ಭೋಪಾಲ, ಜು. 20: ನವಿಲುಗಳನ್ನು ಕೊಂದಿರುವ ಆರೋಪ ಹೊರಿಸಿ ಮಧ್ಯಪ್ರದೇಶದಲ್ಲಿ ಜನರ ಗುಂಪು ದಲಿತ ಯುವಕನನ್ನು ಹೊಡೆದು ಕೊಂದು ಹಾಕಿದೆ. ಹೀರಾಲಾಲ್ ಬನ್ಚಂದ್ ಎನ್ನುವ ಯುವಕ ಜನರ ಗುಂಪಿನ ಆಕ್ರೋಶಕ್ಕೆ ಬಲಿಯಾದ ನತದೃಷ್ಟ ದಲಿತ ಯುವಕ. ಜನರ ಏಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಹೀರಾಲಾಲ್ನನ್ನು ನಂತರ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಘಟನೆಯಲ್ಲಿ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಕೊಲೆಯಾದ ಹೀರಾಲಾಲ್ ಮತ್ತು ಪುತ್ರ ರಾಹುಲ್ ಹಾಗೂ ಇತರ ಇಬ್ಬರ ವಿರುದ್ಧ ನವಿಲು ಹತ್ಯೆ ಆರೊಪದಲ್ಲಿ ಕೇಸು ದಾಖಲಿಸಲಾಗಿದೆ. ನಾಲ್ವರು ಕೃಷಿ ಸ್ಥಳದಲ್ಲಿ ಓಡಾಡುವುದನ್ನು ಕಂಡು ಜನರು ಅವರನ್ನು ಹಿಂಬಾಲಿಸಿದ್ದರು.
ಹೀರಾಲಾಲ್ನನ್ನು ಕೃಷಿ ಸ್ಥಳದಲ್ಲಿ ಹಿಡಿದರು. ಅವನ ಕೈಯಲ್ಲಿ ಸತ್ತ ನವಿಲು ಇತ್ತು. ನಂತರ ಆತನಿಗೆ ಹೊಡೆದಿದ್ದಾರೆ. ಕಳೆದ ದಿವಸ ಜನರ ಗುಂಪು ಹೊಡೆದು ಹಾಕಿದ್ದ ಮಾನಸಿಕ ಅಸ್ವಸ್ಥ ಆಸ್ಪತ್ರೆಯಲ್ಲಿ ಅಸು ನೀಗಿದ್ದಾನೆ. ಮಕ್ಕಳ ಅಪಹರಣಕಾರ ಎಂದು ಜನರು ಇವನನ್ನು ಹೊಡೆದು ಸಾಯಿಸಿದ್ದರು. ಘಟನೆಯಲ್ಲಿ ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ.












