ಹೊಸದಿಲ್ಲಿ, ಜು. 22: ಗಾಂಧಿ ಕುಟುಂಬದಿಂದ ಹೊರಗಿನ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾದರೆ ಅದು 24 ಗಂಟೆಯೊಳಗೆ ವಿಭಜನೆಯಾಗಬಹುದು ಎಂದು ಹಿರಿಯ ನಾಯಕ ಮಾಜಿ ವಿದೇಶ ಸಚಿವ ನಟವರ್ ಸಿಂಗ್ ಹೇಳಿದ್ದಾರೆ. ರಾಹುಲ್ ಗಾಂಧಿಯಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಸಹೋದರಿ ಪ್ರಿಯಾಂಕಾ ಗಾಂಧಿಯವರನ್ನು ಪರಿಗಣಿಸಬಹುದು. 134 ವರ್ಷ ಇತಿಹಾಸ ಇರುವ ಪಾರ್ಟಿಗೆ ರಾಷ್ಟ್ರೀಯ ಅಧ್ಯಕ್ಷರಿಲ್ಲದಾಗಿದದು ದುರದೃಷ್ಟಕರ ಎಂದರು. ಪ್ರಿಯಾಂಕಾಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಾಗಿದ್ದಾರೆ. ಉತ್ತರಪ್ರದೇಶದ ಸೋನ್ಭದ್ರ ಗುಂಡು ಹಾರಾಟದಲ್ಲಿ ಮೃತಪಟ್ಟಿರುವವರ ಕುಟುಂಬವನ್ನು ಸಂದರ್ಶಿಸಲು ತೆರಳಿದ್ದ ಅವರನ್ನು ಪೊಲೀಸರು ತಡೆದದ್ದು ಮತ್ತು ನಂತರದ ಘಟನೆಗಳು ಅವರ ಪ್ರಬುದ್ಧತೆಯನ್ನು ಬಹಿರಂಗಗೊಳಿಸಿದೆ. ಆದರೆ ರಾಹುಲ್ ಗಾಂಧಿಯವರು ಗಾಂಧಿ ಕುಟುಂಬದಿಂದ ಹೊರಗಿನವರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆ೦ದು ಹೇಳಿದ್ದಾರೆ. ಅದನ್ನು ಬದಲಾಯಿಸಲು ಅವರಿಂದ ಮಾತ್ರ ಸಾಧ್ಯವಿದೆ ಎಂದು ನಟವರ್ ಸಿಂಗ್ ಹೇಳಿದರು.
ಪ್ರಿಯಾಂಕಾ ಶೇ. ನೂರರಷ್ಟು ಸ್ವೀಕಾರಾರ್ಹ ವ್ಯಕ್ತಿ. ಅವರೇ ಅಧ್ಯಕ್ಷೆಯಾಗಬೇಕೆಂದು ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಯ ಪುತ್ರ ಅನಿಲ್ ಶಾಸ್ತ್ರಿ ಕಳೆದ ದಿವಸ ಹೇಳಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯ ಪುತ್ರ ಅಭಿಜಿತ್ ಮುಖರ್ಜಿ ಕೂಡ ಪ್ರಿಯಾಂಕಾರನ್ನೇ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದಾರೆ. ರಾಹುಲ್ ಗಾಂಧಿ ರಾಜೀನಾಮೆ ನೀಡಿ ತಿಂಗಳುಗಳೇ ಕಳೆದಿವೆ. ಕಾಂಗ್ರೆಸ್ ಗೆ ಅಧ್ಯಕ್ಷರಿಲ್ಲದ ಸ್ಥಿತಿ ಬಂದಿದೆ. ಪ್ರಿಯಾಂಕಾ ನಾಯಕತ್ವವನ್ನು ಸ್ವೀಕರಿಸಬೇಕೆಂದು ಪಾರ್ಟಿಯೊಳಗಿನಿಂದ ನಿರಂತರ ಒತ್ತಡ ಹೆಚ್ಚುತ್ತಿದೆ.












