✍️ ಏ.ಕೆ. ಕುಕ್ಕಿಲ
ಡಿಜಿಟಲ್ ಯುಗದಲ್ಲಿ ಹುಟ್ಟಿದ ಪೀಳಿಗೆಯಾಗಿ ಗುರುತಿಸಿಕೊಂಡಿರುವ ಜೆನ್ಝಿ ಸಮುದಾಯಕ್ಕೂ `ಜಮಾಅತೆ ಇಸ್ಲಾಮಿಗೂ ಸಂಬಂಧ ಹೇಗಿದೆ? ಸಮಾಧಾನಕರವಾಗಿದೆಯಾ? ಸುಧಾರಣೆಯ ಅಗತ್ಯವಿದೆಯಾ? ಸುಧಾರಣೆಯ ಅಗತ್ಯ ಇದೆ ಎಂದಾದರೆ, ಆ ಸುಧಾರಣೆಯ ಸ್ವರೂಪ ಯಾವುದು? ಏನೆಲ್ಲ ಪ್ರಯತ್ನಗಳನ್ನು ಮಾಡಿದರೆ ಈ ಜೆನ್ಝಿ ಸಮುದಾಯ ಸಂಘಟನೆಗೆ ಬೃಹತ್ ಪ್ರಮಾಣದಲ್ಲಿ ಸೇರ್ಪಡೆಗೊಳ್ಳಬಹುದು ಅಥವಾ ಸಕ್ರಿಯರಾಗ ಬಹುದು ಅಥವಾ ಜಮಾಅತ್ನ ಆಲೋಚನೆಗಳನ್ನು ಹರಡುವ ಹಿತೈಷಿಗಳಾಗಬಹುದು?
ಜಂತರ್ ಮಂತರ್ನಲ್ಲಿ ಮತ್ತು ದೇಶಾದ್ಯಂತ ಕಾಣಿಸಿಕೊಂಡಿರುವ ಜೆನ್ಝಿ ಪೀಳಿಗೆಯ ಪ್ರತಿಭಟನೆ ಮತ್ತು ಅದರ ಸಂವಹನ ಶೈಲಿಯು ಇಂಥದ್ದೊಂದು ಪ್ರಶ್ನೆಯ ಹುಟ್ಟಿಗೆ ಕಾರಣವಾಗಿದೆ.
1997 ಮತ್ತು 2012ರ ನಡುವೆ ಹುಟ್ಟಿದವರನ್ನು ಸಾಮಾನ್ಯವಾಗಿ ಜೆನ್ಝಿ ಸಮುದಾಯ ಎಂದು ಕರೆಯಲಾಗುತ್ತದೆ. ಇಂಟರ್ನೆಟ್, ಸ್ಮಾರ್ಟ್ ಫೋನ್ ಮತ್ತು ಸೋಶಿಯಲ್ ಮೀಡಿಯಾದೊಂದಿಗೆ ಬೆಳೆದ ಮೊದಲ ಪೀಳಿಗೆ ಎಂಬ ಐಡೆಂಟಿಟಿಯೂ ಇದಕ್ಕಿದೆ. ಇದೇ ಪೀಳಿಗೆ ನೇಪಾಳ, ಬಾಂಗ್ಲಾದಲ್ಲೂ ಬೃಹತ್ ಜನಾಂದೋಲನವನ್ನು ಮುನ್ನಡೆಸಿದೆ. ಆಡಳಿತ ಬದಲಾವಣೆಗೂ ಕಾರಣವಾಗಿದೆ. ಇಷ್ಟೊಂದು ಶಕ್ತಿ-ಸಾಮರ್ಥ್ಯವಿರುವ ಪೀಳಿಗೆಯೊಂದು ಅನಾಮತ್ತಾಗಿ ಸಂಘಟನಾ ವ್ಯಾಪ್ತಿಯಿಂದ ದೂರ ದೂರ ಎನ್ನುವಂತಾಗಬಾರದು. ಹೀಗೆ ಆಗಬಾರದು ಎಂದಾದರೆ, ಈ ಪೀಳಿಗೆಯ ಗುಣಗಳು, ಆಸಕ್ತಿ, ಲಕ್ಷಣಗಳ ಬಗ್ಗೆ ಅಧ್ಯಯನ ನಡೆಯಬೇಕು. ಮುಖ್ಯವಾಗಿ,
ಡಿಜಿಟಲ್ ತಂತ್ರಜ್ಞಾನದಲ್ಲಿ ಈ ಪೀಳಿಗೆಗೆ ಅಪಾರ ಹಿಡಿತ ಇದೆ. ದೃಶ್ಯ ಮಾಧ್ಯಮಗಳಿಗೆ ಈ ಪೀಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತದೆ. ಪ್ರಶ್ನಿಸುವ ಮನೋಭಾವ ಇದೆ ಮತ್ತು ವ್ಯಕ್ತಿಗತ ಐಡೆಂಟಿಟಿಯನ್ನು ಈ ಪೀಳಿಗೆ ಬಯಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ಕೊಡುತ್ತದೆ. ಕ್ಷಿಪ್ರವಾಗಿ ಮಾಹಿತಿ ಪಡೆಯುವ ಅಭ್ಯಾಸ ಮತ್ತು ಸಾಮರ್ಥ್ಯ ಇದೆ. ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ ಈ ಪೀಳಿಗೆಯಲ್ಲಿ ನಿಷ್ಠೆ ಇದೆ. ಡಿಜಿಟಲ್ ತಂತ್ರಜ್ಞಾನದ ವ್ಯಾಪಕತೆಯಿಂದಾಗಿ ದಿನದ ಹಲವು ಗಂಟೆಗಳನ್ನು ಮೊಬೈಲ್ಗಳಲ್ಲಿ ಈ ಪೀಳಿಗೆ ವ್ಯಯ ಮಾಡುತ್ತಿದೆ. ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಮೆಸೇಜಿಂಗ್ ಆ್ಯಪ್ಗಳನ್ನು ಈ ಪೀಳಿಗೆ ಹೆಚ್ಚಾಗಿ ಆಶ್ರಯಿಸಿವೆ. ಆದ್ದರಿಂದಲೇ,
ಈ ಪೀಳಿಗೆಯಲ್ಲಿ ಟಿವಿ ಚಾನೆಲ್ಗಳ ಬಗ್ಗೆ ನಿರಾಸಕ್ತಿಯಿದೆ. ಅದಕ್ಕಿಂತ ವೇಗವಾಗಿ ಸುದ್ದಿಯನ್ನು ತಲುಪಿಸುವ ಇನ್ಸ್ಟಾಗ್ರಾಮ್, ವಾಟ್ಸಾಪ್, ಟೆಲಿಗ್ರಾಮ್ ಮತ್ತು ಹ್ಯಾಶ್ಟ್ಯಾಗ್ಗಳನ್ನು ಈ ಪೀಳಿಗೆ ನೆಚ್ಚಿಕೊಂಡಿದೆ. ಜಂತರ್ ಮಂತರ್ ನಲ್ಲಿ ಟಿವಿ ಚಾನೆಲ್ಗಳ ವರದಿಗಾರರನ್ನು ‘ಗೋದಿ ಮೀಡಿಯಾ’ ಎಂದು ಕೂಗಿ ಹೊರ ಕಳುಹಿಸಿದ ಸಾಕಷ್ಟು ಘಟನೆಗಳು ನಡೆದಿರುವುದಕ್ಕೆ ಈ ಪೀಳಿಗೆ ಈ ಸಾಂಪ್ರದಾಯಿಕ ಮಾಧ್ಯಮವನ್ನು ನೆಚ್ಚಿಕೊಳ್ಳದಿರುವುದೇ ಕಾರಣ. ಈ ಪೀಳಿಗೆಗೆ ಟಿವಿ ಚಾನೆಲ್ಗಳೆಂಬುದು ನಿಧಾನಗತಿಯ ಮಾಧ್ಯಮವಾಗಿ ಕಾಣಿಸುತ್ತಿದೆ. ಡಿಜಿಟಲ್ ಮೀಡಿಯಾ ದಲ್ಲಿ ಇದಕ್ಕಿಂತ ವೇಗವಾಗಿ ತಲುಪಲು ಮತ್ತು ತಮಗೆ ಬೇಕಾದ ಕಂಟೆಂಟನ್ನು ಬೇಕಾದ ರೀತಿಯಲ್ಲಿ ಸೃಷ್ಟಿಸಿ ಹಂಚಲು ಅವಕಾಶ ಇದೆ. ಜಂತರ್ ಮಂತರ್ ಪ್ರತಿಭಟನೆಯಲ್ಲಿ ಅಷ್ಟೊಂದು ಜನ ಸೇರಿಕೊಳ್ಳುವುದರ ಹಿಂದೆ ಈ ಡಿಜಿಟಲ್ ಮೀಡಿಯಾಗಳ ಪಾತ್ರವೇ ದೊಡ್ಡದು. ಟಿವಿ ಚಾನೆಲ್ಗಳು ಈ ಜೆನ್ಝಿ ಬಗ್ಗೆ ಬೆನ್ನು ಹಾಕಿ ಕುಳಿತಾಗ ಅವಕ್ಕೆ ಸಡ್ಡು ಹೊಡೆಯುವಂತೆ ಜನರನ್ನು ತಲುಪಿದ್ದು ಇನ್ಸ್ಟಾಗ್ರಾಮ್ ವೀಡಿಯೋಗಳು. ಒಂದುವೇಳೆ,
ಈ ಜೆನ್ಝಿ ಪೀಳಿಗೆಯ ಬದಲು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಜಂತರ್ ಮಂತರ್ನಲ್ಲಿ ಇಂಥದ್ದೊಂದು ಪ್ರತಿಭಟನೆ ಏರ್ಪಡಿಸಿರುತ್ತಿದ್ದರೆ ಯಾವ ‘ಗೋದಿ ಮೀಡಿಯಾ’ ಪತ್ರಕರ್ತರನ್ನೂ ಹೊರ ಹಾಕುವ ಧೈರ್ಯ ತೋರುತ್ತಿರಲಿಲ್ಲ. ಅವರನ್ನು ತಡೆದರೆ ತಮ್ಮ ಪ್ರತಿಭಟನೆಯನ್ನು ಜನರಲ್ಲಿಗೆ ತಲುಪಿಸಲು ಬೇರೆ ಮಾಧ್ಯಮ ಇಲ್ಲ ಎಂಬ ಭಯವೇ ಇದಕ್ಕೆ ಕಾರಣ. ಇಂಥ ಭಯ ಸಂಘಟನೆಗಳಿಗೂ ಇವೆ. ರಾಜಕೀಯ ಪಕ್ಷಗಳಿಗೂ ಇವೆ. ಜೆನ್ಝಿ ಪೀಳಿಗೆಗೂ ಉಳಿದವರಿಗೂ ನಡುವೆ ಇರುವ ವ್ಯತ್ಯಾಸ ಇದುವೇ. ಈ ಪೀಳಿಗೆ ತನ್ನನ್ನು ಪ್ರಸ್ತುತಪಡಿ ಸಲು ಡಿಜಿಟಲ್ ಮೀಡಿಯಾವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಟಿವಿ ಮೀಡಿಯಾಗಳ ಹಂಗಿಲ್ಲದೇ ತಮ್ಮ ಸಂದೇಶವನ್ನು ಜನರಲ್ಲಿ ತಲುಪಿಸುವ ಧೈರ್ಯ ಈ ಪೀಳಿಗೆಗಿದೆ. ಜೆನ್ಝಿ ತಲೆಮಾರು ಮತ್ತು ಹಿರಿಯ ತಲೆಮಾರುಗಳ ನಡುವೆ ಆಲೋಚನೆಯಲ್ಲಿ ಅಂತರ ಇದೆ. ಸಂವಹನ ವಿಧಾನದಲ್ಲಿ ಅಂತರವಿದೆ. ಆಸಕ್ತಿಯ ವಿಷಯದಲ್ಲಿ ಅಂತರ ಇದೆ. ಹಾಗಂತ,
ಇದು ಮೌಲ್ಯಗಳ ಸಂಗತಿಯಲ್ಲ. ಮೌಲ್ಯ ಯಾವಾಗಲೂ ಸ್ಥಿರವಾದುದು. ಆದರೆ ಇದನ್ನು ಜೆನ್ಝಿ ಪೀಳಿಗೆಗೆ ಹೊಂದುವಂತೆ ಡಿಜಿಟಲೈಝ್ ಮಾಡುವುದು ಮತ್ತು ಅವರ ಆಸಕ್ತಿಗೆ ಒಗ್ಗುವಂತೆ ತಯಾರಿಸುವುದು ಸವಾಲಾಗಿರುವಂತೆ ಕಾಣಿಸುತ್ತಿದೆ. ಹಿರಿಯರಿಗೆ ದೀರ್ಘ ಭಾಷಣ ಒಗ್ಗುತ್ತದೆ. ಗಂಟೆ ಗಳ ಕಾಲ ನಿರಂತರ ನಡೆಯುವ ಭಾಷಣವನ್ನೂ ತದೇಕಚಿತ್ತದಿಂದ ಆಲಿಸುವ ಸಾಮರ್ಥ್ಯವನ್ನು ಹಿರಿಯ ಪೀಳಿಗೆ ಗಳಿಸಿಕೊಂಡಿದೆ. ಆದರೆ ಜೆನ್ಝಿ ಸಮುದಾಯ ಇದಕ್ಕೆ ತೀರಾ ವಿರುದ್ಧವಿದೆ. ಅದು ಉಪದೇಶ ಶೈಲಿಯ ಭಾಷಣಕ್ಕೆ ಅಷ್ಟಾಗಿ ಒಗ್ಗಿಕೊಳ್ಳುವುದಿಲ್ಲ. ಹೃಸ್ವ ಭಾಷಣಗಳು ಅವಕ್ಕೆ ಇಷ್ಟ. ಭಾಷಣಗಳಲ್ಲೂ ಉಪದೇಶ ಶೈಲಿಗಿಂತ ಕಥನ ಶೈಲಿಯ ಸಣ್ಣ ಸಣ್ಣ ನಿರೂಪಣೆಗಳನ್ನು ಜೆನ್ಝಿ ಸಮುದಾಯ ಇಷ್ಟಪಡುತ್ತದೆ. ದೃಶ್ಯಾಧಾರಿತ ನಿರೂಪಣೆ, ಘಟನೆಗಳ ಸುತ್ತ ಆಡುವ ಮಾತುಗಳಿಗೆ ಈ ಪೀಳಿಗೆ ಬೇಗ ಕಿವಿಯಾಗುತ್ತದೆ. ಸಣ್ಣ ಸಣ್ಣ ರೀಲ್ಸ್ಗಳಲ್ಲಿ ಕಟ್ಟಿಕೊಡುವ ಮೌಲ್ಯಗಳಿಗೆ ಬೇಗ ಆಕರ್ಷಿತವಾಗುತ್ತದೆ.
ಬಹುತೇಕ ಹಿರಿಯರು ಇನ್ಸ್ಟಾಗ್ರಾಮ್ ಎಂಬುದು ಮನರಂಜನೆ ಮತ್ತು ಸಮಯ ಕೊಲ್ಲುವ ಡಿಜಿಟಲ್ ಪ್ಲಾಟ್ಫಾರ್ಮ್ ಎಂದೇ ಅಂದುಕೊಂಡಿದ್ದಾರೆ. ಡ್ಯಾನ್ಸ್, ಜೋಕ್ಸ್, ಮೀಮ್ಸ್, ಚಿತ್ರ-ವಿಚಿತ್ರ ವೇಷಗಳುಳ್ಳ ಅನಗತ್ಯ ವೇದಿಕೆ ಎಂಬ ಅಭಿಪ್ರಾಯ ಅಸಂಖ್ಯ ಹಿರಿಯರಲ್ಲಿದೆ. ಅವರ ಮಟ್ಟಿಗೆ ವಾಟ್ಸಾಪ್ ಮತ್ತು ಯೂಟ್ಯೂಬ್ಗಳು ಮಾತ್ರ ಸರಿಯಾದುದು ಎಂಬ ಭಾವನೆ ಇದೆ. ಇದಕ್ಕೆ ಕಾರಣ ಏನೆಂದರೆ,
ಈ ಇನ್ಸ್ಟಾಗ್ರಾಮ್ನಲ್ಲಿ ಅವರು ಇಲ್ಲದೇ ಇರುವುದು. ಇನ್ನೊಂದು, ಈ ಜೆನ್ಝಿ ಪೀಳಿಗೆಯ ಭಾಷೆ, ವೇಷ, ಆಲೋಚನೆ, ವೇಗ, ಮೀಮ್ಗಳು ಅರ್ಥ ಆಗದೇ ಇರುವುದು. ಎರಡೂ ಪೀಳಿಗೆಯ ನಡುವೆ ಇರುವ ವಯಸ್ಸಿನ ಅಂತರ ಮತ್ತು ಇನ್ಸ್ಟಾಗ್ರಾಂ ಇತ್ಯಾದಿ ಡಿಜಿಟಲ್ ಪ್ಲಾಟ್ ಫಾರ್ಮ್ಗಳನ್ನು ಅರಿತುಕೊಳ್ಳುವಲ್ಲಿ ಹಿರಿಯರಿಂದಾಗಿರುವ ವೈಫಲ್ಯಗಳು ಜೆನ್ಝಿ ಪೀಳಿಗೆಯನ್ನು ನಾಟ್ ರೀಚೇಬಲ್ ಆಗುವಂತೆ ಮಾಡಿದೆ. ಈ ಅಂತರವನ್ನು ಕಡಿಮೆಗೊಳಿಸುವುದಕ್ಕೆ ಇರುವ ಉಪಾಯ ಏನೆಂದರೆ,
ಈ ಪೀಳಿಗೆಯನ್ನು ಅರ್ಥ ಮಾಡಿಕೊಳ್ಳುವುದೊಂದೇ ಆಗಿದೆ. ಜಂತರ್ ಮಂತರ್ನಲ್ಲಿ ಸೇರಿರುವ ವಿದ್ಯಾರ್ಥಿಗಳು ತಂತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋಗಳನ್ನು ನೋಡಿದರೆ, ಈ ಪೀಳಿಗೆ ಆಲೋಚನೆಗಳು ಹೇಗಿವೆ ಅನ್ನುವುದು ಗೊತ್ತಾಗುತ್ತದೆ. ಈ ಪೀಳಿಗೆ ಅತೀ ಗಂಭೀರ ಸಂಗತಿಯನ್ನೂ ಅತ್ಯಂತ ಹಾಸ್ಯಮಯವಾಗಿ ನಿರೂಪಿಸುತ್ತದೆ ಅಥವಾ ಹಾಸ್ಯವನ್ನು ಅದು ಇಷ್ಟ ಪಡುತ್ತದೆ. ನಗು, ಖುಷಿ, ತಮಾಷೆ, ಗಾಂಭೀರ್ಯ, ಆಕ್ರೋಶ, ತುಂಟತನ.. ಹೀಗೆ ಈ ಸಮುದಾಯ ತನ್ನ ಬೇಡಿಕೆ ಮತ್ತು ವಿಚಾರವನ್ನು ಮಂಡಿಸುವ ವಿಧಾನದಲ್ಲಿ ವೈವಿಧ್ಯವಿದೆ. ಈ ವಿಷಯವನ್ನು ಹಿರಿಯರು ನೋಡುವ ರೀತಿ ಮತ್ತು ಜೆನ್ಝಿ ನೋಡುವ ರೀತಿಯಲ್ಲಿ ವ್ಯತ್ಯಾಸವಿದೆ. ಈ ಎರಡೂ ಪೀಳಿಗೆ ಹೇಳಬಯಸುವ ಸಂದೇಶ ಒಂದೇ ಆಗಿರಬಹುದು. ಆದರೆ ಅದನ್ನು ಹೇಳುವ ವಿಧಾನದಲ್ಲಿ ವ್ಯತ್ಯಾಸವಿದೆ. ಹೇಳುವುದಕ್ಕೆ ವ್ಯಯಿಸುವ ಸಮಯದಲ್ಲೂ ವ್ಯತ್ಯಾಸವಿದೆ. ಆದ್ದರಿಂದ ಜೆನ್ಝಿ ಪೀಳಿಗೆಯನ್ನು ಆಕರ್ಷಿಸುವುದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವ ಪ್ರಯತ್ನಗಳು ಹಿರಿಯರಿಂದ ನಡೆಯಬೇಕು. ಪಾಡ್ಕಾಸ್ಟ್, ಎಐ ಉಪಕರಣಗಳು, ಶಾರ್ಟ್ ವೀಡಿಯೋ, ಮಾಹಿತಿ ಪೂರ್ಣ ಕ್ಲಿಪ್ಗಳು, ಮೊಬೈಲ್ ಆ್ಯಪ್ಗಳ ಮೂಲಕ ಈ ಪೀಳಿಗೆಯನ್ನು ತಲುಪುವ ಪ್ರಯತ್ನಗಳಾಗಬೇಕು. ಖುಷಿ, ತಮಾಷೆ, ಹರಟೆ, ತುಂಟತನ ಇತ್ಯಾದಿಗಳನ್ನು ಈ ಪೀಳಿಗೆ ಬಯಸುತ್ತದೆ. ಅವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿ ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ತಲುಪುವ ಪ್ರಯತ್ನಗಳಾಗಬೇಕು. ನಿಜವಾಗಿ,
ಜೆನ್ಝಿ ಒಂದು ಸವಾಲಲ್ಲ. ಅದೊಂದು ಅವಕಾಶ. ಅತ್ಯಂತ ವೇಗವಾಗಿ ಬದಲಾಗುತ್ತಿರುವ ಕಾಲದಲ್ಲಿ ಈ ಪೀಳಿಗೆ ಬದುಕುತ್ತಿದೆ. ಈ ವೇಗಕ್ಕೆ ಸರಿ ಹೊಂದುವ ರೀತಿಯಲ್ಲಿ ಸಂದೇಶಗಳನ್ನು ರವಾನಿಸುವ ತುರ್ತು ಅಗತ್ಯ ವನ್ನು ಈ ಕಾಲವು ಬಯಸುತ್ತದೆ. ಮೌಲ್ಯಗಳು ಎಂದೂ ಬದಲಾಗುವುದಿಲ್ಲ. ಅವು ಸ್ಥಾವರ. ಜಂಗಮವಲ್ಲ. ಆದರೆ ಕಾಲಕಾಲಕ್ಕೆ ಇವುಗಳನ್ನು ಹೇಳುವ ವಿಧಾನಗಳು ಬದಲಾ ಗುತ್ತಿರಬೇಕು. ತಂತ್ರಜ್ಞಾನದಲ್ಲಾಗುವ ಬದಲಾವಣೆಗೆ ಸರಿ ಹೊಂದುವಂತೆ ಹೇಳುವ ವಿಧಾನ ಮತ್ತು ಅದನ್ನು ತಲು ಪಿಸುವ ಮಾಧ್ಯಮಗಳಲ್ಲೂ
ಬದಲಾವಣೆ ಬರಬೇಕು. ಜಂತರ್ ಮಂತರ್ನ ಪ್ರತಿಭಟನೆ ಇರಬಹುದು ಅಥವಾ ಪಕ್ಕದ ನೇಪಾಳ ಮತ್ತು ಬಾಂಗ್ಲಾದಲ್ಲಿ ನಡೆದ ಜೆನ್ಝಿ ಹೋರಾಟ ಇರಬಹುದು, ಇವೆಲ್ಲವೂ ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಸಮರ್ಪಕವಾಗಿ ಬಳಸಿ ಮಾಡಲಾದ ಪ್ರತಿಭಟನೆಗಳಾಗಿವೆ. ಮುಖ್ಯವಾಹಿನಿಯ ಟಿವಿ ಮತ್ತು ಮುದ್ರಣ ಮಾಧ್ಯಮ ಗಳು ಇವಕ್ಕೆ ಕೊಟ್ಟಿರುವ ಕೊಡುಗೆ ಬಹಳ ಸಣ್ಣದು. ಜಂತರ್ ಮಂತರ್ ಪ್ರತಿಭಟನೆಯನ್ನೇ ಪರಿಶೀಲಿಸಿದರೂ ಇದು ಮನದಟ್ಟಾಗುತ್ತದೆ. ಈ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಮುಖಂಡರಲ್ಲಿ ಯಾರೂ ಟಿವಿ ಚಾನೆಲ್ಗಳ ಡಿಬೇಟ್ನಲ್ಲಿ ಕಾಣಿಸಿ ಕೊಂಡಿಲ್ಲ. ಪ್ರೈಮ್ ಟೈಮ್ ಕಾರ್ಯಕ್ರಮದಲ್ಲಿ ಅವರು ಆಸಕ್ತಿ ತೋರಿಸಿಲ್ಲ. ಅಂದರೆ, ಈ ಟಿವಿ ಚಾನೆಲ್ಗಳ ಧೋರಣೆ ಮತ್ತು ಮನಸ್ಥಿತಿಯನ್ನು ಈ ಜೆನ್ಝಿ ಪೀಳಿಗೆ ಚೆನ್ನಾಗಿ ತಿಳಿದುಕೊಂಡಿದೆ ಎಂದು ಅರ್ಥ. ಅವು ಯಾರ ತುತ್ತೂರಿಯಂತೆ ಕೆಲಸ ಮಾಡುತ್ತಿದೆ ಎಂಬುದರ ಬಗ್ಗೆಯೂ ತಿಳಿದಿದೆ ಎಂದೂ ಅರ್ಥ. ಮಾತ್ರವಲ್ಲ, ಈ ಚಾನೆಲ್ಗಳಿಂದ ಸಂಪೂರ್ಣ ದೂರ ನಿಂತು ಜನರನ್ನು ತಲುಪಬಲ್ಲವು ಎಂಬ ವಿಶ್ವಾಸವೂ ಈ ಪೀಳಿಗೆಗಿದೆ. ಸಾಂಪ್ರದಾಯಿಕ ಮಾಧ್ಯಮಗಳ ಹಂಗೇ ಇಲ್ಲದೇ ಸಂವಹನ ನಡೆಸಬಲ್ಲ ಸಾಮರ್ಥ್ಯ ಇರುವುದರಿಂದಲೇ ಈ ಪೀಳಿಗೆಯ ಸಂವಹನ ಮಾಧ್ಯಮವನ್ನು ಗಮನಿಸ ಬೇಕಾಗಿದೆ.
ಟಿವಿ ಚಾನೆಲ್ಗಳು ಪ್ರಭುತ್ವದ ಪರ ನಿಂತ ಹೊರತಾಗಿಯೂ ಪ್ರಭುತ್ವವನ್ನೇ ಅಲುಗಾಡಿಸಬಲ್ಲಷ್ಟು ಈ ಜೆನ್ಝಿ ಪೀಳಿಗೆಯನ್ನು ಶಕ್ತಿಶಾಲಿಯಾಗಿಸಿದ್ದು ಡಿಜಿಟಲ್ ಮೀಡಿಯಾಗಳು. ಅದರಲ್ಲೂ ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ಗಳು. ಜಂತರ್ ಮಂತರ್ನಿಂದ ರವಾನೆಯಾದ ಈ ಸಂದೇಶವನ್ನು ಕಡೆಗಣಿಸಬಾರದು.












