ಸನ್ಮಾರ್ಗ ವಾರ್ತೆ
ಟೆಹ್ರಾನ್: ಒಮಾನ್ ಜೊತೆ ತಾತ್ಕಾಲಿಕ ಸಮುದ್ರ ಮಾರ್ಗವನ್ನು ಮುಕ್ತಗೊಳಿಸಿದರೂ ಸಹ ಹಾರ್ಮುಝ್ ಜಲಸಂಧಿ ಮುಚ್ಚಿಯೇ ಇರುತ್ತದೆ ಎಂದು ಇರಾನ್ನ ಕಾನೂನು ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಉಪ ವಿದೇಶಾಂಗ ಸಚಿವ ಖಾಸೆಂ ಗರಿಬಾಬಾದಿ ತಿಳಿಸಿದ್ದಾರೆ. ಒಮಾನ್ ಜೊತೆಗಿನ ತಾತ್ಕಾಲಿಕ ಮಾರ್ಗದ ಒಪ್ಪಂದವನ್ನು ಹಾರ್ಮುಝ್ ತೆರೆಯುವಿಕೆ ಎಂದು ವ್ಯಾಖ್ಯಾನಿಸಬಾರದು. ಹಾರ್ಮುಝ್ ಜಲಸಂಧಿಯನ್ನು ಮಿಲಿಟರಿ ನೆಲೆಯಲ್ಲಿ ಮುಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ 58 ವರ್ಷಗಳಿಂದ ಒಮಾನ್ ಜಲಸಂಧಿಯ ಮೂಲಕ ಹಡಗುಗಳು ಸಂಚರಿಸುತ್ತಿವೆ. ಇರಾನ್ ಅಪಾರ ನಷ್ಟವನ್ನು ಅನುಭವಿಸಿದೆ. ಹಾರ್ಮುಝ್ ಜಲಸಂಧಿಯು ಈಗ ಇರಾನ್ಗೆ ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಹೊಸ ತಿಳಿವಳಿಕೆಯ ಪ್ರಕಾರ, ಪರ್ಷಿಯನ್ ಗಲ್ಫ್ಗೆ ಪ್ರವೇಶ ಮಾರ್ಗವು ಇರಾನ್ ಜಲಪ್ರದೇಶದ ಮೂಲಕ ಮತ್ತು ನಿರ್ಗಮನ ಮಾರ್ಗವು ಒಮಾನ್ ಪ್ರಾದೇಶಿಕ ಜಲಪ್ರದೇಶದ ಮೂಲಕ ಇರುತ್ತದೆ. ಕರಾರು ಪತ್ರದಲ್ಲಿರುವ ಇರಾನ್ನ ನಿಬಂಧನೆಗಳನ್ನು ಅಮೆರಿಕ ಒಪ್ಪಿಕೊಳ್ಳದಿದ್ದರೆ ಇರಾನ್ನ ಈ ನಿಲುವು ಮುಂದುವರಿಯುತ್ತದೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತಾವಿತ ಮಾರ್ಗವು ತಾತ್ಕಾಲಿಕವಾಗಿರುತ್ತದೆ ಮತ್ತು ಕಡಲ ಸಾರಿಗೆ ಯೋಜನೆಗೆ ಬದಲಾಗಿ ಹೊಸ ಶಾಶ್ವತ ಮಾರ್ಗದ ಕುರಿತು ಇರಾನ್ ಮತ್ತು ಒಮಾನ್ 30 ರಿಂದ 60 ದಿನಗಳಲ್ಲಿ ಚರ್ಚಿಸಬೇಕು ಎಂದು ಅವರು ಹೇಳಿದರು. ಈ ಒಪ್ಪಂದದ ಮೂಲಕ ಮಿಲಿಟರಿ ಹಡಗುಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದರ ಮೂಲಕ ಕೇವಲ ವಾಣಿಜ್ಯ ಹಡಗುಗಳಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲಾಗುತ್ತದೆ.
ಅಮೆರಿಕ ಮತ್ತು ಇರಾನ್ ನಡುವಿನ ಪರಿಸ್ಥಿತಿ ಬದಲಾಗಿದೆ ಮತ್ತು ಮಾತುಕತೆಗಳು ನಡೆದರೆ ಅವು ಹಿಂದೆಂದಿನಂತೆ ಇರುವುದಿಲ್ಲ ಎಂದು ಅವರು ಹೇಳಿದರು. ಹಾರ್ಮುಝ್ ಜಲಸಂಧಿಯ ನಿಯಂತ್ರಣವು ಇರಾನ್ ಮಿಲಿಟರಿಯ ಕೈಯಲ್ಲಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ ಮಂಗಳವಾರ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತನಾಡಿ, ಹಾರ್ಮುಝ್ ಜಲಸಂಧಿಯ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿನ ಎಲ್ಲಾ ಜಲಮಾರ್ಗಗಳ ಮೈನ್ಗಳನ್ನು ತೆರವುಗೊಳಿಸಲಾಗಿದೆ ಅಥವಾ ಸ್ಫೋಟಿಸಲಾಗಿದೆ ಎಂದು ಯುಎಸ್ ನೌಕಾಪಡೆಯು ತನಗೆ ತಿಳಿಸಿದೆ ಎಂದು ಹೇಳಿದರು. ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಹೊಸ ಮೈನ್ಗಳನ್ನು ಇರಿಸುವ ಯಾವುದೇ ಪ್ರಯತ್ನವು ಅಮೆರಿಕದ ಮಿಲಿಟರಿ ಪ್ರತಿಕ್ರಿಯೆಗೆ ಕಾರಣವಾಗುತ್ತದೆ ಎಂದು ಅವರು ಇರಾನ್ಗೆ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇರಾನ್ ತನ್ನ ನಿಲುವನ್ನು ಕಠಿಣಗೊಳಿಸಿದೆ.












