✍️ ಶ್ರಾವಸ್ತಿ ದಾಸಗುಪ್ತ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಯುವಜನರು ನಿರಂತರ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಜುಲೈ 23) ಮೌನ ಮುರಿದು ಈ ವಿಷಯದ ಕುರಿತು ತಮ್ಮ ಮೊದಲ ಹೇಳಿಕೆ ನೀಡಿದ್ದಾರೆ. “ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ತ್ವರಿತ ಮತ್ತು ಕಠಿಣ ಶಿಕ್ಷೆಯನ್ನು ಖಚಿತಪಡಿಸಲು ತ್ವರಿತಗತಿಯ ನ್ಯಾಯಾಲಯಗಳನ್ನು (ಫಾಸ್ಟ್ ಟ್ರ್ಯಾಕ್ ಕೋರ್ಟ್) ಸ್ಥಾಪಿಸಲಾಗುವುದು” ಎಂದು ಅವರು ಭರವಸೆ ನೀಡಿದ್ದಾರೆ. ಅಲ್ಲದೆ, “ಯುವಜನರ ಕಲ್ಯಾಣ ಮತ್ತು ಭವಿಷ್ಯಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ” ಹಾಗೂ “ನಮ್ಮ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುವವರನ್ನು ಬಿಡುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
“ನಮ್ಮ ಯುವಜನರ ಕಲ್ಯಾಣ ಮತ್ತು ಭವಿಷ್ಯಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ! ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ತ್ವರಿತ ಮತ್ತು ಕಠಿಣ ಶಿಕ್ಷೆಯನ್ನು ಖಚಿತಪಡಿಸಲು ತ್ವರಿತಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ” ಎಂದು ಮೋದಿ ಗುರುವಾರ ಎಕ್ಸ್ (X) ನಲ್ಲಿ ಬರೆದುಕೊಂಡಿದ್ದಾರೆ.
“ಈ ಸಂಬಂಧ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಪ್ರಾಧಿಕಾರಗಳು ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡಲು ನಾವು ಕೈಗೊಳ್ಳುತ್ತಿರುವ ಸರಣಿ ಕ್ರಮಗಳ ಮುಂದುವರಿದ ಭಾಗ ಇದಾಗಿದೆ. ನಮ್ಮ ಯುವಕರ ಭವಿಷ್ಯಕ್ಕೆ ಹಾನಿ ಮಾಡಲು ಪ್ರಯತ್ನಿಸುವವರನ್ನು ಬಿಡುವುದಿಲ್ಲ.”
ಮೋದಿ ಅವರು ಜಂತರ್ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆಯಾಗಲಿ, ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಗ್ಗೆಯಾಗಲಿ ಅಥವಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ಬಗ್ಗೆಯಾಗಲಿ ಯಾವ ಪ್ರಸ್ತಾಪವನ್ನೂ ಮಾಡಿಲ್ಲ. ಅಷ್ಟೇ ಅಲ್ಲದೆ, ಕ್ರಮ ಕೈಗೊಳ್ಳುವ ಕುರಿತು ಅವರು ನೀಡಿರುವ ಈ ಭರವಸೆಯು ಹೊಸದೇನಲ್ಲ. ಪ್ರಧಾನಿಯವರು ಇತ್ತೀಚಿನ ವರ್ಷಗಳಲ್ಲಿ ಸಂಸತ್ತಿನಲ್ಲಿ ಹಾಗೂ ಚುನಾವಣಾ ಪ್ರಚಾರದ ವೇಳೆ ಹಲವು ಬಾರಿ ಇದೇ ರೀತಿಯ ಮಾತುಗಳನ್ನು ಆಡಿದ್ದಾರೆ ಮತ್ತು ಇಂತಹದೇ ಭರವಸೆಗಳನ್ನು ನೀಡಿದ್ದಾರೆ.
*ಕಲವು ನಿದರ್ಶನಗಳು ಇಲ್ಲಿವೆ:
ಜುಲೈ 2024
ಕೇವಲ ಎರಡು ವರ್ಷಗಳ ಹಿಂದೆ, ಮೋದಿ ಅವರು ಸಂಸತ್ತಿನಲ್ಲಿ ಮಾತನಾಡುತ್ತ ಇದೇ ರೀತಿಯ ಮಾತುಗಳಲ್ಲಿ ಇದೇ ಭರವಸೆಯನ್ನು ನೀಡಿದ್ದರು.
ಜುಲೈ 2, 2024 ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿ ಲೋಕಸಭೆಯಲ್ಲಿ ಮಾತನಾಡಿದ ಮೋದಿ, ಯುವಕರಿಗೆ ಮೋಸ ಮಾಡಿದವರನ್ನು “ಸರ್ಕಾರವು ಬಿಡುವುದಿಲ್ಲ” ಎಂದು ಹೇಳಿದ್ದರು.
ಮೋದಿಯವರು ಮಾತನಾಡುತ್ತಾ, “ಮಾನ್ಯ ರಾಷ್ಟ್ರಪತಿಗಳು ಸಹ ತಮ್ಮ ಭಾಷಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ಸರ್ಕಾರವು ಅತ್ಯಂತ ಗಂಭೀರವಾಗಿದೆ ಮತ್ತು ಯುದ್ಧಶಿಸ್ತಿನ ರೀತಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ಪೂರೈಸಲು ನಾವು ಒಂದರ ನಂತರ ಒಂದರಂತೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಹಾಗೂ ಪ್ರತಿಯೊಬ್ಬ ಯುವಕರಿಗೂ ನಾನು ಹೇಳಲು ಬಯಸುತ್ತೇನೆ” ಎಂದು ತಿಳಿಸಿದ್ದರು.
“ಯುವಕರ ಭವಿಷ್ಯದೊಂದಿಗೆ ಆಟವಾಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. NEET ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ನಿರಂತರವಾಗಿ ಬಂಧನಗಳನ್ನು ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಈಗಾಗಲೇ ಕಠಿಣ ಕಾನೂನನ್ನು ಜಾರಿಗೆ ತಂದಿದೆ. ಇಡೀ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.” ಎಂದಿದ್ದರು.
ಮರುದಿನ ಅಂದರೆ ಜುಲೈ 3, 2024 ರಂದು ಅವರು ರಾಜ್ಯಸಭೆಯಲ್ಲಿ ನೀಡಿದ ಉತ್ತರದಲ್ಲಿ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು.
“ದೇಶದ ಯುವಕರಿಗೆ ನಾನು ಭರವಸೆ ನೀಡುತ್ತೇನೆ, ನಿಮಗೆ ಮೋಸ ಮಾಡಿದವರನ್ನು ಈ ಸರ್ಕಾರವು ಬಿಡುವುದಿಲ್ಲ. ಈ ದೇಶದ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಖಚಿತಪಡಿಸಲು ಒಂದರ ನಂತರ ಒಂದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದ್ದರು.
“ಸಂಸತ್ತಿನಲ್ಲಿ ನಾವು ಈ ಅಕ್ರಮಗಳ ವಿರುದ್ಧ ಕಠಿಣ ಕಾನೂನುಗಳನ್ನು ರೂಪಿಸಿದ್ದೇವೆ. ಭವಿಷ್ಯದಲ್ಲಿ ನನ್ನ ದೇಶದ ಯುವಕರಿಗೆ ಯಾವುದೇ ಆತಂಕದ ಪರಿಸ್ಥಿತಿ ಎದುರಾಗದಂತೆ, ಅವರು ಆತ್ಮವಿಶ್ವಾಸದಿಂದ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ತಮಗೆ ಅರ್ಹವಾಗಿರುವುದನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ನಾವು ಇಡೀ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ. ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.” ಎಂದು ಭರವಸೆ ನೀಡಿದ್ದರು.
ಆ ವರ್ಷದ ಜೂನ್ 18 ರಂದು ನಡೆದಿದ್ದ ಯುಜಿಸಿ-ನೆಟ್ (UGC-NET) ಪರೀಕ್ಷೆಯಲ್ಲಿ, ಅವ್ಯವಸ್ಥೆಗಳಾಗಿದೆ ಎಂಬ ವರದಿಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ ಜೂನ್ 19 ರಂದು ರದ್ದುಗೊಂಡ ನಂತರ ಮೋದಿಯವರ ಈ ಮಾತುಗಳು ಬಂದಿದ್ದವು. ಆ ವರ್ಷದ ಮೇ 5 ರಂದು ನಡೆದಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ NEET (UG) ನ ನಡೆಸುವಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದೊಂದಿಗೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಪರೀಕ್ಷೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಫೆಬ್ರವರಿ 2024
ಫೆಬ್ರವರಿ 2024 ರಲ್ಲಿ, 17 ನೇ ಲೋಕಸಭೆಯ ಕೊನೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆಯು ಯುವಜನರನ್ನು ಕೋಪಗೊಳ್ಳುವಂತೆ ಮಾಡಿದ್ದರಿಂದ ತಮ್ಮ ಸರ್ಕಾರವು ಆ ತಿಂಗಳು ಸಾರ್ವಜನಿಕ ಪರೀಕ್ಷೆಗಳ (ಅನುಚಿತ ಸಾಧನೆಗಳ ತಡೆಗಟ್ಟುವಿಕೆ) ಮಸೂದೆ, 2024 ಅನ್ನು ಅಂಗೀಕರಿಸಿದೆ ಎಂದು ಹೇಳಿದ್ದರು.
“ಪ್ರಶ್ನೆಪತ್ರಿಕೆ ಸೋರಿಕೆಯು ನಮ್ಮ ಯುವಕರನ್ನು ಕಳವಳಗೊಳಿಸುತ್ತಿತ್ತು ಮತ್ತು ಚಿಂತೆಗೀಡು ಮಾಡುತ್ತಿತ್ತು. ವ್ಯವಸ್ಥೆಯ ವಿರುದ್ಧ ಯುವಕರು ಆಕ್ರೋಶಗೊಂಡಿದ್ದರು. ಇದಕ್ಕಾಗಿ ಸಂಸತ್ತು ಕಠಿಣ ಕಾನೂನನ್ನು ಅಂಗೀಕರಿಸಿತು” ಎಂದು ಅವರು ಹೇಳಿದ್ದರು.
ಡಿಸೆಂಬರ್ 2024
ತಿಂಗಳುಗಳ ನಂತರ, ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಆಚರಿಸಲು ನಡೆದ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರಶ್ನೆಪತ್ರಿಕೆ ಸೋರಿಕೆಯು “ರಾಜಸ್ಥಾನದ ಗುರುತಾಗಿ” (ಪರಿಚಯವಾಗಿ) ಮಾರ್ಪಟ್ಟಿತ್ತು ಆದರೆ ಬಿಜೆಪಿ ಸರ್ಕಾರವು ತನಿಖೆಯನ್ನು ಪ್ರಾರಂಭಿಸಿದೆ ಎಂದು ಹೇಳಿದ್ದರು.
“ಹಿಂದಿನ ಸರ್ಕಾರವು ರಾಜಸ್ಥಾನದ ಯುವಕರಿಗೆ ಅನ್ಯಾಯ ಮಾಡಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೇಮಕಾತಿಯಲ್ಲಿನ ವಂಚನೆ ರಾಜಸ್ಥಾನದ ಗುರುತಾಗಿಬಿಟ್ಟಿತ್ತು. ಬಿಜೆಪಿ ಸರ್ಕಾರವು ತನಿಖೆಯನ್ನು ಪ್ರಾರಂಭಿಸಿತು ಮತ್ತು ಅನೇಕ ಜನರನ್ನು ಬಂಧಿಸಿತು. ಜೊತೆಗೆ, ಬಿಜೆಪಿ ಸರ್ಕಾರವು ನೇಮಕಾತಿಗಳನ್ನು ಮಾಡಿದೆ” ಎಂದು ಅವರು ಹೇಳಿದ್ದರು.
“ಪ್ರಶ್ನೆಪತ್ರಿಕೆ ಸೋರಿಕೆಯು ನಮ್ಮ ಯುವಕರನ್ನು ಕಳವಳಗೊಳಿಸುತ್ತಿತ್ತು ಮತ್ತು ಚಿಂತೆಗೀಡು ಮಾಡುತ್ತಿತ್ತು. ವ್ಯವಸ್ಥೆಯ ವಿರುದ್ಧ ಯುವಕರು ಆಕ್ರೋಶಗೊಂಡಿದ್ದರು. ಇದಕ್ಕಾಗಿ ಸಂಸತ್ತು ಕಠಿಣ ಕಾನೂನನ್ನು ಅಂಗೀಕರಿಸಿತು” ಎಂದು ಅವರು ತಿಳಿಸಿದ್ದರು.
ನವೆಂಬರ್ 2023
2023 ರ ರಾಜಸ್ಥಾನ ವಿಧಾನಸಭಾ ಚುನಾವಣೆಯ ಮುನ್ನಾ ದಿನಗಳಲ್ಲಿ, ರಾಜ್ಯದಲ್ಲಿ ಪರೀಕ್ಷಾ ಪೇಪರ್ಗಳನ್ನು ಮಾರಾಟ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಆರೋಪಿಸಿದ್ದರು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದ್ದರು.
“ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಕೋಟಾಗೆ ಬರುತ್ತಾರೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಯುವಕರ ಕನಸುಗಳನ್ನು ಪದೇ ಪದೇ ನಾಶಪಡಿಸಿದೆ. ಕಾಂಗ್ರೆಸ್ ಎಲ್ಲಾ ಪರೀಕ್ಷೆಗಳ ಪೇಪರ್ಗಳನ್ನು ಮಾರಾಟ ಮಾಡಿದೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಇದು ಮೋದಿಯವರ ಗ್ಯಾರಂಟಿ” ಎಂದು ಅವರು ಹೇಳಿದ್ದರು.
ಅದಕ್ಕೂ ಹಿಂದಿನ ತಿಂಗಳು, ಅಂದರೆ 2023 ರ ಅಕ್ಟೋಬರ್ 5 ರಂದು ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆಯೂ ಮೋದಿ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಕಾಂಗ್ರೆಸ್ ಪೋಷಿಸಿರುವ ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾವನ್ನು ಮಟ್ಟಹಾಕುವುದಾಗಿ ಭರವಸೆ ನೀಡಿದ್ದರು.
“ಕಾಂಗ್ರೆಸ್ನ ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾವೇ ರಾಜಸ್ಥಾನದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದೆ. ರಾಜಸ್ಥಾನದ ಯುವಕರು ನ್ಯಾಯ ಕೇಳುತ್ತಿದ್ದಾರೆ” ಎಂದು ಅವರು ಹೇಳಿದ್ದರು.
“ಚುನಾವಣೆಯ ಸಮಯದಲ್ಲಿ ಭ್ರಷ್ಟಾಚಾರವನ್ನು ತೊಡೆದುಹಾಕುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಯುವಕರನ್ನು ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾದ ಕೈಗೆ ಒಪ್ಪಿಸಿದೆ. ಹೊಸ ಬಿಜೆಪಿ ಸರ್ಕಾರವು ಇಂತಹ ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ. ನೆನಪಿಡಿ, ಬಿಜೆಪಿ ಬರುತ್ತದೆ ಮತ್ತು ರಾಜಸ್ಥಾನಕ್ಕೆ ಉದ್ಯೋಗ ಸಿಗುತ್ತದೆ, ಪೇಪರ್ ಮಾಫಿಯಾ ನಾಶವಾಗುತ್ತದೆ.” ಎಂದು ಭರವಸೆ ನೀಡಿದ್ದರು.
ಕೃಪೆ: thewire.in












