ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಯುನೆಸ್ಕೋದ 2026 ರ ಎಸ್ಡಿಜಿ (ಸುಸ್ಥಿರ ಅಭಿವೃದ್ಧಿ ಗುರಿಗಳು) ವರದಿಯು ಜಾಗತಿಕವಾಗಿ ಶಿಕ್ಷಣಕ್ಕಾಗಿ ಸರ್ಕಾರದ ಧನಸಹಾಯವು ಕುಸಿಯುತ್ತಿರುವುದನ್ನು ತೋರಿಸಿದೆ. ಯುನೆಸ್ಕೋದ ಜಿಡಿಪಿ ಮಾನದಂಡಗಳನ್ನು ಭಾರತವು ಪೂರೈಸುತ್ತಿದೆಯಾದರೂ, ಒಟ್ಟು ಸರ್ಕಾರಿ ವೆಚ್ಚದ ವಿಷಯದಲ್ಲಿ ಹಿಂದುಳಿದಿದೆ ಎಂದು ಇತ್ತೀಚಿನ ದತ್ತಾಂಶಗಳು ತೋರಿಸುತ್ತವೆ. ಭಾರತದಲ್ಲಿ ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವು ದೇಶದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 4.1 ರಷ್ಟಿದೆ. ಒಟ್ಟು ಸರ್ಕಾರಿ ವೆಚ್ಚದಲ್ಲಿ ಅದರ ಪಾಲೂ ಕೂಡ ಕುಸಿತ ಕಂಡಿದೆ.
ಯುನೆಸ್ಕೋ ಮಾರ್ಗಸೂಚಿಗಳ ಪ್ರಕಾರ, ಒಟ್ಟು ಸಾರ್ವಜನಿಕ ವೆಚ್ಚದ ಕನಿಷ್ಠ ಶೇಕಡಾ 15 ರಿಂದ 20 ರಷ್ಟು ಭಾಗವನ್ನು ಶಿಕ್ಷಣಕ್ಕಾಗಿ ಮೀಸಲಿಡಬೇಕು. ಆದಾಗ್ಯೂ, ಭಾರತದಲ್ಲಿ ಇದು ಕೇವಲ ಶೇಕಡಾ 14.2 ರಷ್ಟಿದೆ. 2015 ರಲ್ಲಿ ಇದು ಶೇಕಡಾ 15.7 ರಷ್ಟಿತ್ತು.
ಅದೇ ವೇಳೆ, ದೇಶದಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸುವ ಪ್ರಮಾಣದಲ್ಲಿ ಭಾರೀ ಕುಸಿತಂಡಿದೆ ಎಂದು ಇತ್ತೀಚಿನ ವರದಿಯು ದಾಖಲಿಸಿದೆ. ದೇಶದ ಉನ್ನತ ಪ್ರಾಥಮಿಕ (ಆರರಿಂದ ಎಂಟನೇ ತರಗತಿ) ಶಿಕ್ಷಣವನ್ನು ಪೂರ್ಣಗೊಳಿಸುವ ಪ್ರಮಾಣವು ಕೇವಲ ಶೇಕಡಾ 86 ರಷ್ಟಿದೆ. ಭಾರತವು ಹಿಂದೆ ಯೋಜಿಸಿ ನಿಗದಿಪಡಿಸಿದ್ದ ಗುರಿಯು ಶೇಕಡಾ 99 ರಷ್ಟಿತ್ತು. ಜೊತೆಗೆ, ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಶಿಕ್ಷಣವನ್ನು ಪೂರ್ಣಗೊಳಿಸುವ ಪ್ರಮಾಣವು ಕೇವಲ ಶೇಕಡಾ 51 ರಷ್ಟಿದೆ ಎಂದು ವರದಿ ತಿಳಿಸಿದೆ. ಕುತೂಹಲಕಾರಿಯಾಗಿ, ಈ ಮೊದಲು ಘೋಷಿಸಲಾದ ಗುರಿಯು ಶೇಕಡಾ 84 ರಷ್ಟಿತ್ತು. ಈ ಎರಡೂ ಕ್ಷೇತ್ರಗಳಲ್ಲಿ ಭಾರತದ ಬೆಳವಣಿಗೆಯು ನಿಧಾನವಾಗಿದೆ ಎಂದು ಯುನೆಸ್ಕೋ ಅಂದಾಜಿಸಿದೆ.
ದೇಶದಲ್ಲಿ ಸುಮಾರು 15.6 ಕೋಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲವನ್ನು ನೀಡುವ ಸಮಗ್ರ ಶಿಕ್ಷಣ ಯೋಜನೆ ಮತ್ತು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸುಮಾರು 11.8 ಕೋಟಿ ಮಕ್ಕಳಿಗೆ ಮಧ್ಯಾಹ್ನದ ಊಟ ಮತ್ತು ಪೋಷಣೆಯನ್ನು ಖಚಿತಪಡಿಸುವ ಪಿಎಂ ಪೋಷಣ್ ಯೋಜನೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಶಿಕ್ಷಣ ಯೋಜನೆಗಳ ದೊಡ್ಡ ಮಟ್ಟದ ಚಟುವಟಿಕೆಗಳ ಹೊರತಾಗಿಯೂ, ಭಾರತವು ಯುನೆಸ್ಕೋ ನಿಧಿಯ ಮಾನದಂಡಗಳನ್ನು ಪೂರೈಸುವಲ್ಲಿ ಮತ್ತು ಶಾಲಾ ಶಿಕ್ಷಣ ಪೂರ್ಣಗೊಳಿಸುವ ಪ್ರಮಾಣವನ್ನು ಹೆಚ್ಚಿಸುವಲ್ಲಿ ಹಿಂದುಳಿದಿದೆ ಎಂಬ ಅಂಶವನ್ನು ಎತ್ತಿ ತೋರಿಸಲು ವರದಿಯು ಈ ಯೋಜನೆಗಳನ್ನು ಉಲ್ಲೇಖಿಸುತ್ತದೆ. ಶಿಕ್ಷಣ ಯೋಜನೆಗಳು ಮತ್ತು ಮಧ್ಯಾಹ್ನದ ಊಟದ ಯೋಜನೆಗಳ ಮೂಲಕ ಬಹಳಷ್ಟು ಮಕ್ಕಳನ್ನು ತಲುಪುತ್ತಿದ್ದರೂ, ಶಿಕ್ಷಣ ವಲಯದಲ್ಲಿನ ನಿಜವಾದ ಬಿಕ್ಕಟ್ಟುಗಳೆಂದರೆ ನಿಧಿಯ ಕೊರತೆ ಮತ್ತು ಶಾಲೆ ಬಿಡುವವರ ಹೆಚ್ಚಿನ ಪ್ರಮಾಣ ಎಂದು ವರದಿ ಎತ್ತಿ ತೋರಿಸುತ್ತದೆ.
ಜಾಗತಿಕವಾಗಿ 205 ದೇಶಗಳಲ್ಲಿ ಕೇವಲ 39 ದೇಶಗಳು (ಶೇಕಡಾ 19) ಮಾತ್ರ ಯುನೆಸ್ಕೋದ ಎರಡೂ ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸುತ್ತಿವೆ. ಚೀನಾ, ಬ್ರೆಜಿಲ್, ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ನಂತಹ ದೇಶಗಳು ಸಹ ಭಾರತದಂತೆ ಜಿಡಿಪಿ ಪಾಲಿನ ಮಾನದಂಡಗಳನ್ನು ಪೂರೈಸುತ್ತವೆ, ಆದರೆ ಒಟ್ಟು ಸಾರ್ವಜನಿಕ ವೆಚ್ಚದ ಪಾಲಿನ ವಿಷಯದಲ್ಲಿ ಹಿಂದುಳಿದಿವೆ.












