ಉತ್ತರ ಪ್ರದೇಶ | ವಯಸ್ಕರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಕುಟುಂಬದವರು ನಿಯಂತ್ರಿಸಲು ಸಾಧ್ಯವಿಲ್ಲ: ಹೈಕೋರ್ಟ್

0
122

ಸನ್ಮಾರ್ಗ ವಾರ್ತೆ

26 ವರ್ಷದ ಹಿಂದೂ ಹುಡುಗಿಯು ತನ್ನ ಮುಸ್ಲಿಂ ಪತಿಯೊಂದಿಗೆ ವಾಸಿಸಲು ಅಲಹಾಬಾದ್ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದ್ದು, ವಯಸ್ಕರೊಬ್ಬರು ತಮ್ಮ ಸಂಗಾತಿಯೊಂದಿಗೆ ಜೀವಿಸುವ ಆಯ್ಕೆಯನ್ನು ಅವರ ಪೋಷಕರು ಅಥವಾ ಕುಟುಂಬದ ಇತರ ಸದಸ್ಯರು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಅಕ್ಬರ್ ಖಾನ್ ಅವರು ಸೆಪ್ಟೆಂಬರ್ 2025 ರಲ್ಲಿ ಹೇಬಿಯಸ್ ಕಾರ್ಪಸ್ (ಬಂಧಿತರ ಹಾಜರಾತಿಗೆ ಒತ್ತಾಯಿಸುವ ರಿಟ್) ಅರ್ಜಿಯೊಂದಿಗೆ ಕೋರ್ಟ್ ಮೆಟ್ಟಲೇರಿದ್ದರು. ಆ ವರ್ಷದ ಮೇ ತಿಂಗಳಲ್ಲಿ ಸೋನಿಕಾ ಚೌಹಾಣ್ ಅವರ ತಂದೆ ನೀಡಿದ ದೂರಿನ ಮೇರೆಗೆ ಅಕ್ಬರ್ ಖಾನ್ ಅವರ ಪತ್ನಿ ಸೋನಿಕಾ ಚೌಹಾಣ್ ಅವರನ್ನು ಪೋಷಕರ ಬಳಿಗೆ ಕರೆದೊಯ್ಯಲಾಗಿತ್ತು. ಅಕ್ಬರ್ ಖಾನ್ ಅವರು ಸೋನಿಕಾ ಚೌಹಾಣ್ ಅವರನ್ನು ಅಪಹರಿಸಿ ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಗಾಝಿಯಾಬಾದ್ ಪೊಲೀಸರು ಸ್ವಲ್ಪ ಸಮಯದ ನಂತರ ಅಕ್ಬರ್ ಖಾನ್ ಅವರನ್ನು ಬಂಧಿಸಿದ್ದರು ಮತ್ತು ಸೋನಿಕಾ ಚೌಹಾಣ್ ಅವರನ್ನು ಅವರ ಪೋಷಕರಿಗೆ ಮರಳಿ ಒಪ್ಪಿಸಿದ್ದರು.

ಸೋನಿಕಾ ಚೌಹಾಣ್ ಅವರು ತಮ್ಮ ವೈವಾಹಿಕ ಮನೆಗೆ ಮರಳಿದ ಕೆಲವು ವಾರಗಳ ನಂತರ ಅಕ್ಬರ್ ಖಾನ್ ಅವರನ್ನು ಮತ್ತೊಮ್ಮೆ ಬಂಧಿಸಲಾಯಿತು. ಗಾಝಿಯಾಬಾದ್ ಪೊಲೀಸರು ನಂತರ ಅವರ ವಿರುದ್ಧ 1970 ರ ಉತ್ತರ ಪ್ರದೇಶ ಗೂಂಡಾ ನಿಯಂತ್ರಣ ಕಾಯ್ದೆಯನ್ನು ಸಹ ಅನ್ವಯಿಸಿದರು ಮತ್ತು ಆರು ತಿಂಗಳ ಕಾಲ ಜಿಲ್ಲೆಯನ್ನು ತೊರೆಯುವಂತೆ ಆದೇಶಿಸಿದರು.

ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಸೋನಿಕಾ ಚೌಹಾಣ್ ಅವರು ಅಕ್ಬರ್ ಖಾನ್ ಅವರನ್ನು ವಿವಾಹವಾಗುವ ತಮ್ಮ ನಿರ್ಧಾರದ ಕುರಿತು ತಂದೆ ಲಕ್ಷ್ಮಣ್ ಸಿಂಗ್ ಚೌಹಾಣ್ ಅವರು ತಮಗೆ ಒತ್ತಡ ಮತ್ತು ಬೆದರಿಕೆಗಳನ್ನು ಒಡ್ಡಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ತಾವು 2022 ರಲ್ಲಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಸ್ವಯಂಪ್ರೇರಿತರಾಗಿ ಅಕ್ಬರ್ ಖಾನ್ ಅವರನ್ನು ವಿವಾಹವಾಗಿರುವುದಾಗಿ ಮತ್ತು ಅವರೊಂದಿಗೆ ವಾಸಿಸಲು ಬಯಸುವುದಾಗಿ ಸೋನಿಕಾ ಚೌಹಾಣ್ ನ್ಯಾಯಾಲಯಕ್ಕೆ ತಿಳಿಸಿದರು.

ಆದಾಗ್ಯೂ, ಸೋನಿಕಾ ಚೌಹಾಣ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಮತ್ತು ಅವರು ಅಕ್ಬರ್ ಖಾನ್ ಅವರ ಪ್ರಭಾವದ ಅಡಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಲಕ್ಷ್ಮಣ್ ಸಿಂಗ್ ಚೌಹಾಣ್ ನ್ಯಾಯಾಲಯಕ್ಕೆ ತಿಳಿಸಿದರು. ಅಕ್ಬರ್ ಖಾನ್ ಮುಸ್ಲಿಮರು ಮತ್ತು ಅವರ ಮಗಳು ಹಿಂದೂ ಎಂಬ ಆಧಾರದ ಮೇಲೆ ಅವರು ತಮ್ಮ ಮದುವೆಯನ್ನು ವಿರೋಧಿಸಿದರು.

ಆದರೆ, ಸೋನಿಕಾ ಚೌಹಾಣ್ ಅವರು ಬಲವಂತ, ಅತಿಯಾದ ಪ್ರಭಾವ ಅಥವಾ ಬೆದರಿಕೆಯಡಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದನ್ನು ಸೂಚಿಸಲು ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.

ಸಂವಿಧಾನದ 21 ನೇ ವಿಧಿಯಡಿಯಲ್ಲಿ ತನ್ನ ಜೀವನದ ಮೂಲಭೂತ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಚಲಾಯಿಸುವ ಮೂಲಕ ಅವರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

“ಅಂತಹ ಆಯ್ಕೆಯು ಸಂಬಂಧಪಟ್ಟ ವ್ಯಕ್ತಿಗೆ ವೈಯಕ್ತಿಕವಾಗಿದೆ ಮತ್ತು ಅವಳ ಪೋಷಕರು ಅಥವಾ ಕುಟುಂಬದ ಇತರ ಸದಸ್ಯರ ಇಚ್ಛೆಯಿಂದ ನಿರ್ದೇಶಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

ಸೋನಿಕಾ ಚೌಹಾಣ್ ಅವರು ತಮ್ಮ ಆಯ್ಕೆಯ ಸ್ಥಳದಲ್ಲಿ ಅಕ್ಬರ್ ಖಾನ್ ಅವರೊಂದಿಗೆ ವಾಸಿಸಲು ನ್ಯಾಯಾಲಯ ಅನುಮತಿ ನೀಡಿತು. ಅಲ್ಲದೆ, ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಅಗತ್ಯವಿದ್ದರೆ ಪೊಲೀಸ್ ನೆರವು ಒದಗಿಸುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

ಅಲ್ಲದೆ, ಸೋನಿಕಾ ಚೌಹಾಣ್ ಅವರ ಕುಟುಂಬವು ಅವರ “ಶಾಂತಿಯುತ ವೈವಾಹಿಕ ಜೀವನ” ದಲ್ಲಿ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನಿರ್ದೇಶಿಸಿತು.