ಉತ್ತರಾಖಂಡದಲ್ಲಿ ‘ಶುದ್ಧೀಕರಣ’ ಆಚರಣೆಯ ಕುರಿತು ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲು

0
214

ಸನ್ಮಾರ್ಗ ವಾರ್ತೆ

ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ತಿಂಗಳ ಆರಂಭದಲ್ಲಿ ಸಭೆ ನಡೆಸಿದ್ದ ಮೈದಾನದ ‘ಶುದ್ಧೀಕರಣ’ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಹುಲ್ ಗಾಂಧಿ ಒತ್ತಾಯಿಸಿದ ಮರುದಿನವೇ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಭಾನುವಾರ ಪಿಟಿಐ ವರದಿ ಮಾಡಿದೆ. ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ತಂದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಹುಲ್ ಗಾಂಧಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ನು ಸಹ ಅನ್ವಯಿಸಲಾಗಿದೆ ಎಂದು ಉತ್ತರಾಖಂಡದ ಹಲ್ದ್ವಾನ್ ಪೊಲೀಸರು ತಿಳಿಸಿದ್ದಾರೆ. ಹಲ್ದ್ವಾನ್‌ನ ರಾಮಲೀಲಾ ಮೈದಾನದಲ್ಲಿ ಶುದ್ಧೀಕರಣ ನಡೆಸಿದ್ದ ‘ಶ್ರೀ ರಾಮ್ ಸೇನಾ ಧರ್ಮಾರ್ಥ ಸೇವಾ ನ್ಯಾಸ್’ ಸಂಘಟನೆಯ ಸದಸ್ಯರೊಬ್ಬರು ಈ ದೂರು ದಾಖಲಿಸಿದ್ದಾರೆ.

ಆಗಸ್ಟ್ 11 ರಂದು ಇತರ ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರೊಂದಿಗೆ ತಾನೂ ಕೂಡ ‘ಶುದ್ಧೀಕರಣ’ದಲ್ಲಿ ಉಪಸ್ಥಿತನಿದ್ದೆ ಎಂದು ದೂರುದಾರರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಅವರು ಈ ಆಚರಣೆಯಲ್ಲಿ ಭಾಗಿಯಾದವರನ್ನು ‘ಅಸ್ಪೃಶ್ಯತೆ’ ಆಚರಿಸುವವರು ಮತ್ತು ‘ದಲಿತ ವಿರೋಧಿಗಳು’ ಎಂದು ಚಿತ್ರಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದು, ಕಾಂಗ್ರೆಸ್ ನಾಯಕನ ಈ ಹೇಳಿಕೆಯು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೂ ಖರ್ಗೆಯವರ ಜಾತಿಗೂ “ಯಾವುದೇ ಸಂಬಂಧವಿಲ್ಲ” ಎಂದು ಅವರು ಹೇಳಿಕೊಂಡಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಲ್ದ್ವಾನ್‌ನಲ್ಲಿ ನಡೆದ ಘಟನೆಯು ‘ಶುದ್ಧೀಕರಣ’ದ ಸೋಗಿನಲ್ಲಿ ಖರ್ಗೆ ಅವರ ವಿರುದ್ಧ ನಡೆಸಿದ ‘ಅಸ್ಪೃಶ್ಯತೆಯ ಕೃತ್ಯ’ವಾಗಿದೆ ಎಂದು ಶನಿವಾರ ರಾಹುಲ್ ಗಾಂಧಿ ಹೇಳಿದ್ದರು. ಸಂವಿಧಾನದ ಪ್ರಕಾರ ಅಸ್ಪೃಶ್ಯತೆಯು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ತಿಳಿಸಿದ್ದರು.

ಆಗಸ್ಟ್ 13 ರಂದು ಖರ್ಗೆ ಅವರು ಈ ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ, ಶುದ್ಧೀಕರಣ ಆಚರಣೆ ನಡೆಸಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಆಡಳಿತಾರೂಢ ಭಾರತೀಯ ಜನತಾ ಪಕ್ಷವು “ಅಂತಹ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ” ಮತ್ತು ಈ ವಿಷಯದ ಬಗ್ಗೆ ಪಕ್ಷವು ತನಿಖೆ ನಡೆಸಲಿದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಹೇಳಿದ್ದರು. ಶ್ರೀ ರಾಮ್ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ಸಂಘಟನೆಯು ಬಿಜೆಪಿಯೊಂದಿಗೆ ನಂಟು ಹೊಂದಿದೆ ಎಂದು ಕಾಂಗ್ರೆಸ್‌ನ ಉತ್ತರಾಖಂಡ ಘಟಕವು ಆರೋಪಿಸಿದೆ.

ಆದಾಗ್ಯೂ, ಹಿಂದುತ್ವ ಪಕ್ಷವು ಈ ಗುಂಪಿನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿದ್ದು, ಖರ್ಗೆಯವರ ಸಭೆಯಲ್ಲಿ ಕೂಗಿದ ಘೋಷಣೆಗಳು ಸನಾತನ ಧರ್ಮವನ್ನು ನಂಬುವವರಿಗೆ ನೋವುಂಟು ಮಾಡಿವೆ ಎಂದು ಹೇಳಿಕೊಂಡಿದೆ. ಸನಾತನ ಧರ್ಮ ಎಂಬುದು ಹಿಂದೂ ಧರ್ಮಕ್ಕೆ ಪರ್ಯಾಯ ಪದವಾಗಿ ಕೆಲವರು ಬಳಸುವ ಪದವಾಗಿದೆ.