ಸನ್ಮಾರ್ಗ ವಾರ್ತೆ
ಅಪರಾಧ ಆರೋಪ ಹೊತ್ತಿರುವವರ ಆಸ್ತಿಗಳನ್ನು ದಂಡನಾತ್ಮಕ ಕ್ರಮವಾಗಿ ಧ್ವಂಸ ಮಾಡುವುದನ್ನು ತಡೆಯಲು ಹೆಚ್ಚಿನ ಕ್ರಮಗಳು ಬೇಕಿವೆಯೇ ಎಂಬ ಬಗ್ಗೆ ಅಲಹಾಬಾದ್ ಹೈಕೋರ್ಟ್ನ ವಿಭಾಗೀಯ ಪೀಠವು ಸೋಮವಾರ ಭಿನ್ನ ತೀರ್ಪು ನೀಡಿದೆ.
ಮೊದಲ ಮಾಹಿತಿ ವರದಿ ಅಂದರೆ ಎಫ್ಐಆರ್ ದಾಖಲಾದ ಬಳಿಕ, ಇಂತಹ ಧ್ವಂಸ ಕಾರ್ಯಾಚರಣೆಗಳ ಮೇಲೆ ಎರಡು ವರ್ಷಗಳ ಕಾಲ ನಿಷೇಧ ಹೇರಬೇಕು ಎಂದು ಜಸ್ಟಿಸ್ ಅತುಲ್ ಶ್ರೀಧರನ್ ಅವರು ಬೆಂಬಲಿಸಿದರು. ಆದರೆ, ಜಸ್ಟಿಸ್ ಸಿದ್ಧಾರ್ಥ್ ನಂದನ್ ಅವರು ಈ ಸಲಹೆಯನ್ನು ಒಪ್ಪಲಿಲ್ಲ. ಇದರಿಂದಾಗಿ ಈ ವಿಷಯದ ಅಂತಿಮ ತೀರ್ಮಾನಕ್ಕಾಗಿ ಮುಖ್ಯ ನ್ಯಾಯಮೂರ್ತಿಗಳ ಬಳಿಗೆ ಕಳುಹಿಸಲಾಗಿದೆ.
ಅಪರಾಧ ಮಾಡಿದವರ ಆಸ್ತಿಯನ್ನು ಧ್ವಂಸಗೊಳಿಸಲು ಭಾರತೀಯ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಆದರೂ, ಭಾರತೀಯ ಜನತಾ ಪಕ್ಷ ಆಳುವ ರಾಜ್ಯಗಳಲ್ಲಿ ಈ ಪದ್ಧತಿ ಸಾಮಾನ್ಯವಾಗಿದೆ. 2024ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್, ಅಪರಾಧ ಆರೋಪ ಎದುರಿಸುತ್ತಿರುವವರ ಆಸ್ತಿಗಳನ್ನು ಶಿಕ್ಷೆಯಾಗಿ ಧ್ವಂಸಗೊಳಿಸುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿತ್ತು. ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸುವ ಮುನ್ನ ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದೂ ಅದು ಹೇಳಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶವಿದ್ದರೂ ಧ್ವಂಸ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ಅಲಹಾಬಾದ್ ಹೈಕೋರ್ಟ್ ಫೆಬ್ರವರಿಯಲ್ಲಿ ಕಳವಳ ವ್ಯಕ್ತಪಡಿಸಿತ್ತು.
ಮನೆಗಳನ್ನು ಮನಬಂದಂತೆ ಬುಲ್ಡೋಜರ್ ಬಳಸಿ ಕೆಡವುವುದು ಕಾನೂನಿನ ನಿಯಮಕ್ಕೆ ವಿರುದ್ಧವಾಗಿದೆ ಮತ್ತು ಇದು ಸರಿಯಾದ ಪ್ರಕ್ರಿಯೆಗೆ ತಕ್ಕಂತೆ ಇರಬೇಕು ಎಂದು ನ್ಯಾಯಮೂರ್ತಿಗಳಾದ ಶ್ರೀಧರನ್ ಮತ್ತು ನಂದನ್ ಒಪ್ಪಿಕೊಂಡಿದ್ದಾರೆ.
ಪೌರಕಾಯ್ದೆ ಉಲ್ಲಂಘನೆಯ ಮರೆಯಲ್ಲಿ ಅಪರಾಧಿಯೊಬ್ಬರ ಮನೆಯನ್ನು ಧ್ವಂಸಗೊಳಿಸಲು ಧಾವಿಸುವುದು ಸರಿಯಲ್ಲ. ಇದು ಆಡಳಿತ ವ್ಯವಸ್ಥೆಯ ವಿವೇಚನಾರಹಿತ ದಂಡನಾತ್ಮಕ ಚಟುವಟಿಕೆಯಾಗಿದೆ ಎಂದು ಜಸ್ಟಿಸ್ ಶ್ರೀಧರನ್ ಅಭಿಪ್ರಾಯಪಟ್ಟಿದ್ದಾರೆ. ಕೆಳ ಮಟ್ಟದ ಆರ್ಥಿಕ ಸ್ಥಿತಿಯಿಂದಾಗಿ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳದ ಸಾಮಾನ್ಯ ನಾಗರಿಕನ ಹಕ್ಕುಗಳ ಪರವಾಗಿಯೂ ಈ ದೇಶದ ಸಂವಿಧಾನ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು. ಅಲ್ಲದೆ, ಅನಧಿಕೃತ ನಿರ್ಮಾಣಗಳು ತಲೆಯೆತ್ತಲು ಅವಕಾಶ ಮಾಡಿಕೊಡುವ ಪೌರ ಪ್ರಾಧಿಕಾರಗಳು ಸೇರಿದಂತೆ ಪ್ರತಿಯೊಂದು ಸಂಸ್ಥೆಯಲ್ಲೂ ಪ್ರಾಮಾಣಿಕತೆಯ ಕೊರತೆ ಇದೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದೆಡೆ, ಸರ್ಕಾರವು ಕಾನೂನಿಗೆ ತಕ್ಕಂತೆ ನಡೆದುಕೊಳ್ಳುತ್ತದೆ ಮತ್ತು ನೈಸರ್ಗಿಕ ನ್ಯಾಯದ ತತ್ವಗಳಿಗೆ ಬದ್ಧವಾಗಿರುತ್ತದೆ ಎಂಬ ನಂಬಿಕೆ ಇದೆ ಎಂದು ಜಸ್ಟಿಸ್ ನಂದನ್ ತಮ್ಮ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಇಂತಹ ಧ್ವಂಸ ಕಾರ್ಯಾಚರಣೆಗಳು ನಡೆದಾಗ ಸಂತ್ರಸ್ತ ವ್ಯಕ್ತಿಗಳು ಹೈಕೋರ್ಟ್ ಅನ್ನು ಸಂಪರ್ಕಿಸಲು ಅವಕಾಶವಿರುತ್ತದೆ ಎಂದು ಅವರು ಹೇಳಿದರು.
ಯಾವುದೇ ನಿರ್ದಿಷ್ಟ ಅವಧಿಗೆ ಕಾನೂನಿನ ಕಾರ್ಯಾಚರಣೆಯನ್ನು ತಡೆಹಿಡಿಯಲು ಸಾಧ್ಯವಿಲ್ಲವಾದ್ದರಿಂದ ಇಂತಿಷ್ಟೇ ಅವಧಿ ಎಂದು ನಿಗದಿಪಡಿಸಲು ಬರುವುದಿಲ್ಲ ಎಂದು ನಂದನ್ ಅಭಿಪ್ರಾಯಪಟ್ಟರು. ಎರಡು ವರ್ಷಗಳ ಕಾಲ ತಡೆ ನೀಡಿದರೆ, ಅದು ಉದ್ದೇಶಪೂರ್ವಕವಾಗಿ ಸುಳ್ಳು ಮೊಕದ್ದಮೆಗಳು ದಾಖಲಾಗಲು ದಾರಿ ಮಾಡಿಕೊಡಬಹುದು. ಇದರಿಂದ ಪೌರ ಕಾನೂನುಗಳನ್ನು ಉಲ್ಲಂಘಿಸಿದವರು ಆ ನಿರ್ದಿಷ್ಟ ಅವಧಿಯವರೆಗೆ ರಕ್ಷಣೆ ಪಡೆದುಕೊಳ್ಳಲು ಅವಕಾಶವಾಗಬಹುದು ಎಂದೂ ಅವರು ಎಚ್ಚರಿಸಿದ್ದಾರೆ.
ಈ ಹಿಂದೆ ಫೆಬ್ರವರಿಯಲ್ಲಿ, ಅಪರಾಧ ದಾಖಲಾದ ತಕ್ಷಣವೇ ನಡೆಸುವ ಧ್ವಂಸ ಕಾರ್ಯಾಚರಣೆಗಳು ಆಡಳಿತ ವ್ಯವಸ್ಥೆಯ ವಿವೇಚನೆಯ ವಿಕೃತ ರೂಪವಾಗಬಹುದು ಎಂದು ಇದೇ ಪೀಠವು ಗಮನಿಸಿತ್ತು. ಅಲ್ಲದೆ, ಅಂತಹ ಸಂದರ್ಭಗಳಲ್ಲಿ ಧ್ವಂಸಗೊಳಿಸಲು ನೋಟೀಸ್ಗಳನ್ನು ನೀಡಿರುವ ಅನೇಕ ನಿದರ್ಶನಗಳನ್ನು ತಾವು ನೋಡಿರುವುದಾಗಿ ಪೀಠವು ತಿಳಿಸಿತ್ತು.












