ಸನ್ಮಾರ್ಗ ವಾರ್ತೆ
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ನಡೆದಿದೆ ಎನ್ನಲಾದ ಅಕ್ರಮಗಳು ಮತ್ತು ಹೊಸದಿಲ್ಲಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ವಿರೋಧಿಸಿ ಭಾರತದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿಗೆ ಬೆಂಬಲ ಸೂಚಿಸಿ ಸೋಮವಾರ ಸಂಜೆ ಮಧ್ಯ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಹೊರಗೆ ನೂರಾರು ಭಾರತೀಯ ಮೂಲದವರು ಜಮಾಯಿಸಿದ್ದರು.
ಮ್ಯಾಂಚೆಸ್ಟರ್, ಗ್ಲ್ಯಾಸ್ಗೋ ಮತ್ತು ಎಡಿನ್ಬರ್ಗ್ಗಳಲ್ಲೂ ಪ್ರತಿಭಟನೆಗಳು ಪ್ರತಿಧ್ವನಿಸಿದ್ದು, ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತರದಾಯಿತಿಯನ್ನು ಕೋರಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿವೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ಯುಕೆ ಕಾರ್ಯದರ್ಶಿ ಸೋಮಿಹಾ ಚಟರ್ಜಿ, ಭಾರತದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಿದರು ಮತ್ತು ಪ್ರತಿಭಟನಾಕಾರರ ವಿರುದ್ಧ ಮುಂದುವರಿದಿರುವ ಪೊಲೀಸ್ ಕ್ರೌರ್ಯವನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರಲ್ಲಿ ಪ್ರಸ್ತುತ ಲಂಡನ್ನಲ್ಲಿ ನೆಲೆಸಿರುವ ಯುನಿಸೆಫ್(UNICEF) ಉದ್ಯೋಗಿ ಇಶಿತಾ ಕೂಡ ಸೇರಿದ್ದಾರೆ. ದಿಲ್ಲಿಯಲ್ಲಿರುವ ತಮ್ಮ ಸ್ನೇಹಿತರೊಂದಿಗೆ ಐಕ್ಯತೆ ಪ್ರದರ್ಶಿಸಲು ತಾನು ಪ್ರತಿಭಟನೆಯಲ್ಲಿ ಭಾಗಿಯಾಗಿರುವುದಾಗಿ ಅವರು ಮಾಧ್ಯಮಕ್ಕೆ ತಿಳಿಸಿರುವುದು ವರದಿಯಾಗಿದೆ.
“ನನಗೆ ವಿದ್ಯಾರ್ಥಿ ಸ್ನೇಹಿತರಿದ್ದಾರೆ ಮತ್ತು ನಾನು ಇತ್ತೀಚೆಗಷ್ಟೇ ಪದವಿ ಪಡೆದವಳು. ನೀವು ವಿದ್ಯಾರ್ಥಿಯಲ್ಲದಿದ್ದರೆ ಇದರಿಂದ ದೂರವಿರಬೇಕು ಎಂಬ ಕಲ್ಪನೆಯು ನನಗೆ ತೀರಾ ಮೂರ್ಖತನದ ವಾದವೆನಿಸುತ್ತದೆ” ಎಂದು ಅವರು ಹೇಳಿದರು.
ಮಾತು ಮುಂದುವರಿಸಿ, “ನಾನು ಇಲ್ಲಿ ಬಹಳ ಸುರಕ್ಷಿತವಾಗಿದ್ದೇನೆ. ಲಂಡನ್ನಲ್ಲಿ ಇದನ್ನು ಮಾಡುತ್ತಿದ್ದೇನೆ, ಇಲ್ಲಿಂದ ನಾನು ಸುರಕ್ಷಿತವಾಗಿ ಮನೆಗೆ ತಲುಪಬಹುದು, ನೆಮ್ಮದಿಯಿಂದ ರಾತ್ರಿ ನಿದ್ರಿಸಬಹುದು ಮತ್ತು ನನಗೆ ಬೇಕಿದ್ದರೆ ಮರುದಿನ ಮತ್ತೆ ಬರಬಹುದು ಎಂದು ನನಗೆ ತಿಳಿದಿದೆ. ಆದರೆ ಭಾರತದಲ್ಲಿರುವ ನನ್ನ ಸ್ನೇಹಿತರು ಇದನ್ನು ಮಾಡಲು ಎಲ್ಲವನ್ನೂ ಪಣಕ್ಕಿಟ್ಟಿದ್ದಾರೆ.”
ವಿದೇಶಗಳಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗಳು ಭಾರತದಲ್ಲಿರುವ ಪ್ರತಿಭಟನಾಕಾರರಿಗೆ ತಾವು ಒಂಟಿಯಲ್ಲ ಎಂಬ ಧೈರ್ಯ ತುಂಬುತ್ತವೆ ಎಂದು ಆಶಿಸುವುದಾಗಿ ಅವರು ಹೇಳಿದರು.
ಬ್ರಿಟನ್ಗೆ ತೆರಳುವ ಮೊದಲು ಹಿಂದೆ ಸಿಎಎ-ಎನ್ಆರ್ಸಿ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ, ಹೊಸದಿಲ್ಲಿಯ 23 ವರ್ಷದ ವಿದ್ಯಾರ್ಥಿಯೊಬ್ಬರು ಹೆಸರು ಬಹಿರಂಗಪಡಿಸಲು ಇಚ್ಛಿಸದೆ ಭಾಗವಹಿಸಿದ್ದರು. ಪ್ರಸ್ತುತ ಚಳವಳಿಯು ಭಾರತದಾದ್ಯಂತ ನ್ಯಾಯಕ್ಕಾಗಿ ನಡೆಯುತ್ತಿರುವ ವಿಶಾಲ ಹೋರಾಟಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿದರು.
“ಬುಂದೇಲ್ಖಂಡದ ಜನರು, ನದಿ ಜೋಡಣೆ ಯೋಜನೆಯಿಂದ ಒಕ್ಕಲೆಬ್ಬಿಸಲ್ಪಟ್ಟಿರುವ ಆದಿವಾಸಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ನಾನು ಇಲ್ಲಿದ್ದೇನೆ. ತಮ್ಮ ಭೂಮಿಯ ಮೇಲೆ ಗೂಗಲ್ ಡೇಟಾ ಸೆಂಟರ್ ನಿರ್ಮಿಸುತ್ತಿರುವ ಕಾರಣದಿಂದ ಒಕ್ಕಲೆಬ್ಬಿಸಲ್ಪಡುತ್ತಿರುವ ದಲಿತ ರೈತರ ಪರವಾಗಿಯೂ ನಾನಿದ್ದೇನೆ ಮತ್ತು ದೌರ್ಜನ್ಯಕ್ಕೊಳಗಾಗಿರುವ ಹಾಗೂ ಯಾರ ಮನೆಗಳನ್ನು ಬುಲ್ಡೋಜರ್ನಿಂದ ಕೆಡವಲಾಗಿದೆಯೋ ಆ ಮುಸ್ಲಿಮರಿಗಾಗಿ ನಾನು ಇಲ್ಲಿದ್ದೇನೆ.”
ವಿದೇಶದಲ್ಲಿ ವಾಸಿಸುತ್ತಿರುವುದು ಭಾರತದ ಬೆಳವಣಿಗೆಗಳ ಕಡೆಗಿನ ತಮ್ಮ ಜವಾಬ್ದಾರಿಯ ಭಾವನೆಯನ್ನು ಕಡಿಮೆ ಮಾಡಿಲ್ಲ ಎಂದು ಅವರು ಹೇಳಿದರು.
“ಲಂಡನ್ನ ಜಿರಳೆಗಳೇ ಒಗ್ಗೂಡಿ, ಪ್ರತಿಭಟನೆಯಲ್ಲಿ ಏಳಿ” ಎಂಬ ಘೋಷಣೆಯೊಂದಿಗೆ ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್, ಎಸ್ಎಫ್ಐ-ಯುಕೆ ಮತ್ತು ಇಂಡಿಯಾ ವರ್ಕರ್ಸ್ ಅಸೋಸಿಯೇಷನ್ (ಜಿಬಿ) ಸಂಯುಕ್ತವಾಗಿ ಈ ಪ್ರತಿಭಟನೆಯನ್ನು ಆಯೋಜಿಸಿದ್ದವು.
ನೀಟ್ ವಿವಾದಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಮಧ್ಯ ಲಂಡನ್ನಲ್ಲಿರುವ ಇಂಡಿಯಾ ಹೌಸ್ ಹೊರಗೆ ಜಮಾಯಿಸಿದ್ದರು. ನ್ಯಾಯ ಮತ್ತು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ರಚನಾತ್ಮಕ ಸುಧಾರಣೆಗಳಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಮತ್ತು ಇತರರೊಂದಿಗೂ ಅವರು ಐಕ್ಯತೆ ಪ್ರದರ್ಶಿಸಿದರು.
ಪ್ರತಿಭಟನಾಕಾರರು ಸಾರ್ವಜನಿಕ ಪರೀಕ್ಷೆಗಳ ನಡೆಸುವಿಕೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ನ್ಯಾಯವನ್ನು ಖಚಿತಪಡಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುತ್ತಿದ್ದಂತೆ, ಪ್ರತಿಭಟನೆಯಲ್ಲಿ “ಇಂಕ್ವಿಲಾಬ್ ಜಿಂದಾಬಾದ್” ಮತ್ತು “ಪ್ರಧಾನ್ ಇಸ್ತೀಫಾ ದೋ” ಮುಂತಾದ ಘೋಷಣೆಗಳು ಪ್ರತಿಧ್ವನಿಸಿದವು.
ಜುಲೈ 26 ರಂದು ಲೀಡ್ಸ್ನಲ್ಲಿ ಇದೇ ರೀತಿಯ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟಕರು ಘೋಷಿಸಿದ್ದಾರೆ.












