ಸನ್ಮಾರ್ಗ ವಾರ್ತೆ
ಮಂಗಳೂರು: ಪ್ರವಾದಿ ಮುಹಮ್ಮದ್ ﷺ ಅವರ ಸೀರತ್ ಮಾನವಕುಲಕ್ಕೆ ಶಾಂತಿ, ನ್ಯಾಯ, ಕರುಣೆ ಮತ್ತು ಸೌಹಾರ್ದತೆಯ ದಾರಿಯನ್ನು ತೋರಿಸುವ ಶ್ರೇಷ್ಠ ಮಾದರಿಯಾಗಿದೆ ಎಂದು ‘ಅನುಪಮ’ ಮಹಿಳಾ ಮಾಸಪತ್ರಿಕೆಯ ಪ್ರಧಾನ ಸಂಪಾದಕಿ ಸಬೀಹಾ ಫಾತಿಮಾ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಹಮ್ಮಿಕೊಂಡಿರುವ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ﷺ’ ಸೀರತ್ ಅಭಿಯಾನದ ಅಂಗವಾಗಿ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಮಹಿಳಾ ವಿಭಾಗದ ದಕ್ಷಿಣ ಹಾಗೂ ಉತ್ತರ ಘಟಕಗಳ ಜಂಟಿ ಆಶ್ರಯದಲ್ಲಿ ಶಾದಿ ಮಹಲ್ನಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರವಾದಿ ಮುಹಮ್ಮದ್ ﷺ ಅವರ ಜೀವನ ಸಂದೇಶದ ಕುರಿತು ಮಾತನಾಡಿದ ಅವರು, ಏಕದೇವತ್ವ, ಪ್ರವಾದಿತ್ವ ಮತ್ತು ಪರಲೋಕದ ಪರಿಕಲ್ಪನೆಗಳು ಇಸ್ಲಾಮಿನ ಮೂಲಭೂತ ವಿಚಾರಗಳಾಗಿವೆ. ಮನುಷ್ಯನು ತನ್ನ ಸೃಷ್ಟಿಕರ್ತನೊಂದಿಗೆ ಹೊಂದಬೇಕಾದ ಸಂಬಂಧ, ತನ್ನ ಜೀವನದ ಉದ್ದೇಶ ಹಾಗೂ ಮರಣಾನಂತರದ ಜವಾಬ್ದಾರಿಯನ್ನು ಅರಿತುಕೊಳ್ಳುವಲ್ಲಿ ಈ ವಿಚಾರಗಳು ಪ್ರಮುಖವಾಗಿವೆ ಎಂದು ವಿವರಿಸಿದರು.
ಪ್ರವಾದಿ ಮುಹಮ್ಮದ್ ﷺ ಅವರು ತಮ್ಮ ಜೀವನದ ಮೂಲಕ ಸತ್ಯ, ನ್ಯಾಯ, ಕರುಣೆ, ಸಹನೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಪ್ರತಿಪಾದಿಸಿದರು. ಅವರ ನಡೆ-ನುಡಿ ಮತ್ತು ಜೀವನಕ್ರಮವು ವ್ಯಕ್ತಿಯ ವೈಯಕ್ತಿಕ ಬದುಕಿನಿಂದ ಹಿಡಿದು ಕುಟುಂಬ ಹಾಗೂ ಸಮಾಜದ ಬದುಕಿನವರೆಗೂ ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದು ಅವರು ಹೇಳಿದರು.
ಪ್ರವಾದಿಯವರ ﷺ ಸೀರತ್ ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಮನುಷ್ಯರ ನಡುವೆ ಪ್ರೀತಿ, ಗೌರವ, ಸಹಬಾಳ್ವೆ, ನ್ಯಾಯ ಮತ್ತು ಪರಸ್ಪರ ಸಹಕಾರವನ್ನು ಬೆಳೆಸುವ ಸಾರ್ವತ್ರಿಕ ಸಂದೇಶವನ್ನು ಅದು ಹೊಂದಿದೆ. ಇಂದಿನ ವಿಭಜಿತ ಸಾಮಾಜಿಕ ಪರಿಸ್ಥಿತಿಯಲ್ಲಿ ಇಂತಹ ಮೌಲ್ಯಗಳ ಅಗತ್ಯ ಮತ್ತಷ್ಟು ಹೆಚ್ಚಾಗಿದೆ ಎಂದು ಸಬೀಹಾ ಫಾತಿಮಾ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶೆಹನಾಝ್ ಝೈನಬ್ ಪವಿತ್ರ ಕುರಾನ್ನ ಆಯ್ದ ಸೂಕ್ತಗಳನ್ನು ಪಠಿಸಿದರು. ಕನ್ನಡ ಭಾವಾನುವಾದವನ್ನು ಸುಮಯ್ಯಾ ಸಯೀದ ನೆರವೇರಿಸಿದರು.
ಸಾಜಿದಾ ಮೂಮಿನ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪ್ರವಾದಿ ಮುಹಮ್ಮದ್ ﷺ ಅವರ ಜೀವನ ಮತ್ತು ಸಂದೇಶವನ್ನು ಸಮಾಜಕ್ಕೆ ಪರಿಚಯಿಸುವುದು ಹಾಗೂ ವಿವಿಧ ಸಮುದಾಯಗಳ ನಡುವೆ ಸ್ನೇಹ, ಸೌಹಾರ್ದತೆ ಮತ್ತು ಪರಸ್ಪರ ಅರಿವು ಬೆಳೆಸುವುದು ಸೀರತ್ ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಪ್ರವಚನದ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ನಂತರ ಫರ್ಝಾನಾ ಮತ್ತು ತಂಡದವರಿಂದ ಪ್ರವಾದಿ ಮುಹಮ್ಮದ್ ﷺ ಅವರ ಸ್ತುತಿಗಾಯನ ನಡೆಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶಹೀದಾ ಉಮರ್ ಅವರು ನಡೆಸಿಕೊಟ್ಟರು. ಕೊನೆಯಲ್ಲಿ ಆಫೀಫಾ ಅವರು ಧನ್ಯವಾದ ಸಮರ್ಪಿಸಿದರು.












