ಇರಾನ್ ದಾಳಿ: ಕುವೈತ್‌ನ ವಸತಿ ಪ್ರದೇಶದಲ್ಲಿ ಬೆಂಕಿ

0
339

ಸನ್ಮಾರ್ಗ ವಾರ್ತೆ

ಕುವೈತ್ ಸಿಟಿ: ಇರಾನ್‌ನ ಡ್ರೋನ್ ದಾಳಿಯು ಕುವೈತ್‌ನ ಕ್ಯಾಪಿಟಲ್ ಗವರ್ನೇರೇಟ್‌ನಲ್ಲಿರುವ ವಸತಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿದೆ. ಇಂದು ಬೆಳಿಗ್ಗೆ ದಾಳಿ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಲ್ ಹಿಲ್ಲಾಲಿ ಮತ್ತು ಅಲ್ ಮದೀನಾ ಅಗ್ನಿಶಾಮಕ ಕೇಂದ್ರಗಳ ರಕ್ಷಕರು ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ಆಸ್ತಿಗೆ ಆದ ಹಾನಿಯು ಅತ್ಯಲ್ಪವಾಗಿದೆ ಎಂದು ಕುವೈತ್ ಫೈರ್ ಫೋರ್ಸ್ ವಕ್ತಾರ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಅಲ್ ಘರೀಬ್ ಹೇಳಿದ್ದಾರೆ.

ಗಲ್ಫ್ ದೇಶಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಇಂದು ಬೆಳಿಗ್ಗೆ ಇರಾನ್ ನಗರಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ನಡೆದಿವೆ. ಇರಾನ್‌ನಿಂದ ಬಂದ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಯಶಸ್ವಾಗಿ ಹಿಮ್ಮೆಟ್ಟಿಸಿರುವುದಾಗಿ ಕುವೈತ್ ಮತ್ತು ಬಹ್ರೇನ್ ಮೊದಲು ಘೋಷಿಸಿದ್ದವು. ಬಹ್ರೇನ್ ಅನ್ನು ಗುರಿಯಾಗಿಸಿಕೊಂಡಿದ್ದ ಇರಾನ್ ಡ್ರೋನ್‌ಗಳನ್ನು ತಾವು ಯಶಸ್ವಾಗಿ ಹಿಮ್ಮೆಟ್ಟಿಸಿರುವುದಾಗಿ ರಾಷ್ಟ್ರೀಯ ಸಂವಹನ ಕೇಂದ್ರವು ಘೋಷಿಸಿತು. ಇರಾನ್‌ನ ವಿವಿಧ ನಗರಗಳ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಹಲವಾರು ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ.