ನ್ಯಾಟೊ ಸಭೆಯೊಂದಿಗೆ ಕವಿದ ಯುದ್ಧ ಕಾರ್ಮೋಡ!?

0
230

✍️ ಅರಫಾ ಮಂಚಿ

ಇರಾನಿನೊಂದಿಗೆ ಒಪ್ಪಂದ ಮುಗಿಯಿತು. ಚರ್ಚೆ ಬರೇ ಸಮಯ ವೇಸ್ಟ್: ಟ್ರಂಪ್ ಅನಿರೀಕ್ಷಿತವಾಗಿ ಹೊಸ ಘೋಷಣೆ ಹೊರಡಿಸಿದ್ದಾರೆ. ಇರಾನಿಯನ್ ಆಡಳಿತಗಾರರು ಅಪಾಯಕಾರಿಗಳು ಅವರೊಂದಿಗೆ ಚರ್ಚೆ ನಡೆಸುವುದಕ್ಕೆ ಅರ್ಥ ಇಲ್ಲ ಎಂದಿದ್ದಾರೆ. ಹಾಗಿದ್ದರೆ ಈವರೆಗೆ ನಡೆದ ಚರ್ಚೆಗಳಿಗೆ ಬೆಲೆ ಇಲ್ವಾ? ಮಧ್ಯಪ್ರಾಚ್ಯ ಸುಮಾರು ನಾಲ್ಕು ತಿಂಗಳಿಂದ ಅಶಾಂತವಾಗಿದೆ. ಜಗತ್ತಿಗೆ ಮಧ್ಯ ಪ್ರಾಚ್ಯ ಶಾಂತವಾಗುವುದರೊಂದಿಗೆ ತಮ್ಮ ಆರ್ಥಿಕ ಹಿತವನ್ನು ಮತ್ತು ಹಿಡಿತವನ್ನು ಸ್ಥಾಪಿಸಲು ಕಾಯುತ್ತಿದೆ. ಆದರೆ ಟ್ರಂಪ್ ಇರಾನನ್ನು ಪದೇ ಪದೇ ಕೆಣುಕುತ್ತಿದ್ದಾರೆ. ಜಗತ್ತು ಮುಂದಕ್ಕೆ ಏನೆಂದು ಜಿಗುಪ್ಸೆಯಿಂದ ನೋಡುವಂತಾಗಿದೆ.

ಆರು ವಾರ ಯುದ್ಧ ನಿಂತದ್ದೇ ಈ ಚರ್ಚೆಗಳಿಂದ ಅಲ್ವಾ? ಯುದ್ಧ ನಿಲುಗಡೆಗೆ ಇಡೀ ಜಗತ್ತಿನ ಒತ್ತಡ ಟ್ರಂಪ್ ಆಡಳಿತದ ಮೇಲಿತ್ತು. ಹಾಗಾಗಿ ಯುದ್ಧವಿರಾಮ ಆಗಿತ್ತು. ಯುದ್ಧ ನಿಂತಿತು ಎಂದಾದಾಗ ಅಮೆರಿಕವನ್ನು ಹಳಿಯುತ್ತಿದ್ದ ಜನರು ಕೂಡ ನೆಮ್ಮದಿಪಟ್ಟರು. ಪ್ರಪಂಚದ ಆರ್ಥಿಕ ಸ್ಥಿತಿ ಹತೋಟಿಗೆ ಬರ ತೊಡಗಿತು ಮತ್ತು ಒಪೆಕ್ ದೇಶಗಳು ತೈಲೋತ್ಪಾದನೆ ಹೆಚ್ಚಿಸಲು ನಿರ್ಧರಿಸಿದವು ಮತ್ತು ಕಚ್ಚಾ ತೈಲದ ದರ ಇಳಿಕೆಯಾಯಿತು.

ಈಗ ಮತ್ತೆ ಹೊಸ ಆಟಕ್ಕಿಳಿದ ಟ್ರಂಪ್:

ಹೌದು ಗುಟುರು ಹಾಕಿದ್ದಾರೆ. ವಾಸ್ತವದಲ್ಲಿ ಬೊಗಸ್ ಬೆದರಿಕೆ. ಅಮೆರಿಕಕ್ಕೆ ಮಾರ್ಕೆಟ್ ಸೃಷ್ಟಿಸಲಷ್ಟೇ ಈಗಿನ ಹೊಸ ಆಟ. ಟರ್ಕಿಯ ಅಂಕಾರದಲ್ಲಿ ನ್ಯಾಟೊ ದೇಶಗಳ ಮೀಟಿಂಗಿಗೆ ಹೋದವರು ಇರಾನ್ ಅನ್ನು ನಂಬುವಂತಿಲ್ಲ ಎಂದಿದ್ದಾರೆ. ಇರಾನಿನ ನಾಯಕರು ಅಪಾಯಕಾರಿಗಳೆಂದು ವರಾತ ಎತ್ತಿದ್ದಾರೆ. ಈ ಆಟದಿಂದ ದೊಡ್ಡ ಮಟ್ಟದಲ್ಲಿ ಭಾರತದ ಷೇರು ಪೇಟೆ ಪಲ್ಟಿಹೊಡೆಯಿತು. ಸೂಚ್ಯಂಕ ಕುಸಿಯಿತು. ತೈಲ ಬೆಲೆ ಕಡಿಮೆಯಾಗುತ್ತಿದ್ದಲ್ಲಿಂದ ಮತ್ತೆ ನೆಗೆಯಿತು. ಭಾರತದ ನಾಣ್ಯ ಅಮೆರಿಕದ ಡಾಲರ್ ಮುಂದೆ 52 ಪೈಸೆ ಕುಸಿಯಿತು. ಟ್ರಂಪ್ ಪದೇ ಪದೇ ಗುಟುರು ಹಾಕುತ್ತಿರುವುದು ಯಾಕೆಂದು ಗೊತ್ತಾಯಿತಲ್ಲ. ಡಾಲರ್ ಬಲವರ್ಧನೆಗೆ ಅಮೆರಿಕದ ಆರ್ಥಿಕತೆಯ ಸ್ಟೆಬಿಲಿಟಿಗೆ ಭಾರತದಂತೆ ಜಗತ್ತಿನ ಇತರ ದೇಶಗಳು ಈ ಪೆಟ್ಟು ಸಹಜವಾಗಿ ಅನು ಭವಿಸಿರುತ್ತವೆ. ನಿಜ ಹೇಳ್ಬೇಕೆಂದರೆ, ಚರ್ಚೆಯೂ ನಿಲ್ಲುವುದಿಲ್ಲ. ಸಂಪೂರ್ಣ ಯುದ್ಧವೂ ಆಗುವುದಿಲ್ಲ.

ಹೌದು ನ್ಯಾಟೋ ನೀಟಾಗಿಲ್ಲ:

ಇರಾನ್ ವಿರುದ್ಧ ಶಸ್ತ್ರಾಸ್ತ್ರ ದಾಳಿಗೆ ನ್ಯಾಟೊದ ಇತರ ದೇಶಗಳು ಒಪ್ಪುವುದು ಸುಲಭ ಅಲ್ಲ. ಹಾರ್ಮುಝ್ ಜಲಸಂಧಿಯಿಂದ ವಾಣಿಜ್ಯ ಹಡಗು ಸಂಚಾರ ಸುಗಮಗೊಳ್ಳುವುದು ಅವರ ದೊಡ್ಡ ಅನಿವಾರ್ಯತೆ. ಇರಾನಿಗೆ ಗುದ್ದುತ್ತಿದ್ದರೆ, ಇರಾನ್ ಉಲ್ಟಾ ಗುದ್ದುತ್ತದೆ ಎಂದು ನ್ಯಾಟೊ ದೇಶಗಳಿಗೆ ಗೊತ್ತಿದೆ. ಟ್ರಂಪ್ ಹೇಳಿಕೆ ಹೊರ ಬಿದ್ದದ್ದೇ ತಡ ಇರಾನಿನ ಸಂಸತ್ ಸ್ಪೀಕರ್ ಮುಹಮ್ಮದ್ ಗಾಲಿಬಾಫ್ ಬೆದರಿಕೆ ಮತ್ತು ಸುಲಿಗೆಯ ಯುಗ ಮುಗಿದಿದೆ. ನಾವು ಬೆದರಿಕೆಗೆ ಬಗ್ಗುವುದಿಲ್ಲ ಎಂದಿದ್ದಾರೆ. ಎಲ್ಲರಿಗೂ ಅರ್ಥವಾಗುವಂತಹದ್ದು. ಆದರೂ ಈ ಸಲ ಯುರೋಪಿಯನ್ ಸಹಿತ ನ್ಯಾಟೊ ದೇಶಗಳು ಇರಾನಿನ ಮೇಲೆ ದಾಳಿಗೆ ಸಹಕರಿಸುವ ನಿರ್ಧಾರಕ್ಕೆ ಬಂದವಾ? ಒಂದು ಗುಮಾನಿ ಹುಟ್ಟಿಕೊಂಡಿದೆ ಹೌದು. ಇರಾನ್ ಭೂಪ್ರದೇಶಗಳಿಗೆ ಹೊಸದಾಗಿ ಅಮೆರಿಕ ನಡೆಸಿದ ದಾಳಿಯನ್ನು ನ್ಯಾಟೋ ಮುಖ್ಯಸ್ಥ ಮಾರ್ಕ್ ರೂಟ್ಟೆ ಸಮರ್ಥಿಸಿದ್ದರಿಂದ ಈ ಮಾತು.

ನ್ಯಾಟೊಗೆ ಢಿಕ್ಕಿ ಕೊಟ್ಟ ರಷ್ಯಾ:

ಟ್ರಂಪ್ ಹೇಳಿಕೆ ಹೊರಟಂದೇ ಯುಕ್ರೇನಿನ ಮೇಲೆ ತೀವ್ರ ದಾಳಿ ಮಾಡಿ ನ್ಯಾಟೊಗಳಿಗೆ ರಷ್ಯಾ ಎಚ್ಚರಿಕೆ ಕೊಟ್ಟಿದೆ. ಹೌದು, ಇಂದು ರಷ್ಯಾ ಮತ್ತು ಇರಾನಿನ ನಡುವೆ ಶಸ್ತ್ರಾಸ್ತ್ರ ಸಹಕಾರ ಇರುವುದು ಗುಟ್ಟಾಗಿಲ್ಲ. ಈ ಹಿನ್ನೆಲೆಯಲ್ಲಿ ರಷ್ಯಾ ಯುಕ್ರೇನಿನ ಮೇಲೆ ನಡೆಸಿದ ಹೊಸ ತೀವ್ರ ದಾಳಿಗೆ ಅರ್ಥ ಹುಡುಕಿ. ಅಂಕಾರದಲ್ಲಿ ನ್ಯಾಟೊಗಳು ಕೂತು ಮಾತಾಡುತ್ತಿದ್ದಂತೆ ರಷ್ಯಾ ಖಡಕ್ ಎಚ್ಚರಿಕೆ ಕೊಟ್ಟಿದೆ. ರಷ್ಯಾವು ಇರಾನಿನ ಕಚ್ಚಾ ತೈಲ ಬಳಕೆದಾರ. ಚೀನಾದ ಆಯುಧ, ಸ್ಯಾಟಲೈಟ್ ಸಹಾಯವನ್ನು ಧಾರಾಳವಾಗಿ ಇರಾನ್ ಕೂಡ ಬಳಸುತ್ತದೆ. ಗಾಲಿಬಾಫ್ ಬೆದರಿಕೆ ಮತ್ತು ಸುಲಿಗೆಯುಗ ಮುಗಿಯಿತು ಎಂದುದಕ್ಕೂ ಈ ಹಿನ್ನೆಲೆಯನ್ನಿಟ್ಟೇ ನೀವು ನೋಡಬೇಕಾಗುತ್ತದೆ.

ನೆತನ್ಯಾಹು ಇಂಡಿಯಾ ಪ್ರೇಮ:

ಇಸ್ರೇಲಿಗೆ ಅಮೆರಿಕ ಬಿಟ್ಟರೆ ಇನ್ಯಾರೂ ಬಿಗ್ ಫ್ರೆಂಡ್ ಇಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೆತನ್ಯಾಹುರನ್ನು ಅಪಮಾನಿಸಿದ್ದಾರೆ. ಇದರರ್ಥ ಅಮೆರಿಕ ಅಲ್ಲದಿದ್ದರೆ ಇಸ್ರೇಲ್ ಇಲ್ಲ. ಅಂತಲ್ವಾ? ಇದನ್ನೇ ಇರಾನ್ ನೂರಹತ್ತು ಸಲ ಹೀಗೆ ಹೇಳುತ್ತಾ ಬಂದಿದೆ. ಅಮೆರಿಕದ ಸಹಕಾರ ಇಲ್ಲದಿದ್ದರೆ ಇಸ್ರೇಲಿನ ಅಸ್ತಿತ್ವವನ್ನೇ ನಾವು ನಿರ್ಮೂಲ ಮಾಡುತ್ತಿದ್ದೆವು. ಜೆ.ಡಿ. ವ್ಯಾನ್ಸ್ ಅದನ್ನೇ ಹೇಳಿದ್ದು. ಇದಕ್ಕೆ ಉತ್ತರ ಕೊಡಲು ನೆತನ್ಯಾಹು ಭಾರತವನ್ನು ಎಳೆದು ತಂದರು. ಅಮೆರಿಕ ನಮ್ಮ ಅತ್ಯಂತ ದೊಡ್ಡ ಮಿತ್ರ ಎಂದು ಒಪ್ಪಿಕೊಳ್ಳುತ್ತೇನೆ. ಜೊತೆಗೆ ಭಾರತವೂ ನಮಗೆ ಅತ್ಯಂತ ಶಕ್ತಿ ಶಾಲಿ ಬೆಂಬಲ ನೀಡುತ್ತಿದೆ ಎಂದರು. ಟ್ರಂಪ್‌ರಂಥ ಕೆಲವರನ್ನು ಬಿಟ್ಟರೆ ನೆತನ್ಯಾಹುರನ್ನು ಆಳುವ ರಿಪಬ್ಲಿಕನ್ನರೇ ಇರಲಿ ವಿಪಕ್ಷ ಡೆಮೋಕ್ರಾಟ್‌ಗಳೇ ಇರಲಿ ಮೆಚ್ಚುವುದಿಲ್ಲ. ಅಂತಹವರಲ್ಲಿ ಜೆ.ಡಿ. ವ್ಯಾನ್ಸ್ ಒಬ್ಬರು.

ನೆತನ್ಯಾಹು ಮುಖ ಉಳಿಸಿಕೊಳ್ಳಲು ಭಾರತವನ್ನು ಎತ್ತಿ ಮೇಲಿಟ್ಟಿದ್ದಾರೆ. ಭಾರತದಲ್ಲಿ ಇಸ್ರೇಲಿನ ಮುಖವುಳಿಸುವ ಪ್ರಸಂಗ ಭಕ್ತರಿಗೆ ಹೆಮ್ಮೆ ಅನಿಸಬಹುದು. ಜೆ.ಡಿ. ವ್ಯಾನ್ಸ್ ಇಸ್ರೇಲಿನ ಇತಿ ಮಿತಿ ಕುರಿತ ಸತ್ಯವನ್ನು ನೆತನ್ಯಾಹುಗೆ ನೆನಪಿಸಿದ್ದು ಒಳ್ಳೆಯದೇ ಆಯಿತೆಂದು ಜಗತ್ತು ಭಾವಿಸಿಕೊಳ್ಳಬಹುದು.

ಭಾರತದಲ್ಲಿ ಇಸ್ರೇಲಿಗೆ ಜಾಗ ಕೊಟ್ಟ ನರಸಿಂಹ ರಾವ್:

ಫೆಲಸ್ತೀನಿಯರನ್ನು ಓಡಿಸಿ ಇಸ್ರೇಲ್ ಸ್ಥಾಪಿಸಿದ ಝಿಯೋನಿಸಂ ಅನ್ನು ಮಹಾತ್ಮಾ ಗಾಂಧಿ ಒಪ್ಪಲೇ ಇಲ್ಲ. ಭಾರತಕ್ಕೆ ಮಿತ್ರ ಆಗಿತ್ತು ಫೆಲಸ್ತೀನ್. ಹೌದು ಫೆಲಸ್ತೀನ್ ಅಥಾರಿಟಿಯ ಯಾಸರ್ ಅರಾಫತ್ ರಿಗೆ ಭವ್ಯ ಸ್ವಾಗತ ಸಿಗುತ್ತಿದ್ದ ಒಂದು ಕಾಲ ಇತ್ತು. ನೋಡಿ,

1992ರಲ್ಲಿ ನರಸಿಂಹ ರಾವ್ ಪ್ರಧಾನಿಯಾಗಿದ್ದ ವೇಳೆ. ಟೆಲ್ ಅವಿವ್ ಮತ್ತು ದಿಲ್ಲಿಯ ನಡುವೆ ಸಂಬಂಧ ಸ್ಥಾಪಿಸಿದರು. 1990ರಲ್ಲಿ ಇಸ್ರೇಲಿಗೆ ನರಸಿಂಹ ರಾವ್ ಮಾನ್ಯತೆ ಕೊಟ್ಟರು. ಅದಕ್ಕೂ ಮುಂಚೆ ಸುಮಾರು 42 ವರ್ಷಗಳ ಕಾಲ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿರಲಿಲ್ಲ. ಪಾಕಿಸ್ತಾನದಲ್ಲಿ ಈಗಲೂ ಇಸ್ರೇಲಿನ ದೂತವಾಸ ಇಲ್ಲವೇ ಇಲ್ಲ. ನರಸಿಂಹ ರಾವ್ ಅವರನ್ನು ಈಗಲೂ ಬಹಳಷ್ಟು ಮಂದಿ ಕಾಂಗ್ರೆಸ್ಸಿನ ಸಂಘಿ ಮನುಷ್ಯ ಎನ್ನುತ್ತಾರೆ. ಅವರು ಸಂಘಿ ಹೌದೋ ಅಲ್ವೋ. ಅದು ಇನ್ನೊಂದು ವಿಚಾರ ಆದರೆ ಖಂಡಿತ ಅವರು ವಿದೇಶ ನೀತಿಯನ್ನು ತಿರುಗಿಸಿ ಹಾಕಿ ದರು. ಭಾರತದಲ್ಲಿ ಇಸ್ರೇಲಿಗೆ ಮಣೆ ಹಾಕಿದರು.

ಇರಾನ್‌ನದ್ದು ಪ್ರತಿರೋಧವೇ ದಾಳಿಯೇ?:

ಮೂಲ ವಿಷಯಕ್ಕೆ ಬರೋಣ. ವರದಿಯ ಪ್ರಕಾರ ಇರಾನ್ ಮೂರು ಹಡಗುಗಳ ಮೇಲೆ ದಾಳಿ ಮಾಡಿದೆ. ಒಮಾನಿನ ಪ್ರಾದೇಶಿಕ ಸಮುದ್ರದ ಒಂದು ಭಾಗವನ್ನು ಇರಾನ್ ನಿರ್ಬಂಧಿತ ವಲಯ ಎಂದು ಗುರುತಿಸಿತ್ತು. ಎಲ್ಲ ಹಡಗುಗಳು ಈ ಮಾರ್ಗವನ್ನು ಬಳಸಬೇಕೆಂದು ನಕ್ಷೆಯನ್ನು ನೀಡಿತ್ತು. ಆದರೆ, ಇರಾನಿನ ನೌಕಾ ಸೈನ್ಯ ದಾಳಿಗೊಳಗಾದ ಹಡಗುಗಳಿಗೆ ದಿಕ್ಕನ್ನು ಬದಲಾಯಿಸುವಂತೆ ಎಚ್ಚರಿಕೆ ನೀಡಿತ್ತು. ಅವು ಕೇಳಿಲ್ಲ. ಇರಾನ್ ಅದರ ಮೇಲೆ ದಾಳಿ ಮಾಡಿದೆ. ಈ ಪ್ರದೇಶದಲ್ಲಿ ಅಮೆರಿಕ ಹೇಳಿದ್ದಲ್ಲ ನಾವು ಹೇಳುವುದು ನಡೆಯುತ್ತದೆ ಎಂದು ಇರಾನ್ ಜಗತ್ತಿನ ಮುಂದೆ ತೋರಿಸಿಕೊಟ್ಟಿದೆ.

ಇರಾನಿನ ಸೀಮೆಯೊಳಗೆ ಇರಾನಿನ ಆದೇಶವನ್ನು ಉಲ್ಲಂಘಿಸಿದರೆ ಇರಾನ್ ಸುಮ್ಮನಿರಬೇಕೆಂದು ಟ್ರಂಪ್ ಬಯಸುತ್ತಾರೆ. ಅದನ್ನು ಸಮರ್ಥಿಸಲು ಇರಾನಿ ನಾಯಕರೊಂದಿಗೆ ಚರ್ಚೆ ವೇಸ್ಟ್ ಎಂದು ಹೇಳಿದ್ದು ಮತ್ತು ಅಮೆರಿಕದ ದೃಷ್ಟಿಯಲ್ಲಿ ಯುದ್ಧವಿರಾಮದ ಉಲ್ಲಂಘನೆ. ನ್ಯಾಟೊ ಮುಖ್ಯಸ್ಥರ ಪ್ರಕಾರವೂ ಇರಾನಿನಿಂದ ನಡೆದದ್ದು ದಾಳಿಯೇ ಆಗಿದೆ. ಇರಾನಿನ ವಿರುದ್ಧ ಪ್ರತೀಕಾರಕ್ಕಿಳಿದು ಅಮೆರಿಕ ಇರಾನಿನ 80ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿತು. ಈ ನ್ಯಾಟೊ ಸಭೆ ಮುಗಿದ ನಂತರವೂ ಚರ್ಚೆ ಮುಂದುವರಿಯುತ್ತದೆ ಮತ್ತು ಇಂತಹ ದಾಳಿ ಪ್ರತಿ ದಾಳಿಗಳು ನಡೆಯುತ್ತಿರುತ್ತವೆ ಅಷ್ಟೇ.

ಇರಾನ್ ಅಮೆರಿಕದ ವಾಯುದಾಳಿಗೆ ದಿಟ್ಟ ಉತ್ತರವನ್ನೂ ನೀಡಿದೆ. ಅಮೆರಿಕದ ಎಂಕ್ಯೂ 9 ಡ್ರೋನ್ ಗುಂಡಿಟ್ಟು ಕೆಳಗು ರುಳಿಸಿದೆ. ಇರಾನಿನದ್ದು ಒಂದೇ ನಡೆ ಏಟಿಗೆ ಏದಿರೇಟು. ಪ್ರತಿರೋಧ ಮತ್ತು ನ್ಯಾಯ ಸಮ್ಮತ ರೀತಿಯಲ್ಲೇ ಇರುತ್ತದೆ. ಬಹ್ರೇನ್ ಮತ್ತು ಕುವೈಟಿನಲ್ಲಿರುವ ಅಮೆರಿಕದ 85ರಷ್ಟು ಸೈನಿಕ ಕೇಂದ್ರಗಳನ್ನು ಗುರಿಯಾಗಿಟ್ಟು ದಾಳಿ ನಡೆಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಇಷ್ಟರಲ್ಲೇ ಅಮೆರಿಕ ಬೆಚ್ಚಿ ಹೋಗಿದೆ. ಒಮ್ಮೆ ಚರ್ಚೆಗೆ ಬನ್ನಿ ಎಂದು ಕರೆಯುತ್ತಿರುವುದು ಟ್ರಂಪ್. ಅಂದರೆ ಯುದ್ಧ ನಿಲ್ಲಬೇಕೆನ್ನುವುದು ಟ್ರಂಪ್ ಮತ್ತು ಅಮೆರಿಕನ್ ಆಡಳಿತಗಾರರ ಒಳಗೊಳಗೆ ತಳಮಳಾಡುತ್ತಿವೆ.

ಅಮೆರಿಕ ಕೊಲ್ಲಿಯ ಇತರ ದೇಶಗಳನ್ನು ತನ್ನ ಮೂಗಿನ ನೇರಕ್ಕೆ ಮಾಡಬಹುದು. ಆದರೆ, ಇರಾನನ್ನು ಬಗ್ಗಿಸಲು ಟ್ರಂಪ್‌ಗೆ ಸಾಧ್ಯವಿಲ್ಲ. ಅದು ಅವರಿಗೂ ಗೊತ್ತು. ಟ್ರಂಪ್ ಧಮಕಿ ಅಮೆರಿಕದ ಡಾಲರ್‌ಗೆ ಲಾಭ ಆಗುವುದಾದರೆ ಧಮಕಿ ಹಾಕದಿರುತ್ತಾರಾ? ಟ್ರಂಪ್ ಧಮಕಿಗೆ ಭಾರತದಲ್ಲಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 8.96 ಕೋಟಿಯಷ್ಟು ನಷ್ಟ ಆಗಿದೆ.

ಕೊನೆಗೂ ಹೇಳಬೇಕಾಗುತ್ತೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ಕವಿಯಬಹುದು. ಖಂಡಿತ ಸಾರ ಸಂಪೂರ್ಣ ಯುದ್ಧ ಆಗುವುದಿಲ್ಲ. ಇರಾನಿನೊಂದಿಗೆ ಅದರ ಮಿತ್ರ ರಷ್ಯಾ ಚೀನಾಗಳನ್ನು ಎದುರು ಹಾಕಲು ನ್ಯಾಟೊಗಳಿಗೆ ಬುದ್ಧಿ ಇಲ್ವಾ?