ಗೋವಾ | ‘ಫ್ರೀ ಉಮರ್ ಖಾಲಿದ್’ ಪ್ಲಕಾರ್ಡ್ ಪ್ರದರ್ಶಿಸಿದ್ದಕ್ಕೆ ಮುಸ್ಲಿಂ ಯುವಕ ವಶಕ್ಕೆ

0
430

ಸನ್ಮಾರ್ಗ ವಾರ್ತೆ

ಪಣಜಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ಸೂಚಿಸಲು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಯನ್ನು ಆಚರಿಸಲು ಆಝಾದ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ‘ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರನ್ನು ಬಿಡುಗಡೆ ಮಾಡಿ’ (Free Umar Khalid and Sharjeel Imam) ಎಂಬ ಪ್ಲಕಾರ್ಡ್ ಪ್ರದರ್ಶಿಸಿದ ದಾನಿಶ್ ಮೊಹಮ್ಮದ್ ಎಂಬ ಮುಸ್ಲಿಂ ಯುವಕನನ್ನು ಗೋವಾ ಪೊಲೀಸರು ಪಣಜಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ವೇದಿಕೆಯಲ್ಲಿ ಶನಿವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಾಗ ಉದ್ವಿಗ್ನತೆ ಉಂಟಾಯಿತು. ತರುವಾಯ ಬಿಜೆಪಿ ಕಾರ್ಯಕರ್ತರು ದಾನಿಶ್ ಅವರ ಪ್ಲಕಾರ್ಡ್ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಇದರಿಂದಾಗಿ ಅವರನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆಯ ಬಳಿಕ ಭಾನುವಾರ ಅವರನ್ನು ಬಿಡುಗಡೆ ಮಾಡಲಾಯಿತು.

ಹೆರಸಲು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ಮಾತನಾಡಿ, “ಪ್ಲಕಾರ್ಡ್ ಹಿಡಿದಿದ್ದ ವ್ಯಕ್ತಿಯನ್ನು ಸ್ಥಳೀಯ ಮಾಧ್ಯಮದ ಕೆಲವರು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆಗಾಗಿ ಆಝಾದ್ ಮೈದಾನದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಆ ವ್ಯಕ್ತಿಯನ್ನು ವಿಚಾರಣೆ ನಡೆಸಿ ಗುರುತಿನ ಚೀಟಿ ತೋರಿಸುವಂತೆ ಕೇಳಿದರು. ತಾನು ಯಾವುದೇ ಐಡಿ ಹೊಂದಿಲ್ಲ ಎಂದು ಆ ವ್ಯಕ್ತಿ ತಿಳಿಸಿದರು” ಎಂದು ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗುವುದನ್ನು ತಡೆಯಲು ಅವರನ್ನು ಪಣಜಿ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯೊಬ್ಬರ ಮಾನಹಾನಿ ಮಾಡಿದ ಹಾಗೂ ನಿಂದನಾತ್ಮಕ ಭಾಷೆ ಬಳಸಿದ ಆರೋಪದ ಮೇಲೆ ಸುದೀಪ್ ದಾಲ್ವಿ ಅವರನ್ನು ಸಹ ಅದೇ ಕಾರ್ಯಕ್ರಮದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾನಿಶ್ ಹಾಗೂ ದಾಲ್ವಿ ಇಬ್ಬರೂ ಪ್ರಧಾನ್ ಅವರ ರಾಜೀನಾಮೆ ಆಚರಣಾ ರಾಲಿಯ ಭಾಗವಾಗಿದ್ದರು.

ಸಭೆಯಲ್ಲಿ ‘ಫ್ರೀ ಉಮರ್ ಖಾಲಿದ್’ ಪ್ಲಕಾರ್ಡ್ ಪ್ರದರ್ಶಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಣಜಿ ಪೊಲೀಸ್ ಠಾಣೆಯ ಹೊರಗೆ ಧರಣಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಉಪಾಧ್ಯಕ್ಷ ನರೇಂದ್ರ ಸವಾಯ್ಕರ್ ಅವರು ಎಕ್ಸ್ (X) ತಾಣದಲ್ಲಿ, “ಗೆದ್ದಲುಗಳೊಂದಿಗೆ ಜಿರಳೆಗಳು! ರಾಷ್ಟ್ರವನ್ನು ಉಳಿಸಿ!” ಎಂದು ಪೋಸ್ಟ್ ಮಾಡಿದ್ದರಿಂದ ಉಂಟಾದ ವಿವಾದದ ಬೆನ್ನಲ್ಲೇ ಗೋವಾದಲ್ಲಿ ಈ ಪ್ರತಿಭಟನೆಗಳು ನಡೆದವು. ಪಣಜಿಯಲ್ಲಿ ಐಕ್ಯತಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಅವಮಾನಕರ ಮತ್ತು ಅಮಾನವೀಯ ಭಾಷೆಯನ್ನು ಬಳಸಿದ್ದಾರೆ ಎಂದು ಸವಾಯ್ಕರ್ ಕ್ಷಮೆಯಾಚಿಸಬೇಕೆಂದು ವಿರೋಧ ಪಕ್ಷಗಳು ಖಂಡಿಸಿವೆ.

ಮತ್ತೊಂದು ಬೆಳವಣಿಗೆಯಲ್ಲಿ, ನೀಟ್ (NEET) ಪತ್ರಿಕೆ ಸೋರಿಕೆ ವಿವಾದದ ಕುರಿತು ಮಪುಸಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಜ್ವಾಡ್ ವಿದ್ಯಾರ್ಥಿ ಸಂಘಟನೆಯ ಸದಸ್ಯೆ ಅಮ್ರೀನ್ ಶೇಖ್ ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಯಿಸಲಾಗಿತ್ತು.