆ, ಒಕ್ಕೂಟ ವ್ಯವಸ್ಥೆ ಮತ್ತು ಪೌರತ್ವ” ಎಂಬ ಶೀರ್ಷಿಕೆಯ ದಿನವಿಡೀ ನಡೆದ ಸಮ್ಮೇಳನದಲ್ಲಿ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಈ ಪ್ರಸ್ತಾವನೆಯು ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ರಚನೆಯ ಹೃದಯಭಾಗಕ್ಕೇ ಪೆಟ್ಟು ನೀಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಭಾಗಿಗಳು, ಇದು ಭಾರತದ ಸಾಂವಿಧಾನಿಕ ವಿನ್ಯಾಸಕ್ಕೆ ಯಾವುದೇ ರೀತಿಯಲ್ಲೂ ಹೊಂದಿಕೆಯಾಗುವುದಿಲ್ಲ ಮತ್ತು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ನೇರ ಧಕ್ಕೆಯುಂಟುಮಾಡುತ್ತದೆ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.

ಚುನಾವಣಾ ವೆಚ್ಚವನ್ನು ಕಡಿಮೆ ಮಾಡಲು, ಆಡಳಿತವನ್ನು ಸುಧಾರಿಸಲು ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವ “ಶಾಶ್ವತ ಚುನಾವಣಾ ಮೋಡ್” ಅನ್ನು ತೊಡೆದುಹಾಕಲು ಇರುವ ಒಂದು ಸಾಧನವಾಗಿ ಬಿಂಬಿಸುತ್ತಾ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಬಿಜೆಪಿ ನಿರಂತರವಾಗಿ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಈ ಸಭೆಯು ತೀವ್ರ ಮಹತ್ವವನ್ನು ಪಡೆದುಕೊಂಡಿದೆ. ಆದರೆ ಸಭೆಯಲ್ಲಿದ್ದ ಭಾಗಿಗಳು, ಈ ಪ್ರಸ್ತಾವನೆಯು ಆಡಳಿತಾತ್ಮಕ ದಕ್ಷತೆಗಿಂತ ಹೆಚ್ಚಾಗಿ ಕೇಂದ್ರದಲ್ಲಿ ರಾಜಕೀಯ ಅಧಿಕಾರವನ್ನು ಕೇಂದ್ರೀಕರಿಸಲು ಮತ್ತು ರಾಜ್ಯಗಳ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಕುಗ್ಗಿಸಲು ಉದ್ದೇಶಿಸಿದೆ ಎಂದು ವಾದಿಸಿದರು. ಈ ಮಹತ್ವದ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಜಸ್ಟಿಸ್ ಮದನ್ ಲೋಕೂರ್, ಪ್ರಖ್ಯಾತ ವಿದ್ವಾಂಸ ಡಾ. ಜಿ.ಎನ್. ದೇವಿ, ರಾಜಕೀಯ ವಿಜ್ಞಾನಿ ಡಾ. ನೀರಜಾ ಜಯಾಲ್, ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಗೋಪಾಲ್ ಪಿಳ್ಳೈ, ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ, ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ, ನೀತಿ ತಜ್ಞೆ ಯಾಮಿನಿ ಅಯ್ಯರ್, ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ ಮತ್ತು ರಾಜತಾಂತ್ರಿಕರಾದ ಅದಿತಿ ಮೆಹ್ತಾ ಹಾಗೂ ಗೌತಮ್ ಮುಖೋಪಾಧ್ಯಾಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಚರ್ಚೆಯ ಉದ್ದಕ್ಕೂ ಮಾತನಾಡಿದ ಪ್ರತಿಯೊಬ್ಬರು, ದೇಶಾದ್ಯಂತ ಚುನಾವಣೆಗಳನ್ನು ಏಕಕಾಲಕ್ಕೆ ಜೋಡಿಸುವುದರಿಂದ ಸಂವಿಧಾನವು ಕಲ್ಪಿಸಿರುವ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮತೋಲನವು ಮೂಲಭೂತವಾಗಿ ಬದಲಾಗುತ್ತದೆ ಎಂದು ಆತಂಕ ಹಂಚಿಕೊಂಡರು. ಭಾರತದ ಒಕ್ಕೂಟ ವ್ಯವಸ್ಥೆಯು ವಿವಿಧ ಪ್ರದೇಶಗಳ ನಾಗರಿಕರ ಭಿನ್ನ ರಾಜಕೀಯ ಆಯ್ಕೆಗಳನ್ನು ಗೌರವಿಸುತ್ತಾ ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಮತ್ತು ಪತನಗೊಳ್ಳಲು ಉದ್ದೇಶಪೂರ್ವಕವಾಗಿಯೇ ಮುಕ್ತ ಅವಕಾಶ ನೀಡುತ್ತದೆ ಎಂದು ಭಾಗಿಗಳು ಪ್ರತಿಪಾದಿಸಿದರು. ಏಕಕಾಲದ ಚುನಾವಣೆಗಳಿಗೆ ಕೇವಲ ಚುನಾವಣಾ ಕಾಲಾನುಕ್ರಮವನ್ನು ಕಾಯ್ದುಕೊಳ್ಳುವ ಸಲುವಾಗಿಯೇ ಜನರಿಂದ ಚುನಾಯಿತವಾದ ರಾಜ್ಯ ಸರ್ಕಾರಗಳನ್ನು ಅವಧಿಗೆ ಮುನ್ನವೇ ವಿಸರ್ಜಿಸುವ ಅಥವಾ ಕೃತಕವಾಗಿ ಅವುಗಳ ಅವಧಿಯನ್ನು ವಿಸ್ತರಿಸುವ ಸಾಂವಿಧಾನಿಕ ವ್ಯವಸ್ಥೆಗಳ ಅಗತ್ಯವಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಸಮ್ಮೇಳನದಲ್ಲಿ ಅಂಗೀಕರಿಸಲಾದ ನಿರ್ಣಯಗಳ ಪ್ರಕಾರ, ಇಂತಹ ಬದಲಾವಣೆಗಳು ನಮ್ಮ “ಒಕ್ಕೂಟದ ಒಪ್ಪಂದವನ್ನು ಮುರಿಯುತ್ತವೆ” ಮತ್ತು ಕೇಂದ್ರ ಸರ್ಕಾರವೇ ನಿರ್ಧರಿಸುವ ಚುನಾವಣಾ ಕ್ಯಾಲೆಂಡರ್‌ಗಿಂತ ಹೆಚ್ಚಾಗಿ ಪ್ರಜಾಸತ್ತಾತ್ಮಕ ಆದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ರಾಜ್ಯ ಶಾಸಕಾಂಗಗಳಿಗಿರುವ ಸಾಂವಿಧಾನಿಕ ಅಧಿಕಾರಗಳನ್ನು ಕಸಿದುಕೊಳ್ಳುತ್ತವೆ ಎಂದು ಅಭಿಪ್ರಾಯಿಸಲಾಯಿತು.