ಸನ್ಮಾರ್ಗ ವಾರ್ತೆ
ಆಕ್ರಮಿತ ಪೂರ್ವ ಜೆರುಸಲೇಮ್ನಲ್ಲಿರುವ ಅಲ್-ಅಕ್ಸಾ ಮಸೀದಿ ಸಂಕೀರ್ಣದ ಮೇಲೆ ಬಲಪಂಥೀಯ ಗುಂಪುಗಳು ಮತ್ತು ಸಾವಿರಾರು ಇಸ್ರೇಲಿ ವಲಸಿಗರು ನಡೆಸಿದ ಮುತ್ತಿಗೆಯನ್ನು ಕನಿಷ್ಠ ಎಂಟು ದೇಶಗಳು ಬಲವಾಗಿ ಖಂಡಿಸಿವೆ.
ಗುರುವಾರ ಬಿಡುಗಡೆ ಮಾಡಲಾದ ಜಂಟಿ ಹೇಳಿಕೆಯಲ್ಲಿ ಈಜಿಪ್ಟ್, ಇಂಡೋನೇಷ್ಯಾ, ಜೋರ್ಡಾನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ತುರ್ಕಿಯೆ(ಟರ್ಕಿ) ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನ ವಿದೇಶಾಂಗ ಸಚಿವರು, ಅಲ್-ಅಕ್ಸಾ ಮಸೀದಿಯ “ಪವಿತ್ರ ಸ್ಥಳದೊಳಗೆ ತೀವ್ರಗಾಮಿ ಇಸ್ರೇಲಿ ಸಚಿವರ ನೇತೃತ್ವದಲ್ಲಿ ವಲಸಿಗರು ದೊಡ್ಡ ಪ್ರಮಾಣದಲ್ಲಿ ನುಗ್ಗುವುದನ್ನು” ಖಂಡಿಸಿದ್ದಾರೆ.
“ಈ ಪ್ರಚೋದನಾಕಾರಿ ಕ್ರಮಗಳು ದ್ವೇಷ ಮತ್ತು ತೀವ್ರಗಾಮಿತ್ವವನ್ನು ಹೆಚ್ಚಿಸುತ್ತವೆ ಹಾಗೂ ದ್ವಿ-ರಾಷ್ಟ್ರ ಪರಿಹಾರದ ಆಧಾರದ ಮೇಲೆ ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ತರುವ ಪ್ರಯತ್ನಗಳಿಗೆ ಅಡ್ಡಿಪಡಿಸುತ್ತವೆ” ಎಂದು ಹೇಳಿಕೆ ತಿಳಿಸಿದೆ. ಜೆರುಸಲೇಮ್ನ ಪವಿತ್ರ ಸ್ಥಳಗಳ “ಐತಿಹಾಸಿಕ ಮತ್ತು ಮಾನ್ಯವಾದ ಯಥಾಸ್ಥಿತಿಯನ್ನು ಬದಲಾಯಿಸುವ ಕಾನೂನುಬಹಿರ ಪ್ರಯತ್ನ” ಎಂದು ಈ ಆಕ್ರಮಣವನ್ನು ಬಣ್ಣಿಸಲಾಗಿದೆ.
“ಆಕ್ರಮಿತ ಜೆರುಸಲೇಮ್ ಅಥವಾ ಅದರ ಇಸ್ಲಾಮಿಕ್ ಮತ್ತು ಕ್ರಿಶ್ಚಿಯನ್ ಪವಿತ್ರ ಸ್ಥಳಗಳ ಮೇಲೆ ಇಸ್ರೇಲ್ ಯಾವುದೇ ಸಾರ್ವಭೌಮತ್ವವನ್ನು ಹೊಂದಿಲ್ಲ” ಎಂದು ಹೇಳಿಕೆ ಸ್ಪಷ್ಟಪಡಿಸಿದೆ.
ಯಹೂದಿಗಳ ಹಬ್ಬವಾದ ‘ಟಿಶಾ ಬಿಅವ್’ ಆಚರಣೆಗಾಗಿ ಗುರುವಾರ 4200ಕ್ಕೂ ಹೆಚ್ಚು ಇಸ್ರೇಲಿ ವಲಸಿಗರು ಮತ್ತು ಬಲಪಂಥೀಯ ಗುಂಪುಗಳ ಸದಸ್ಯರು ಅಲ್-ಅಕ್ಸಾ ಮಸೀದಿ ಸಂಕೀರ್ಣಕ್ಕೆ ನುಗ್ಗಿದ್ದಾರೆ. ಇದು ಈ ವರ್ಷದ ಅತಿ ದೊಡ್ಡ ಅತಿಕ್ರಮಣಗಳಲ್ಲಿ ಒಂದಾಗಿದೆ.
ಇಸ್ರೇಲ್ನ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗಿವಿರ್ ಕೂಡ ಭಾರೀ ಪೊಲೀಸ್ ಭದ್ರತೆಯಲ್ಲಿ ಮಸೀದಿ ಸಂಕೀರ್ಣದೊಳಗೆ ಪ್ರವೇಶಿಸಿದರು.
ಈ ದಾಳಿಗೂ ಮುನ್ನ, ಇಸ್ರೇಲಿ ಪಡೆಗಳು ಅನೇಕ ಫೆಲೆಸ್ತೀನಿಯನ್ನರು ಮುಂಜಾನೆಯ ಪ್ರಾರ್ಥನೆಗಾಗಿ ಅಲ್-ಅಕ್ಸಾ ಮಸೀದಿಯನ್ನು ತಲುಪದಂತೆ ತಡೆದವು. ಇದರಿಂದಾಗಿ ಅವರು ಪಕ್ಕದ ಬೀದಿಗಳಲ್ಲೇ ಪ್ರಾರ್ಥನೆ ಮಾಡಬೇಕಾಯಿತು.
ಅಲ್-ಅಕ್ಸಾ ಮಸೀದಿಯು ದಶಕಗಳ ಹಳೆಯ ಯಥಾಸ್ಥಿತಿಯಡಿಯಲ್ಲಿ ಆಡಳಿತ ನಡೆಸುತ್ತ ಬಂದಿದೆ. ಇದು ಕೇವಲ ಇಸ್ಲಾಮಿಕ್ ಆರಾಧನಾ ಸ್ಥಳವಾಗಿ ಅದರ ಧಾರ್ಮಿಕ ಸ್ಥಾನಮಾನವನ್ನು ಸಂರಕ್ಷಿಸುವ ಅಂತಾರಾಷ್ಟ್ರೀಯ ವ್ಯವಸ್ಥೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ಇಸ್ರೇಲಿ ಭದ್ರತಾ ಪಡೆಗಳ ರಕ್ಷಣೆಯೊಂದಿಗೆ ಹೆಚ್ಚಾಗಿ ನಡೆಯುವ ಇಸ್ರೇಲಿ ವಲಸಿಗರ ಅತಿಕ್ರಮಣಗಳು ಈ ಮಸೀದಿಯಲ್ಲಿ ತೀವ್ರವಾಗಿ ಹೆಚ್ಚಾಗಿವೆ.
https://x.com/MofaQatar_AR/status/2080385396370792929?ref_src=twsrc%5Etfw%7Ctwcamp%5Etweetembed%7Ctwterm%5E2080385396370792929%7Ctwgr%5E782396d4d4f6182f92dbd6e39bc0ca610a4e9ea9%7Ctwcon%5Es1_c10&ref_url=https%3A%2F%2Fmaktoobmedia.com%2Fpost%3Fid%3D116016slug%3DOver2042C20020Israeli20settlers20storm20Al-Aqsa20Mosque20compound3B20eight20countries20condemn












