ರಕ್ತ ಮೆತ್ತಿಕೊಂಡ ಹಣದ ಅಗತ್ಯ ದೇಶಕ್ಕಿದೆಯೇ?

0
443

ಸನ್ಮಾರ್ಗ ಸಂಪಾದಕೀಯ

ಸುಮಾರು ಒಂದು ಲಕ್ಷ ಮಂದಿಯನ್ನು ಹತ್ಯೆಗೈದ, ಇದರ ದುಪ್ಪಟ್ಟು ಸಂಖ್ಯೆಯ ಜನರನ್ನು ಗಾಯಗೊಳಿ ಸಿದ ಮತ್ತು ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ರಾಷ್ಟ್ರವೊಂದಕ್ಕೆ ಭಾರತ ನಿರಂತರ ಆಯುಧ ಸರಬರಾಜು ಮಾಡುತ್ತಿರುವ ಆಘಾತಕಾರಿ ಸುದ್ದಿಯು ಬಹಿರಂಗವಾಗಿದೆ.
2023 ಅಕ್ಟೋಬರ್ 7ರಿಂದ 2025ರ ಕೊನೆಯ ವರೆಗೆ ಭಾರತವು ಭಾರೀ ಪ್ರಮಾಣದಲ್ಲಿ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿದೆ. ಇದನ್ನು ಆಮ್ನೆಸ್ಟಿ ಇಂಟರ್ ನ್ಯಾಶನಲ್ ತನ್ನ ‘Made in India: The supply of weapons and Ammunition to Israel’ ಎಂಬ ಶೀರ್ಷಿಕೆಯ ವರದಿಯಲ್ಲಿ ಬಹಿರಂಗಪಡಿಸಿದೆ. ಇದರ ಜೊತೆಜೊತೆಗೇ ‘ಅಲ್ ಜಝೀರಾ’ ಮೀಡಿಯಾ ಸಂಸ್ಥೆಯ ವರದಿಯನ್ನು ಸೇರಿಸಿ ಓದಿದರೆ, ‘ಇಸ್ರೇಲ್ ನರಹತ್ಯೆಯಲ್ಲಿ ಭಾರತದ ಭಾಗೀದಾರಿಕೆ’ ಅಚ್ಚರಿ ಹುಟ್ಟಿಸುತ್ತದೆ. ಅದರ ಪ್ರಕಾರ,

ಇಸ್ರೇಲ್‌ಗೆ ಮಿಲಿಟರಿ ಸರಕುಗಳ ಪೂರೈಕೆಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಏರಿದೆ. ಮೊದಲ ಸ್ಥಾನದಲ್ಲಿ ಅಮೇರಿಕ ಇದೆ. ಯುರೋಪಿಯನ್ ರಾಷ್ಟ್ರಗಳು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಸರಬರಾಜನ್ನು ನಿಲ್ಲಿಸಿದಾಗ ಅಥವಾ ಕಡಿಮೆಗೊಳಿಸಿದಾಗ ಆ ಖಾಲಿ ಜಾಗವನ್ನು ಭಾರತ ತುಂಬಿದೆ ಎಂಬ ಅಂಶವೂ ಅಲ್ ಜಝೀರಾ ವರದಿಯಲ್ಲಿದೆ. ಇಸ್ರೇಲ್‌ಗೆ ಸರಬರಾಜಾದ ಒಟ್ಟು ಶಸ್ತ್ರಾಸ್ತ್ರಗಳ ಪೈಕಿ 20% ಶಸ್ತ್ರಾಸ್ತ್ರಗಳನ್ನು ಈ ಅವಧಿಯಲ್ಲಿ ಕೇವಲ ಭಾರತವೊಂದೇ ಪೂರೈಸಿದೆ ಎಂಬ ದಂಗುಬಡಿಸುವ ಮಾಹಿತಿಯೂ ಈ ವರದಿಯಲ್ಲಿದೆ.

ಆಮ್ನೆಸ್ಟಿ ವರದಿಯ ಪ್ರಕಾರ, ಮೂರು ವರ್ಷಗಳಲ್ಲಿ ಇಸ್ರೇಲ್‌ಗೆ ಕನಿಷ್ಠ 2596 ಶಸ್ತ್ರಾಸ್ತ್ರ ಸಾಗಣೆಗಳು ನಡೆದಿವೆ. ಇವುಗಳಲ್ಲಿ ಶಸ್ತ್ರಾಸ್ತ್ರಗಳು, ಬಿಡಿಭಾಗಗಳು, ಗುಂಡು ಸರಂಜಾಮುಗಳು ಮತ್ತು ಮಿಲಿಟರಿ ವಾಹನ ಘಟಕಗಳು ಸೇರಿವೆ. ಇವುಗಳಲ್ಲಿ 5,64,970ರಷ್ಟು ಡ್ರೋನ್‌ಗಳು, ಸಿಡಿತಲೆಗಳು, ಆರ್ಬಿಟರಿ ಶೆಲ್ ಕೇಸಿಂಗ್‌ಗಳು ಸೇರಿವೆ. 3,90,516ರಷ್ಟು ಮಿಲಿಟರಿ ಗ್ರೇಡ್‌ಗಳು ಒಳಗೊಂಡಿವೆ. 298 ಮಿಲಿಟರಿ ವಾಹನ ಘಟಕಗಳೂ ಈ ಸರಬರಾಜಿನಲ್ಲಿ ಸೇರಿವೆ. ಇವುಗಳು ಇಸ್ರೇಲಿನ ಪ್ರಮುಖ ರಕ್ಷಣಾ ಕಂಪೆನಿಗಳಾದ ಎಲ್‌ಬಿಟ್ ಸಿಸ್ಟಮ್ಸ್, ರಫೇಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್, ಇಸ್ರೇಲ್ ಆರೋಸ್ಪೇಸ್ ಇಂಡಸ್ಟ್ರೀಸ್‌ಗೆ ಹೋಗಿವೆ. ಈ ಕಂಪೆನಿಗಳು ಇಸ್ರೇಲಿ ಸೇನೆಗೆ ನೇರ ಶಸ್ತ್ರಾಸ್ತ್ರ ಪೂರೈಕೆದಾರರಾಗಿದ್ದು, ಗಾಝಾದ ನರಮೇಧಕ್ಕೆ ಇವುಗಳೇ ಶಸ್ತ್ರಾಸ್ತ್ರವನ್ನು ಒದಗಿಸುತ್ತಿವೆ. ಅಲ್ಲದೇ, ಗಾಝಾದಲ್ಲಿ ಬಳಕೆಯಾದ ಆಯುಧ ಅವಶೇಷಗಳಲ್ಲಿ ‘ಮೇಡ್ ಇನ್ ಇಂಡಿಯಾ’ ಎಂದು ಬರೆದಿರುವುದು ಕಂಡು ಬಂದಿದೆ ಎಂದು ಆಮ್ನೆಸ್ಟಿಯ ಈ ಹಿಂದಿನ ವರದಿಯಲ್ಲಿ ಉಲ್ಲೇಖವಾಗಿತ್ತು. ಆಘಾತಕಾರಿ ಸಂಗತಿ ಏನೆಂದರೆ,

ಆಮ್ನೆಸ್ಟಿಯ ಈ ವರದಿಯನ್ನು ವಿದೇಶಾಂಗ ಸಚಿವಾಲಯ ಕೂಡಾ ನಿರಾಕರಿಸಿಲ್ಲ ಮತ್ತು ಈ ಸರಬರಾಜನ್ನು ನಿಲ್ಲಿಸುವುದಾಗಿಯೂ ಹೇಳಿಲ್ಲ. ‘ರಕ್ಷಣಾ ವ್ಯಾಪಾರದ ಬಗ್ಗೆ ದೃಢವಾದ ಕಾನೂನಿನ ಚೌಕಟ್ಟು ಇದ್ದು, ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ವ್ಯವಹಾರ ನಡೆಯುತ್ತಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ಮೂಲಕ ಆಮ್ನೆಸ್ಟಿ ವರದಿಯನ್ನು ಪರೋಕ್ಷವಾಗಿ ಸಮರ್ಥಿಸಿದೆ. ನಿಜ ಏನೆಂದರೆ,

ಭಾರತವು ಶಸ್ತ್ರಾಸ್ತ್ರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದ ರಾಷ್ಟçವಾಗಿದೆ. ಭಾರತವು ಇಸ್ರೇಲ್‌ನಿಂದ ಅತಿ ಹೆಚ್ಚು ಶಸ್ತ್ರಾಸ್ತ್ರ ಖರೀದಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಗಾಝಾ ನರಮೇಧದ ಹಿನ್ನೆಲೆಯಲ್ಲಿ ಯುರೋಪಿಯನ್ ರಾಷ್ಟ್ರಗಳು ಇಸ್ರೇಲ್‌ಗೆ ಬೆನ್ನು ಹಾಕಿ ನಿಂತಾಗ, ಭಾರತವು ಇಸ್ರೇಲ್ ನೆರವಿಗೆ ಧಾವಿಸಿದ್ದಲ್ಲದೇ, ಭಾರೀ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರವನ್ನು ಮಾರಾಟ ಮಾಡಿದೆ. ಅಲ್ಲದೇ, ಗಾಝಾದಲ್ಲಿ ಜನಾಂಗ ಹತ್ಯೆಯ ಸಂಭಾವ್ಯ ಅಪಾಯದ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕವೂ ಭಾರತ ಶಸ್ತ್ರಾಸ್ತ್ರ ಸರಬರಾಜನ್ನು ಮಾಡಿದೆ. ಅಂದರೆ, ಇಸ್ರೇಲ್ ಕ್ರೌರ್ಯದ ಪೂರ್ಣ ಅರಿವಿದ್ದುಕೊಂಡೇ ಮತ್ತು ಜನಾಂಗ ಹತ್ಯೆಯ ಸಾಧ್ಯತೆಯನ್ನು ತಿಳಿದುಕೊಂಡೇ ಶಸ್ತ್ರಾಸ್ತ್ರಗಳನ್ನು ಭಾರತ ರಫ್ತು ಮಾಡಿದೆ. ಇದು ಇಸ್ರೇಲ್ ಕ್ರೌರ್ಯದಲ್ಲಿ ಭಾರತದ ಪರೋಕ್ಷ ಭಾಗೀದಾರಿಕೆಯನ್ನು ಸೂಚಿಸುತ್ತದೆ ಅಥವಾ ಅಂತಾರಾಷ್ಟ್ರೀಯ ನ್ಯಾಯಾಲಯ ಮತ್ತು ಬಾಹ್ಯನೋಟದ ಅನುಭವಗಳನ್ನು ನಿರ್ಲಕ್ಷಿಸಿರುವುದನ್ನು ಸ್ಪಷ್ಟಪಡಿಸುತ್ತದೆ.

ಇಸ್ರೇಲ್‌ನ ಪ್ರಬಲ ಸಮರ್ಥಕ ರಾಷ್ಟ್ರಗಳೇ ಶಸ್ತ್ರಾಸ್ತ್ರ ಪೂರೈಸಲು ಹಿಂದೇಟು ಹಾಕುವಾಗ, ಭಾರತದ ಈ ನೀತಿ ನಿಜಕ್ಕೂ ಆಘಾತಕಾರಿ. ಭಾರತವೇನೂ ಇಸ್ರೇಲ್‌ನ ಪ್ರಬಲ ಸಮರ್ಥಕ ರಾಷ್ಟ್ರ ಅಲ್ಲ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಭಾರತ ಬೆಂಬಲಿಸುತ್ತಲೇ ಬಂದಿದೆ. ಮೋದಿ ಸರಕಾರವೂ ಈ ನೀತಿಯಿಂದ ಹೊರತಾಗಿಲ್ಲ. ಗಾಝಾದ ಮೇಲಿನ ಕೌರ್ಯವನ್ನು ಮೋದಿ ಸರಕಾರ ಸಮರ್ಥಿಸಿಯೂ ಇಲ್ಲ. ವಿಶ್ವಸಂಸ್ಥೆಯಲ್ಲಿ ವಿವಿಧ ಸಂದರ್ಭಗಳಲ್ಲಿ ಇಸ್ರೇಲ್ ವಿರುದ್ಧ ನಿಲುವು ತೆಗೆದುಕೊಂಡದ್ದೂ ಇದೆ ಅಥವಾ ಮತದಾನದಿಂದ ದೂರ ನಿಂತದ್ದೂ ಇದೆ. ಹೀಗಿರುತ್ತಾ,

ಇಷ್ಟೊಂದು ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸಲು ಭಾರತಕ್ಕೆ ಹೇಗೆ ಸಾಧ್ಯವಾಯಿತು? ರಕ್ತದಿಂದಲೂ ಹಣ ಮಾಡುವ ಉದ್ದೇಶವೇ ಅಥವಾ ಒಳಗೊಂದು ಹೊರಗೊಂದು ಎಂಬ ನೀತಿಯೇ? ರಕ್ಷಣಾ ಸಾಮಗ್ರಿಗಳ ಮಾರಾಟವು ಇವತ್ತು ಜಾಗತಿಕವಾಗಿಯೇ ಪ್ರಬಲ ರಾಷ್ಟ್ರಗಳ ಅತಿದೊಡ್ಡ ಆದಾಯ ಮೂಲವಾಗಿದೆಯಾದರೂ ಅದಕ್ಕೊಂದು ನೈತಿಕ ಚೌಕಟ್ಟನ್ನು ಅಳವಡಿಸಿಕೊಳ್ಳಬೇಡವೇ? ಮಹಿಳೆಯರು, ಪುಟ್ಟ ಪುಟ್ಟ ಮಕ್ಕಳನ್ನು ಹತ್ಯೆ ಮಾಡುವ ಆಯುಧ ನಮ್ಮದೆಂಬುದು ಹೆಮ್ಮೆ ತರುತ್ತದೆಯೇ?

ಗಾಝಾದಲ್ಲಿ ಸಾವಿರಾರು ಮಕ್ಕಳ ಅಂಗ ಊನವಾಗಿದೆ. ಕಾಲುಗಳಿಲ್ಲದ ಅಸಂಖ್ಯ ಮಕ್ಕಳ ಗುಂಪೇ ಅಲ್ಲಿದೆ. ಕೈಗಳಿಲ್ಲದ ಮಕ್ಕಳಿದ್ದಾರೆ. ಗರ್ಭಿಣಿ ಮಹಿಳೆಯರೂ ಸೇರಿದಂತೆ ಹತ್ಯೆಗೀಡಾದ ಒಂದು ದೊಡ್ಡ ಸಮೂಹವೇ ಗಾಝಾದಲ್ಲಿ ನಿರ್ಮಾಣವಾಗಿದೆ. ಅಲ್ಲಿ ಆಹಾರದ ಕೊರತೆ ಇದೆ. ನೈರ್ಮಲ್ಯದ ಸಮಸ್ಯೆ ಇದೆ. ಕಟ್ಟಡಗಳು ಧರಾಶಾಹಿಯಾಗಿ, ತ್ಯಾಜ್ಯಗಳ ಪರ್ವತವೇ ನಿರ್ಮಾಣವಾಗಿದೆ. ಆಸ್ಪತ್ರೆಗಳು ಕುಸಿದಿವೆ. ಕಾಯಿಲೆ ಪೀಡಿತರು ಮತ್ತು ಹಿರಿಯರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಶಾಲೆಗಳು ಉರುಳಿವೆ. ಕಳೆದ ಮೂರು ವರ್ಷಗಳಿಂದ ಮಕ್ಕಳ ಶಿಕ್ಷಣ ಬಹತೇಕ ಸ್ಥಗಿತಗೊಂಡಿದೆ. ಕೃಷಿ ಕಾರ್ಯಗಳಿಗೆ ತಡೆ ಬಿದ್ದಿದೆ. ಭೂಮಿಯಲ್ಲಿ ಅತಿದೊಡ್ಡ ನರಕವಾಗಿ ಗಾಝಾ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿಯೇ ಜಗತ್ತಿನ ಬಹುತೇಕ ರಾಷ್ಟ್ರಗಳು ಇಸ್ರೇಲ್‌ನ ವಿರುದ್ಧ ನಿಂತಿವೆ. ಇಸ್ರೇಲ್‌ನ ಪ್ರಬಲ ಸಮರ್ಥಕ ಯುರೋಪಿಯನ್ ರಾಷ್ಟ್ರಗಳೇ ಇಸ್ರೇಲ್‌ಗೆ ಬೆನ್ನು ಹಾಕಿ ಕುಳಿತಿವೆ. ಪ್ರಧಾನಿ ನೇತನ್ಯಾಹು ಅವರು ಅನೇಕ ರಾಷ್ಟ್ರಗಳಿಂದ ಬಂಧನ ಭೀತಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ. ಜಗತ್ತಿನ ಹೆಚ್ಚಿನ ಯಾವ ರಾಷ್ಟ್ರಗಳೂ ನೇತನ್ಯಾಹು ಅವರನ್ನು ಆಹ್ವಾನಿಸುತ್ತಿಲ್ಲ, ಅವರ ಪರ ಮಾತಾಡುತ್ತಿಲ್ಲ. ಇಷ್ಟೆಲ್ಲಾ ಇದ್ದೂ,

ಭಾರತ ಜಿದ್ದಿಗೆ ಬಿದ್ದಂತೆ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವುದು ಯಾತಕ್ಕಾಗಿ? ಶಸ್ತ್ರಾಸ್ತ್ರ ಮಾರಾಟದಿಂದ ಖಜಾನೆಗೆ ಹಣ ಸೇರಬಹುದು. ಆದರೆ ಆ ರಕ್ತ ಮೆತ್ತಿಕೊಂಡ ಹಣದ ಅಗತ್ಯ ನಮ್ಮ ಖಜಾನೆಗೆ ಇದೆಯೇ? ಮಕ್ಕಳು-ಮಹಿಳೆಯರನ್ನು ಹತ್ಯೆ ಮಾಡಲು ಕೊಡುವ ಶಸ್ತ್ರಾಸ್ತ್ರವು ಎತ್ತುವ ನೈತಿಕ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಶಸ್ತ್ರಾಸ್ತ್ರ ವ್ಯಾಪಾರ ಎಂಬುದು ಮಾನವೀಯತೆಯನ್ನೇ ನಿರಾಕರಿಸುವಷ್ಟು ಚರಮ ಸೀಮೆಗೆ ಮುಟ್ಟಬೇಕೇ?

ಭಾರತ ಒಂದು ಕಾಲದಲ್ಲಿ ಅಲಿಪ್ತ ನೀತಿಯ ಮೂಲಕ ವಿಶ್ವ ರಾಷ್ಟ್ರಗಳನ್ನೇ ಪ್ರಭಾವಿಸಿದ ದೇಶ. ಅಹಿಂಸಾ ನೀತಿಗೆ ನೇತೃತ್ವ ಕೊಟ್ಟ ರಾಷ್ಟ್ರ. ಯುದ್ಧ ಮತ್ತು ಸಂಘರ್ಷಗಳಿಂದ ಲಾಭ ಮಾಡಿಕೊಳ್ಳುವ ಬದಲು ಅದನ್ನು ನಿಲ್ಲಿಸುವುದಕ್ಕೆ ಕೊಡುಗೆಯನ್ನು ನೀಡುವ ದೇಶ. ಆದರೆ, ಮೋದಿ ಸರಕಾರದ ನಿಲುವು ಭಾರತದ ಈ ಹೆಮ್ಮೆಗೆ ಕಳಂಕ ತರುವಂತಿದೆ. ಯುದ್ಧದಿಂದಲೂ ಲಾಭ ಮಾಡಿಕೊಳ್ಳುವ ಅನೈತಿಕ ಆಲೋಚನೆಯನ್ನು ಆಯ್ಕೆ ಮಾಡಿಕೊಂಡಂತಿದೆ. ಇದು ಈ ದೇಶದ ಪರಂಪರಾಗತ ಮತ್ತು ವಿಶ್ವ ಮೆಚ್ಚುವ ನೀತಿಗೆ ಸಂಪೂರ್ಣ ವಿರುದ್ಧವಾಗಿದೆ. ಗಾಝಾ ಎಂದಲ್ಲ, ಜಗತ್ತಿನಲ್ಲಿ ದುರ್ಬಲ ರಾಷ್ಟ್ರಗಳ ಮೇಲೆ ನಡೆಯುವ ಯಾವುದೇ ದಾಳಿಗೂ ಭಾರತ ನೆರವಾಗಬಾರದು. ಅನೈತಿಕ ರೂಪದ ಲಾಭಕ್ಕೆ ಮರುಳಾಗಬಾರದು.