ಖವ್ವಾಮ್‌: ಪ್ರವಾದಿ(ಸ) ವ್ಯಾಖ್ಯಾನಿಸಿರುವ ರೀತಿ ಮತ್ತು ನಾವು

0
216

✍️ ಸೈಯದ್ ಸಆದತುಲ್ಲಾ ಹುಸೈನಿ
ರಾಷ್ಟ್ರಾಧ್ಯಕ್ಷರು, ಜಮಾಅತೆ ಇಸ್ಲಾಮೀ ಹಿಂದ್‌

ಇತ್ತೀಚಿನ ಅಕಾಡೆಮಿಕ್‌ ಇತಿಹಾಸದಲ್ಲಿ ಸ್ತ್ರೀ ಮತ್ತು ಲಿಂಗ ನ್ಯಾಯದ ಪ್ರಶ್ನೆಗಳಷ್ಟು ಹೆಚ್ಚು ಆಸಕ್ತಿ ಮತ್ತು ಗೊಂದಲವನ್ನು ಹುಟ್ಟುಹಾಕಿದ ವಿಷಯಗಳು ಬಹಳ ಕಡಿಮೆ. ಜಗತ್ತಿನ ಎಲ್ಲ ಭಾಗಗಳಲ್ಲಿ ಸ್ತ್ರೀ ಹೊಸ ಪಾತ್ರಗಳನ್ನು ಮತ್ತು ಹೊಸ ಹಕ್ಕುಗಳನ್ನು ಪಡೆದಿದ್ದಾರೆ. ಶತಮಾನಗಳಷ್ಟು ಹಳೆಯ ಮಾನದಂಡಗಳು ಮತ್ತು ಸಾಮಾಜಿಕ ರಚನೆಗಳಿಗೆ ಸವಾಲು ಎದುರಾಗಿದೆ. ಸಾಂಪ್ರದಾಯಿಕವಾಗಿ ಪುರುಷರಿಗೆ ಮೀಸಲೆಂದು ಪರಿಗಣಿಸಲ್ಪಟ್ಟ ಕ್ಷೇತ್ರಗಳಿಗೆ ಮಹಿಳೆಯರು ಪ್ರವೇಶಿಸಿದರು.

ಆದರೆ, ಈ ಹೊಸ ‘ಸಾಮಾನ್ಯತೆ’(Normal) ಯು ವಿಶಾಲವಾದ ನಾಗರಿಕತೆಯ ಬಿಕ್ಕಟ್ಟು, ಅಂದರೆ ಕುಟುಂಬ ವ್ಯವಸ್ಥೆಯ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ವಿವಾಹಗಳು ಹೆಚ್ಚು ದುರ್ಬಲಗೊಂಡವು. ಏಕಾಂಗಿತನವು ಜಾಗತಿಕ ಸಾಂಕ್ರಾಮಿಕವಾಗಿ ಮಾರ್ಪಟ್ಟಿತು. ಆತಂಕ ಮತ್ತು ಖಿನ್ನತೆಯು ಅಸಂಖ್ಯಾತ ಮನೆಗಳನ್ನು ಪ್ರವೇಶಿಸಿದವು. ಕುಸಿಯುತ್ತಿರುವ ಜನಸಂಖ್ಯಾ ಪ್ರಮಾಣದಿಂದಾಗಿ ಅಭಿವೃದ್ಧಿ ಹೊಂದಿದ ಜಗತ್ತು ಅಸ್ತಿತ್ವದ ಬೆದರಿಕೆಯನ್ನು ಎದುರಿಸಲು ಪ್ರಾರಂಭಿಸಿತು. ಮುರಿದುಹೋದ ಮನೆಗಳು, ಭಾವನಾತ್ಮಕ ನಿರ್ಲಕ್ಷ್ಯ ಮತ್ತು ಅನಿಶ್ಚಿತ ಸಂಬಂಧಗಳು ಮಕ್ಕಳಿಗೆ ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಸುರಕ್ಷಿತ ವಾತಾವರಣವನ್ನು ನಿರಾಕರಿಸಿದವು.

ಖಂಡಿತವಾಗೂ ಈ ಎರಡು ಬೆಳವಣಿಗೆಗಳು ಪ್ರತ್ಯೇಕವಾದವು ಹಾಗೂ ಪರಸ್ಪರ ಸಂಬಂಧವಿಲ್ಲದವು ಅಲ್ಲ. ಮಹಿಳೆಯರ ಸಬಲೀಕರಣಕ್ಕಾಗಿ ನಾವು ನಡೆಸುತ್ತಿರುವ ಈ ಪ್ರಯತ್ನಗಳಿಂದಾಗಿ; ಐತಿಹಾಸಿಕವಾಗಿ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ಅತ್ಯಂತ ಆಳವಾದ ಬಾಂಧವ್ಯದ ಭಾವನೆಯನ್ನು ನೀಡುತ್ತಾ ಬಂದಿದ್ದ ಅತ್ಯಮೂಲ್ಯ ಸಂಸ್ಥೆಯಾದ ‘ಕುಟುಂಬ’ವನ್ನು ಹಾಳು ಮಾಡಿದ್ದೇವೆ.  

ಇಸ್ಲಾಮ್‌ ಧರ್ಮವು ಈ ಬಿಕ್ಕಟ್ಟನ್ನು ಸಂಪೂರ್ಣವಾಗಿ ಭಿನ್ನವಾದ ನೆಲೆಯಿಂದ ವಿಶ್ಲೇಷಿಸುತ್ತದೆ. ಇಸ್ಲಾಮಿನ ದೃಷ್ಟಿಕೋನದ ಪ್ರಕಾರ ಪೈಪೋಟಿಗಿಂತ ಪರಸ್ಪರರು ಪೂರಕವಾಗಿರುವುದೇ ಪರಮ ತತ್ವವಾಗಿದೆ. ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವನ್ನು ಎಂದಿಗೂ ಅಧಿಕಾರದ ಸೆಣಸಾಟವಾಗಿ ಇಸ್ಲಾಮ್‌ ಬಿಂಬಿಸುವುದಿಲ್ಲ. ಬದಲಿಗೆ, ನಾಗರಿಕತೆಯ ನಿರ್ಮಾಣದ ಹೊಣೆಗಾರಿಕೆಯಲ್ಲಿ ಅವರಿಬ್ಬರೂ ‘ಪೂರಕ ಪಾಲುದಾರರು’(Complementary partners); ಸಮಾನ ಉದ್ದೇಶದ ಸಾಧನೆಗಾಗಿ ಇಬ್ಬರೂ ಅನನ್ಯವಾದ ಶಕ್ತಿಯನ್ನು ತುಂಬುತ್ತಾರೆ ಎಂದು ಪ್ರತಿಪಾದಿಸುತ್ತದೆ. ಮಾನವ ಬದುಕಿನ ಸಾರ್ಥಕತೆಯು ಪರಸ್ಪರ ಬೇರ್ಪಡುವಿಕೆಯಲ್ಲಿ ಇಲ್ಲ; ಬದಲಾಗಿ ಪರಸ್ಪರ ಜವಾಬ್ದಾರಿ, ಸಹಾನುಭೂತಿ ಹಾಗೂ ಸಹಕಾರದೊಂದಿಗೆ ತಮ್ಮ ಪಾತ್ರಗಳನ್ನು ಸಾಮರಸ್ಯದಿಂದ ನಿರ್ವಹಿಸುವುದರಲ್ಲಿಯೇ ಜೀವನದ ನಿಜವಾದ ಸಾರ್ಥಕತೆ ಎಂದು ಇಸ್ಲಾಮ್‌ ಪ್ರತಿಪಾದಿಸುತ್ತದೆ. 

“ಸತ್ಯವಿಶ್ವಾಸಿ ಪುರುಷರು ಹಾಗೂ ಸತ್ಯವಿಶ್ವಾಸಿ ಸ್ತ್ರೀಯರು ಪರಸ್ಪರ ಆಪ್ತರು(ಔವ್ಲಿಯಾ). ಅವರು ಒಳಿತನ್ನು ಆದೇಶಿಸುತ್ತಾರೆ, ಕೆಡೆಕನ್ನು ತಡೆಯುತ್ತಾರೆ…” (9:71)

ಕುರ್‌ಆನಿನ ಆಶಯದಲ್ಲಿ ಪುರುಷರು ಮತ್ತು ಮಹಿಳೆಯರು ಪರಸ್ಪರ ಮಿತ್ರರು. ಹಾಗಾಗಿ ಯಾರಿಗೆ ಹೆಚ್ಚು ಅಧಿಕಾರವಿದೆ ಎಂಬುವುದು ಇಲ್ಲಿನ ಕೇಂದ್ರ ಪ್ರಶ್ನೆಯಲ್ಲ; ಕುಟುಂಬ, ಸಮುದಾಯ ಹಾಗೂ ಒಂದು ಬಲಿಷ್ಠ ನಾಗರಿಕತೆಯನ್ನು ನಿರ್ಮಿಸುವಲ್ಲಿ ಅವರಿಬ್ಬರೂ ಉತ್ತಮ ಪಾಲುದಾರರಾಗಿ ಹೇಗೆ ಕೆಲಸ ಮಾಡಬಹುದು ಎಂಬುದೇ ಪ್ರಮುಖ ಪ್ರಶ್ನೆಯಾಗಿದೆ. ಈ ಪಾಲುದಾರಿಕೆಯಲ್ಲಿ ಕುರ್‌ಆನ್ ಪುರುಷನಿಗೆ ‘ಖಿವಾಮಃ’ ಎಂಬ ಒಂದು ವಿಶಿಷ್ಟ ಜವಾಬ್ದಾರಿಯನ್ನು ವಹಿಸಿಕೊಟ್ಟಿದೆ. 

ದುರದೃಷ್ಟವಶಾತ್, ʻಖಿವಾಮಃʼ ಅಥವಾ ʻಖವ್ವಾಮ್ʼ ಎನ್ನುವುದು ವ್ಯಾಪಕ ತಪ್ಪುಗ್ರಹಿಕೆಗೆ ಒಳಗಾದ ಕುರ್‌ಆನಿನ  ಪರಿಕಲ್ಪನೆಗಳಲ್ಲಿ ಒಂದಾಗಿದೆ. ಕೆಲವರು ಇದನ್ನು ಪುರುಷ ಶ್ರೇಷ್ಠತೆಯ ಅಥವಾ ವಿಪರೀತ ಪಿತೃಪ್ರಭುತ್ವದ ಸಂಕೇತವೆಂದು ಪರಿಗಣಿಸಿದರು. ಆದರೆ ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ, ಖಿವಾಮಃ ಎನ್ನುವುದು ಅಧಿಕಾರವಲ್ಲ, ಬದಲಾಗಿ ಜವಾಬ್ದಾರಿ ಎಂಬುದು ಅರ್ಥವಾಗುತ್ತದೆ. ಮಹಿಳೆಯ ಸಮೃದ್ಧಿಗೆ, ಕುಟುಂಬದ ಭದ್ರತೆಗೆ, ಮುಂದಿನ ಪೀಳಿಗೆಯ ಬೆಳವಣಿಗೆ ಮತ್ತು ಏಳಿಗೆಗೆ ಬೇಕಾದಂತಹ ಆರೋಗ್ಯಪೂರ್ಣ ವಾತಾವರಣವನ್ನು ಒದಗಿಸಲು ಈ ಜವಾಬ್ದಾರಿಯನ್ನು ಅಲ್ಲಾಹನು ಪುರುಷನಿಗೆ ವಹಿಸಿದ್ದಾನೆ. 

ಅಸ್ಮಿತೆಯೊಂದಿಗೆ ಸಬಲೀಕರಣದ ಆರಂಭ:

ಸಬಲೀಕರಣವು ಎಂದಿಗೂ ಮೂಲ ಅಸ್ಮಿತೆ ಅಥವಾ ಗುರುತಿನ ಮೇಲೆಯೇ ನಿಂತಿರುತ್ತದೆ. ಒಂದು ಸಮೂಹವನ್ನು ಗುರುತಿಸುವ ಪ್ರಮುಖ ಲಕ್ಷಣಗಳನ್ನೇ ಕಿತ್ತುಕೊಳ್ಳುವುದು ಎಂದಿಗೂ ನ್ಯಾಯಯುತ ಸಬಲೀಕರಣವಾಗಲು ಸಾಧ್ಯವಿಲ್ಲ. ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅವರ ಧಾರ್ಮಿಕ ಗುರುತು/ಅಸ್ಮಿತೆಯನ್ನು ಬಿಟ್ಟುಕೊಟ್ಟರೆ ಮಾತ್ರ ಪೂರ್ಣ ಹಕ್ಕುಗಳು ಸಿಗುತ್ತವೆ ಎಂದರೆ, ಅದನ್ನು ಯಾರೂ ಸಬಲೀಕರಣದ ಪ್ರಾಮಾಣಿಕ ರೀತಿಯೆಂದು ಸ್ವೀಕರಿಸುವುದಿಲ್ಲ; ಬದಲಿಗೆ ಅದು ಅವರ ಘನತೆಗೆ ಮಾಡಿದ ದೊಡ್ಡ ದೌರ್ಜನ್ಯವೆಂದೇ ಪರಿಗಣಿಸಲ್ಪಡುತ್ತದೆ. ಇಂದು ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಯೂ ಬಹುತೇಕ ಹೀಗೇ ಇದೆ. ಮಹಿಳೆಯರು ನಿಜಕ್ಕೂ ಸಬಲರಾಗಬೇಕಾದರೆ ಅವರು ಹಕ್ಕು ಮತ್ತು ಅವಕಾಶಗಳಲ್ಲಿ ಮಾತ್ರವಲ್ಲದೆ, ಉಡುಗೆ-ತೊಡುಗೆ, ಆಕಾಂಕ್ಷೆ, ಪಾತ್ರಗಳು ಮತ್ತು ಯಶಸ್ಸಿನ ಮಾನದಂಡಗಳಲ್ಲೂ ಪುರುಷರನ್ನೇ ಸಂಪೂರ್ಣವಾಗಿ ಹೋಲಬೇಕು ಎಂಬ ವಾದವನ್ನು ಮುನ್ನಲೆಗೆ ತರಲಾಗಿದೆ. ಪುರುಷ ಕೇಂದ್ರಿತ ಯಶಸ್ಸಿನ ಮಾದರಿಗಳನ್ನು ಎಷ್ಟು ಹೆಚ್ಚು ಮೈಗೂಡಿಸಿಕೊಳ್ಳುತ್ತಾರೋ, ಅಷ್ಟು ಪ್ರಮಾಣದಲ್ಲಿ ಮಹಿಳೆಯನ್ನು ಸಬಲೆ ಎಂದು ಕರೆಯಲಾಗುತ್ತಿದೆ. ಪರಿಣಾಮವಾಗಿ, ಸಾರ್ವಜನಿಕ ಮತ್ತು ವೃತ್ತಿಪರ ಬದುಕಿನ ಪಾತ್ರಗಳಿಗೆ ಸಿಗುವ ಬೆಲೆ ಮತ್ತು ಮೆಚ್ಚುಗೆಗಳು, ಕುಟುಂಬ ನಿರ್ವಹಣೆಗೆ ಅತ್ಯಗತ್ಯವಾದ ಮನೆಮಟ್ಟದ ಪಾತ್ರಗಳಿಗೆ ಸಿಗುತ್ತಿಲ್ಲ. ಅಲ್ಲದೇ, ಅವುಗಳನ್ನು ಕಡೆಗಣಿಸುವ ಮತ್ತು ತುಚ್ಛವಾಗಿ ಕಾಣುವ ಧೋರಣೆಗಳು ಹೆಚ್ಚಾಗುತ್ತಿದೆ. 

ಇಸ್ಲಾಮಿನ ಪರಿಕಲ್ಪನೆಯು ಸಮಾಜದ ಈ ಸಾಮಾನ್ಯ ಧೋರಣೆಗಿಂತ ಸಂಪೂರ್ಣ ಭಿನ್ನವಾದ ಮಾದರಿಯನ್ನು ಮುಂದಿಡುತ್ತದೆ. ಮಹಿಳೆಯರು ಘನತೆಯನ್ನು ಗಳಿಸಲು ತಮ್ಮ ಸ್ತ್ರೀತ್ವವನ್ನು ತ್ಯಾಗ ಮಾಡಬೇಕಾದ ಅಗತ್ಯವಿಲ್ಲ. ಬದಲಾಗಿ, ಸ್ತ್ರೀತ್ವದ ಅಂತರ್ಗತ ಮೌಲ್ಯ ಮತ್ತು ಹಿರಿಮೆಯನ್ನು ಹಾಗೆಯೇ ಕಾಪಾಡಿ ಗೌರವಿಸುವುದೇ ಇಸ್ಲಾಮಿನ ವಿಶೇಷತೆಯಾಗಿದೆ. 

ಇಸ್ಲಾಮ್‌ ಧರ್ಮವು ಸಮಾನತೆ ಹಾಗೂ ಅಸ್ಮಿತೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಮಾನ ಮಾನವ ಘನತೆ, ಸಮಾನ ಆಧ್ಯಾತ್ಮಿಕ ಮೌಲ್ಯ, ಸಮಾನ ನೈತಿಕ ಜವಾಬ್ದಾರಿ ಮತ್ತು ಅಲ್ಲಾಹನ ಸಂಪ್ರೀತಿಯನ್ನು ಪಡೆದುಕೊಳ್ಳಲು ಸಮಾನ ಅವಕಾಶಗಳಿವೆ ಎಂದು ಬಲವಾಗಿ ಪ್ರತಿಪಾದಿಸುತ್ತದೆ.

“ಪುರುಷನಿರಲಿ ಅಥವಾ ಸ್ತ್ರೀ ಇರಲಿ, ಸತ್ಕರ್ಮ ಮಾಡುವವರು ಸತ್ಯವಿಶ್ವಾಸಿಗಳಾಗಿದ್ದರೆ ಇಂತಹವರೇ ಸ್ವರ್ಗದಲ್ಲಿ ಪ್ರವೇಶ ಪಡೆಯುವರು. ಕಿಂಚಿತ್ತೂ ಇವರ ಹಕ್ಕು ಚ್ಯುತಿಯಾಗಲಾರದು.” (4:124)

“ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕುಗಳಿರುವಂತೆ ಸ್ತ್ರೀಯರಿಗೂ ಪುರುಷರ ಮೇಲೆ ಸಮಾನ ಹಕ್ಕುಗಳಿವೆ.” (2:228)

ಆದರೆ, ಈ ಸಮಾನತೆಯ ಅರ್ಥ ಸರ್ವತ್ರ ಏಕರೂಪತೆಯಲ್ಲ. ನ್ಯಾಯ ಕೂಡ ಏಕರೂಪತೆಯನ್ನು ಬಯಸುವುದಿಲ್ಲ. ಕುರ್‌ಆನ್‌ ಏಕತೆಯೊಳಗಿನ ವೈವಿಧ್ಯತೆಯನ್ನು ಪದೇ ಪದೇ ಸಂಭ್ರಮಿಸುತ್ತದೆ. ರಾತ್ರಿ ಮತ್ತು ಹಗಲು, ಸೂರ್ಯ ಮತ್ತು ಚಂದ್ರ, ವಿವಿಧ ಭಾಷೆಗಳು ಮತ್ತು ಜನತೆ; ಇವೆಲ್ಲವೂ ಹಲವು ವಿಧಗಳಲ್ಲಿ ಭಿನ್ನವಾಗಿದ್ದರೂ ಬ್ರಹ್ಮಾಂಡವೆಂಬ ಸೃಷ್ಟಿಯ ಸಾಮರಸ್ಯದ ಭಾಗವಾಗಿವೆ. ಈ ವ್ಯತ್ಯಾಸಗಳು ಅಸಮಾನತೆಯನ್ನು ಸೂಚಿಸುವುದಿಲ್ಲ; ಆದರೆ ವೈವಿಧ್ಯಮಯ ಪಾತ್ರಗಳ ಸಾಮರಸ್ಯಪೂರಿತ ನಿರ್ವಹಣೆಗಾಗಿ ಇರುವ ಉದ್ದೇಶಪೂರ್ವಕ ವಿನ್ಯಾಸವಾಗಿದೆ.

ಸ್ತ್ರೀತ್ವದ ಇಸ್ಲಾಮೀ ಅರ್ಥ

ಪ್ರಸ್ತುತ ಕಾಲಘಟ್ಟದಲ್ಲಿ, ವಿವಿಧ ಸಿದ್ಧಾಂತಗಳ ನಡುವಿನ ಸಂಘರ್ಷದಿಂದಾಗಿ ಸ್ತ್ರೀತ್ವಕ್ಕೇ ಹೆಚ್ಚು ಧಕ್ಕೆಯಾಗಿದೆ. ಸಮಾಜದ ಒಂದು ವರ್ಗಕ್ಕೆ ಸ್ತ್ರೀತ್ವ ಎಂದರೆ ದೌರ್ಬಲ್ಯ, ಮೌನ ಮತ್ತು ಪರಾವಲಂಬನೆಯ ಹಳೆಯ ಕಟ್ಟುಪಾಡುಗಳಷ್ಟೇ. ಇನ್ನು ಕೆಲವರ ದೃಷ್ಟಿಯಲ್ಲಿ ಇದು ಘನತೆ ಮತ್ತು ಸಾಧನೆಗೆ ಅಡ್ಡಬರುವ ಒಂದು ಹೊರೆ. ಮತ್ತೊಂದೆಡೆ, ಸಮಾನತೆ ಅಂದರೆ ಸರ್ವತ್ರ ಏಕತೆ ಎಂಬ ವ್ಯಾಖ್ಯಾನದಿಂದಾಗಿ ಸ್ತ್ರೀತ್ವದ ಅಸ್ತಿತ್ವವೇ ಪ್ರಶ್ನಾರ್ಹವಾಗಿದೆ;  ಆ ಪ್ರಕಾರ ಮಾನವ ಜಗತ್ತಿನ ಅಭಿವೃದ್ಧಿಗೆ ಭಿನ್ನ ಅಸ್ಮಿತೆಯಿಂದ, ಪರಸ್ಪರ ಪೂರಕ ಪಾತ್ರಗಳಿಂದ ಮತ್ತು ಪರಸ್ಪರ ಭಿನ್ನ ಲಿಂಗಗಳು ನೀಡುವ ಅನನ್ಯ ಕೊಡುಗೆಗಳಿಗೆ ಯಾವುದೇ ಅವಕಾಶವೇ ಉಳಿದಿಲ್ಲ.  

ಇಸ್ಲಾಮ್‌ ಧರ್ಮವು ಸ್ತ್ರೀತ್ವವನ್ನು ಎಂದಿಗೂ ದೌರ್ಬಲ್ಯ ಅಥವಾ ಮಿತಿಯೆಂದು ಪರಿಗಣಿಸುವುದಿಲ್ಲ. ಬದಲಾಗಿ, ಸ್ತ್ರೀತ್ವವು ಗೌರವ ಮತ್ತು ಘನತೆಯ ಮೂಲ ಎಂದು ಪ್ರತಿಪಾದಿಸುತ್ತದೆ. ‘ತಾಯಿಯ ಪಾದದಡಿ ಸ್ವರ್ಗವಿದೆ’, ‘ಹೆಣ್ಣುಮಕ್ಕಳ ಪೋಷಣೆ ಸ್ವರ್ಗದ ಖಚಿತ ದಾರಿ’ ಹಾಗೂ ‘ಸನ್ನಡೆಯ ಪತ್ನಿಯು ಲೌಕಿಕ ಜೀವನದ ದೊಡ್ಡ ಅನುಗ್ರಹ’ ಎಂಬ ಪ್ರವಾದಿ ವಚನಗಳು ಕೇವಲ ನೈತಿಕ ಸಲಹೆಗಳಲ್ಲ. ಅವು ಮಹಿಳೆಯರ ಪಾತ್ರಗಳನ್ನು ಗೌರವಿಸುವ ಮತ್ತು ಸ್ತ್ರೀ ಅಸ್ಮಿತೆಯನ್ನು ಘನತೆ, ಶಕ್ತಿ ಹಾಗೂ ಹೆಮ್ಮೆಯ ಸಂಕೇತವಾಗಿ ಸಮಾಜದಲ್ಲಿ ಎತ್ತಿಹಿಡಿಯುವ ಪ್ರಬಲ ನಾಗರಿಕ ಘೋಷಣೆಗಳಾಗಿವೆ. 

ಈ ಘೋಷಣೆಗಳನ್ನು ಎಂದಿಗೂ ಮಹಿಳೆಯರ ಕೊಡುಗೆಯು ಅವರ ಮನೆಗೆ ಮಾತ್ರ ಸೀಮಿತವಾಗಿದೆ ಎಂದು ಇಸ್ಲಾಮೀ ಇತಿಹಾಸದಲ್ಲಿ ಅರ್ಥಮಾಡಿಕೊಳ್ಳಲಾಗಿಲ್ಲ. ಖದೀಜಾ(ರ) ಒಬ್ಬ ಯಶಸ್ವಿ ಉದ್ಯಮಿಯಾಗಿದ್ದರು. ಆಯಿಷಾ(ರ) ಇಸ್ಲಾಮಿಕ್ ಇತಿಹಾಸದ ಅತ್ಯಂತ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾದರು. ಉಮ್ಮೆ ಸಲಮಾ(ರ) ಪ್ರವಾದಿಯವರ ಮಿಷನ್‌ನ ಅತ್ಯಂತ ನಿರ್ಣಾಯಕ ಕ್ಷಣ ಒಂದರಲ್ಲಿ ಅಸಾಧಾರಣ ಸಮಸ್ಯೆ ಪರಿಹರಿಸುವವರಾಗಿ ಹೊರಹೊಮ್ಮಿದರು. ಕಾರ್ಯತಂತ್ರದ ಕುರಿತಾದ ಅವರ ಸಲಹೆಯು ವಿಪರೀತವಾಗಬಹುದಾದ ಪರಿಸ್ಥಿತಿಯನ್ನು ತಕ್ಷಣವೇ ತಣ್ಣಗಾಗಿಸಿತು. ಇಸ್ಲಾಮಿನ ಇತಿಹಾಸದುದ್ದಕ್ಕೂ, ಮಹಿಳೆಯರು ಹದೀಸ್‌ಗಳನ್ನು ನಿರೂಪಿಸಿದ್ದಾರೆ ಮತ್ತು ಕಲಿಸಿದ್ದಾರೆ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ, ವಕ್ಫ್‌ ಮತ್ತು ಸೇವಾ(ಚಾರಿಟಿ) ಆಂದೋಲನಗಳನ್ನು ಮುನ್ನಡೆಸಿದ್ದಾರೆ ಮತ್ತು ವೈಚಾರಿಕ ಹಾಗೂ ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇಸ್ಲಾಮ್‌ ಧರ್ಮವು ಮಹಿಳೆಯರ ಸ್ತ್ರೀತ್ವ, ವಿಶೇಷ ಅಸ್ಮಿತೆ ಮತ್ತು ಕುಟುಂಬ ಹಾಗೂ ಸಮಾಜಕ್ಕೆ ಅವರು ನೀಡುವ ಅನನ್ಯ ಕೊಡುಗೆಯನ್ನು ಪೂರ್ಣವಾಗಿ ಉಳಿಸಿಕೊಳ್ಳುತ್ತಲೇ, ಅವರಿಗೆ ವಿದ್ಯಾಭ್ಯಾಸ, ನಾಯಕತ್ವ ಮತ್ತು ಸೇವೆಯ ವಿಶಾಲವಾದ ದಾರಿಗಳನ್ನು ತೆರೆದುಕೊಟ್ಟಿತು. 

ಈ ಸಮತೋಲನವೇ ಇಸ್ಲಾಮ್‌ ಧರ್ಮವನ್ನು ವಿಭಿನ್ನವಾಗಿಸುತ್ತದೆ. ಅಷ್ಟೇ ಅಲ್ಲದೆ, ಮೇಲೆ ಹೇಳಿದ ಸಮಸ್ಯೆಗೆ ಒಂದು ಬಲವಾದ ನಾಗರಿಕ  ಪ್ರತಿಕ್ರಿಯೆಯನ್ನು ನೀಡಲು ಇದು ಇಸ್ಲಾಮ್‌ಗೆ ಸಾಧ್ಯವಾಗಿಸುತ್ತದೆ. 

ಖವ್ವಾಮ್: ಜವಾಬ್ದಾರಿಯುತ ಪುರುಷತ್ವದ ಹೊರೆ

ಲೋಕದ ಸಾಮಾನ್ಯ ದೃಷ್ಟಿಯಲ್ಲಿ ನಾಯಕತ್ವವೆಂದರೆ ಅಧಿಪತ್ಯ, ಸೌಲಭ್ಯ ಹಾಗೂ ಇತರರಿಗಿಂತ ಉನ್ನತರೆಂಬ ಗರ್ವ. ಆದರೆ, ಇಸ್ಲಾಮ್‌ ನಾಯಕತ್ವವನ್ನು ಮುಖ್ಯವಾಗಿ ಹೊಣೆಗಾರಿಕೆಯೆಂದೇ ಭಾವಿಸುತ್ತದೆ. ಆ ಕಾರಣದಿಂದಲೇ ಓರ್ವ ಖವ್ವಾಮ್ ಎಂದರೆ ತನ್ನ ಕುಟುಂಬದ ಮೇಲೆ ನಿಲ್ಲುವುದಲ್ಲ; ಬದಲಾಗಿ ಕುಟುಂಬಕ್ಕಾಗಿ ನಿಲ್ಲುವುದಾಗಿದೆ. ಕುಟುಂಬಕ್ಕಾಗಿ ನಿಲ್ಲುವುದೆಂದರೆ ನೈತಿಕ ನಾಯಕತ್ವವನ್ನು ಚಲಾಯಿಸುವುದು ಎಂದರ್ಥ, ಇದರಲ್ಲಿ ಮಾರ್ಗದರ್ಶನ ಮಾಡುವುದು, ತಿದ್ದುವುದು ಮತ್ತು ಅತ್ಯಂತ ಅಗತ್ಯವಿರುವಲ್ಲಿ ವಿವೇಕತನದಿಂದ, ನ್ಯಾಯಪೂರ್ಣವಾಗಿ ಮತ್ತು ಕಾರುಣ್ಯದಿಂದ ಕೂಡಿರುವಂತೆ ಶಿಸ್ತುಗೊಳಿಸುವ ಅಧಿಕಾರವೂ ಸೇರಿದೆ. 

ಅರೇಬಿಕ್ ಭಾಷೆಯ ‘ಖಮ’ ಎಂಬ ಮೂಲ ಪದದ ಅರ್ಥ ನಿಲ್ಲುವುದು, ಎತ್ತಿಹಿಡಿಯುವುದು, ಬೆಂಬಲಿಸುವುದು ಮತ್ತು ಕಾಪಾಡುವುದು ಎಂದಾಗುತ್ತದೆ. ನಮಾಝನ್ನು ಮಾಡಲು ಎದ್ದು ನಿಲ್ಲುವಾಗ (ಅಕೀಮುಸ್ ಸಲಾಹ್) ಮತ್ತು ನ್ಯಾಯವನ್ನು ನೆಲೆಗೊಳಿಸುವಾಗ (ಖವ್ವಾಮೀನಾ ಬಿಲ್ ಕಿಸ್ತ್‌) ಬಳಸುವ ಅದೇ ಮೂಲ ಪದ ಇದಾಗಿದೆ. ಎಲ್ಲದರಲ್ಲೂ ಸಾಮಾನ್ಯವಿರುವ ಮುಖ್ಯ ಅಂಶವೆಂದರೆ ಅಧಿಕಾರ ಮೆರೆಯುವುದಲ್ಲ, ಬದಲಾಗಿ ಜವಾಬ್ದಾರಿ ನಿರ್ವಹಿಸುವುದಾಗಿದೆ. 

ಕರ್ತವ್ಯದ ಕರೆ ಬಂದಾಗ, ಧೈರ್ಯ ಮತ್ತು ತ್ಯಾಗದ ಅಗತ್ಯವಿರುವಾಗ, ಇತರರ ಹಿತಾಸಕ್ತಿಯು ತನ್ನ ದೃಢತೆಯ ಮೇಲೆ ಅವಲಂಬಿತವಾಗಿರುವಾಗ – ಧೈರ್ಯವಾಗಿ ಮುಂದೆ ನಿಲ್ಲುವವನೇ ‘ಖವ್ವಾಮ್’. “ನಿಮ್ಮಲ್ಲಿ ಪ್ರತಿಯೊಬ್ಬರೂ ಕುರಿಗಾಹಿ ಇದ್ದಂತೆ ಮತ್ತು ಪ್ರತಿಯೊಬ್ಬರೂ ತಮ್ಮ ಹಿಂಡಿಗೆ ಜವಾಬ್ದಾರರು” ಎಂಬ ಪ್ರವಾದಿ ವಚನದಂತೆ, ಒಬ್ಬ ಕುರಿಗಾಹಿಯ ತರಹ ಖವ್ವಾಮ್ ಕೂಡ ತನ್ನವರನ್ನು ಸಂರಕ್ಷಿಸುತ್ತಾನೆ, ಸೇವೆ ಮಾಡುತ್ತಾನೆ ಮತ್ತು ಮಾರ್ಗದರ್ಶನ ಮಾಡುತ್ತಾನೆ. 

‘ಖವ್ವಾಮ್’ ಎಂದರೆ ಹೊಸ ಸಾಧ್ಯತೆಗಳನ್ನು ತೆರೆಯುವ ನಿರ್ಮಾತೃ. ತನ್ನ ಪತ್ನಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ, ಆಕೆಯ ಸಂಕಷ್ಟಗಳನ್ನು ನಿವಾರಿಸಿ ಅಭಿವೃದ್ಧಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವ ಮತ್ತು ಪತ್ನಿಯ ಯಶಸ್ಸನ್ನು ಕಂಡು ಹೆಮ್ಮೆಪಡುವವನೇ ನಿಜವಾದ ಖವ್ವಾಮ್. ಯಾವುದೇ ಮುಸ್ಲಿಂ ಪತಿ ತನ್ನ ಪತ್ನಿಗೆ ನೀಡಬಹುದಾದ ಅತ್ಯಂತ ಶ್ರೇಷ್ಠ ಕೊಡುಗೆಯೆಂದರೆ ಹಣ ಅಥವಾ ಐಷಾರಾಮಿ ವಸ್ತುಗಳಲ್ಲ; ಬದಲಾಗಿ ಆಕೆಗೆ ಒದಗಿಸಿಕೊಡುವ ‘ಅವಕಾಶ ಹಾಗೂ ಸಾಧ್ಯತೆ’ಗಳಾಗಿದೆ. 

ಉರ್ದು ಕವಿ ಅಲ್ಲಾಮ ಇಕ್ಬಾಲ್ ಈ ಆಳವಾದ ಸತ್ಯವನ್ನು ತನ್ನ ಗಮನಾರ್ಹ ಒಳನೋಟದೊಂದಿಗೆ ಹೀಗೆ ಸೆರೆಹಿಡಿದಿದ್ದಾರೆ:

ನ ಪರ್ದಾ, ನ ತಾಲೀಮ್, ನೈಹೋ ಕೆ ಪುರಾಣಿ;

ನಿಸ್ವಾನಿಯ್ಯತ್-ಎ-ಝನ್ ಕಾ ನಿಗಹ್‌ಬಾನ್ ಹೈ ಫಖತ್ ಮರ್ದ್ 

(ಬರೀ ಪರ್ದಾ ಅಥವಾ ಶಿಕ್ಷಣ – ಅದು ಹೊಸ ಕಾಲದ್ದಾಗಿರಲಿ ಅಥವಾ ಹಳೆಯ ಕಾಲದ್ದಾಗಿರಲಿ – ಇಷ್ಟೇ ಸಾಲದು; ಕೇವಲ ಇವುಗಳಿಂದಲೇ ಹೆಣ್ಣಿನ ಸ್ತ್ರೀತ್ವವನ್ನು ಕಾಪಾಡಲು ಸಾಧ್ಯವಿಲ್ಲ. ಅವಳ ಪಕ್ಕದಲ್ಲಿರುವ ಪುರುಷನ ಚಾರಿತ್ರ್ಯವೇ ಅವಳ ನಿಜವಾದ ಸಂರಕ್ಷಕ.)

ಮಹಿಳೆಯರ ಸ್ವಾತಂತ್ರ್ಯ ಅಥವಾ ಶಿಕ್ಷಣದ ಪ್ರಾಮುಖ್ಯತೆಯನ್ನು ಹಗುರುವಾಗಿ ಕಾಣುವುದು ಇಕ್ಬಾಲ್ ಅವರ ಉದ್ದೇಶವಾಗಿರಲಿಲ್ಲ. ಬದಲಾಗಿ, ಮಹಿಳೆಯರ ಜೊತೆಗಿರುವ ಪುರುಷರು ತಮ್ಮ ನೈತಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾದರೆ, ಯಾವುದೇ ಕಾನೂನು, ಪದ್ಧತಿಗಳು ಅಥವಾ ಸಮಾಜದ ಸಂಸ್ಥೆಗಳು ಮಹಿಳೆಯ ಸ್ತ್ರೀತ್ವವನ್ನು ರಕ್ಷಿಸಲು ಅಸಾಧ್ಯ ಎಂಬುದನ್ನು ನೆನಪಿಸುವುದು ಅವರ ಉದ್ದೇಶವಾಗಿದೆ.

ಆಕೆಯ ಸಮೃದ್ಧಿಗೆ ಸಹಾಯ ಮಾಡುವುದು: ಖವ್ವಾಮ್‌ನ ಐದು ಕರ್ತವ್ಯಗಳು

ನನ್ನ ಪ್ರಕಾರ, ಇಸ್ಲಾಮ್‌ ಧರ್ಮದ ‘ಖಿವಾಮಃ’ ಪರಿಕಲ್ಪನೆಯು ಐದು ಮುಖ್ಯ ಕರ್ತವ್ಯಗಳಲ್ಲಿ ಪ್ರಾಯೋಗಿಕವಾಗಿ ರೂಪುಗೊಳ್ಳುತ್ತದೆ. ಹೆಣ್ಣಿಗೆ ದೇವನು ನೀಡಿದ ಸ್ತ್ರೀತ್ವವು ಸಮೃದ್ಧವಾಗಲು ಈ ಕರ್ತವ್ಯಗಳು ಸಹಾಯ ಮಾಡುತ್ತವೆ. ಹಾಗೆಂದ ಮಾತ್ರಕ್ಕೆ ಈ ಐದು ಕರ್ತವ್ಯಗಳು ಮಾತ್ರ ಖಿವಾಮಃ ಎಂಬ ಹೊಣೆಯ ಸಮಗ್ರ ಆಯಾಮಗಳು ಎಂದು ಭಾವಿಸಬಾರದು. ಇಸ್ಲಾಮ್‌ ಧರ್ಮ ನೀಡುವ ಪ್ರತಿಯೊಂದು ಅಧಿಕಾರದಂತೆ, ಖಿವಾಮಃ ಕೂಡ  ಸಲಹೆ ಕೊಡುವ, ಮಾರ್ಗದರ್ಶನ ಮಾಡುವ ಮತ್ತು ತೀವ್ರ ಅಗತ್ಯಬಿದ್ದಾಗ ತಿದ್ದುವ ಜವಾಬ್ದಾರಿಯೂ ಹೊಂದಿದೆ. ಆದರೆ, ತಿದ್ದುವ ಕೆಲಸ ಮಾಡುವಾಗ ಕುರ್‌ಆನಿನ ಮಹತ್ವಪೂರ್ಣ ಮೌಲ್ಯಗಳಾದ ನ್ಯಾಯ, ಕಾರುಣ್ಯ ಮತ್ತು ಓಲೈಕೆಯಂತಹವುಗಳನ್ನು ಮರೆಯುವಂತಿಲ್ಲ. ಅಧಿಕಾರವು ಎಂದಿಗೂ ಸ್ವತಃ ಒಂದು ಅಂತಿಮ ಗುರಿಯಲ್ಲ; ಕುಟುಂಬದ ನೈತಿಕ ಯೋಗಕ್ಷೇಮವನ್ನು ಸಂರಕ್ಷಿಸಲು ಮಾತ್ರ ಇದನ್ನು ಚಲಾಯಿಸಲಾಗುತ್ತದೆ. 

1. ಅಲ್ಲಾಹನೊಂದಿಗಿನ ಆಕೆಯ ಸಂಬಂಧವನ್ನು ಬಲಪಡಿಸುವುದು

‘ಖವ್ವಾಮ್’ ಮಾಡಬೇಕಾದ ಮೊದಲ ಮತ್ತು ಅತ್ಯಂತ ಮುಖ್ಯವಾದ ಕೆಲಸವೆಂದರೆ, ತನ್ನ ಸಂಗಾತಿಗೆ ಅಲ್ಲಾಹನ ಜೊತೆ ಇರುವ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುವುದು. ಈ ಅಡಿಪಾಯದ ಮೇಲೆಯೇ ಮುಂದಿನ ಎಲ್ಲಾ ಪಾತ್ರಗಳು ಮತ್ತು ಜವಾಬ್ದಾರಿಗಳು ನಿರ್ಮಾಣಗೊಳ್ಳುತ್ತವೆ. ಯಾವುದೇ ಹೆಣ್ಣಿನ ಅಸ್ಮಿತೆ, ಘನತೆ ಮತ್ತು ಸ್ತ್ರೀತ್ವವು ದೇವನ ಮೇಲಿನ ಭಕ್ತಿಯಲ್ಲಿ ಬೇರೂರಿದ್ದಾಗ ಮಾತ್ರ ಪರಿಪೂರ್ಣ ರೂಪ ತಾಳುತ್ತದೆ. ಸರ್ವ ಘನತೆ, ಶಕ್ತಿ ಮತ್ತು ಪರಮ ಅಧಿಕಾರಕ್ಕೆ ಮೂಲವಾದ ಸೃಷ್ಟಿಕರ್ತನಿಗೆ ಹತ್ತಿರವಾಗುವುದೇ ನಿಜವಾದ ಮತ್ತು ಅತ್ಯಂತ ದೊಡ್ಡ ಸಬಲೀಕರಣವಾಗಿದೆ. 

ಪ್ರವಾದಿಯವರು(ಸ) ತಮ್ಮ ಜೊತೆಗಿದ್ದವರ ಮನಸ್ಸಿನಲ್ಲಿ ದೇವಭಕ್ತಿಯನ್ನು ಜಾಗೃತಗೊಳಿಸಿದರು, ಆರಾಧನೆಗೆ ಪ್ರೋತ್ಸಾಹಿಸಿದರು, ಕುರ್‌ಆನ್ ಕಲಿಸಿದರು, ತಮ್ಮ ಕುಟುಂಬದೊಂದಿಗೆ ಸೇರಿ ನಮಾಝ್‌ ಮಾಡಿದರು ಮತ್ತು ಸೌಮ್ಯವಾಗಿ ಅಲ್ಲಾಹನನ್ನು ನೆನಪಿಸುತ್ತಿದ್ದರು. ಒರ್ವ ವಿವೇಕಪೂರ್ಣ ಪತಿಯು ಪ್ರವಾದಿಯವರ ಇದೇ ದಾರಿಯನ್ನು ಅನುಸರಿಸುತ್ತಾನೆ. ತನ್ನ ಪತ್ನಿ ಅಲ್ಲಾಹನಿಗೆ ಹತ್ತಿರವಾಗುವುದನ್ನು ಕಂಡು ಆತ ಖುಷಿಪಡುತ್ತಾನೆ, ಆತ್ಮಸಂಸ್ಕರಣೆ ಮತ್ತು ದೇವನಿಷ್ಠೆ(ತಖ್ವಾ) ಬೆಳೆಸಿಕೊಳ್ಳುವ ಆಕೆಯ ಪರಿಶ್ರಮಕ್ಕೆ ಸಹಾಯ ಮಾಡುತ್ತಾನೆ. ಯಾವುದೇ ಲೌಕಿಕ ದುರಾಸೆಗಳು ಆಕೆಯ ವಿಶ್ವಾಸವನ್ನು ದುರ್ಬಲಗೊಳಿಸದಂತೆ ಎಚ್ಚರಿಕೆ ವಹಿಸುತ್ತಾನೆ. 

ಅಲ್ಲಾಹನ ಜೊತೆಗಿನ ಅಚಲ ಬಾಂಧವ್ಯವೇ ಮಹಿಳೆಯ ಸ್ತ್ರೀತ್ವಕ್ಕೆ ಅಪಾರ ಸೌಂದರ್ಯ ಮತ್ತು ಬಲವನ್ನು ನೀಡುತ್ತದೆ. ದೃಢ ವಿಶ್ವಾಸವು ಆಕೆಯ ಕೋಮಲತೆಯನ್ನು ಕರುಣೆಯಾಗಿ, ಲಜ್ಜೆಯು ಘನತೆಯಾಗಿ ಮತ್ತು ಪೋಷಣೆಯು ಸುಸಂತತಿಯನ್ನು ಬೆಳೆಸುವ ಕರ್ತವ್ಯವಾಗಿ ಬದಲಾಯಿಸುತ್ತದೆ. ಅಷ್ಟೇ ಅಲ್ಲದೆ, ತ್ಯಾಗವನ್ನು ಇಹಲೋಕ ಮತ್ತು ಪರಲೋಕದ ಶಾಶ್ವತ ಯಶಸ್ಸಿನ ಬಂಡವಾಳವಾಗಿಸುತ್ತದೆ. ತನ್ನ ಪತ್ನಿಗೆ ಅಲ್ಲಾಹನ ಮಾರ್ಗದಲ್ಲಿ ಮುನ್ನಡೆಯಲು ಬೆಂಬಲಿಸುವುದರ ಮೂಲಕ, ಸೃಷ್ಟಿಕರ್ತನು ಆಕೆಯನ್ನು ಹೇಗೆ ರೂಪಿಸಲು ಬಯಸಿದ್ದನೋ ಆ ಪರಿಪೂರ್ಣ ಮತ್ತು ಸಬಲ ಮಹಿಳೆಯಾಗಿ ಹೊರಹೊಮ್ಮಲು ‘ಖವ್ವಾಮ್’ ಪ್ರಮುಖ ಪಾತ್ರ ವಹಿಸುತ್ತಾನೆ. 

2. ಆಕೆಯ ಘನತೆಯನ್ನು ಗೌರವಿಸುವುದು

ಹೆಣ್ಣಿನ ಸ್ತ್ರೀತ್ವವು ವಿಕಾಸಗೊಂಡು ನಾಗರಿಕತೆಯ ಸಂಪತ್ತಾಗಲು ಘನತೆ ಹಾಗೂ ನಂಬಿಕೆಯ ವಾತಾವರಣ ಅವಶ್ಯ. ಹೆಣ್ಣಿಗೆ ಕೀಳರಿಮೆ, ಭಯ ಅಥವಾ ಒತ್ತಡದ ನೆರಳಿನಲ್ಲಿ ಬದುಕುವ ಅನಿವಾರ್ಯತೆ ಸೃಷ್ಟಿಸಿದರೆ, ಅಲ್ಲಾಹನು ಆಕೆಯ ಅಂತರಂಗದಲ್ಲಿ ಇಟ್ಟಿರುವ ಗುಣಗಳನ್ನು ಸಮಗ್ರವಾಗಿ ಅಭಿವ್ಯಕ್ತ ಮಾಡಲು ಸಾಧ್ಯವಾಗದು. ಆ ಕಾರಣದಿಂದಲೇ, ಖವ್ವಾಮ್‌ನ ಪವಿತ್ರ ಕರ್ತವ್ಯವೆಂದರೆ ತನ್ನ ಪತ್ನಿಯ ಸ್ವಾಭಿಮಾನವನ್ನು ಕೇವಲ ಸಂರಕ್ಷಿಸುವುದು ಮಾತ್ರವಲ್ಲ, ಪ್ರತಿದಿನ ಅದನ್ನು ಮಾನ್ಯಮಾಡಬೇಕು ಹಾಗೂ ಗೌರವಿಸಬೇಕು. 

ಪ್ರವಾದಿಯವರ ಕೌಟುಂಬಿಕ ಜೀವನವೇ ಇದಕ್ಕೆ ಅತ್ಯಂತ ಸೂಕ್ತ ಮಾದರಿ. ಪ್ರವಾದಿವರ್ಯರು(ಸ) ತಮ್ಮ ಪತ್ನಿಯಂದಿರನ್ನು ಕೇವಲ ತಮ್ಮ ಮೇಲೆ ಅವಲಂಬಿತರಾದವರು ಎಂದು ಕಾಣಲಿಲ್ಲ, ಬದಲಾಗಿ ಸಂಗಾತಿಗಳಂತೆ ಗೌರವಿಸಿದರು. ಪತ್ನಿಯಂದಿರು ಹೇಳುವುದನ್ನು ತಾಳ್ಮೆಯಿಂದ ಆಲಿಸುತ್ತಿದ್ದರು, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು ಮತ್ತು ತಪ್ಪಿದ್ದಲ್ಲಿ ಪ್ರೀತಿಯಿಂದ ತಿದ್ದುತ್ತಿದ್ದರು. ಪತ್ನಿಯರಿಂದ ಸಲಹೆ ಪಡೆದುಕೊಳ್ಳುತ್ತಿದ್ದರು, ಅವರ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಿದ್ದರು ಮತ್ತು ಅವರ ಸ್ವಂತಿಕೆಯನ್ನು ಗೌರವಿಸುತ್ತಿದ್ದರು. ಪ್ರವಾದಿವರ್ಯರ(ಸ) ಮನೆಯಲ್ಲಿ ಅಧಿಕಾರವನ್ನು ಚಲಾಯಿಸುವುದಕ್ಕಾಗಿ ಎಂದಿಗೂ ಘನತೆಯನ್ನು ಬಲಿ ಕೊಡಲಿಲ್ಲ.  

ಮಹಿಳೆಯರ ಬಗೆಗಿನ ಈ ಘನತೆಯು ಯಾವುದೋ ಒಂದು ದಿನ ತೋರುವ ಪ್ರೀತಿಯಿಂದ ಅಥವಾ ಸಾಂದರ್ಭಿಕ ಮೆಚ್ಚುಗೆಯಿಂದ ಸ್ಥಾಪಿತವಾಗುವುದಿಲ್ಲ. ಇದು ದಿನನಿತ್ಯದ ಮಾತುಕತೆ, ತಾಳ್ಮೆಯಿಂದ ಮಾತನ್ನು ಆಲಿಸುವುದು, ಪ್ರಾಮಾಣಿಕ ಪ್ರಶಂಸೆ ಮತ್ತು ಭಾವನಾತ್ಮಕ ಸಂಯಮದ ಮೂಲಕ ನಿರಂತರವಾಗಿ ಬೆಳೆದುಬರುವಂಥದ್ದು. ಪತಿಯೊಬ್ಬನು ತನ್ನ ಪತ್ನಿಯ ಘನತೆಯನ್ನು ಪ್ರತಿದಿನವೂ ಗೌರವಿಸುತ್ತಾ ಬಂದಾಗ, ಭಾವನಾತ್ಮಕ ಹಾಗೂ ನೈತಿಕ ವಾತಾವರಣ ನಿರ್ಮಾಣವಾಗುತ್ತದೆ. ಈ ವಾತಾವರಣದಲ್ಲಿ ಹೆಣ್ಣಿಗೆ ದೇವನು ಅನುಗ್ರಹಿಸಿರುವ ಸಾಮರ್ಥ್ಯಗಳು ಪೂರ್ಣವಾಗಿ ವಿಕಸನಗೊಂಡು, ಸಂತೋಷಭರಿತ ಕುಟುಂಬ ಹಾಗೂ ಸದೃಢ ಸಮಾಜದ ನಿರ್ಮಾಣಕ್ಕೆ ಭದ್ರವಾದ ಬುನಾದಿಯನ್ನು ಒದಗಿಸುತ್ತವೆ. 

3. ಆಕೆಯ ಸ್ತ್ರೀತ್ವವನ್ನು ಪೋಷಿಸಿ ಮತ್ತು ಸಂಭ್ರಮಿಸಿರಿ

ಒಬ್ಬ ‘ಖವ್ವಾಮ್’ ಎನಿಸಿಕೊಂಡವನು, ಹೆಣ್ಣಿನ ಸ್ತ್ರೀತ್ವ ಎಂದರೆ ತಿದ್ದಬೇಕಾದ ಒಂದು ದೌರ್ಬಲ್ಯ ಎಂದು ಭಾವಿಸದೇ, ಅದು ಸಂಭ್ರಮಿಸಬೇಕಾದ ದಿವ್ಯ ಉಡುಗೊರೆ ಎಂದು ನಂಬುತ್ತಾನೆ. ಆ ನಿಟ್ಟಿನಲ್ಲಿ ಆತನ ಮುಖ್ಯ ಜವಾಬ್ದಾರಿ ಏನೆಂದರೆ ಆಕೆಯ ಸ್ತ್ರೀತ್ವಕ್ಕೆ ಬೆಲೆ ಕೊಟ್ಟು, ಸಬಲೀಕರಿಸಿ, ಆಕೆ ಬೆಳೆಯಲು ಬೇಕಾದ ಒಳ್ಳೆಯ ವಾತಾವರಣವನ್ನು ಸೃಷ್ಟಿಸುವುದಾಗಿದೆ.

ಪ್ರವಾದಿ(ಸ) ರವರು ಮಹಿಳೆಯರ ವಿಶಿಷ್ಟ ಗುಣಗಳನ್ನು ಬದಲಾಯಿಸಲು ಅಥವಾ ಪೌರುಷ ಮಾದರಿಯ ಪ್ರಕಾರ ಅವರನ್ನು ಮರು ರೂಪಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಪ್ರವಾದಿವರ್ಯರು ಮಹಿಳೆಯರ ಭಾವನಾತ್ಮಕ ಆಳವನ್ನು ಸದಾ ಮೆಚ್ಚಿದರು, ಅವರ ಸಹಾನುಭೂತಿಯನ್ನು ಸದಾ ಗೌರವಿಸಿದರು ಮತ್ತು ತಮ್ಮ ಪತ್ನಿಯಂದಿರಿಗೆ ತನ್ನದೇ ಆದ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಅವಕಾಶ ಕೊಟ್ಟರು. ಪ್ರವಾದಿ(ಸ) ಯವರು ಆಯಿಷಾ(ರ) ಅವರೊಂದಿಗೆ ಓಟ ಸ್ಪರ್ಧೆ ನಡೆಸಿದರು ಮತ್ತು ಅಬಿಸೀನಿಯನ್ನರ ಆಟಗಳನ್ನು ವೀಕ್ಷಿಸುತ್ತಿದ್ದಾಗ ನೋಡಲು ಬೆಂಬಲವಾಗಿ ನಿಂತರು. ಯಾರೋ ಸಫಿಯಾ(ರ) ಅವರ ವಂಶದ ಬಗ್ಗೆ ಹೇಳಿದ ಮಾತುಗಳಿಂದ ನೊಂದಾಗ, ಪ್ರವಾದಿವರ್ಯರು(ಸ), “ನಿಮ್ಮ ತಂದೆ ಓರ್ವ ಪ್ರವಾದಿಯಾಗಿದ್ದರು (ಹಾರೂನ್), ನಿಮ್ಮ ಚಿಕ್ಕಪ್ಪ ಓರ್ವ ಪ್ರವಾದಿಯಾಗಿದ್ದರು(ಮೂಸಾ), ಮತ್ತು ನೀವು ಓರ್ವ ಪ್ರವಾದಿಯನ್ನು ವಿವಾಹವಾಗಿದ್ದೀರಿ” ಎಂದು ಸೌಮ್ಯವಾಗಿ ಅವರ ಆತ್ಮವಿಶ್ವಾಸವನ್ನು ಮರುಸ್ಥಾಪಿಸಿದರು. ಸೌದಾ(ರ) ಅವರ ಚೇತೋಹಾರಿ ಹಾಸ್ಯವನ್ನು ಮೆಚ್ಚಿದರು, ಝೈನಬ್‌(ರ) ಅವರ ಆತ್ಮವಿಶ್ವಾಸ ಮತ್ತು ಉದಾರತೆಯನ್ನು ಗುರುತಿಸಿದರು ಮತ್ತು ಹಫ್ಸಾ(ರ) ಅವರ ಕಲಿಕೆಯನ್ನು ಪ್ರೋತ್ಸಾಹಿಸಿದರು. ಮಹಿಳೆಯರನ್ನು ವಿಶೇಷ ಕಾಳಜಿಗೆ ಅರ್ಹವಾದ “ಸೂಕ್ಷ್ಮ ಪಾತ್ರೆಗಳು” (القوارير) ಎಂದು ವರ್ಣಿಸಿದರು. ಇವೆಲ್ಲವೂ ಮಹಿಳೆಯರ ಸ್ವಭಾವ ಮತ್ತು ಘನತೆಯ ಆಳವಾದ ಮೆಚ್ಚುಗೆಯನ್ನು ಪ್ರತಿಬಿಂಬಿಸುತ್ತವೆ.

ಸ್ತ್ರೀತ್ವದೊಂದಿಗೆ ಸಾಮಾನ್ಯವಾಗಿ ಗುರುತಿಸುವ ಗುಣಗಳಾದ ಸಹಾನುಭೂತಿ, ಕೋಮಲತೆ, ಭಾವನಾತ್ಮಕ ವಿವೇಕ, ವಾತ್ಸಲ್ಯ, ಸೂಕ್ಷ್ಮ ಗ್ರಹಿಕೆ ಮತ್ತು ಆಪ್ತತೆಯನ್ನು ಸೃಷ್ಟಿಸುವ ಸಾಮರ್ಥ್ಯ – ಇವುಗಳು  ದೌರ್ಬಲ್ಯದ ಚಿಹ್ನೆಗಳಲ್ಲ. ಇದುವೇ ಸುದೃಢ ಕುಟುಂಬ ಮತ್ತು ಬಲಿಷ್ಠ ನಾಗರಿಕತೆಗಳು ನಿರ್ಮಿಸಲ್ಪಡುವ ನಿಖರವಾದ ಗುಣಗಳಾಗಿವೆ.

ಆದ್ದರಿಂದ ಜಾಣ ಪತಿಯು ಈ ಗುಣಗಳನ್ನು ಎಂದಿಗೂ ತಿರಸ್ಕರಿಸುವುದಿಲ್ಲ ಅಥವಾ ಯಶಸ್ಸು ಸಾಧಿಸಲು ಅವುಗಳನ್ನು ತನ್ನ ಪತ್ನಿಯು ದಮನ ಮಾಡಬೇಕೆಂದು ನಿರೀಕ್ಷಿಸುವುದಿಲ್ಲ. ಬದಲಾಗಿ, ಆತ ಅವುಗಳಿಗೆ ಮೌಲ್ಯ ಒದಗಿಸುತ್ತಾನೆ ಮತ್ತು ಪ್ರೋತ್ಸಾಹಿಸುತ್ತಾನೆ. ಆತನು ಕಾರುಣ್ಯವನ್ನು ದೌರ್ಬಲ್ಯವೆಂದು ಪರಿಗಣಿಸದ, ಭಾವನಾತ್ಮಕ ಸಂವೇದನೆಯನ್ನು ಗೇಲಿ ಮಾಡುವುದಕ್ಕಿಂತ ಮೌಲ್ಯೀಕರಿಸುವ ಮತ್ತು ಪೋಷಣೆಯ ಸಾಮರ್ಥ್ಯವನ್ನು ಮಹಾನ್ ಕೊಡುಗೆಯಾಗಿ ಗುರುತಿಸುವ ಮನೆಯನ್ನು ಸೃಷ್ಟಿಸುತ್ತಾನೆ.

4. ಆಕೆಯ ವಿಕಸನವನನ್ನು ಬಿತ್ತಿರಿ

ವಿವಾಹವು ಒಬ್ಬ ವ್ಯಕ್ತಿಯ ಜಗತ್ತನ್ನು ಕಿರಿದಾಗಿಸುವುದಲ್ಲ, ವಿಸ್ತರಿಸಬೇಕು. ತನ್ನ ಪತ್ನಿಗೆ ಅಲ್ಲಾಹನು ಕರುಣಿಸಿರುವ ಪ್ರತಿಭೆಗಳು, ಸಾಮರ್ಥ್ಯಗಳು ಮತ್ತು ಆಂತರಿಕ ಶಕ್ತಿಯನ್ನು ಅರಿತುಕೊಳ್ಳಲು ಸಹಾಯ ಮಾಡುವುದು ತನ್ನ ಜವಾಬ್ದಾರಿಯಲ್ಲಿ ಸೇರಿದೆ ಎಂದು ಖವ್ವಾಮ್ ಅರ್ಥಮಾಡಿಕೊಳ್ಳುತ್ತಾನೆ. ಆಕೆಯ ಬೌದ್ಧಿಕ, ಆಧ್ಯಾತ್ಮಿಕ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಆತ ಸಂತೋಷಪಡುತ್ತಾನೆ; ಕಲಿಯಲು, ಕೊಡುಗೆ ನೀಡಲು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಔನ್ನತ್ಯ ಸಾಧಿಸಲು ಆಕೆಯನ್ನು ಪ್ರೋತ್ಸಾಹಿಸುತ್ತಾನೆ.

ಪ್ರವಾದಿ(ಸ) ನಿರಂತರವಾಗಿ ಮಹಿಳೆಯರ ಸಾಮರ್ಥ್ಯಗಳನ್ನು ಗುರುತಿಸಿದರು ಮತ್ತು ಪೋಷಿಸಿದರು. ಇಸ್ಲಾಮ್‌ನ ಅತ್ಯಂತ ಶ್ರೇಷ್ಠ ವಿದ್ವಾಂಸರು ಮತ್ತು ಶಿಕ್ಷಕರಲ್ಲಿ ಒಬ್ಬರಾಗಲು ಆಯಿಷಾ(ರ) ಅವರನ್ನು ಪ್ರೋತ್ಸಾಹಿಸಿದರು ಮತ್ತು ಬೆಂಬಲಿಸಿದರು. ಮಹಿಳೆಯರ ಶಿಕ್ಷಣದ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತಾ, ಓದಲು ಮತ್ತು ಬರೆಯಲು ಹಫ್ಸಾ(ರ) ಅವರಿಗೆ ಕಲಿಸಿಕೊಡಲು ಮದೀನಾದ ಕೆಲವೇ ಸಾಕ್ಷರ ಮಹಿಳೆಯರಲ್ಲಿ ಒಬ್ಬರಾದ ಅಲ್-ಶಿಫಾ ಬಿಂತ್ ಅಬ್ದುಲ್ಲಾ ಅವರನ್ನು ಪ್ರವಾದಿವರ್ಯರು ಕೇಳಿಕೊಂಡರು. ಸಮರ್ಥ ಮಹಿಳೆಯರಿಗೆ ಅವರ ಸಾಮರ್ಥ್ಯಗಳಿಗೆ ತಕ್ಕಂತೆ ಜವಾಬ್ದಾರಿಗಳನ್ನು ವಹಿಸಿಕೊಟ್ಟರು. ಡೇರೆ-ಆಸ್ಪತ್ರೆಯನ್ನು ಸ್ಥಾಪಿಸುವಲ್ಲಿ ಮತ್ತು ಸಂಘಟಿತ ನರ್ಸಿಂಗ್ ಸೇವೆಗೆ ಅಡಿಪಾಯವನ್ನು ಹಾಕುವಲ್ಲಿ ರುಫೈದಾ ಅಲ್-ಅಸ್ಲಮಿಯಾ(ರ) ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಿದರು.

ವಿವೇಕಪೂರ್ಣ ಪತಿಯು ಪ್ರವಾದಿಯ ಈ ಮಾದರಿಯನ್ನು ಅನುಸರಿಸುತ್ತಾನೆ. ಅಭದ್ರತೆಯನ್ನು ಅನುಭವಿಸದೆ ತನ್ನ ಪತ್ನಿಯ ಸಾಧನೆಗಳನ್ನು ಸಂಭ್ರಮಿಸುತ್ತಾನೆ. ಆಕೆಯ ಮಾನ್ಯ ಆಕಾಂಕ್ಷೆಗಳನ್ನು ಪ್ರಾಮಾಣಿಕವಾಗಿ ಬೆಂಬಲಿಸುತ್ತಾನೆ. ಆಕೆಯು ಹೆಚ್ಚು ಜ್ಞಾನಗಳಿಸಿ, ಹೆಚ್ಚು ಆತ್ಮವಿಶ್ವಾಸವುಳ್ಳವಳಾಗಿ ಅಲ್ಲಾಹನಿಗೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಲು ಹೆಚ್ಚು ಸಮರ್ಥಳಾಗುವುದನ್ನು ನೋಡಿ ಸಂತೋಷಪಡುತ್ತಾನೆ. ಆಕೆಯ ಬೆಳವಣಿಗೆಯು ಅವನಿಗೆ ಪೈಪೋಟಿಯಲ್ಲ; ಅದು ಆತನ ಯಶಸ್ಸಿನದೇ ಭಾಗವಾಗಿದೆ.

ಖವ್ವಾಮ್‌ನ ಅತ್ಯಂತ ದೊಡ್ಡ ಸಾಧನೆಗಳಲ್ಲಿ ಒಂದೆಂದರೆ, ಆತನ ಪತ್ನಿಯು ಅವನನ್ನು ಅವಲಂಭಿಸಿಕೊಂಡಿದ್ದಾಳೆ ಎಂದಲ್ಲ, ಬದಲಾಗಿ ಆಕೆಯು ಅವನಿಂದಾಗಿ ಅಭಿವೃದ್ಧಿ ಹೊಂದುತ್ತಾಳೆ ಎಂಬುದಾಗಿದೆ.

5. ಸಕೀನಾ, ಮವದ್ದಾ ಮತ್ತು ರಹ್ಮಾದ ಮನೆಯನ್ನು ನಿರ್ಮಿಸಿರಿ

“ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ, ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ.” (ಕುರ್‌ಆನ್‌ 30:21)

ಕುರ್‌ಆನಿನ ದೃಷ್ಟಿಕೋನದ ಪ್ರಕಾರ ಆದರ್ಶ ಇಸ್ಲಾಮೀ ಕುಟುಂಬವು  ಮೂರು ಸುಂದರ ಪದಗಳಲ್ಲಿ ವ್ಯಕ್ತಪಡಿಸಲ್ಪಟ್ಟಿದೆ: ಸಕೀನಾ(ಪ್ರಶಾಂತತೆ), ಮವದ್ದಾ (ಆಳವಾದ, ಅಚಲ ಪ್ರೀತಿ) ಮತ್ತು ರಹ್ಮಾ (ಸಹಾನುಭೂತಿ/ಕಾರುಣ್ಯ). ಖವ್ವಾಮ್ (ನಾಯಕ) ಆಗಿರುವುದರಿಂದ, ಪತಿಯ ಮುಖ್ಯ ಜವಾಬ್ದಾರಿಯು ಈ ದೃಷ್ಟಿಕೋನವನ್ನು ನನಸಾಗಿಸುವುದಾಗಿದೆ. ತನ್ನ ಮನೆಯಲ್ಲಿರುವ ಸ್ತ್ರೀಯು ಭಯಮುಕ್ತವಾಗಿ, ಸಂರಕ್ಷಣೆಯನ್ನು ಅನುಭವಿಸುವುದನ್ನು ಆತ ಖಚಿತಪಡಿಸಿಕೊಳ್ಳಬೇಕು. ಸ್ತ್ರೀಯ ಪರಿಶ್ರಮಗಳನ್ನು ಹಗುರವಾಗಿ ತೆಗೆದುಕೊಳ್ಳದೆ ಮೆಚ್ಚಿಕೊಳ್ಳಲ್ಪಡಬೇಕು. ಆಕೆಯ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕೇ ವಿನಹ ಅದರ ಬಗ್ಗೆ ತೀರ್ಪುಗಳನ್ನು ನೀಡಬಾರದು.

ಸಕೀನಾ, ಮವದ್ದಾ ಮತ್ತು ರಹ್ಮಾದ ಈ ವಾತಾವರಣವು ದೇವನು ಮಹಿಳೆಗೆ ನೀಡಿರುವ ಸ್ತ್ರೀತ್ವವು ಸ್ವಾಭಾವಿಕ ರೀತಿಯಲ್ಲಿ ಅಭಿವೃದ್ಧಿ ಹೊಂದುವ ಸ್ಥಳವಾಗಿದೆ. ಸುಭದ್ರತೆ ಹಾಗೂ ಭರವಸೆ ಇರುವಲ್ಲಿ ಮಾತ್ರ ಕೋಮಲತೆ ಮತ್ತು ಸೌಮ್ಯತೆ ಬೆಳೆಯಲು ಸಾಧ್ಯ. ಪ್ರೀತಿಯ ವಾತಾವರಣದಲ್ಲಿ ಮಾತ್ರ ಕಾರುಣ್ಯ ಮತ್ತು ಸಹಾನುಭೂತಿ ಅಭಿವೃದ್ಧಿ ಹೊಂದಲು ಸಾಧ್ಯ. ಗುರುತಿಸುವಿಕೆ ಮತ್ತು ನಂಬಿಕೆ ಇರುವಲ್ಲಿ ಮಾತ್ರ ಭಾವನಾತ್ಮಕ ಮುಕ್ತತೆಯು ಸಾಧ್ಯವಾಗುತ್ತದೆ. ಹೆಣ್ಣಿಗೆ ಅಂತಹ ಅನುಗ್ರಹೀತ ಕುಟುಂಬ ಸಿಕ್ಕರೆ, ಆಕೆಯ ಸ್ತ್ರೀ ಶಕ್ತಿಗಳು ತಮ್ಮ ಸಂಪೂರ್ಣ ಔನ್ನತ್ಯಕ್ಕೆ ತಲುಪಿ, ಆಕೆಯ ಪತಿ, ಮಕ್ಕಳು ಮತ್ತು ಆಕೆಯ ಮನೆಗೆ ಪ್ರವೇಶಿಸುವ ಪ್ರತಿಯೊಬ್ಬರ ಜೀವನವನ್ನು ಸಮೃದ್ಧಗೊಳಿಸುತ್ತದೆ ಮತ್ತು ಆಕೆಯ ಸ್ತ್ರೀತ್ವವು ಸಂಭ್ರಮದ ನಾಗರಿಕತೆಯ ನಿರ್ಮಾತೃವಿನ ಪಾತ್ರವನ್ನು ವಹಿಸುತ್ತದೆ.

ಪ್ರವಾದಿವರ್ಯರು(ಸ) ಕುರ್‌ಆನಿನ ಈ ಆದರ್ಶದ ಅತ್ಯಂತ ಪರಿಪೂರ್ಣ ವ್ಯಕ್ತಿತ್ವವಾಗಿದ್ದರು. ಪ್ರವಾದಿ(ಸ) ರವರ ಮನೆಯು ಒಲುಮೆ, ಸೌಮ್ಯವಾದ ಹಾಸ್ಯ, ಪರಸ್ಪರ ಸಮಾಲೋಚನೆ, ಪ್ರೀತಿ, ಕ್ಷಮೆ ಮತ್ತು ಕಾರುಣ್ಯದ ನಿವಾಸವಾಗಿತ್ತು. ಪ್ರವಾದಿವರ್ಯರು(ಸ) ಮುಕ್ತವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು, ಮನುಷ್ಯ ಸಹಜ ಅಪೂರ್ಣತೆಗಳನ್ನು ತಾಳ್ಮೆಯಿಂದ ಸ್ವೀಕರಿಸಿದರು ಮತ್ತು ತಮ್ಮ ಪತ್ನಿಯಂದಿರು ಗೌರವ, ಸಾಂಗತ್ಯ ಮತ್ತು ಭಾವನಾತ್ಮಕ ಭದ್ರತೆಯನ್ನು ಅನುಭವಿಸುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಪ್ರವಾದಿಯವರ(ಸ) ನಾಯಕತ್ವವು ಅವರ ಸುತ್ತಲಿದ್ದ ಮಹಿಳೆಯರನ್ನು ಕುಗ್ಗಿಸಲಿಲ್ಲ; ಅದು ಅವರು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಟ್ಟಿತು.

ಪ್ರತಿಯೊಬ್ಬ ಖವ್ವಾಮ್‌ಗೆ ಕರೆ

ಈ ಐದು ಕರ್ತವ್ಯಗಳು ಜವಾಬ್ದಾರಿಯುತ ಪೌರುಷದ ಕುರ್‌ಆನಿನ ದೃಷ್ಟಿಕೋನವನ್ನು ರೂಪಿಸುತ್ತವೆ. ಆದ್ದರಿಂದ ಪ್ರತಿಯೊಬ್ಬ ಮುಸ್ಲಿಂ ಪತಿಯು ಈ ದೃಷ್ಟಿಕೋನವನ್ನು ತನ್ನ ದೈನಂದಿನ ನಡವಳಿಕೆಯಲ್ಲಿ ಮೂಡಿಸಲು ಬದ್ಧನಾಗಿರುತ್ತಾನೆ. ನಿಜವಾದ ಖವ್ವಾಮ್ ಸ್ತ್ರೀಯ ಮೇಲೆ ತಾನು ಚಲಾಯಿಸಿದ ಅಧಿಕಾರದಿಂದ ನೆನಪಿಸಿಕೊಳ್ಳಲ್ಪಡುವುದಿಲ್ಲ, ಬದಲಾಗಿ ಆತ ಸಂರಕ್ಷಿಸಿದ ಸ್ತ್ರೀತ್ವದಿಂದ, ಆತ ಪೋಷಿಸಿದ ಸಾಮರ್ಥ್ಯದಿಂದ ಮತ್ತು ಆಕೆಯ ಜೀವನಕ್ಕೆ ತಂದ ಪ್ರಶಾಂತತೆಯಿಂದ ನೆನಪಿಸಿಕೊಳ್ಳಲ್ಪಡುತ್ತಾನೆ.