ಸಂದರ್ಶನ
✍️ ಮುಹಮ್ಮದ್ ಕುಂಞಿ
ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್ ಮತ್ತು ವ್ಯವಸ್ಥಾಪಕರು, ಶಾಂತಿಪ್ರಕಾಶನ
ಪ್ರಶ್ನೆ: ಕ್ರಾಂತಿಯ ಜ್ಯೋತಿ ಎಂಬ ಅಭಿಯಾನದ ಉದ್ದೇಶ ಏನು?
ಉ: ಅರಬಿ ಕ್ಯಾಲೆಂಡರ್ನ ರಬೀ ಉಲ್ ಅವ್ವಲ್ ತಿಂಗಳಲ್ಲಿ ಅಂದರೆ ಪ್ರವಾದಿ ಮುಹಮ್ಮದ್(ಸ)ರು ಜನಿಸಿದ ತಿಂಗಳಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕವು ರಾಜ್ಯ ದಾದ್ಯಂತ ಸೀರತ್ ಅಭಿಯಾನವನ್ನು ನಡೆಸುತ್ತಾ ಬಂದಿದೆ. ಪ್ರತೀ ವರ್ಷದಂತೆ ಈ ವರ್ಷವೂ ಆಗಸ್ಟ್ 26ರಿಂದ ಸೆಪ್ಟೆಂಬರ್ 6ರ ತನಕ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ) ಎಂಬ ಶೀರ್ಷಿಕೆ ಯಡಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಅಭಿಯಾನದಲ್ಲಿ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ) ಎಂಬ ಶೀರ್ಷಿಕೆ ಇಟ್ಟಿರುವುದೇಕೆಂದರೆ, ಪ್ರವಾದಿ ಮುಹಮ್ಮದ್(ಸ)ರವರು ಜಗತ್ತಿನಲ್ಲಿ ತಂದ ಸಮಗ್ರ ಕ್ರಾಂತಿಯು ಚರ್ಚಾ ವಿಷಯವಾಗಬೇಕು ಅಂತ ನಾವು ಬಯಸುತ್ತೇವೆ.
ಪ್ರವಾದಿಯವರು(ಸ) ಹದಿನಾಲ್ಕು ಶತಮಾನಗಳ ಹಿಂದೆ ಜಗತ್ತಿನಲ್ಲಿ ತಂದ ಕ್ರಾಂತಿಯು ಸಮಗ್ರವೂ ಅಪ್ಪಟವೂ ಆದ ಕ್ರಾಂತಿಯಾಗಿತ್ತು. ಅವರು ತಂದ ಕ್ರಾಂತಿ ಸತ್ಯ, ನ್ಯಾಯ, ಕರುಣೆ, ಮಾನವ ಘನತೆ, ಮಾನವ ಸಮಾನತೆ, ಮಾನವ ವಿಮೋಚನೆ ಈ ಎಲ್ಲ ಆಶಯಗಳ ಮೇಲೆ ಅದು ಸ್ಥಾಪಿತ ವಾಗಿತ್ತು. ಆ ಕ್ರಾಂತಿಯ ಆರಂಭವಾಗುವುದು ‘ಇಕ್ರಅï’ ಅಂದರೆ ಓದಿರಿ ಎಂಬ ಕರೆಯೊಂದಿಗೆ. ಏಕದೇವ ವಿಶ್ವಾಸದ ಬುನಾದಿಯ ಮೇಲೆ ಪ್ರವಾದಿಯವರು(ಸ) ತಂದ ಆ ಕ್ರಾಂತಿಯು ಜಗತ್ತಿನಲ್ಲಿ ಇಂದಿಗೂ ಪ್ರಸ್ತುತವಾಗಿದೆ. ಅವರು ಜನರ ಮನಸ್ಸುಗಳನ್ನು ಪರಿ ವರ್ತಿಸುವ ಮೂಲಕ ಸಮಾಜವನ್ನು ಬದಲಾಯಿಸಿದ್ದರು. ಬದುಕಿನ ಹೊಣೆಗಾರಿಕೆಗಳ ಬಗ್ಗೆ ಅದರ ಉತ್ತರದಾಯಿತ್ವದ ಆಧಾರದಲ್ಲಿ ಅವರು ಜನರನ್ನು ಬದಲಾಯಿಸಿದರು. ಆ ಮೂಲಕ ಸಮಾಜವನ್ನು ಬದಲಾಯಿಸುತ್ತಾರೆ ಮತ್ತು ಹೊಸ ಸಮಾಜವನ್ನು ಅವರು ನಿರ್ಮಿಸುತ್ತಾರೆ. ಇದು ಚರ್ಚೆಯಾಗಬೇಕು ಎಂದು ನಾವು ಬಯಸುತ್ತೇವೆ. ಅದೇ ರೀತಿ ಮಾನವ ವಿಮೋಚನೆ ಅಂದರೆ ಮಾನವರನ್ನು ಎಲ್ಲ ರೀತಿಯ ಹೊರೆಗಳಿಂದ ಮುಕ್ತಗೊಳಿಸಿ ದರು. ಅದು ಅಪ್ಪಟ ಮಾನವೀಯ ಕ್ರಾಂತಿಯಾಗಿತ್ತು. ಆರ್ಥಿಕ, ಆಧ್ಯಾತ್ಮಿಕ, ಕೌಟುಂಬಿಕ, ಸಾಮಾಜಿಕ ಹೀಗೆ ಬದುಕಿನ ಎಲ್ಲ ಕ್ಷೇತ್ರಗಳನ್ನೂ ಅವರು ಬದಲಾಯಿಸಿದರು. ಅವರು ನಿರ್ಮಿಸಿದ ಸಮಾಜವು ಸುಭಿಕ್ಷೆಯಿಂದ ಕೂಡಿತ್ತು. ಈ ವಿಷಯಗಳು ಪ್ರಸ್ತುತ ಅಭಿಯಾನದ ಮೂಲಕ ಚರ್ಚೆಯಾಗಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ಬಯಸುತ್ತದೆ.
ಪ್ರಶ್ನೆ: ಈ ಅಭಿಯಾನದ ಸ್ವರೂಪ ಏನು? ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯರು ಮತ್ತು ಕಾರ್ಯಕರ್ತರು ಇದರಲ್ಲಿ ಯಾವ ಪಾತ್ರವನ್ನು ನಿಭಾಯಿಸುತ್ತಾರೆ?
ಉ: ಈ ಅಭಿಯಾನದಲ್ಲಿ ಜಮಾಅತೆ ಇಸ್ಲಾಮಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಜಮಾಅತ್ನ ಎಲ್ಲ ಸದಸ್ಯರು ಮತ್ತು ಕಾರ್ಯಕರ್ತರು ಇದರಲ್ಲಿ ತೊಡಗಿಕೊಳ್ಳುತ್ತಾರೆ. ಇದು ಪ್ರವಾದಿಯವರ(ಸ) ಸಂದೇಶವನ್ನು ಕನ್ನಡ ಜನತೆಗೆ ತಿಳಿಸುವ ಪ್ರಯತ್ನವಾದುದರಿಂದ ಈ ಅಭಿಯಾನದಲ್ಲಿ ಎಲ್ಲ ಮುಸ್ಲಿಮ್ ಬಾಂಧವರನ್ನು ತೊಡಗಿಸಿಕೊಳ್ಳುವಂತೆ ಪ್ರಯತ್ನಸುತ್ತೇವೆ. ಈ ಅಭಿಯಾನದಲ್ಲಿ ವಾರ್ತಾಭಾರತಿಯ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪ್ರವಾದಿ ಮುಹಮ್ಮದ್(ಸ)’ ಮತ್ತು ಖ್ಯಾತ ಸಾಹಿತಿ ಯೋಗೇಶ್ ಮಾಸ್ಟರ್ರವರ ‘ಮಾನವ ಮನಸ್ಸಿನ ಕೃಷಿಕ ಮನದೊಡೆಯ ಮುಹಮ್ಮದ್(ಸ)’ ಎಂಬ ಎರಡು ಕೃತಿಗಳನ್ನು ಬಿಡುಗಡೆ ಗೊಳಿಸಲಾಗುತ್ತಿದೆ. ರಾಜ್ಯದಾದ್ಯಂತ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ) ಎಂಬ ಶೀರ್ಷಿಕೆಯಡಿ ಸೀರತ್ ಸಮಾವೇಶಗಳು, ವಿಚಾರಗೋಷ್ಠಿಗಳು, ಸೆಮಿನಾರ್ಗಳು, ಸಂವಾದ ಕಾರ್ಯಕ್ರಗಳು, ಜನರ ಭೇಟಿ ಕಾರ್ಯಕ್ರಮ, ಸೀರತ್ ಪ್ರಬಂಧ ಸ್ಪರ್ಧೆ ಮತ್ತು ಸೀರತ್ ಎಕ್ಸಿಬಿಶನ್ ಗಳನ್ನು ನಡೆಸಲಾಗುವುದು. ಅದೇ ರೀತಿ ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ಅನಾಥಾಶ್ರಮ ಮತ್ತು ಆಸ್ಪತ್ರೆ ಭೇಟಿ ಮುಂತಾದ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು. ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ, ಪೋಸ್ಟರ್ ಇತ್ಯಾದಿಗಳ ಮೂಲಕ ಕನ್ನಡ ಜನತೆಗೆ ಪ್ರವಾದಿಯವರ(ಸ) ಸಂದೇಶಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ.
ಪ್ರಶ್ನೆ: ಪ್ರವಾದಿಯವರ(ಸ) ಸಂದೇಶಗಳನ್ನು ಎಲ್ಲ ಕನ್ನಡಿಗರಿಗೂ ತಲುಪಿಸುವ ಅಗತ್ಯವೇನಿದೆ?
ಉ: ಒಂದು ಕಡೆ ಸಮಾಜದಲ್ಲಿ ಧಾರಾಳ ತಪ್ಪುಕಲ್ಪನೆಗಳಿವೆ, ಧರ್ಮಗಳ ನಡುವೆ ಅಪರಿಚಿತತೆ ಇದೆ, ಸುಳ್ಳುಗಳನ್ನು ಹರಡಲಾಗುತ್ತಿದೆ, ಅಪನಂಬಿಕೆ ಹೆಚ್ಚಾಗುತ್ತಿದೆ. ಇದರಿಂದ ಅಂತರ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾದಿಯವರ(ಸ) ಸಂದೇಶಗಳನ್ನು ತಲುಪಿಸುವ ಮೂಲಕ ಸಂಶಯಗಳನ್ನು, ಅಪನಂಬಿಕೆಗಳನ್ನು ಹೋಗಲಾಡಿಸುವ, ಹೃದಯಗಳನ್ನು ಬೆಸೆಯುವ, ಮನಸ್ಸುಗಳನ್ನು ಜೋಡಿಸುವ ಒಂದು ದೊಡ್ಡ ಪ್ರಯತ್ನವಾಗಿ ಜಮಾಅತೆ ಇಸ್ಲಾಮಿಯು ಈ ಅಭಿಯಾನವನ್ನು ನಡೆಸುತ್ತಿದೆ. ಪ್ರವಾದಿಯವರನ್ನು ಪವಿತ್ರ ಕುರ್ಆನ್ ಮಾನವರಿಗೆ ಅನುಗ್ರಹವೆಂದು ಬಣ್ಣಿಸಿದೆ. ಅವರ ಸಂದೇಶಗಳು ಇಪ್ಪತ್ತೊಂದನೆ ಶತಮಾನದ ಆಧುನಿಕ ಸಮಾಜದಲ್ಲೂ ಬಹಳ ಪ್ರಸ್ತುತವಾಗಿದೆ. ಅವರ ಮೌಲ್ಯಗಳು ಇವತ್ತಿನ ತಲೆಮಾರನ್ನು ತರಬೇತುಗೊಳಿಸಲು, ಅವರನ್ನು ಅರ್ಥೈಸಲು ಮತ್ತು ಅವರನ್ನು ತಿದ್ದಲು ಬಹಳ ಪ್ರಾಮುಖ್ಯತೆ ಪಡೆದಿದೆ. ಪ್ರವಾದಿಯವರು(ಸ) ಇಸ್ಲಾಮಿನ ಪ್ರವಾದಿ ಎಂಬುದರಾಚೆ ಅವರು ಮಾನವ ಕುಲದ ವಿಮೋಚಕ, ಮಾನವ ಕುಲದ ಸುಧಾರಕ ಮತ್ತು ಅವರ ಸಂದೇಶವು ಸಾರ್ವತ್ತಿಕವೂ ಸಾರ್ವಕಾಲಿಕವೂ ಆಗಿದೆ. ಹಾಗಾಗಿ ಅವರ ಸಂದೇಶವನ್ನು ಕನ್ನಡ ಜನತೆಗೆ ತಲುಪಿಸುವ, ಅವರ ಮೌಲ್ಯಗಳನ್ನು ಪರಿಚಯಿಸುವ ಒಂದು ದೊಡ್ಡ ಅಭಿಯಾನವನ್ನು ಜಮಾಅತೆ ಇಸ್ಲಾಮೀ ಹಮ್ಮಿಕೊಂಡಿದೆ.
ಪ್ರಶ್ನೆ: ಕಳೆದ ವರ್ಷವೂ ಅಭಿಯಾನ ನಡೆಸಿದ್ದೀರಾ? ಈ ಹಿಂದಿನ ಅಭಿಯಾನಗಳ ಅನುಭವಗಳೇನು?
ಉ: ಜಮಾಅತ್ ಎಲ್ಲ ವರ್ಷವೂ ಈ ಅಭಿಯಾನವನ್ನು ನಡೆಸುತ್ತಿದೆ. ಕಳೆದ ವರ್ಷ ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್(ಸ) ಎಂಬ ಶೀರ್ಷಿಕೆಯಡಿ ನಡೆಸಿದ್ದೇವೆ. ಅದಕ್ಕೂ ಮುನ್ನ ‘ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’, ‘ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ವಿಮೋಚಕ’ ಹೀಗೆ ಎಲ್ಲ ವರ್ಷಗಳಲ್ಲೂ ವಿವಿಧ ಶೀರ್ಷಿಕೆ ಗಳಡಿಯಲ್ಲಿ ಅಭಿಯಾನ ನಡೆಸುತ್ತಾ ಬಂದಿದ್ದೇವೆ. ಈ ಬಾರಿ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)’ ಎಂಬ ಶೀರ್ಷಿಕೆಯಡಿ ನಡೆಸುವ ಅಭಿಯಾನದ ಮೂಲಕ ನಾವು ಜನರನ್ನು ತಲುಪುವ ಮತ್ತು ಅವರಲ್ಲಿರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತೇವೆ. ಕನ್ನಡ ಜನತೆಯು ಹಲವಾರು ವರ್ಷಗಳಿಂದ ನಮ್ಮ ಅಭಿಯಾನಗಳಿಗೆ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಜನರು ಇಂತಹ ಕಾರ್ಯಕ್ರಮಗಳನ್ನು ಬಯಸುತ್ತಾರೆ ಕೂಡ. ಒಂದು ರೀತಿಯಲ್ಲಿ ಸಂಶಯಗಳಿಂದ ಮುಕ್ತರಾಗಿ, ವಾಸ್ತವಿಕತೆಯನ್ನು ಅರ್ಥ ಮಾಡಲು, ಸತ್ಯ ತಿಳಿಯಲು ಅಂತೆಯೇ ಒಂದು ಒಳ್ಳೆಯ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದು ನಾವು ಅಭಿಯಾನಗಳ ಮೂಲಕ ಅರ್ಥ ಮಾಡಿಕೊಂಡ ಕನ್ನಡ ಜನತೆಯ ಮನದಾಳದ ಬಯಕೆಯಾಗಿದೆ. ಈ ಅಭಿಯಾನದ ಮೂಲಕ ನಾವು ಸತ್ಯವನ್ನು ತಿಳಿಸುವ, ಪ್ರವಾದಿಯ ಬದುಕಿನ ಸಂದೇಶಗಳನ್ನೂ ಮಾನವೀಯ ಮೌಲ್ಯಗಳನ್ನೂ ನಾಡಿನ ಜನ ತೆಗೆ ಪರಿಚಯಿಸುವ ಮೂಲಕ ಒಂದೊಳ್ಳೆಯ ಸಮಾಜ ನಿರ್ಮಾಣವಾಗಬೇಕು ಎಂಬುದು ನಮ್ಮ ಬಯಕೆ. ಆ ಉದ್ದೇಶದಿಂದ ನಾವು ಈ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಪ್ರತಿ ವರ್ಷವೂ ಕನ್ನಡ ಜನತೆಯಿಂದ ನಮಗೆ ಹೃತ್ಪೂರ್ವಕ ಪ್ರೋತ್ಸಾಹ ದೊರೆಯುತ್ತಾ ಬಂದಿದೆ. ಈ ವರ್ಷವೂ ನಾವು ನಾಡಿನ ಒಟ್ಟು ಕನ್ನಡ ಜನತೆಯಿಂದ ಹೃತ್ಪೂರ್ವಕ ಸಹಕಾರವನ್ನು ನಿರೀಕ್ಷಿಸುತ್ತೇವೆ.
ನಿರೂಪಣೆ: ಮುಹಮ್ಮದ್ ಅಶ್ರಫ್












