ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಖಂಡನೆ; ಮಾತುಕತೆಗೆ ಆಗ್ರಹ

0
302

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಜಂತರ್‌ಮಂತರ್ ಬಳಿ ಶಿಕ್ಷಣ ವ್ಯವಸ್ಥೆಯ ಕಳವಳಗಳನ್ನು ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಯುವಕರ ಮೇಲೆ ಪೊಲೀಸರು ಬಲಪ್ರಯೋಗ ಮಾಡಿರುವುದನ್ನು ಜಮಾಅತೆ ಇಸ್ಲಾಮಿ ಹಿಂದ್ (ಜೆಐಎಚ್) ತೀವ್ರವಾಗಿ ಖಂಡಿಸಿದೆ.

ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿರುವುದು, ಅಶ್ರುವಾಯು ಬಳಸಿರುವುದು ಮತ್ತು ಅವರನ್ನು ವಶಕ್ಕೆ ಪಡೆದಿರುವುದು ಅತ್ಯಂತ ಕಳವಳಕಾರಿಯಾಗಿದ್ದು, ಇದು ಶಾಂತಿಯುತ ಸಭೆ ಹಾಗೂ ಪ್ರಜಾಪ್ರಭುತ್ವದ ಅಭಿವ್ಯಕ್ತಿಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ಉಪಾಧ್ಯಕ್ಷ ಪ್ರೊ. ಸಲೀಮ್ ಇಂಜಿನಿಯರ್ ಟೀಕಿಸಿದ್ದಾರೆ. ಬಲಪ್ರಯೋಗದ ಮಾರ್ಗವನ್ನು ಬಿಟ್ಟು, ಮಾತುಕತೆಯ ಮೂಲಕ ವಿದ್ಯಾರ್ಥಿಗಳ ಕಳವಳಗಳಿಗೆ ಸ್ಪಂದಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶೈಕ್ಷಣಿಕ ನ್ಯಾಯಕ್ಕಾಗಿ ಧ್ವನಿಯೆತ್ತುತ್ತಿರುವ ಯುವಕರು ವಿಶೇಷ ಗಮನ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನ್ಯಾಯ ಮತ್ತು ಹೊಣೆಗಾರಿಕೆಯ ಕುರಿತು ಅವರಲ್ಲಿರುವ ಗಂಭೀರ ಕಾಳಜಿಯನ್ನು ಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆಯ ವೇಳೆಯಲ್ಲಿ ವಿದ್ಯಾರ್ಥಿಗಳು ಶಾಂತಿ, ಶಿಸ್ತು ಮತ್ತು ಅಹಿಂಸೆಯನ್ನು ಕಾಯ್ದುಕೊಳ್ಳಬೇಕು ಎಂದು ಪ್ರೊ. ಸಲೀಮ್ ಇಂಜಿನಿಯರ್ ಮನವಿ ಮಾಡಿದ್ದು, ಶಾಂತಿಯುತ ಹಾಗೂ ತತ್ವಬದ್ಧ ಪ್ರತಿಭಟನೆಗಳು ಹೆಚ್ಚಿನ ಜನಮನ್ನಣೆ ಹಾಗೂ ನೈತಿಕ ಬಲವನ್ನು ಹೊಂದಿರುತ್ತವೆ ಎಂದಿದ್ದಾರೆ.

ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಕೂಡಲೇ ಅರ್ಥಪೂರ್ಣ ಚರ್ಚೆ ನಡೆಸಬೇಕು, ಪೊಲೀಸ್ ದೌರ್ಜನ್ಯದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು ಮತ್ತು ಬಲಪ್ರಯೋಗ ನಡೆದಿರುವುದು ಸಾಬೀತಾದರೆ ಸಂಬಂಧಪಟ್ಟವರ ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪರೀಕ್ಷೆಗಳ ಮೇಲೆ ಸಾರ್ವಜನಿಕರ ವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ ಮತ್ತು ಸಂಸ್ಥೆಗಳಲ್ಲಿ ಪಾರದರ್ಶಕತೆಯನ್ನು ಬಲಪಡಿಸಲು ವ್ಯಾಪಕವಾದ ಶೈಕ್ಷಣಿಕ ಸುಧಾರಣೆಗಳನ್ನು ತರಬೇಕು ಎಂದೂ ಅವರು ಕರೆ ನೀಡಿದ್ದಾರೆ.

ಶೈಕ್ಷಣಿಕ ನ್ಯಾಯ ಎನ್ನುವುದು ದೇಶದ ಪ್ರಮುಖ ಸಮಸ್ಯೆಯಾಗಿದ್ದು, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಕಡೆಗೆ ಎಲ್ಲರೂ ಗಮನ ಹರಿಸಬೇಕು ಎಂದು ಪ್ರೊ. ಸಲೀಮ್ ಇಂಜಿನಿಯರ್ ಅಭಿಪ್ರಾಯಪಟ್ಟಿದ್ದಾರೆ. ಸುಧಾರಣೆಗಳನ್ನು ಬಯಸುತ್ತಿರುವ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ನಾಗರಿಕ ಸಮಾಜದ ಗುಂಪುಗಳಿಗೆ ಅವರು ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ನ್ಯಾಯ, ಸಮಗ್ರತೆ ಮತ್ತು ಸಮಾನ ಅವಕಾಶಗಳ ಬುನಾದಿಯ ಮೇಲೆ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನಗಳಿಗೆ ಎಲ್ಲ ಸಂಸತ್ ಸದಸ್ಯರು, ವಿರೋಧ ಪಕ್ಷಗಳು ಮತ್ತು ನಾಗರಿಕರು ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದ್ದು, ಸಾರ್ವಜನಿಕ ಸಂಸ್ಥೆಗಳ ಮೇಲೆ ಯುವಜನರ ವಿಶ್ವಾಸವನ್ನು ಮರುಸ್ಥಾಪಿಸಲು ನ್ಯಾಯ, ಹೊಣೆಗಾರಿಕೆ ಮತ್ತು ಅರ್ಥಪೂರ್ಣ ಸುಧಾರಣೆಗಳು ಅತ್ಯಾವಶ್ಯಕ ಎಂದು ಸ್ಪಷ್ಟಪಡಿಸಿದ್ದಾರೆ.