ಇಳಕಲ್ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮಾಜದ ಮುಖಂಡರು, SYM ಯುವಕರ ಭಾಗಿ

0
362

ಸನ್ಮಾರ್ಗ ವಾರ್ತೆ

ಭಾವೈಕ್ಯತೆ, ಸಹೋದರತ್ವ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ಕಾರ್ಯಕ್ರಮ

ಇಳಕಲ್: ಶರಣ ಸಂಸ್ಕೃತಿಯ ಐತಿಹಾಸಿಕ ಪುಣ್ಯಕ್ಷೇತ್ರವಾದ ಇಳಕಲ್‌ನ ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಸಮಾಜದ ಮುಖಂಡರು ಹಾಗೂ Solidarity Youth Movement (SYM) ಇಳಕಲ್ ಘಟಕದ ಯುವಕರು ಭಾಗವಹಿಸುವ ಮೂಲಕ ಹಿಂದೂ–ಮುಸ್ಲಿಂ ಭಾವೈಕ್ಯತೆ, ಪರಸ್ಪರ ಗೌರವ ಹಾಗೂ ಸೌಹಾರ್ದತೆಯ ಸಂದೇಶ ಸಾರಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಅಬ್ದುಲ್ ರಜಾಕ್, ಬಹಾವುುದ್ದೀನ್ ಕಾಝಿ, ಮೊಹಮ್ಮದ್ ಗೌಸ್ ಗಡಾದ್, ಮೊಹಮ್ಮದ್ ಸಿರಾಜ್ ಹುಣಚಗಿ, ಲಾಲಸಾಬ್ ಭಂಡಾರಿ, ಮಹಬೂಬ್ ಸಾಬ್ ದೊಟಿಹಾಳ, ಅಬ್ದುಲ್ ವಾಚ್ವಾ, ಮುಜಮ್ಮಿಲ್ ಹಕ್ಕಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಗೋರೋ ಮಹಾಂತೇ ಸ್ವಾಮೀಜಿ, ಸಮಾಜದಲ್ಲಿ ಪರಸ್ಪರ ಪ್ರೀತಿ, ಗೌರವ, ಸಹೋದರತ್ವ ಹಾಗೂ ಸೌಹಾರ್ದತೆಯನ್ನು ಬೆಳೆಸುವ ಅಗತ್ಯವಿದೆ. ಧರ್ಮ, ಜಾತಿ ಮತ್ತು ಸಮುದಾಯಗಳ ನಡುವಿನ ಭಿನ್ನತೆಗಳನ್ನು ಮೀರಿ ಮಾನವೀಯ ಸಂಬಂಧಗಳನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಲ್ಲಹಾಜ್ ಉಸ್ಮಾನ್ ಗನಿ ಹುನಮಾಬಾದ್, ಬಸವ ತತ್ವ ಮತ್ತು ಇಸ್ಲಾಂ ಎರಡೂ ಮಾನವೀಯತೆ, ಸಮಾನತೆ, ಸಹೋದರತ್ವ ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸಾರುತ್ತವೆ ಎಂದು ಹೇಳಿದರು.

“ಧರ್ಮಗಳ ನಡುವೆ ಭೇದಭಾವಕ್ಕಿಂತ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಬಸವಣ್ಣನವರ ಸಮಾನತೆಯ ತತ್ವಗಳು ಹಾಗೂ ಇಸ್ಲಾಂನ ಮಾನವೀಯ ಸಂದೇಶಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿವೆ. ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮೂಲಕವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ,” ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಭಾಗವಹಿಸಿರುವುದು ಇಳಕಲ್–ಚಿತ್ತರಗಿ ಭಾಗದಲ್ಲಿ ನೆಲೆಗೊಂಡಿರುವ ಹಿಂದೂ–ಮುಸ್ಲಿಂ ಭಾವೈಕ್ಯತೆ, ಪರಸ್ಪರ ಗೌರವ ಮತ್ತು ಸೌಹಾರ್ದತೆಯ ಉತ್ತಮ ನಿದರ್ಶನವಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ Solidarity Youth Movement (SYM) ಇಳಕಲ್ ಘಟಕದ ಯುವಕರು ಸಹ ಉಪಸ್ಥಿತರಿದ್ದು, ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.