ಸನ್ಮಾರ್ಗ ಸಂಪಾದಕೀಯ
ಸುಮಾರು 40 ವರ್ಷಗಳ ಕಾಲ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿಯ ಹೆಸರನ್ನು ಇತಿಹಾಸದಿಂದ ಅಳಿಸಿ ಹಾಕಲು ಪ್ರಯತ್ನಿಸಿ ಮಧ್ಯಪ್ರದೇಶ ಸರಕಾರ ಕೈ ಸುಟ್ಟುಕೊಂಡಿದೆ. ಆ ವ್ಯಕ್ತಿಯೇ ಮೌಲಾನಾ ಬರ್ಕತುಲ್ಲಾ ಭೋಪಾಲಿ. ಇವರ ಹೆಸರಲ್ಲಿರುವ ವಿಶ್ವವಿದ್ಯಾಲಯವನ್ನು ವಾಗ್ದೇವಿ ಭೋಜಪಾಲ್ ವಿಶ್ವವಿದ್ಯಾಲಯ ಎಂದು ಬದಲಾಯಿಸಲು 2026 ಜೂನ್ 3ರಂದು ವಿವಿಯ ಕಾರ್ಯಕಾರಿ ಸಮಿತಿ ನಿರ್ಧರಿಸಿತ್ತು. ವಾಗ್ದೇವಿ ಎಂಬುದು ಸರಸ್ವತಿ ದೇವಿಯ ಇನ್ನೊಂದು ಹೆಸರು. ಭೋಜಪಾಲ್ ಎಂಬುದು ರಾಜ ಭೋಜರಿಗೆ ಸಂಬಂಧಿಸಿದ ಭೋಪಾಲ್ನ ಪ್ರಾಚೀನ ಹೆಸರು. ಈ ಎರಡನ್ನೂ ಒಟ್ಟು ಸೇರಿಸಿ ವಾಗ್ದೇವಿ ಭೋಜಪಾಲ್ ಎಂಬುದಾಗಿ ಮೌಲಾನಾ ಬರ್ಕತುಲ್ಲಾ ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸುವುದು ಕಾರ್ಯಕಾರಿ ಸಮಿತಿಯ ಉದ್ದೇಶವಾಗಿತ್ತು. ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಮತ್ತು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಇದರ ಹಿಂದಿನ ತಲೆ ಉಪಕುಲಪತಿ ಪ್ರೊ. ಎಸ್.ಕೆ. ಜೈನ್. ಇವರ ಹಿಂದೆ ಸರಕಾರ ಇತ್ತು ಎಂಬುದು ಬಹಿರಂಗ ರಹಸ್ಯ. ಆದರೆ,
ಈ ಪ್ರಸ್ತಾವನೆಗೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಎಲ್ಲಿಯ ವರೆಗೆಂದರೆ, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ ಉಪಕುಲಪತಿ ಎಸ್.ಕೆ. ಜೈನ್ ರಾಜೀನಾಮೆ ನೀಡಿದರು. ಪ್ರಸ್ತಾವನೆಯು ಈಗ ಮರೆಗೆ ಸರಿದಿದೆ. ನಿಜವಾಗಿ,
1970ರಲ್ಲಿ ಸ್ಥಾಪನೆಯಾದ ಭೋಪಾಲ್ ವಿಶ್ವವಿದ್ಯಾಲಯದ ಹೆಸರನ್ನು 1988ರಲ್ಲಿ ಮೌಲಾನಾ ಬರ್ಕತುಲ್ಲಾ ವಿಶ್ವವಿದ್ಯಾಲಯವಾಗಿ ಬದಲಾಯಿಸುವುದಕ್ಕೆ ಹತ್ತು-ಹಲವು ಕಾರಣಗಳಿವೆ. ಸುಮಾರು 40 ವರ್ಷಗಳ ಕಾಲ ಇವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಭಾರತದ ಮೊಟ್ಟಮೊದಲ ಪ್ರವಾಸಿ ಸರಕಾರದ ಪ್ರಧಾನಿಯಾದರು.
1854ರಲ್ಲಿ ಮಧ್ಯಪ್ರದೇಶದ ಭೋಪಾಲದಲ್ಲಿ ಹುಟ್ಟಿದ ಇವರು ಭೋಪಾಲದ ಸುಲೈಮಾನಿಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದರು. ಉನ್ನತ ಶಿಕ್ಷಣಕ್ಕಾಗಿ ಬಾಂಬೆಗೆ ಹೋಗಿ, ಬಳಿಕ ಲಂಡನ್ಗೆ ತೆರಳಿ ವಿದ್ಯಾಭ್ಯಾಸ ಮುಂದುವರಿಸಿದರು. ಇವರ ತಂದೆ ಶುಜಾಅತುಲ್ಲಾ ಖಾನ್ ಅವರು ಭೋಪಾಲ್ ಸರಕಾರದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದರು.
ಬ್ರಿಟನ್ನಿನ ಓರಿಯಂಟಲ್ ವಿಶ್ವವಿದ್ಯಾಯದಲ್ಲಿ ಉಪನ್ಯಾಸಕರಾಗಿರುತ್ತಾ, ಇದೇ ಬ್ರಿಟನ್ನಿನ ದಬ್ಬಾಳಿಕೆಗೆ ಭಾರತೀಯರು ಪಡುತ್ತಿರುವ ಪಾಡನ್ನು ಕಂಡು ಅವರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಆ ಸಮಯದಲ್ಲಿ ಇಂಡಿಯನ್ ಹೋಮ್ರೂಲ್ ಸೊಸೈಟಿ ಮತ್ತು ಇಂಡಿಯಾ ಹೌಸ್ನ ಸ್ಥಾಪಕರಾದ ಶ್ಯಾಮ್ಜಿ ಕೃಷ್ಣ ಶರ್ಮಾ ಮತ್ತು ಅಫಘಾನ್ ಆಡಳಿತಗಾರ ಅಬ್ದುಲ್ ರಹ್ಮಾನ್ ಅವರ ಮಗ ಪ್ರಿನ್ಸ್ ನಸ್ರುಲ್ಲಾ ಅವರ ಸಂಪರ್ಕಕ್ಕೆ ಬಂದರು. ಆಗ ಲಂಡನ್ ಎಂಬುದು ಗೋಪಾಲಕೃಷ್ಣ ಗೋಖಲೆ ಸಹಿತ ಹಲವು ನಾಯಕರ ಚಟುವಟಿಕೆಯ ಕೇಂದ್ರವಾಗಿತ್ತು. ಆ ಸಮಯದಲ್ಲಿ ಬ್ರಿಟಿಷ್ ಪ್ರಧಾನಿ ಒಂದು ಭಾಷಣ ಮಾಡಿದರು. ಅದರಲ್ಲಿ ಭಾರತೀಯರ ಬಗ್ಗೆ ಜನಾಂಗೀಯ ನಿಂದನೆಗಳಿದ್ದುವು. ಇದಕ್ಕೆ ಪ್ರತಿಕ್ರಿಯೆಯಾಗಿ ಬರ್ಕತುಲ್ಲಾ ಭಾಷಣ ಮಾಡಿದರು. ಲೇಖನ ಬರೆದರು. ಇವರ ಅಸ್ಖಲಿತ ಇಂಗ್ಲಿಷ್ ಬ್ರಿಟನ್ನಿಗರನ್ನು ಬಹಳವೇ ಆಕರ್ಷಿಸಿತ್ತು. ಇಂಗ್ಲಿಷ್ ಅಲ್ಲದೆ ಉರ್ದು, ಅರಬಿ, ಫಾರ್ಸಿ, ಹಿಂದಿ ಭಾಷೆಗಳೂ ಇವರಿಗೆ ಕರಗತವಾಗಿದ್ದುವು. ಮೌಲಾನಾರ ಭಾಷಣಕ್ಕೆ ಸಿಟ್ಟಾದ ಬ್ರಿಟಿಷ್ ಆಡಳಿತವು ಇವರ ಚಟುವಟಿಕೆಯನ್ನು ನಿರ್ಬಂಧಿಸಿತು.
1899ರಲ್ಲಿ ವಿದ್ವಾಂಸ ಮುಹಮ್ಮದ್ ಅಲೆಕ್ಸಾಂಡರ್ ರಸೆಲ್ ಅವರ ಆಹ್ವಾನದ ಮೇರೆಗೆ ಇವರು ನ್ಯೂಯಾರ್ಕ್ಗೆ ಹೋದರು. ಅಲ್ಲಿ ಇವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಸಂಪರ್ಕ ಬೆಳೆಸಿದರು. ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಆರಂಭವಾದ ಗದರ್ ಪಕ್ಷದ ಸ್ಥಾಪಕ ಸದಸ್ಯರಾದರು. ನಂತರ ಇವರು ಒಂದು ನಿಯೋಗದ ಭಾಗವಾಗಿ ಚೀನಾಕ್ಕೆ ಹೊರಟರಾದರೂ ಅದಕ್ಕೆ ಅಡ್ಡಿಪಡಿಸಲಾಯಿತು. ಈ ಕಾರಣದಿಂದ ಜಪಾನ್ಗೆ ಹೋದರು. 1909ರಲ್ಲಿ ಜಪಾನ್ನ ಟೋಕಿಯೋ ವಿವಿಯಲ್ಲಿ ಓರಿಯಂಟಲ್ ಭಾಷೆಗಳ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನೇಮಕರಾದರು. ಅಲ್ಲಿ, ‘ದಿ ಇಸ್ಲಾಮಿಕ್ ಫ್ರಟರ್ನಿಟಿ’ ಎಂಬ ಪತ್ರಿಕೆಯ ಸಂಪಾದಕರಾದರು. ಆದರೆ ಇವರ ಬರಹಗಳುಳ್ಳ ಈ ಪತ್ರಿಕೆಯನ್ನು ಸ್ಥಗಿತಗೊಳಿಸುವಂತೆ ಬ್ರಿಟಿಷ್ ರಾಯಭಾರಿ ಜಪಾನ್ ಸರಕಾರದ ಮೇಲೆ ಒತ್ತಡ ಹೇರಿದರು. ಬಳಿಕ ‘ಅಲ್ ಇಸ್ಲಾಮ್’ ಎಂಬ ಹೆಸರಿನಲ್ಲಿ ಇನ್ನೊಂದು ಪತ್ರಿಕೆ ಪ್ರಾರಂಭಿಸಿದರು. ಅದನ್ನೂ ನಿಷೇಧಿಸಲಾಯಿತು. 1914ರಲ್ಲಿ ವಿಶ್ವವಿದ್ಯಾಲಯ ಉದ್ಯೋಗವನ್ನು ತೊರೆದರು. 1915ರಲ್ಲಿ ಭಾರತೀಯ ವಿದ್ಯಾರ್ಥಿಗಳ ಜೊತೆ ಅಫಘಾನಿಸ್ತಾನಕ್ಕೆ ಹೋದರು. ಬಳಿಕ ಐತಿಹಾಸಿಕ ಕ್ಷಣಕ್ಕೆ ಇವರು ಸಾಕ್ಷಿಯಾದರು. ರಾಜಕುಮಾರ ರಾಜ ಮಹೇಂದ್ರ ಅವರು ಅಧ್ಯಕ್ಷರಾಗಿ ಮತ್ತು ಬರ್ಕತುಲ್ಲಾರು ಪ್ರಧಾನಿಯಾಗಿ ಅಫಘಾನಿಸ್ತಾನದಲ್ಲಿ ದೇಶಭ್ರಷ್ಟ ಅಥವಾ ಪ್ರವಾಸಿ ಭಾರತೀಯ ಸರಕಾರ ರಚನೆಯಾಯಿತು. ಮೌಲಾನಾ ಉಬೈದುಲ್ಲಾ ಸಿಂಧಿ ಗೃಹ ಸಚಿವರಾದರು ಮತ್ತು ಚೆಂಬಕ ರಾಮನ್ ಪಿಳ್ಳೆ ವಿದೇಶಾಂಗ ಸಚಿವರಾದರು. ಬ್ರಿಟಿಷ್ ನಿಯಂತ್ರಣದ ಹೊರಗೆ ಭಾರತೀಯರು ತಮ್ಮದೇ ಆದ ಸ್ವತಂತ್ರ ಸರಕಾರವನ್ನು ರಚಿಸಿದ್ದು ಇದೇ ಮೊದಲಾಗಿತ್ತು.
1919ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದರು ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಲೆನಿನ್ರ ಸಹಾಯ ಕೋರಿದರು. ಆಗಿನ ಪತ್ರಿಕೆ ಇಜ್ವೆಸ್ಟಿಯಾಗೆ ಇವರು ನೀಡಿದ ಸಂದರ್ಶನ ಬಹಳ ಪ್ರಸಿದ್ಧವಾಗಿದೆ. ‘ನಾನು ಕಮ್ಯುನಿಸ್ಟೂ ಅಲ್ಲ, ಸಮಾಜವಾದಿಯೂ ಅಲ್ಲ. ಭಾರತದಿಂದ ಬ್ರಿಟಿಷರನ್ನು ಹೊರಹಾಕುವುದೇ ನನ್ನ ಏಕೈಕ ಗುರಿ’ ಎಂದವರು ಹೇಳಿದ್ದರು. ಕಮ್ಯುನಿಸ್ಟ್ ರಷ್ಯಾದ ನೆಲದಲ್ಲಿ ನಿಂತು ಅವರು ಈ ಮಾತನ್ನು ಆಡಿದ್ದರು ಎಂಬುದು ಗಮನಾರ್ಹ. 1920ರಲ್ಲಿ ಜರ್ಮನಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ ಮತ್ತು ಸ್ವಿಟ್ಜರ್ಲ್ಯಾಂಡ್ ವಸಾಹತುಶಾಹಿ ವಿರೋಧಿ ಚಳುವಳಿ ಗಳೊಂದಿಗೆ ಸಂಪರ್ಕ ಸಾಧಿಸಿದರು. 1926ರಲ್ಲಿ ನೆಹರೂ ಅವರು ಜರ್ಮನಿಯ ಬರ್ಲಿನ್ಗೆ ಭೇಟಿ ನೀಡಿದಾಗ ಬರ್ಕತುಲ್ಲಾರನ್ನು ಭೇಟಿಯಾದರು. 1927 ಸೆಪ್ಟೆಂಬರ್ 20ರಂದು ಇವರು ಕ್ಯಾಲಿಫೋರ್ನಿಯಾದಲ್ಲಿ ನಿಧನರಾದರು. ತನ್ನ ಗದರ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಇವರು ಕ್ಯಾಲಿಫೋರ್ನಿಯಾಕ್ಕೆ ಬಂದಿದ್ದರು. ಅವರನ್ನು ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದ ಹಳೆಯ ಸಿಟಿ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಆ ಸಂದರ್ಭದಲ್ಲಿ ರಾಜ ಮಹೇಂದ್ರ ಪ್ರತಾಪ್ ಉಪಸ್ಥಿತರಿದ್ದರು.
ಭಾರತವನ್ನು ಬ್ರಿಟಿಷರಿಂದ ವಿಮೋಚಿಸುವುದಕ್ಕಾಗಿ ಮಧ್ಯಪ್ರದೇಶದ ಭೋಪಾಲದ ಯುವಕನೋರ್ವ ಇಂಗ್ಲೆAಡ್, ರಶ್ಯಾ, ಜರ್ಮನಿ, ಜಪಾನ್, ಅಫಘಾನ್ ಸಹಿತ ಜಗತ್ತಿನ ಹತ್ತು ಹಲವು ರಾಷ್ಟ್ರಗಳಲ್ಲಿ ತಿರುಗಾಡಿ ವಲಸಿಗ ಭಾರತೀಯರನ್ನು ಸಂಘಟಿಸಿ, ಆ ಮೂಲಕ ಬ್ರಿಟಿಷ್ ಆಡಳಿತ ಕೋಪಕ್ಕೆ ತುತ್ತಾಗಿ ಅಂತಿಮವಾಗಿ ದೇಶಭ್ರಷ್ಟರಾಗಿಯೇ ಕೊನೆಯುಸಿರೆಳೆದ ಕತೆ ಇದು. ಭಾರತದಿಂದ ಮೌಲಾನಾ ಬರ್ಕತುಲ್ಲಾ ಲಂಡನ್ನಿಗೆ ಹೋಗುವಾಗ ಯುವಕರಾಗಿದ್ದರು. ಆದರೆ, ಆ ಬಳಿಕ ಆಯುಷ್ಯವನ್ನೆಲ್ಲಾ ಅವರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಖರ್ಚು ಮಾಡಿದರು. ಹಾಗಂತ,
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಭಾಗವಹಿಸಲೇ ಬೇಕಾದ ಅನಿವಾರ್ಯತೆಯೇನೂ ಇರಲಿಲ್ಲ. ಅವರಿಗೆ ಉತ್ತಮ ವೇತನದ ಉದ್ಯೋಗವಿತ್ತು. ಲಂಡನ್ನಿನಲ್ಲಿ ಆರಾಮವಾಗಿ ಇರುವಂಥ ವಾತಾವರಣವೂ ಇತ್ತು. ಆ ಕಾಲದಲ್ಲಿ ಅಸಂಖ್ಯ ಭಾರತೀಯರು ತಮ್ಮ ಉದ್ಯೋಗ, ಕುಟುಂಬ, ಮಕ್ಕಳು ಎಂದೆಲ್ಲಾ ಆರಾಮವಾಗಿಯೇ ಇದ್ದರು. ಆದರೆ, ಬರ್ಕತುಲ್ಲಾ ಅವರು ಈ ಆರಾಮ ಗುಂಪಿನಲ್ಲಿ ಸೇರಿಕೊಳ್ಳಲು ಇಷ್ಟಪಡಲಿಲ್ಲ. ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸುವುದಕ್ಕಾಗಿ ಉದ್ಯೋಗ ತೊರೆಯಲೂ ಸಿದ್ಧರಾದರು. ಸಾರಿಗೆ ಸಂಪರ್ಕಗಳು ಅತ್ಯಂತ ಸೀಮಿತವಾಗಿದ್ದ ಆ ಕಾಲದಲ್ಲೂ ಹತ್ತು-ಹಲವು ರಾಷ್ಟ್ರಗಳಲ್ಲಿ ಸುತ್ತಾಡಿದರು. ದೇಶಭ್ರಷ್ಟ ಸರಕಾರವನ್ನೇ ರಚಿಸಿ ಬ್ರಿಟಿಷರಿಗೆ ಸಡ್ಡು ಹೊಡೆದರು. ದುರಂತ ಏನೆಂದರೆ, ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದನ್ನೇ ರಾಜಕೀಯ ಮಾಡಿಕೊಂಡಿರುವ ಪಕ್ಷಕ್ಕೆ ಈ ಇತಿಹಾಸ ಬೇಕಾಗಿಯೇ ಇಲ್ಲ. ಮೌಲಾನಾ ಬರ್ಕತುಲ್ಲಾ ಎಂಬ ಹೆಸರೇ ಅದರ ಶತ್ರು. ಉತ್ತರ ಪ್ರದೇಶದಲ್ಲಿ ಮೌಲಾನಾ ಮುಹಮ್ಮದಲಿ ಜೌಹರ್ ವಿಶ್ವವಿದ್ಯಾಲಯಕ್ಕೆ ಬುಲ್ಡೋಜರ್ ಹರಿಸಲು ಯೋಗಿ ಸರಕಾರ ಕಾಯುತ್ತಿದೆ. ಹಿಂದೂ ಮುಸ್ಲಿಮರು ಜೊತೆಯಾಗಿ ಬದುಕುವ ಸ್ವತಂತ್ರ ಭಾರತದ ಕನಸು ಕಂಡವರನ್ನು ಆಧುನಿಕ ಭಾರತ ನಡೆಸಿಕೊಳ್ಳುತ್ತಿರುವ ರೀತಿ ಅಕ್ಷಮ್ಯ.












